ಹಾವೇರಿ ಜಿಲ್ಲೆ ಆಶಯ ಕವನ
ಮತ್ತೊಂದು ಜನ್ಮ ಎಂಬುದೊಂದಿದ್ದರೆ
ಆಗಲಿ ಇಲ್ಲೆ ಹಾವೇರಿ ನೆಲದಲ್ಲೇ,
ಸರ್ವಜ್ಞನ ನಾಡು ಸದಾ ಶಾಂತಿಯಿಂದಿರಲಿ
ಗೋವಿಂದ ಭಟ್ಟರ ಕೃಪೆಯೂ ಎಮಗಿರಲಿ
ಶರೀರ ವಾಣಿ ಸದಾ ಮೊಳಗುತಲಿರಲಿ
ಕನಕ ಭಕ್ತಿಯದು ಅಮರವಾಗಿರಲಿ
ಗಾನಯೋಗಿಯ ಗಾನ ಸದಾ ಗುನುಗುತಿರಲಿ
“ಗೋಕಾಕ”ರ ಚಳುವಳಿ ಮಾದರಿಯಾಗಿರಲಿ
ವರದೆ ತುಂಗಭದ್ರೆಯರು ಜನರ ದಾಹ ನೀಗಿಸುತಿರಲಿ
ನಾಗನೂರು ಕೆರೆಯು ತುಂಬಿ ತುಳುಕುತಲಿರಲಿ
ಶಾಂತೇಶ, ಕಾಂತೇಶರು ನಾಡ ಕಾಯುತಲಿರಲಿ.
ತಾರಕೇಶ್ವರನ ಕೃಪೆಯು ಸದಾ ಜನರ ಮೇಲಿರಲಿ
ಸವಣೂರು ಖಾರದ ರುಚಿ ಕೆಡದೆ ಇರಲಿ
ಬ್ಯಾಡಗಿ ಮೆಣಸಿಗೆ ಎಂದೂ ಬೆಲೆಯಿರಲಿ
ಶಿವಶರಣರ ನಾಡಿದು ಸದಾ ಕಲ್ಪವೃಕ್ಷವಾಗಿರಲಿ
ಕುಡಿತ ಬ್ರಷ್ಠಾಚಾರ ಗಡಿಯಾಚೆಗಿರಲಿ
ನುಡಿಜಾತ್ರೆಯಿದು ಕನ್ನಡದ ಪಡಿ ಜಾತ್ರೆಯಾಗಿರಲಿ.
ಜಾತಿ ಕುಲ ಗೋತ್ರಾದಿಗಳು ಕನ್ನಡವಾಗಿರಲಿ….
ಡಾ. ಪ್ರಕಾಶ್.ಕೆ.ನಾಡಿಗ್