ತಲೆಮಾರಿನ ಅಂತರ
ಓಬೀರಾಯನ ಕಾಲದ ಪ್ರತಿನಿಧಿಗಳಿವರಂತೆ….
ಶುರುವಾದರೆ ಸಾಕು ಇವರ ಮಾತು ,
ಹೇಳುವರು ಬಗೆ ಬಗೆಯ ಕತೆಗಳ ಕಂತೆ…
ನೂರು ರೂಪಾಯಿ ಸಂಬಳದ ಕತೆಯ ವ್ಯಥೆ…
ಮಳೆ ಬೆಳೆಗಳ ಹಸಿರು ಸಿರಿಗಳ ಮನ ಸೆಳೆಯುವ, ಕತೆ ಹೇಳುವರು ಇವರು…
ದೋಣಿಯಲಿ ತೇಲಿದ,ಬೆಟ್ಟವನು ಹತ್ತಿದ, ನೀರಿನಲಿ ಆಡಿದ ಕತೆ ಹೇಳುವರು ಇವರು..
ಇಳಿಜಾರಿನಲ್ಲಿ ಜಾರಿದ, ಗಾಯಕೆ ಅರಿಶಿನ ಹಚ್ಚಿದ ,
ರಾಜಣ್ಣನ ಸಿನಿಮಾ ನೋಡಿ
ಗದ್ಗದಿತರಾದ , ನಾನೇ ರಾಜಕುಮಾರನೆಂದು ಬೀಗಿದ ಕತೆ ಹೇಳುವರು ಇವರು…
ತುತ್ತು ಅನ್ನಕ್ಕೂ ಪರದಾಡಿದರಂತೆ..
ಎಲ್ಲಿಂದೆಲ್ಲಿಗೆ ಹೋಗುವುದಾದರೂ ಆಗ ಬರೀ ನಡಿಗೆಯಂತೆ…
ಮೋಟಾರು ಗಾಡಿ, ರೈಲು ಇವರಿಗೆ ದುಬಾರಿಯಂತೆ…
ವಾರಕ್ಕೊಮ್ಮೆ ಮಾತ್ರವೇ ಸಂತೆಯಂತೆ..
ಬಳಗದವರ ಮದುವೆಯೆಂದರೆ ಇವರಿಗೆ ಸಂಭ್ರಮವಂತೆ..
ಆ ಮದುವೆಯಲ್ಲಿ ಇವರದೇ ಓಡಾಟವಂತೆ…
ಉಣಬಡಿಸೋದು,ಬಂಧು -ಬಳಗದವರಿಗೆ ಉಪಚರಿಸುವುದೇ ಇವರ ಕೆಲಸವಂತೆ…
ಮದುವೆಯ ಸಂಭ್ರಮ ವಾರ ಕಳೆದರೂ ಮುಗಿಯೋದಿಲ್ಲವಂತೆ…
ಸೈಕಲ್, ರೇಡಿಯೋ ಇದ್ದವ ಊರಿಗೆ ಶ್ರೀಮಂತನಂತೆ
ಸ್ಕೂಟರ್, ಕಾರುಗಳು ಅಂದಚೆಂದದ ಮನೆ
ಇವರಿಗೆ ಕನಸಿನ ಮಾತಂತೆ…
ಗೆಳೆಯರ ಜೊತೆಗಿನ ಸ್ನೇಹಕ್ಕೆ ಮುಪ್ಪಿಲ್ಲವಂತೆ…
ಇಂದಿನ ತಲೆಮಾರಿನವರು ಬಲು ಅದೃಷ್ಟವಂತರು…
ಫೋನಾಯಿಸಿದರೆ ಸಾಕು, ಮನೆಯ ಬಾಗಿಲಿಗೆ ಬರುತ್ತೆ ಸಂತೆಯ ಸಾಮಾನು, ಸರಕು…
ಟಿವಿಯ ಮುಂದೆ ಕುಳಿತಿರಲು ದಿನವೂ ನೂರಾರು ರಾಜಕುಮಾರರ ಸಿನಿಮಾ
ಕೈಲೊಂದು ಟ್ಯಾಬು, ಜೊತೆಗೊಂದು ಸೆಲ್ಫೋನು
ತೊಡೆ ಮೇಲೋ ಆಫೀಸಿನ ಲ್ಯಾಪ್ ಟ್ಯಾಪು
ಓದಿದ್ದೇ ಓದಿದ್ದು
ನೋಡಿದ್ದೇ ನೋಡಿದ್ದು..
ಈ ಮೈಲು, ಎಫ್ ಬಿ ,
ವಾಟ್ಸಪ್ ಗಳ ಹಳೆಯ ಸಂದೇಶಗಳ ಸ್ಟಾಕು…
ಕಿಸೆ ತುಂಬ ಸಂಬಳವಿದ್ದರೂ ಇವರಿಗೇನೋ ಚಿಂತೆ…
ನೆಟ್ ನಲ್ಲಿ, (ಎಫ್ ಬಿಯಲ್ಲಿ,) ವಾಟ್ಸಪ್ಪುಗಳಲ್ಲಿ ನೂರಾರು ಗೆಳೆಯರಿದ್ದರೂ, ಆತ್ಮೀಯರಾರೂ ಇಲ್ಲವೆಂಬ
(ಕಷ್ಟಕ್ಕೆ ಯಾರೂ ನೆರವಾಗುವುದಿಲ್ಲವಲ್ಲ ಎಂಬ) ಕೊರತೆ..
ಹಣದ ಬೆಂಬತ್ತಿದ ಇವರಿಗೆ ಹಗಲಿಲ್ಲ, ಇರುಳಿಲ್ಲ…ನೆಮ್ಮದಿಯ ನಿದ್ದೆಯಂತೂ ಇಲ್ಲವೇ ಇಲ್ಲ…
ಯಾರ ಜೊತೆಗೂ ಮಾತಿಲ್ಲ ಕತೆಯಿಲ್ಲ ..
ಹೆಂಡತಿ, ಮಕ್ಕಳು , ಅಪ್ಪ, ಅಮ್ಮ ಎಲ್ಲಾ ದೂರದ ಮಾತಾಯ್ತಲ್ಲ…
ಈಗೀಗ ಅನಿಸುವುದು ಹಳೆಯ ಕಾಲವೇ ಚೆಂದ..
ಚಂದಮಾಮನ ಕತೆ ಹೇಳುವ ಅಜ್ಜ-ಅಜ್ಜಿಯೇ ಚೆಂದ …
ದಿನವಿಡೀ ಆಡಲು ಅದೇ ಜಿಗ್ರಿ ಗೆಳೆಯರ ದಂಡು..
ದಣಿವಾಗುವವರೆಗೂ ಆಡಬಹುದು ಮರಕೋತಿ, ಐಸ್ ಪೈಸ್ , ಚಿನ್ನಿ ದಾಂಡು…
ಜಾತ್ರೆಗೆ ಕೈ ಹಿಡಿದು ಕರೆದೊಯ್ಯುವ ಮಾಮ..
ತಿಂಗಳಿಗೊಮ್ಮೆ ಹೋಟೆಲ್ಲು ಸಿನಿಮಾ,
ಸಂಜೆಯಾದೊಡನೆ ಮನೆಮಂದಿಯೊಂದಿಗೆ ಕಾಫಿ ಟೀ…
ಬೇಜಾರಾದಾಗ ಗೆಳೆಯರ, ನೆಂಟರ ಮನೆಗೆ ಭೇಟಿ..
ಮಳೆಗಾಲದಲ್ಲಿ ಮನ ತಣಿಸುವ ,ಮೈ ಮರೆಸುವ ಇಳೆ..
ಇವಳ ಸರಿಸಮಾನರಾರಿಹರು ಹೇಳೆ?
ಅರಿತೆನೊಂದು ಪಾಠ ಆ ಹಿರಿಯ ಜೀವಗಳಿಂದ …
ಎಲ್ಲರೊಂದಿಗೂ ಕಲೆತಾಗ..ಪರಿಶ್ರಮದಿ ದುಡಿದಾಗ,
ನಿಸರ್ಗದೊಂದಿಗೆ ಬೆರೆತಾಗ.. ಬದುಕು ಸರಳ ಸುಂದರ ನಿರಾಳ..
ದೊರೆಯುವುದು ಮನಸಿಗೆ ಸ್ನೇಹ, ಪ್ರೀತಿ,ಮಮತೆ ಸಮಾಧಾನ ಹೇರಳ …ಹೇರಳ…
ಸಿ.ಎನ್. ಮಹೇಶ್