‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ
ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಕಸಾಪ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿಯನ್ನು ಲೋಕಾರ್ಪಣೆಗೊಳಿಸಿ, “ಕೃತಿಯ ಕೇಂದ್ರ ಪಾತ್ರಗಳ ಚಿತ್ತ ಮನೋ ಆಳಕ್ಕೆ ಇಳಿದು, ಬಗೆಯುತ್ತಾ ಎಳೆ ಎಳೆಯಾಗಿ ಆ ಮನೋ ವ್ಯಾಪಾರಗಳನ್ನು ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ಬೇರೆ ಬೇರೆ ರೀತಿಯಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಹಾಗೂ ಘಟನೆಗಳನ್ನು ಕೇಂದ್ರವಾಗಿರಿಸಿ ಕತೆ ಕಟ್ಟತೊಡಗಿದಾಗ ಒಂದು ಬಗೆಯ ರೋಚಕತೆ ಈ ಕೃತಿಯಲ್ಲಿ ಅಂತರ್ಗತವಾಗಿದೆ. ರೋಚಕ ಘಟನೆಗಳಿಂದ ಹಾಗೂ ನಿರೀಕ್ಷಿತ ವಿಚಾರಗಳಿಂದ ಕೃತಿಯನ್ನು ಪಾರು ಮಾಡುವುದು ಲೇಖಕಿಗೆ ಎದುರಾಗುವ ಬಹಳ ದೊಡ್ಡ ಸವಾಲು. ಒಬ್ಬ ನಿರ್ದೇಶಕ ತಾನು ನಿರ್ದೇಶಿಸುವ ಚಿತ್ರ ಅಥವಾ ನಾಟಕವನ್ನು ತನ್ನ ಮನೋರಂಗದಲ್ಲಿ ಪೂರ್ವಭಾವಿಯಾಗಿ ನೋಡಿರಬೇಕು. ಲೇಖಕರು ತಮ್ಮ ಮನೋರಂಗದಲ್ಲಿ ಎಲ್ಲಾ ಘಟನೆಗಳನ್ನು ಸಾಕ್ಷಾತ್ಕಾರ ಮಾಡಿಕೊಂಡು ಕಾದಂಬರಿಗೆ ರೂಪವನ್ನು ಕೊಟ್ಟಿದ್ದಾರೆ. ಇನ್ನಿಲ್ಲದ ಹಾಗೆ ಓದುಗರ ತೆಕ್ಕೆಗೆ ಆವರಿಸುವ ಕೃತಿ ‘ಚಿತ್ತರಂಗ’”.
ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, “ಚಿತ್ರರಂಗ ಸೆಳೆಯುವಷ್ಟು ಬೇರೆ ಯಾವುದೇ ಮಾಧ್ಯಮ ಸೆಳೆಯುವುದಿಲ್ಲ. ಪ್ರಸ್ತುತ ಚಿತ್ರನಟಿಯ ಬಾಳಲ್ಲಿ ಯಾವುದೇ ಬದಲಾವಣೆಯಾದರೂ ರಂಜನೆಯಾಗಿದ್ದು. ಅವರ ಬದುಕಿನಲ್ಲಿ ಖಾಸಗಿತನವೇ ಇಲ್ಲದಂತಾಗಿದೆ. ಲೇಖಕಿ ಮೂಲ ಕತೆಯ ಸೂಕ್ಷ್ಮತೆಯ ಬರವಣಿಗೆಯನ್ನು ಇಟ್ಟುಕೊಂಡು ಕೃತಿಗೆ ಚಿತ್ತರಂಗ ಹೆಸರಿಟ್ಟಿದ್ದಾರೆ. ಸಿನಿಮಾ ಹಾಗೂ ಸಾಹಿತ್ಯಕ್ಕೆ ಕ್ಯಾಚಿಯಾದ ಟೈಟಲ್ ಬಹುಮುಖ್ಯ ಎಂಬುದು ಸಾಬೀತಾಗಿದೆ. ಸಿನಿಮಾಗೆ ಬೇಕಾದ ತಂತ್ರವನ್ನು ಕಾದಂಬರಿಗೆ ಬಳಸಿಕೊಂಡಿರುವುದು ಕಾದಂಬರಿಯ ತಾಂತ್ರಿಕತೆಯನ್ನು ತೋರಿಸುತ್ತದೆ. ಕಾದಂಬರಿಯ ವಸ್ತು ವಿಶ್ಲೇಷಣೆ, ನಿರೂಪಣೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ”.
ಹಿರಿಯ ಪತ್ರಕರ್ತ ಗಣೇಶ ಕಾಸರಗೋಡು, “ಘಂಟಾಘೋಷವಾಗಿ ಹೇಳಬಹುದು ಇದು ಸುಬ್ಬಣ್ಣ ಅಲ್ಲ, ನಿರ್ದೇಶಕ ಪುಟ್ಟಣ್ಣ ಎಂದು. ಚಿತ್ತರಂಗದೊಳಗಿನ ಮಾನಸಿಕ ವಿಶ್ಲೇಷಣೆಯೇ ಈ ಕೃತಿ. ಸಿನಿಮಾವಾಗುವಂತಹ ಎಲ್ಲಾ ಸದಾಭಿರುಚಿಯ ವಿಚಾರಗಳು ‘ಚಿತ್ತರಂಗ’ ಕೃತಿಯೊಳಗೆ ಅಡಕವಾಗಿದೆ” ಎಂದು ಅಭಿಪ್ರಾಯಪಟ್ಟರು.
ಚಿತ್ತರಂಗ ಕಾದಂಬರಿಯ ಬೆನ್ನುಡಿ ಬರೆದುಕೊಟ್ಟ ಗಿರೀಶ್ ರಾವ್ ಅತ್ವಾರ್ (ಜೋಗಿ) ಬೆನ್ನುಡಿ ಬರೆದುಕೊಟ್ಟದ್ದನ್ನು ವಿವರಿಸುತ್ತಾ ತಮ್ಮ ‘ಊರ್ಮಿಳಾ’ ಕಾದಂಬರಿಯು ಕೂಡ ಇದೆ ತರಹದ ಕಥಾವಸ್ತುವನ್ನು ಒಳಗಂಡಿರುವುದನ್ನು ಸ್ಮರಿಸಿ ಲೇಖಕಿ ಆಶಾ ರಘುವಿಗೆ ಶುಭ ಹಾರೈಸಿದರು.
ಲೇಖಕಿ ಆಶಾ ರಘು, “ಆಧುನಿಕ ಕಾಲಘಟ್ಟದ ನನ್ನ ಕಾದಂಬರಿ ‘ಚಿತ್ತರಂಗ’. ಇದು ನನ್ನ ಸಿನಿಮಾರಂಗದ ಕುರಿತಾದ ವಿಭಿನ್ನ ಪ್ರಯತ್ನ. 70-80ರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಒಳಗೊಡಂತಹ ಕಾದಂಬರಿಯಾಗಿದೆ. ಒಬ್ಬ ಕಾಲ್ಪನಿಕ ನಿರ್ದೇಶಕ ಹಾಗೂ ಅವನ ಬದುಕಿನಲ್ಲಿ ಬರುವಂತಹ ನಟಿಯರು ಅವರ ಮನೋರಂಗದ ವ್ಯಾಪಾರವನ್ನು ಇಲ್ಲಿ ಅನಾವರಣ ಮಾಡಿದ್ದೇನೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ, “ನಿಜಜೀವನದೊಳಗೆ ನಡೆಯುವ ಘಟನೆಗಳನ್ನು ನಾವು ಸಿನಿಮಾಕ್ಕೆ ಕೊಂಡಿಯಾಗಿಸುತ್ತೇವೆ. ಇದರಿಂದ ಸಿನಿಮಾ ರಂಗದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಏನು ನಡೆದರೂ ನಾವು ಚಿಂತಿಸುವುದಿಲ್ಲ. ನಮ್ಮ ಜಗತ್ತು ಬಹಳ ಭಿನ್ನವಾಗಿದೆ. ಸಿನಿಮಾ ಅನ್ನುವಂತಹ ಜಗತ್ತನ್ನು ದೂರ ನಿಂತೆ ನೋಡುತ್ತೇವೆ. ಯಾವುದನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲವೋ ಅದನ್ನು ನೋಡುವುದರ ಹಾಗೂ ಅನುಭವಿಸುವುದರ ಮೂಲಕ ಕಲಾ ಜಗತ್ತಿನ ಸುಖವನ್ನು ಪಡೆಯುತ್ತೇವೆ” ಎಂದು ತಿಳಿಸಿದರು.
ಪ್ರಕಾಶಕರಾದ ರಘುವೀರ್ ಸಮರ್ಥ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೋಗಿ, ಬಿ.ಆರ್.ಲಕ್ಷಣರಾವ್, ಜಿ.ಎನ್.ಮೋಹನ್, ಸಂಪಿಗೆ ತೋಂಟದಾರ್ಯ, ಮಲ್ಲಿಕಾರ್ಜುನ ಮಹಾಮನೆ ಸಂತೋಷ್ ಮೆಹಂದಳೆ ದಂಪತಿಗಳು, ವಿರೂಪಾಕ್ಷ ಬೆಳವಾಡಿ, ಸೌಜನ್ಯ ದತ್ತರಾಜ್, ಸುನೀಲ್ ಹಳೆಯೂರು, ವಾಸುದೇವ ನಾಡಿಗ್ ಮೊದಲಾಗಿ ಹಲವಾರು ಗಣ್ಯರು ಬರಹಗಾರರು ಭಾಗವಹಿಸಿದ್ದರು.
ಸಾಹಿತ್ಯಮೈತ್ರಿ ತಂಡ