74ನೇ ವರ್ಷಕ್ಕೆ ಕಾಲಿಟ್ಟ ಕನ್ನಡದ ವಿಭಿನ್ನ ನಟ ಅನಂತ್‍ನಾಗ್

ಅನಂತ್ ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಆನೆಯನ್ನು ತಡವಿದಂತೆ. ಇನ್ನೂ ಅನಂತ್ ಏನೆಂದು ಅರ್ಥವಾಗೇ ಇಲ್ಲಾ ಎಂದರೆ ತಪ್ಪಾಗಲಾರದು. ಅನಂತ್ ತಮ್ಮ ಅಭೂತಪೂರ್ವ ನಟನೆಯಿಂದ ಮೂರು ತಲೆಮಾರಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. “ಹಂಸಗೀತೆ, ಕನ್ನೇಶ್ವರ ರಾಮ” ಗಳಂತಹ ಚಿತ್ರಗಳನ್ನು ನೋಡಿದ್ದ ಹಿರಿಯರಿಗೆ ಅನಂತ್ ಅವರಲ್ಲಿ ಕಂಡಿದ್ದೇ ಬೇರೆ. ಆನಂತರದಲ್ಲಿ ನಟಿಸಿದ ಮಧ್ಯಮ ವರ್ಗದ ಸಾಮಾನ್ಯನ ಪಾತ್ರದಲ್ಲಿ ಲಕ್ಷ್ಮೀ ಅವರ ಜೋಡಿಯಾಗಿ ನಟಿಸಿದ್ದನ್ನು ಎರಡನೇ ತಲೆಮಾರಿನವರ ತಲೆಯಲ್ಲಿ ಈಗಲೂ ಉಳಿದಿದೆ. ಇತ್ತೀಚಿಗೆ ಹಾಸ್ಯ ಪಾತ್ರಗಳಲ್ಲದೇ ವಿಭಿನ್ನ ಪಾತ್ರಗಳಲ್ಲಿ ನೈಜವಾಗಿ ನಟಿಸಿ ಈ ದಿನಮಾನದ ಪ್ರೇಕ್ಷಕರನ್ನೂ ರಂಜಿಸುತ್ತಿದ್ದಾರೆ. ಅನಂತ್ ಅವರಿಗೆ ವಯಸ್ಸು ಅಡ್ಡ ಬಂದಿಲ್ಲ. ಪಾತ್ರದ ಆಯ್ಕೆಯೇ ಅವರನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕನ್ನಡದಲ್ಲಿ ಅಷ್ಟೇ ಅಲ್ಲದೇ ಹಿಂದಿ, ತಮಿಳು, ತೆಲುಗು, ಮರಾಠಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಿದ್ದೂ ಅನಂತ್ ಅವರಲ್ಲಿರುವ ಕಲಾವಿದ ಮಾತ್ರ ಇನ್ನು ಇನ್ನೇನೋ ಹುಡುಕುತ್ತಿರುವಂತಿರಬಹುದು ಎನ್ನುವುದು ಅವರ ನಗುವಿನಲ್ಲಿ ಕಾಣುತ್ತೆ. ಅನಂತ್ ಸುಂದರ ನಟನಷ್ಟೇ ಅಲ್ಲದೇ ಅವರ ಕಂಠ ಸಿರಿಯ ಡೈಲಾಗ್ ಡೆಲಿವರಿಗೂ ಕನ್ನಡಿಗರು ಮರುಳಾಗಿದ್ದಾರೆ.

ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್ ‘ಸಂಕಲ್ಪ’ ಚಿತ್ರದ ಮೂಲಕ ಬಂದು ಶ್ಯಾಮಬೆನಗಲ್, ಜಿ ವಿ ಅಯ್ಯರ್, ದೊರೆ-ಭಗವಾನ್ ಹಾಗೂ ಗೀತಪ್ರಿಯ ಅವರಲ್ಲದೇ ವಿಜಯ್, ಕೆ ವಿ ಜಯರಾಂ, ಕೃಷ್ಣ ಮಾಸಡಿ, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಸುನಿಲ್‍ಕುಮಾರ್ ದೇಸಾಯಿ, ಫಣಿ ರಾಮಚಂದ್ರ, ಸಾಯಿಪ್ರಕಾಶ್ ಅವರಂತಹ ಸಾಕಷ್ಟು ನಿರ್ದೇಶಕರ ಚಿತ್ರಗಳಲ್ಲಿ ನಟಿಸಿ ಎರಡು ತಲೆಮಾರಿನವರೊಂದಿಗೆ ಕೊಂಡಿಯಾಗಿದ್ದರು. ಮತ್ತೆ ಈ ದಿನಮಾನದ ಯುವ ಪೀಳಿಗೆಯ ನಿರ್ದೇಶಕರ ಚಿತ್ರಗಳಲ್ಲೂ ನಟಿಸುತ್ತಾ ಮೂರನೇ ಪೀಳಿಗೆಯಲ್ಲೂ ಸಕ್ರಿಯರಾಗಿದ್ದಾರೆ. ಚಿತ್ರಗಳಲ್ಲಿನ ನಟನೆ ಹಾಗೂ ಚಿತ್ರ ನಿರ್ದೇಶಕರ ಪಟ್ಟಿ ದೊಡ್ಡದಿದೆ, ಅವನ್ನೆಲ್ಲಾ ಹಿಡಿಯಲ್ಲಿ ಹಿಡಿದಿಡಲು ಸಾಧ್ಯವಾಗುವುದಿಲ್ಲ.

ಹಂಸಗೀತೆಯ ಸಂಗೀತಗಾರ, ‘ಕನ್ನೇಶ್ವರರಾಮ’ದ ಪಾತ್ರ, `ನಾರದ ವಿಜಯ’ ಚಿತ್ರದ ನಾರದ ಹಾಗೂ ವಿಜ್ಞಾನಿಯ ಪಾತ್ರ, ಅಣ್ಣಾವ್ರ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಭಯ ಹಾಗೂ ಹಾಸ್ಯ ಮಿಶ್ರಿತ ನಾರದನ ಪಾತ್ರ, ಕಾಮನಬಿಲ್ಲು ಚಿತ್ರದ ಅಣ್ಣಾವ್ರ ಗೆಳೆಯನ ಪಾತ್ರ, ‘ಬೆಳದಿಂಗಳ ಬಾಲೆ’ಯ ರೇವಂತ್, ಅನಂತ್-ಲಕ್ಷ್ಮೀ ಜೋಡಿಯ ಮೋಡಿ, ತಮ್ಮ ಶಂಕರನಾಗ್ ನಿರ್ದೇಶನದ ಚಿತ್ರಗಳಾದ ಮಿಂಚಿನ ಓಟ, ಆ್ಯಕ್ಸಿಡೆಂಟ್, ನೋಡಿಸ್ವಾಮಿ ನಾವಿರೋದು ಹೀಗೆ, ಜನ್ಮ ಜನ್ಮದ ಅನುಬಂಧಗಳಲ್ಲದೇ ‘ಮಾಲ್ಗುಡಿ ಡೇಸ್’ ನಲ್ಲಿನ ಅಭಿನಯ, ಸಿಂಹಾಸನ, ಬರ, ಉಂಡೂ ಹೋದ ಕೊಂಡೂ ಹೋದ, ಗಣೇಶನ ಮದುವೆ, ಗೌರಿ-ಗಣೇಶ, ಗಣೇಶ ಸುಬ್ರಮಣ್ಯ ಹೇಗೆ ಪಟ್ಟಿ 250ಕ್ಕೂ ಮಿಕ್ಕೂ ಮುಂದುವರೆಯುತ್ತೆ. ಚಿರ ಯುವಕ ಅನಂತ್ ಅವರ ಚಿತ್ರ ಪಯಣದಲ್ಲಿ ಬಹುಪಾಲು ಚಿತ್ರಗಳು ಶ್ರೇಷ್ಟ ಚಿತ್ರಗಳೇ ಆಗಿವೆ. ಹೊರನಾಡಲ್ಲೂ ಇವರಿಗೆ ಹೆಸರಿದೆ.

ಇತ್ತೀಚಿಗೆ ಹೆಚ್ಚು ಪ್ರಚಾರದಲ್ಲಿರುವ ಹಾಗೂ ಎಲ್ಲರನ್ನೂ ಸೂಜಿಗಲ್ಲಂತೆ ಸೆಳೆಯುತ್ತಿರುವ ಕ್ಲಬ್ ಹೌಸ್ ನಲ್ಲಿಯೂ ಅನಂತ್ ಮಾತಾಡಿದ್ದರು. ಮೂರ್ನಾಲ್ಕು ಗಂಟೆಗಳು ನಿರರ್ಗಳವಾಗಿ ಮಾತಾಡಿದ್ದರು. ತಮ್ಮ ಜೀವನದ ವಿಶೇಷ ಘಟ್ಟಗಳನ್ನು ಅಲ್ಲಿ ದಾಖಲಿಸಿದ್ದರು. ಒಬ್ಬ ಹಿರಿಯ ವ್ಯಕ್ತಿ, ಸೆಲೆಬ್ರೆಟಿ ಎಂಬೆಲ್ಲವನ್ನು ಮರೆಸುವಂತೆ ಶ್ಲೋಕಗಳನ್ನು ಸ್ಪಷ್ಟವಾಗಿ ಹೇಳುತ್ತಾ, ಪುಟ್ಟ ಮಗುವು ಅಮ್ಮನ ಮುಂದೆ ಒಪ್ಪಿಸುವಂತೆ ಹೇಳಿದ್ದರು. ಆಗ ಅಲ್ಲಿದ್ದ ಶ್ರೋತೃಗಳಿಗೆ ಅನಂತ್ ಅವರು ಮತ್ತಷ್ಟು ವಿಭಿನ್ನವಾಗಿ ಕಂಡರು. ಅಂದು ಅವರು ಮಾತಾಡಿದ ಯಾವುದೇ ವಿಷಯದಲ್ಲೂ ಹಮ್ಮು-ಬಿಮ್ಮುಗಳ ಸುಳಿವಿರಲಿಲ್ಲಾ. ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬಿಂಬಿತವಾಗಿದ್ದರು. ಇವರೇನಾ ಕನ್ನಡ ಚಿತ್ರಲೋಕದ ಬಹು ದೊಡ್ಡ ನಟ ? ಎಂಬ ಅನುಮಾನವು ಅಲ್ಲಿ ಕಿವಿಯಾಗಿದ್ದವರಿಗೆ ಕಾಡಿತ್ತು ಎಂಬುದಂತು ನಿಜ.

ಇದೇ ಕ್ಲಬ್ ಹೌಸ್ ನ ಒಂದು ವೇದಿಕೆಯಲ್ಲಿ ವೈವಿಧ್ಯಮಯವಾದ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ಚಿತ್ರ ನಿರ್ದೇಶಕ ದಿನೇಶ್ ಬಾಬು ಅವರು ತಮ್ಮ ಚಿತ್ರ ಜೀವನದ ಬಗ್ಗೆ ಮಾತಾಡುತ್ತಿದ್ದರು. ಆಗ ಅಲ್ಲಿದ್ದ ಶ್ರೋತೃ ಒಬ್ಬರು `ತಾವು ಇಷ್ಟು ವರ್ಷಗಳಲ್ಲಿ ಹಲವಾರು ಭಾಷೆಗಳಲ್ಲಿ ನಿರ್ದೇಶಕರಾಗಿ, ಸಿನಿಮಾಟೋಗ್ರಾಫರ್ ಆಗಿ ಹಲವು ಭಾಷೆಗಳ ಮೇರು ನಟರೊಂದಿಗೆ ಕೆಲಸ ಮಾಡಿದ್ದೀರಲ್ಲಾ ಅವರಲ್ಲಿ ತಮಗೆ ಇಷ್ಟವಾಗುವ ನಟ ಯಾರು? ಎಂದದ್ದಕ್ಕೆ ಅವರು ಕನ್ನಡದಲ್ಲಿನ ಅನಂತ್‍ನಾಗ್ ಇದ್ದಾರಲ್ಲ. ಎಲ್ಲಾ ರೀತಿಯಲ್ಲಿ ಅನಂತ್‍ನಾಗ್ ಶ್ರೇಷ್ಟರು. ಅವರು ಯಾವ ಪಾತ್ರವನ್ನಾದರೂ ಶಿಸ್ತಿನಿಂದಲೇ ಮಾಡಬಲ್ಲವರಾಗಿದ್ದಾರೆ. ಈ ಮಾತು ಅನಂತ್ ಅವರಿಗಿಂತ ಕನ್ನಡಿಗರಾದ ನಮಗೆ ಹೆಚ್ಚು ಖುಷಿಯ ವಿಷಯ ಅಲ್ವೇ?

ಈ ತಮ್ಮ 74ನೇ ವರ್ಷದ ಜನ್ಮದಿನವನ್ನು ಕೂಡ ಉಡುಪಿಯಲ್ಲಿನ ಚಿತ್ರದ ಶೂಟಿಂಗ್‍ನಲ್ಲಿದ್ದೇ ಸಂಭ್ರಮಿಸಿದ್ದಾರೆ. ಅಲ್ಲದೇ ವಿಜಯಸಂಕೇಶ್ವರ್ ಅವರ ವ್ಯಕ್ತಿಚಿತ್ರದ ಆಧಾರಿತ ‘ವಿಜಯಾನಂದ’ ಚಿತ್ರದಲ್ಲಿ ಸಂಕೇಶ್ವರ್ ಅವರ ಪಾತ್ರವನು ವಹಿಸುತ್ತಿದ್ದಾರೆ ಎಂಬುದು ಸುದ್ದಿಯಾಗಿದೆ. ಹೀಗೆ ಸದಾ ಚಟುವಟಿಕೆಯಲ್ಲಿದ್ದಾರೆ.

ತಮ್ಮ ನಟನೆಯಲ್ಲಿನ ಪ್ರಬುದ್ಧತೆ, ರಸಿಕತನ, ಹಾಸ್ಯ ಪ್ರಜ್ಞೆ, ಹಾಗು ತನ್ಮಯತೆಗಳಿಂದ ಕನ್ನಡ ಕಲಾರಸಿಕರ ಮನಗೆದ್ದ ಅನಂತ್ ಇನ್ನು ಸಾಕಷ್ಟು ಮತ್ತಷ್ಟು ಇನ್ನಷ್ಟು ಸವಾಲಿನ ಪಾತ್ರಗಳಿಂದ ಬೆಳ್ಳಿತೆರೆಯ ಮೇಲೆ ವಿಜೃಂಭಿಸಲಿ ಎಂದು ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಹಾರೈಸೋಣ.

ತುಂಕೂರ್ ಸಂಕೇತ್

ಚಿತ್ರಗಳು : ಗೂಗಲ್

Related post

Leave a Reply

Your email address will not be published. Required fields are marked *