ಮತ್ತೆ ಸಂಕ್ರಾಂತಿ
ಇರುವುದೆಲ್ಲವು ಹೋಗಿ ಮತ್ತೆ ಬೆತ್ತಲೆಯಾಗಿ|
ಕುರುಡಾಗಿ ಕಿವುಡಾಗಿ ಮೂಕ ನೀನಾಗಿ||
ಸರಿಯುತಿರೆ ಕತ್ತಲೊಳು ಬೆಳಕನ್ನು ಅರಸುತ್ತ|
ಮರಳಿ ಬರುವುದೆ ಬದುಕು – ನವ್ಯಜೀವಿ||
ಬದುಕೆಂಬುದು ನಿರಂತರ…ನಾವು ನಮ್ಮ ನಂತರ ಮತ್ತೊಬ್ಬರು.
ಕಾಲದೋಟದಲ್ಲಿ ಸಾಗುತ್ತ ಸಿಹಿಕಹಿಗಳ ಮಿಶ್ರಣವನ್ನು ಸವಿಯುತ್ತಾ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು.
ಬಾಳಿನ ಎಲ್ಲಾ ನೋವು,ದುಃಖ ದುಮ್ಮಾನಗಳಿಂದ ಹೊರಬಂದು ಸಂತಸದಿಂದ ಮನಃ ಶಾಂತಿ ಹೊಂದಿರುವ ಜೀವನವನ್ನು ನಡೆಸುವಂತಾಗಿ…
ನಾವು ದಿಟ್ಟ ಹೆಜ್ಜೆಯನ್ನು ಇಡುತ್ತ ಗುರು ಹಿರಿಯರು ಕಲಿಸಿದ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ನಡೆದು ಗುರಿ ಮುಟ್ಟಿ ಯಶಸ್ಸು ಸಾಧಿಸುವಂತಾಗಬೇಕು…
ಬದುಕಿನ ಹಣತೆಯನ್ನು ನಾವು ಹಚ್ಚಬೇಕು,ಆದರೆ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದು ಇರಬಾರದು.
ನಾವು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನಮಗಿರಬಾರದು.
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿರಬಾರದು,
ಇರುವಷ್ಟು ಹೊತ್ತು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬೆಳಕು ಬೀರುವ ಪ್ರಯತ್ನ ಮಾಡಬೇಕು.
ಬದುಕು ರಸಹೀನವಲ್ಲ..,ಕತ್ತಲು ಸರಿಯುತ್ತಲೇ ಬೆಳಕು ಆವರಿಸುತ್ತದೆ ಈ ನಿತ್ಯಸತ್ಯವನ್ನು ಅರಿಯಬೇಕು,ಅರಿತಾಗಲೇ ಅದು ಬದುಕಿನ ನಿತ್ಯ ಸಂಕ್ರಾಂತಿ …
ಸುನೀಲ್ ಹಳೆಯೂರು