ಕಲಾ ಕೌಸ್ತುಭ
ನಟಸಾರ್ವಭೌಮ ಎಂದೇ ಗುರುತಿಸಲ್ಪಡುವ ಡಾ. ರಾಜ್‌ಕುಮಾರ್ ಜನಿಸಿದ್ದು ಏಪ್ರಿಲ್ 24, 1929ರಲ್ಲಿ ಗಾಜನೂರಿನಲ್ಲಿ. ತಂದೆ ಖ್ಯಾತ ರಂಗಭೂಮಿ ಕಲಾವಿದರಾಗಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು, ತಾಯಿ ಲಕ್ಷ್ಮಮ್ಮ.
ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು ಡಾಕ್ಟರ್ ರಾಜಕುಮಾರ್. ನಟನೆಯಲ್ಲಾಗಲಿ ವ್ಯಕ್ತಿತ್ವದಲ್ಲಾಗಲಿ ನಡೆನುಡಿಯಲ್ಲೇ ಆಗಲಿ ರಾಜಕುಮಾರ್ ಅವರು ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ನಟಿಸಿದ ಚಲನಚಿತ್ರಗಳಲ್ಲಿ ಅವರು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಸಂದೇಶವನ್ನು ನೀಡುವ ಪಾತ್ರಗಳೇ ಆಗಿತ್ತು ಅನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾನವೀಯ ಗುಣಗಳನ್ನು ಹೇಗೆ ಈ ಸಮಾಜದಲ್ಲಿ ಪ್ರತಿಬಿಂಬಿಸಬಹುದು ಎಂಬುದನ್ನು ತೋರಿಸಿಕೊಟ್ಟು ತನ್ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ರಾಜಣ್ಣ.
ರಂಗಭೂಮಿಯ ಹಿನ್ನೆಲೆಯಿಂದ ಬಂದ ರಾಜ್ ಅವರದ್ದು ಬಹುಮುಖ ಪ್ರತಿಭೆ, ಹಾಗಾಗಿಯೇ ಅವರು ಹಿನ್ನೆಲೆ ಗಾಯಕರಾಗಿಯೂ ಪ್ರಸಿದ್ದರಾದರು.
ಮುತ್ತುರಾಜ್ ಎಂಬುದು ಅವರ ನಿಜ ನಾಮಧೇಯ. ತಂದೆಯ ಗರಡಿಯಲ್ಲಿ ಪಳಗಿದ ರಾಜ್ ಅನಿವಾರ್ಯ ಕಾರಣಗಳಿಂದಾಗಿ ತಮ್ಮ 8ನೇ ವಯಸಿನಲ್ಲೇ ಶಾಲೆ ಬಿಡಬೇಕಾಯಿತು. ಗುಬ್ಬಿ ವೀರಣ್ಣ ಅವರ ನಾಟಕ ಮಂಡಳಿಯಲ್ಲಿ ನಟನೆ ಮಾಡುತ್ತ ಪಾತ್ರಗಳಿಗೆ ಜೀವ ತುಂಬುತ್ತಾ ನಟನೆಯ ವಿವಿಧ ಆಯಾಮಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಾ ಹೋದರು.
1953 ರ ಆ ಒಂದು ಘಟನೆ-
ಒಮ್ಮೆ ಮುತ್ತುರಾಜ್ ಹಾಗೂ ಪಾರ್ವತಮ್ಮ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೋಗಲು ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವಾಗ,ನಿರ್ದೇಶಕ ಎಚ್ ಎಲ್ ಎನ್ ಸಿಂಹ ಅವರ ಆಕಸ್ಮಿಕ ಭೇಟಿ ಮುತ್ತುರಾಜ್ ಅವರ ಬದುಕಿನಲ್ಲಿ ಹೊಸ ತಿರುವನ್ನು ನೀಡಿತು. ಎಚ್ ಎಲ್ ಎನ್ ಸಿಂಹ ಅವರು ತಾವು ನಿರ್ದೇಶನ ಮಾಡಲು ಹೊರಟಿದ್ದ ‘ಬೇಡರ ಕಣ್ಣಪ್ಪ’ ಚಿತ್ರಕ್ಕಾಗಿ ಕಲಾವಿದರ ಹುಡುಕಾಟದಲ್ಲಿದ್ದರು. ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್ ರವರನ್ನು ಕಂಡ ತಕ್ಷಣ “ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು” ಎಂಬ ಭಾವನೆ ಎಚ್ ಎಲ್ ಎನ್ ಸಿಂಹ ಅವರಲ್ಲಿ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು.
ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್ ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್ ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು. ನಂತರ ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು ‘ಸ್ಕ್ರೀನ್ ಟೆಸ್ಟ್’ ಗೆ ಮದರಾಸಿಗೆ ಬರಲು ಆಹ್ವಾನಿಸಲಾಯಿತು. ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ ರಾಜಕುಮಾರ್ ಎಂಬ ಹೊಸ ಹೆಸರಿನ ನಾಮಕರಣವೂ ಆಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು.
ಬೇಡರ ಕಣ್ಣಪ್ಪ ಚಿತ್ರವು 1954 ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು ‘ಸ್ಕ್ರೀನ್ ಟೆಸ್ಟ್’ ನೋಡಿದ ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರು ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ ” ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್.ಸಿಂಹ ಅವರು ನಿರ್ಮಾಪಕರಿಗೆ, ಪಾತ್ರಕ್ಕೆ ಇವರೇ ಸರಿಯಾದ ವ್ಯಕ್ತಿ ಎಂದು ಹೇಳಿ ಅವರನ್ನು ಒಪ್ಪಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರಾಜ್ ಕುಮಾರ್ .ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಕರೆಸಿಕೊಂಡು ಪ್ರಸಿದ್ಧ ನಟರಾದರು. ಚಿಕ್ಕವರಿದ್ದಾಗಲೇ ರಾಜಕುಮಾರ್ ಶಾಸ್ತ್ರೀಯ ಸಂಗೀತ ಕಲಿತಿದ್ದರಂತೆ. ಹಾರ್ಮೋನಿಯಮ್ ಮತ್ತು ಸಿತಾರ್ ನುಡಿಸುವುದೂ ಇವರಿಗೆ ಕರಗತವಾಗಿತ್ತಂತೆ.
ಸುಮಾರು ಐದು ದಶಕದ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸಾವಿರಾರು ಹಾಡುಗಳನ್ನು ಹಾಡಿ ಜನಪ್ರಿಯ ಗಾಯಕರಾಗಿ ಕೂಡಾ ಗುರುತಿಸಿಕೊಂಡರು ರಾಜ್. ಡಾ ರಾಜ್ ಅವರ ಅಭಿನಯ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರಲು ಕಾರಣ ಅವರು ಅಭಿನಯಿಸಿದ ವೈವಿಧ್ಯಮಯ ಪಾತ್ರಗಳು ಹಾಗೂ ಪಾತ್ರವೇ ತಾನಾಗುತ್ತಿದ್ದ ತನ್ಮಯತೆ, ಪರಕಾಯ ಪ್ರವೇಶ.
ರಾಜ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಹಾಡಿದ ‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ…’ ಮರೆಯಲಾದೀತೆ?.
ಇದು ಡಾ.ರಾಜಕುಮಾರ್, ಪಂಢರಿಬಾಯಿ ಮತ್ತು ನರಸಿಂಹರಾಜು ಅವರಿಗೆ ತಾರಾಪಟ್ಟ ಕೊಟ್ಟ ಚಿತ್ರವೂ ಹೌದು. ಗುಬ್ಬಿ ಕಂಪೆನಿ ನಿರ್ಮಾಣದ ‘ಬೇಡರ ಕಣ್ಣಪ್ಪ’ 1954ರಲ್ಲಿ ತೆರೆ ಕಂಡಿತು. ಕನ್ನಡ ಚಿತ್ರರಂಗದ ದೆಸೆ ಬದಲಿಸಿದ ಚಿತ್ರವೆಂದೇ ಇದು ಪ್ರಖ್ಯಾತಿ ಪಡೆದಿದೆ.
ಡಾ.ರಾಜಕುಮಾರ್ ಅವರು ನಟಿಸಿರುವ ‘ಸತ್ಯಹರಿಶ್ಚಂದ್ರ’ ಚಿತ್ರದಲ್ಲಿ ಹರಿಶ್ಚಂದ್ರನ ಪಾತ್ರ ಅದ್ಭುತ ಸದಾಕಾಲ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
1971 ರಲ್ಲಿ ತೆರೆಕಂಡ ‘ಕಸ್ತೂರಿ ನಿವಾಸ’ ಸಿನಿಮಾದ ಹಾಡು. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು…’ ಮರೆಯಲಾದೀತೇ!?
ರಾಜಕುಮಾರ್ ಅವರ ಮನೋಜ್ಞ ಅಭಿನಯದಿಂದ ಜನಮನ್ನಣೆ ಗಳಿಸಿದ ಚಿತ್ರ ಇದು. ಉದ್ಯಮಿಯಾಗಿ, ಗೆಳೆಯನಾಗಿ, ಪತಿಯಾಗಿ, ಭಗ್ನಪ್ರೇಮಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಅವರ ಅಭಿನಯ ಚಿರಕಾಲ ಮನದಲ್ಲಿ ಉಳಿಯುವಂಥದ್ದು
1983 ರಲ್ಲಿ ತೆರೆಕಂಡ ಕವಿರತ್ನ ಕಾಳಿದಾಸ ಚಿತ್ರ ಡಾ. ರಾಜಕುಮಾರ್ ಅವರ ವಿಶಿಷ್ಟ ಪ್ರತಿಭೆಯನ್ನು ಅನಾವರಣ ಮಾಡುತ್ತದೆ. ‘ಮಾಣಿಕ್ಯ ವೀಣಾ ಮುಫಲಾಲಯಂತೀಂ’ ಹಾಡನ್ನು ಹಾಡಿ ಅಭಿನಯಿಸಿದ ರಾಜ್ ಅವರಲ್ಲಿ ಒಬ್ಬ ಕವಿಕುಲ ಶ್ರೇಷ್ಠ ಕಾಣುತ್ತಾನೆ.
‘ಅಳ್‌ಬ್ಯಾಡ್ ಕಣೆ ಸುಮ್ಕಿರೆ’ ಹಾಡಿನಲ್ಲಿ ಹಳ್ಳಿಯ ಒಬ್ಬ ಮುಗ್ದ ಮನುಷ್ಯನೂ ಸಿಗುತ್ತಾನೆ. ಈ ಅಭಿನಯವೇ ಕನ್ನಡ ಮನಸ್ಸುಗಳಲ್ಲಿ ಶಾಶ್ವತವಾಗಿ ರಾಜ್ ಅವರನ್ನು ನೆಲೆಗೊಳಿಸಿದವು.
‘ಆಗದು ಎಂದು ಕೈಕಟ್ಟಿ ಕುಳಿತರೆ’, ‘ಆಹಾ ಮೈಸೂರು ಮಲ್ಲಿಗೆ’, ‘ನಗುನಗುತಾ ನಲಿ ನಲಿ…’ ಪಿ.ಬಿ. ಶ್ರೀನಿವಾಸ್ ಅವರ ಮಧುರ ಕಂಠದಲ್ಲಿ ಮೂಡಿಬಂದ ಈ ಹಾಡುಗಳು ಇಂದಿಗೂ ಕೇಳುಗರನ್ನು ಸೆಳೆಯುತ್ತವೆ. ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಾಡುಗಳೆಂದೇ ಪ್ರಸಿದ್ಧಿಪಡೆದಿರುವ ಇವು 1971 ರಲ್ಲಿ ಬಿಡುಗಡೆಯಾದ ರಾಜ್ ನಟನೆಯ ‘ಬಂಗಾರದ ಮನುಷ್ಯ’ ಚಿತ್ರದ್ದು.
ರಾಜ್ ಅವರ ನಟನೆಯಿಂದ ಸ್ಪೂರ್ತಿಗೊಂಡ ನೂರಾರು ಯುವಕರು ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಒಬ್ಬ ನಟನಿಗೆ ಇದ್ದ ಸಾಮರ್ಥ್ಯವನ್ನು ಹೇಳುತ್ತದೆ.
ಭಕ್ತ ಕುಂಬಾರ ,ರಣಧೀರ ಕಂಠೀರವ, ಭಾಗ್ಯವಂತರು,
ನಾ ನಿನ್ನ ಮರೆಯಲಾರೆ, ಗಂಗೆ ಗೌರಿ, ಜೀವನ, ಮೇಯರ್ ಮುತ್ತಣ್ಣ, ಸಿಪಾಯಿ ರಾಮು ಹೀಗೆ ಅವರು ಅಭಿನಯಿಸಿದ ಚಿತ್ರಗಳು ಒಂದಕ್ಕಿಂತ ಒಂದು ವಿಶೇಷತೆಯಿಂದ ಕೂಡಿವೆ.
ಡಾ.ರಾಜ್ ಅವರಿಗೆ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿ, ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾಗಿದ್ದಾರೆ.
2000 ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದು ರಾಜ್‌ಕುಮಾರ್ ರವರ ಬದುಕಿನಲ್ಲಿ ವಿಧಿಯ ಲೀಲೆಯಿಂದ ಕೂಡಿದ ಕಹಿ ಘಟನೆ, ೧೦೮ ದಿನಗಳು ಕಾಡಿನಲ್ಲೇ ಇದ್ದು ಅನೇಕರ ಪ್ರಯತ್ನದಿಂದ ಬಿಡುಗಡೆಯಾಗಿದ್ದರು.
ಅಲ್ಲಿಯವರೆಗೂ ಡಾ. ರಾಜ್ ದೈಹಿಕ ಸದೃಡತೆಯಿಂದಿದ್ದವರು ಕಾಡಿನಲ್ಲಿನ 108 ದಿವಸಗಳ ನಡಿಗೆಯಿಂದ ಮಂಡಿ ನೋವು ಇನ್ನಿಲ್ಲದಂತೆ ಕಾಡಿತು. ಮಂಡಿ ನೋವೊಂದು ಇಲ್ಲದಿದ್ದರೆ ಅವರ ಅಭಿನಯದಲ್ಲಿ ಭಕ್ತ ಅಂಬರೀಶ ನನ್ನು ತೆರೆಗೆ ತರಲು ವೇದಿಕೆ ಸಜ್ಜಾಗಿತ್ತು. ಆದರೆ ದುರದೃಷ್ಟವಶಾತ್ 2006 ಏಪ್ರಿಲ್ 12 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು.
ಸುನೀಲ್ ಹಳೆಯೂರು
ಮಾಹಿತಿ: ವಿವಿಧ ಮೂಲಗಳಿಂದ
2 Comments
ಅರ್ಥಪೂರ್ಣವಾಗಿ ಬಂದಿದೆ.
ಅಭಿನಂದನೆಗಳು ಸುನೀಲ್
Very good information about our kannada industry legend
Facebook.com/explorewondersofkarnataka