ತಗಾದೆ ಬೇಡ ಗಾದೆ ನೋಡ
ಕೃತಿ : ತಗಾದೆ ಬೇಡ ಗಾದೆ ನೋಡ
ಲೇಖಕಿ : ಶ್ರೀವಲ್ಲಿ ಮಂಜುನಾಥ
ಬಿಡುಗಡೆ :
ಸ್ಥಳ : ಮಾತಿನ ಮನೆ,
ನಂ: 14, ಶ್ರೀ ಕುಟೀರ, 5ನೆ ತಿರುವು, 6ನೇ ಮುಖ್ಯ ರಸ್ತೆ,
ಚಾಮರಾಜಪೇಟೆ, ಬೆಂಗಳೂರು – 560018
ಶ್ರೀಮತಿ ಶ್ರೀವಲ್ಲಿ ಮಂಜುನಾಥ ರವರು ಸದಭಿರುಚಿಯ ಬರಹಗಾರರು. ಅವರ ಅನೇಕ ಕವಿತೆಗಳು, ಕಥೆಗಳು, ಹಾಗು ವೈಚಾರಿಕ ಲೇಖನಗಳು ಈಗಾಗಲೇ ಪ್ರಮುಖ ಪತ್ರಿಕೆಗಳಾದ ತುಷಾರ, ತರಂಗ, ಮಯೂರ, ಮಂಗಳಾ, ಅಪರಂಜಿ, ಮಂಜುವಾಣಿ, ಓ ಮನಸೇ, ಸಂಕ್ರಮಣ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಭಾಷ್ ಕನ್ನಡ ವೇದಿಕೆ ನಡೆಸುವ ಅನೇಕ ಕಾರ್ಯಕ್ರಮಗಳಲ್ಲೂ, ಭಾಷ್ ನವರ ಪತ್ರಿಕೆಯ ಅನೇಕ ಕವನ ಮತ್ತು ಲೇಖನ ಸ್ಪರ್ಧೆಯಲ್ಲೂ ಬಹುಮಾನ ಬಂದಿದೆ.
ಜನಾಂದೋಲನ ಟ್ರಸ್ಟ್ ನಡೆಸಿದ ಕವನ ಸ್ಪರ್ಧೆಯಲ್ಲಿ ಮೊದಲ ಮತ್ತು ಬುಕ್ ಬ್ರಹ್ಮ ನಡೆಸಿದ ಕವನ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಬಂದಿದೆ..
ಅವರ ವಿದ್ಯಾಭ್ಯಾಸ ಸಿ.ಪಿ.ಸಿ. ಪಾಲಿಟೆಕ್ನಿಕ್, ಮೈಸೂರಿನಲ್ಲಿ ಸೆಕ್ರೆಟೇರಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲಮೋ, ದೂರ ಶಿಕ್ಷಣದ ಮೂಲಕ ಬಿ.ಕಾಂ. ಮಾಡಿ ಪ್ರಸ್ತುತ ಖೋಡೆ ಇಂಡಿಯಾ ಲಿಮಿಟೆಡ್ನಲ್ಲಿ ಸೆಕ್ರೆಟೇರಿಯಲ್ ಆಫೀಸರ್ ಆಗಿದ್ದಾರೆ. ಸಂಕೇತಿ ಭಾಷೆಯಲ್ಲಿ ಬರೆದ ಬರಹಗಳನ್ನೆಲ್ಲಾ ಒಗ್ಗೂಡಿಸಿ ಲಲಿತ ಪ್ರಬಂಧಂಗಾ ಎಂಬ ಪುಸ್ತಕವನ್ನು ಸಂಕೇತಿ ಅಕಾಡೆಮಿಯವರು ಪ್ರಕಟಿಸಿದ್ದಾರೆ. ಅವರ ಮೊದಲ ಕವನ ಸಂಕಲನ ಸುಪ್ತಸಾಗರ 2019 ರಂದು ಕುಪ್ಪಳಿಯಲ್ಲಿ ಬಿಡುಗಡೆಯಾಗಿದೆ.
ಇದೀಗ ಗಾದೆಗಳ ಸಾಲನ್ನೇ ಬಳಸಿ ತಮ್ಮ “ತಗಾದೆ ಬೇಡ, ಗಾದೆ ನೋಡ” ಎಂಬ ಕಥಾಸಂಕಲನವನ್ನು ಶ್ರೀವಲ್ಲಿ ಮಂಜುನಾಥ ರವರು ಹೊರತರುತ್ತಿದ್ದಾರೆ. ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರುಗಳಾದ ಶ್ರೀ ಸತ್ಯೇಶ್ ಎನ್. ಬೆಳ್ಳೂರ್ ರವರು ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ,
ಬದುಕಿಗೊಂದೆಚ್ಚರಿಕೆ ಕೊಡುವ ನುಡಿಮುತ್ತುಗಳೆ l
ವೇದದೊಳು ಗೀತೆಯೊಳು ವಚನಗ್ರಂಥದೊಳು ll
ಅದುವೆ ನಿನ್ನಯ ಸ್ವಂತ ಅನುಭವದಿ ಹೊಮ್ಮಿರಲು l
ಗಾದೆಗಳ ಸುರಿಮಳೆಯೊ ! – ನವ್ಯಜೀವಿ ll
ಅನುಭವದ ಮೂಸೆಯಿಂದ ಹೊರಹೊಮ್ಮುತ್ತ ಜನರ ನಿತ್ಯಜೀವನಕ್ಕೆ ಬೆಳಕಾಗುವ ಆಡುಭಾಷೆಯ ಸರಳ ಪದಪುಂಜಗಳೇ – ಗಾದೆಗಳು !
ಅವುಗಳ ಸುರಿಮಳೆ ಈ ಕೃತಿಯಲ್ಲಿದೆ. ಗಾದೆಗಳಿಗೂ ಅರ್ಥವಿವರಣೆ ಬೇಕೆ ಎನ್ನುವ ಮುನ್ನ, ನಿಮಗೆ ಗೊತ್ತಿರುವ ಎಲ್ಲ ಗಾದೆಗಳ ಸರಿಯಾದ ಅರ್ಥವನ್ನು ಮನಸ್ಸಿನಲ್ಲಿ ತಂದುಕೊಳ್ಳಿ. ಹೌದು, ಬೇಕು ಎನ್ನಿಸೀತು.
ಇಲ್ಲಿ ಆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ಅತ್ಯಂತ ಸೊಗಸಾಗಿ ಆತ್ಮೀಯರಾದ ಶ್ರೀವಲ್ಲಿ ಮಂಜುನಾಥ್ ಅವರು ನಮ್ಮೆಲ್ಲರಿಗಾಗಿ ಕಟ್ಟಿಕೊಟ್ಟಿದ್ದಾರೆ. ಗಾದೆಗಳ ಸಾಲುಗಳಿಗೆ ತಮ್ಮದೇ ಅನುಭವದ ಮುತ್ತನ್ನಿಟ್ಟು, ಪರ್ಯಾಯವಾದ ಇನ್ನಿತರ ಗಾದೆಗಳನ್ನು ಪೋಣಿಸಿ, ಪೂರಕವಾಗುವ ಕತೆಗಳನ್ನೂ ಮನೋಜ್ಞವಾಗಿ ಹೆಣೆದು, ಎಲ್ಲರಿಗೂ ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲ ಅರಿವಿನ ಹಾರವೊಂದನ್ನು ಸೃಜಿಸಿದ್ದಾರೆ. ಕೃತಿಕಾರರಿಗೆ ನನ್ನ ತುಂಬುಮನದ ಅಭಿನಂದನೆಗಳು.
ಎಲ್ಲರೂ ಈ ಕೃತಿಯನ್ನು ಕೊಂಡು ಓದಿ… ಇಲ್ಲಿನ ಗಾದೆಗಳನ್ನು ಬಳಸಿ… ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಸತ್ ಚಿಂತನೆಗಳು ಇಲ್ಲಿ ಹೇರಳವಾಗಿವೆ.
ಇದೆ ಏಪ್ರಿಲ್ 30 ರ ಭಾನುವಾರದಂದು ಸಂಜೆ 6 ಕ್ಕೆ “ತಗಾದೆ ಬೇಡ, ಗಾದೆ ನೋಡ” ಕಥಾಸಂಕಲನವು ಲೋಕಾರ್ಪಣೆಯಾಗಲಿದೆ. ಥಟ್ ಅಂತ ಹೇಳಿ ಖ್ಯಾತಿಯ ಶ್ರೀ ನಾ. ಸೋಮೇಶ್ವರ್ ರವರು ಕೃತಿಯ ಬಿಡುಗಡೆಯನ್ನು ಮಾಡಲಿದ್ದಾರೆ ಹಾಗು ಕಾರ್ಯಕ್ರಮದಲ್ಲಿ ವಿದ್ವಾನ್ ಪ್ರಶಾಂತ್ ಅಯ್ಯಂಗಾರ್ ರವರಿಂದ ವೀಣಾ ವಾದನ ಇರುತ್ತದೆ. ತಾವೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ.
ಸಾಹಿತ್ಯಮೈತ್ರಿ ತಂಡ