ಹಿಂದಿನ ಸಂಚಿಕೆಯಿಂದ…..
ರಾತ್ರಿ ಊಟವಾದ ಮೇಲೆ, ಮೊದಲ ಯಾಮದಲ್ಲಿಯೇ, ಚಿತ್ರಕನು ರಟ್ಟಾಳನ್ನು ಭೇಟಿ ಮಾಡಲು ಬಂದನು. ಮರುದಿನ ಬೆಳಿಗ್ಗೆ ಪ್ರಯಾಣ ಹೊರಡಬೇಕು. ಕೊಠಡಿಯಲ್ಲಿ ಬೇರೆ ಯಾರು ಇರಲಿಲ್ಲ. ದೀಪದ ಕಂಬದಲ್ಲಿ ಬತ್ತಿಯ ದೀಪ ಉರಿಯುತ್ತಿತ್ತು. ರಟ್ಟಾ ಬಂದು ಚಿತ್ರಕದ ಕೈ ಹಿಡಿದು ಪಕ್ಕದಲ್ಲಿ ನಿಂತು ‘ನಾನು ನಿಮ್ಮ ಜೊತೆ ಬರುವ ಹಾಗಿಲ್ಲ’ ಎಂದಳು.
ತಗ್ಗಿದ ದನಿಯಲ್ಲಿ ಮಾತಾಡುತ್ತಿದ್ದಾರೆ. ಚಿತ್ರಕ ‘ಇದೇ ಒಳ್ಳೆಯದು ಇಲ್ಲಿ ನೀನು ಸುರಕ್ಷಿತವಾಗಿರಬಹುದು’ ಎಂದನು. ರಟ್ಟಾ- ನೀವು ಜೊತೆಯಲ್ಲಿ ಇರದಿದ್ದಾಗ ಸುರಕ್ಷತೆ ಎಲ್ಲಿ ಬಂತು?
ಚಿತ್ರಕ- (ರಟ್ಟಾಳ ಹೆಗಲ ಮೇಲೆ ಕೈ ಇಟ್ಟು) ರಟ್ಟಾ, ಸ್ಕಂದಗುಪ್ತರು ನಿನ್ನಿಂದ ಆಕರ್ಷಿತರಾಗಿದ್ದಾರೆ. ಇದನ್ನು ನೀನು ಗಮನಿಸಿದೆ ಏನು? ಚಿತ್ರಕನ ಮುಖದ ಹತ್ತಿರಕ್ಕೆ ಮುಖ ತಂದು ರಟ್ಟಾ ‘ಗಮನಿಸಿದೆ ಇದರಿಂದ ಒಳ್ಳೆಯದೇ ಆಗುವುದು’ ಎಂದಳು.
ಅದು ನಿನಗೇ ಗೊತ್ತು’ ಎಂದು ಹೇಳುತ್ತ ರಟ್ಟಾಳ ಹೆಗಲ ಮೇಲಿಂದ ಚಿತ್ರಕ ತನ್ನ ಕೈಯನ್ನು ಕೆಳಗಿಳಿಸಿದನು.
ರಟ್ಟಾ- ಹೌದು. ನನಗೆ ಗೊತ್ತು. ನನ್ನ ಮನಸ್ಸು, ನನಗೆ ಗೊತ್ತು.
ಚಿತ್ರಕ – ಹಾಗಾದರೆ ಈಗ ಹೊರಡೋಣ. ಮತ್ತೆ ಯಾವಾಗ ನೋಡುವುದು? ನೋಡಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ.
ರಟ್ಟಾ – ನೀವು ನಿಶ್ಚಿಂತೆಯಿಂದ ಇರಿ. ಶೀಘ್ರದಲ್ಲಿಯೇ ಮತ್ತೆ ಭೇಟಿ ಯಾಗೋಣ.
ಚಿತ್ರಕನಿಗೆ ಮುಳ್ಳು ಚುಚ್ಚಿದಂತಾಯಿತು. ಚತುಃಸಾಗರ ಪರ್ಯಂತದ ಪೃಥ್ವಿಯ ಏಕಚ್ಛಕ್ರ ಅಧೀಶ್ವರ, ಅಂಥವನ ಏಕಮಾತ್ರ ಮಹಿಷಿಯಾಗುವ ಯೋಗ ಒದಗಿಬಂದರೆ ಯಾವ ಹೆಂಗಸು ತಾನೇ ಬೇಡವೆಂದಾಳು! ಆದರೆ, ಅದನ್ನು ಬಾಯಿಬಿಟ್ಟು ಹೇಳಲಿಲ್ಲ. ಬೇರೆ ಒಂದೆರಡು ಮಾತಾಡಿ ಚಿತ್ರಕನು ರಟ್ಟಾಳಿಂದ ಬೀಳ್ಕೊಂಡನು. ಇದೇ ಕಟ್ಟಕಡೆಯ ಭೇಟಿ ಎಂದು ಮನಸ್ಸಿನಲ್ಲಿ ಅಂದುಕೊಂಡನು. ಅನಂತರ ರಟ್ಟಾ ಮಲಗುವ ಕೋಣೆಗೆ ಬಂದು ಮಲಗಿದಳು. ಸ್ವಲ್ಪಹೊತ್ತು ಶೂನ್ಯದತ್ತ ದೃಷ್ಟಿ ಇಟ್ಟು ನೋಡುತ್ತಿದ್ದಳು. ಅಷ್ಟರಲ್ಲಿ ದಾಸಿ ಲಹರಿ ನಿಶ್ಯಬ್ದವಾಗಿ ಕಾಲಬಳಿ ಬಂದು ನಿಂತಿದ್ದಾಳೆ. ಆಕೆಯು ಮೃದುವಾಗಿ ‘ದೇವಿ, ತಮ್ಮ ಪಾದಗಳನ್ನು ಒತ್ತಲೇ’ ಎಂದಳು.
ರಟ್ಟಾ -(ನಗುನಗುತ್ತ) ನೀನು ಬಹಳ ಸೇವೆ ಮಾಡಿದ್ದೀಯೆ. ಸಾಕು ಏನು ಬೇಡ.
ಲಹರಿ – ಅದು ಏನು ಮಾತು! ನಾನು ತಮ್ಮ ಪಾದಸೇವೆ ಮಾಡುತ್ತೇನೆ. ತಾವು ನಿದ್ದೆಮಾಡಿರಿ. ತಾವು ನಿದ್ರಿಸಿದರೆ, ನಾನು ಕೂಡ ತಮ್ಮ ಕಾಲ ಬಳಿಯೇ ನಿದ್ದೆ ಮಾಡುತ್ತೇನೆ.
ಈ ಕೊಠಡಿ ಹಾಗೂ ಈ ಹಾಸಿಗೆ ಲಹರಿಯದು. ತಾನು ಧರಿಸಿರುವ ಉಡುಪು ಕೂಡಲಹರಿಯದೇ. ಸೈನ್ಯದ ಶಿಬಿರದಲ್ಲಿ ಬೇರೆ ಹೆಂಗಸಿನ ಉಡುಪು ಎಲ್ಲಿ ದೊರಕೀತು? ರಟ್ಟಾಳಿಗೆ ನಿಜ ಸ್ಥಿತಿಯ ಅರಿವಾಯಿತು. ಆದ್ದರಿಂದ ಅವಳು ಯಾವುದನ್ನು ಬೇಡವೆನ್ನಲಿಲ್ಲ. ಲಹರಿ ಹಾಸಿಗೆಯ ಬಳಿಯೇ ಕುಳಿತು ರಟ್ಟಾಳ ಪಾದ ಸೇವೆಯಲ್ಲಿ ತೊಡಗಿದಳು. ಸ್ವಲ್ಪ ಹೊತ್ತು ಮೌನ.
ರಟ್ಟಾ ‘ಶಿಬಿರದಲ್ಲಿ ಬೇರೆ ಯರೂ ಹೆಂಗಸರಿಲ್ಲವೆ?’ ಎಂದು ಕೇಳಿದಳು.
: ಇಲ್ಲ, ದೇವಿ’
‘ನಿನ್ನ ಹೆಸರು ಲಹರಿ ಎಂದೇ? ನೀನು ಎಷ್ಟು ದಿನದಿಂದ ರಾಜರ ಕುಟುಂಬದಲ್ಲಿ ಇದ್ದೀಯೆ?’
‘ಸ್ಕಂದಗುಪ್ತರು ಹತ್ತು ವರ್ಷ ವಯಸ್ಸಿನರಾಗಿದ್ದಾಗಿನಿಂದ ತಾಂಬೂಲ ಕರಂಕವಾಹಿನಿಯಾಗಿ ಈ ರಾಜ ಕುಟುಂಬದಲ್ಲಿ ಪ್ರವೇಶ ಮಾಡಿದೆ. ಅದು ಇಪ್ಪತ್ತು ವರ್ಷದ ಹಿಂದಿನ ಮಾತು. ಆವತ್ತಿನಿಂದಲೂ ಇಲ್ಲಿಯೇ ಇದ್ದೇನೆ.’
‘ನೀನು ಯುದ್ಧ ಭೂಮಿಗೂ ಬರಬೇಕಾಯಿತಲ್ಲ!’
‘ನಾನು ಇಲ್ಲದಿದ್ದರೆ ಕುಮಾರ ಸ್ಕಂದರ ಸೇವೆಗೆ ಯಾರೂ ಇರುವುದಿಲ್ಲ. ಅವರು ಬೇರೆ ಯಾರಿಂದಲೂ ಸೇವೆ ಮಾಡಿಸಿಕೊಳ್ಳುವುದಿಲ್ಲ. ಸೇವಕರು ಆತನ ಯೋಗ ಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಆದ್ದರಿಂದ ನಾನೇ ಬರಬೇಕಾಯಿತು.’
‘ನೀನು ಈಗಲೂ ರಾಜರನ್ನು ಕುಮಾರಸ್ಕಂದರೆAದೇ ಕರೆಯುತ್ತೀಯಲ್ಲಾ?’
‘ಹೌದು, ದೇವಿ. ಹಳೆಯ ಅಭ್ಯಾಸ. ಬಿಡುವುದಕ್ಕಾಗುವುದಿಲ್ಲ.’
‘ನೀನು ವಿವಾಹಿತಳೇ?’
‘ಇಲ್ಲ, ದೇವಿ’
‘ನೀನು ಏಕೆ ವಿವಾಹವಾಗಲಿಲ್ಲ?’
‘ನಾನು ವಿವಾಹವಾದರೆ ಕುಮಾರಸ್ಕಂದರ ಸೇವೆ ಮಾಡುವವರಾರು?’ ರಟ್ಟಾ ಸ್ವಲ್ಪ ಹೊತ್ತು ಲಹರಿಯ ಮುಖವನ್ನೇ ನೋಡುತ್ತಿದ್ದಳು. ಸ್ಕಂದಗುಪ್ತರ ಬಗ್ಗೆ ಈ ದಾಸಿಯ ಮನಸ್ಸಿನಲ್ಲಿರುವ ಭಾವನೆ ಯಾವ ರೀತಿಯದು? ದಾಸ್ಯ ಭಾವನೆ? ವಾತ್ಸಲ್ಯವೆ? ಸ್ನೇಹವೆ? ಪ್ರೇಮವೆ? ಅಥವಾ ಇವುಗಳೆಲ್ಲ ಒಟ್ಟಿಗೆ ಸೇರಿದ ಭಾವನೆ ಇರಬಹುದೋ?!
ರಟ್ಟಾ-ಮಹಾರಾಜರು ಏಕೆ ವಿವಾಹ ಮಾಡಿಕೊಂಡಿಲ್ಲ?
ಲಹರಿ – ಅವರ ಜೀವನವೆಲ್ಲ ಯುದ್ಧ ಮಾಡುವುದರಲ್ಲಿಯೇ ಕಳೆದು ಹೋಯಿತು. ಇನ್ನು ಮದುವೆ ಹೇಗೆ ಮಾಡಿಕೊಳ್ಳುತ್ತಾರೆ. ಅದೂ ಅಲ್ಲದೆ ಜ್ಯೋತಿಷಿಯೊಬ್ಬರು ಇವರು ಬ್ರಹ್ಮಚಾರಿಯಾಗಿಯೇ ಇರುವರು ಎಂದು ಹೇಳಿದ್ದರು.
‘ಇವರು ಮದುವೆಯಾಗದಿರುವುದಕ್ಕೆ ಇದೇ ಏನು ಕಾರಣ?’ ಲಹರಿ ಕ್ಷಣಕಾಲ ಮೌನವಾಗಿದ್ದು ‘ಕುಮಾರ ಸ್ಕಂದರಿಗೆ ಭೋಗ ಜೀವನದಲ್ಲಿ ಆಸಕ್ತಿಯಿಲ್ಲ. ಅವರು ಏಕಾಂತ ಸ್ವಭಾವದವರು. ಅವರ ಸ್ವಭಾವಕ್ಕೆ ಹೊಂದಿ ಕೊಳ್ಳುವಂಥ ಬಾಳಗೆಳತಿ ದೊರೆತಿಲ್ಲ. ಒಂದು ವೇಳೆ ಅಂಥ ವ್ಯಕ್ತಿ ದೊರೆತೆರೆ ಮದುವೆಯಾಗುವರೋ ಏನೋ!’ ಎಂದು ಹೇಳಿದಳು.
ರಟ್ಟಾ -ವಿವಾಹ ಮಾಡಿಕೊಳ್ಳುವುದಾದರೆ ಅವರಿಗೆ ಅನುರೂಪಳಾದ ಗೆಳೆತಿ ದೊರೆಯಬಹುದು. ಆದರೆ ಈಗ ಅದು ಸಾಧ್ಯವಿಲ್ಲೆಂದು ಕಾಣುತ್ತದೆ.
‘ಏಕೆ ಸಾಧ್ಯವಿಲ್ಲ?’
‘ಈಗ ಅವರು ವಿವಾಹ ಮಾಡಿಕೊಳ್ಳುವರೆ?’
‘ಅವರಿಗೆ ವಿವಾಹವಾಗುವ ವಯಸ್ಸೇನು ಮೀರಿಲ್ಲವಲ್ಲ. ಒಳ ಹೊರಗೆ ಅವರು ಯುವಕರು ಅನುರೂಪಳಾದ ಬಾಳಗೆಳತಿ ದೊರೆತರೆ ಅವರೇಕೆ ಮದುವೆಯಾಗುವುದಿಲ್ಲ?’
‘ಅದೇನೋ ಸರಿ.’
ಮತ್ತೇನೂ ಮಾತುಕತೆ ನಡೆಯಲಿಲ್ಲ. ರಟ್ಟಾ ನಿದ್ದೆ ಹೋದಳು. ರಾತ್ರಿ ಒಳ್ಳೆಯ ನಿದ್ದೆ ಬರಲಿಲ್ಲ. ಬಾರಿ ಬಾರಿಗೂ ಯಾವುದೋ ಆಂತರಿಕ ಭಾವನೆಗಳ ಒತ್ತಡಕ್ಕೆ ಸಿಲುಕಿ ಆಕೆಯ ನಿದ್ದೆಗೆ ಭಂಗ ಉಂಟಾಗುತ್ತಿತ್ತು.
ಶಿಬಿರದ ಮತ್ತೊಂದು ಕೊಠಡಿಯಲ್ಲಿ ಸ್ಕಂದಗುಪ್ತರು ನಿದ್ರಿಸುತ್ತಿದ್ದರು. ಅವರಿಗೂ ಒಳ್ಳೆಯ ನಿದ್ದೆ ಬರಲಿಲ್ಲ.
ಮುಂದುವರೆಯುವುದು…..
ಎನ್. ಶಿವರಾಮಯ್ಯ (ನೇನಂಶಿ)