ಅಸ್ತಿತ್ವದ ಅಂಚಿನಲ್ಲಿ ಬಿಳಿ ಹೊಟ್ಟೆಯ ಬೆಳ್ಳಕ್ಕಿ
ಇಹಪರಕೆ ಕೊಂಡಿಯಾದಂತಿದೆ ಈ ಬೆಳ್ಳಕ್ಕಿ ಹಿಂಡು
ಹಿಂಡಾಗಿ ಅಥವಾ ಬೇರೆ ಬೇರೆಯೂ ಆಗಿ
ಬೆಳ್ಳಂಬೆಳಗ್ಗೆ ಬೆಳಕಿಗೆ ಬೆಳಕಾಗಿ ಪರಕ್ಕೆ ಹೊರಟು
ಮರಳುವುವು ಸಂಜೆ ಮತ್ತೆ ಇಹವೆ ಬೇಕೆಂದು ಬಯಸಿ
ನಾ. ಮೊಗಸಾಲೆ
ಬತ್ತದ ಗದ್ದೆಗಳಲ್ಲಿ, ಹಳ್ಳ ಕೊಳ್ಳಗಳ ನೀರ ತೆರೆಗಳ ಸನಿಹದಲ್ಲಿ, ಜಾನುವಾರುಗಳ ಮೇಲೆ ಕುಳಿತು ಹುಳುಗಳನ್ನು ಹೆಕ್ಕುವ ಬೆಳ್ಳಂ ಬೆಳಗಿನ ಬೆಳ್ಳಕ್ಕಿಗಳನ್ನು (Heron) ಯಾರು ತಾನೇ ಕಂಡಿಲ್ಲ! ಈ ಬೆಳ್ಳಕ್ಕಿಗಳು ಸೂರ್ಯೋದಯದ ದೃಡೀಕರಣವು ಹೌದು. ಎಷ್ಟೋ ಕವಿಗಳಿಗೆ ಕವನಗಳಿಗೆ ಸ್ಪೂರ್ತಿ ಈ ಬೆಳ್ಳಕ್ಕಿ! ಆದರೆ ಇಲ್ಲಿ ಹೇಳಹೊರಟಿರುವುದು ಆ ಬೆಳ್ಳಕ್ಕಿಗಳ ಬಗ್ಗೆ ಅಲ್ಲ, ಬೆಳ್ಳಕ್ಕಿಗಳಲ್ಲೇ ಬಹು ವಿಶಿಷ್ಟವಾದ, ಗಾತ್ರದಲ್ಲಿ ತುಸು ದೊಡ್ಡದಿರುವ “ಬಿಳಿ ಹೊಟ್ಟೆಯ ಬೆಳ್ಳಕ್ಕಿ” ಹಕ್ಕಿಗಳ ಕುರಿತು.
ಬಿಳಿ ಹೊಟ್ಟೆಯ ಬೆಳ್ಳಕ್ಕಿ” (White Bellied Heron) ಅಥವಾ ಇಂಪೀರಿಯಲ್ ಹೆರಾನ್ ಎಂಬ ಈ ಹಕ್ಕಿಗಳು ಇರುವುದು ಇಡೀ ಪ್ರಪಂಚದಲ್ಲೇ 250 ರ ಆಸುಪಾಸು ಮತ್ತು ಭಾರತದಲ್ಲಿ ಇದರ ಸಂಖ್ಯೆ ಕೇವಲ 50 ಮತ್ತೂ ಕಳವಳಕಾರಿ ಅಂಶವೆಂದರೆ ದಿನೇ ದಿನೇ ಇವುಗಳ ಸಂತತಿ ವೇಗವಾಗಿ ಕ್ಷೀಣಿಸುತ್ತಿರುವುದು. ಈಗಾಗಲೇ ಈ ಹಕ್ಕಿ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದವೆಂದು ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ (INCU) ದ ಕೆಂಪು ಪಟ್ಟಿಯಲ್ಲಿ ಸೇರಿಹೋಗಿವೆ.
ಈ ಬಿಳಿ ಹೊಟ್ಟೆಯ ಬೆಳ್ಳಕ್ಕಿಗಳ ಮುಖ್ಯ ಆವಾಸಸ್ಥಾನಗಳು ಬಾಂಗ್ಲಾದೇಶ, ನೇಪಾಳ, ಪೂರ್ವ ಹಿಮಾಲಯದ ತಪ್ಪಲಿನ ಭೂತಾನ್, ಹಾಗು ನಮ್ಮ ಈಶಾನ್ಯ ಭಾರತದ ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಲ್ಲಿ. ಹೀಗಿರುವ ಕಡಿಮೆ ಸಂಖ್ಯೆಯಲ್ಲಿಯೇ ಇವು ಜಾಸ್ತಿ ಕಾಣಿಸಿರುವುದು ಭೂತಾನಿನಲ್ಲಿ ಅಲ್ಲಿ ಇವುಗಳನ್ನು ‘ಚುಬ್ಜಾ’ ಎಂದು ಸ್ಥಳೀಯ ಹೆಸರಿನಿಂದ ಕರೆಯುತ್ತಾರೆ. ತೀರಾ ಇತ್ತೀಚೆಗೆ 2019 ರಲ್ಲಿ ಚೀನಾದ ಯುನ್ನಾನ್ ಎಂಬಲ್ಲಿ ಸಹ ಈ ಹಕ್ಕಿಯು ಅಪರೂಪಕ್ಕೆ ಕಾಣಿಸಿದೆ. ಅರಿಡೆಡೆ (Arideidae) ಎಂಬ ಪಕ್ಷಿ ಕುಟುಂಬಕ್ಕೆ ಸೇರಿದ ಈ ಹಕ್ಕಿಗಳ ಮೈ ಬೂದು ಬಣ್ಣದಿಂದ ಕೂಡಿದ್ದರು ಹೊಟ್ಟೆಯ ಭಾಗ ಮಾತ್ರ ಬಿಳಿಯ ಬಣ್ಣದಿಂದ ಕೂಡಿದ್ದು ಕತ್ತು ಸಹ ಬೆಳ್ಳಕ್ಕಿಗಳಿಗಿಂತ ಉದ್ದ ಆದ್ದರಿಂದಲೇ ಈ ಬೆಳ್ಳಕ್ಕಿಗಳ ಪ್ರಬೇಧವನ್ನು ಬಿಳಿ ಹೊಟ್ಟೆಯ ಬೆಳ್ಳಕ್ಕಿ ಎಂದು ಗಾತ್ರ ಹಾಗು ಎತ್ತರದಲ್ಲಿ ಸಾಮಾನ್ಯ ಬೆಳ್ಳಕ್ಕಿಗಳಿಗಿಂತ ದೊಡ್ಡದಿರುವುದರಿಂದ ಇದನ್ನು ಇಂಪೀರಿಯಲ್ ಹೆರಾನ್ ಎಂದು ಸಹ ಕರೆಯುತ್ತಾರೆ.
ಹಿಮಾಲಯದ ತಪ್ಪಲಿನ ನದಿತೀರಗಳ ಜೌಗುಪ್ರದೇಶ, ತಗ್ಗು ಪ್ರದೇಶದ ಕಾಡುಗಳಲ್ಲಿ ಬೆಳೆಯುವ ಎತ್ತರದ ಆನೆ ಹುಲ್ಲುಗಾವಲು, ಬಿಳಿ ಹೊಟ್ಟೆಯ ಬೆಳ್ಳಕ್ಕಿಗಳ ಮುಖ್ಯ ವಿಹಾರ ತಾಣ. ಇವುಗಳು ಜೋಡಿಯಾಗಿ ಮತ್ತು ಗುಂಪಿನಲ್ಲಿ ಕಾಣಸಿಗುವುದು ವಿರಳ, ಇವುಗಳು ಇದುವರೆಗು ಹೆಚ್ಚಾಗಿ ಕಾಣಿಸಿರುವುದು ಒಬ್ಬಂಟಿಯಾಗೇ ಎನ್ನಬಹುದು. ಫೆಬ್ರವರಿ ಮತ್ತು ಜೂನ್ ತಿಂಗಳ ಮದ್ಯೆ ಸಂತಾನೋತ್ಪತ್ತಿ ನೆಡೆಸುವ ಇವುಗಳು ತನ್ನ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಬಹಳ ಎತ್ತರದ ಮರಗಳಲ್ಲಿ ಗೂಡು ಕಟ್ಟುತ್ತವೆ. ಇವುಗಳ ಗೂಡುಗಳು ಸಾಮಾನ್ಯ ಹಕ್ಕಿಗಳಂತೆ ಮರಗಳ ಒಣ ಕಡ್ಡಿಗಳಿಂದ ಕಟ್ಟಲ್ಪಟ್ಟು ಒಳಗೆ ಪುಕ್ಕಗಳು ಇನ್ನಿತರ ಮೆದು ಪದಾರ್ಥಗಳನ್ನು ಹೊಂದಿರುತ್ತವೆ. ಇವುಗಳ ಮೊಟ್ಟೆಯು ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಕೂಡಿರುತ್ತವೆ.
ಬಿಳಿ ಹೊಟ್ಟೆಯ ಬೆಳ್ಳಕ್ಕಿಗಳಿಗೆ ಮನುಷ್ಯನೇ ಮೊದಲ ಶತ್ರು. ತೀರಾ ಸಂಕುಚಿತ ಸ್ವಭಾವದ ಈ ಹಕ್ಕಿಗಳು ಮಾನವನಿಂದ ಸದಾ ಅಂತರವನ್ನು ಕಾಪಾಡಿಕೊಳ್ಳಲು ಎತ್ತರದ ಮರಗಳಲ್ಲಿ ಗೂಡು ಕಟ್ಟಿದರು ಸ್ಥಳೀಯ ಬುಡಕಟ್ಟು ಅಥವಾ ಹಳ್ಳಿಯ ಜನರು ಉದುದ್ದನೆ ಬಿದಿರು ಕೋಲುಗಳ ಮೂಲಕ ಇವುಗಳ ಗೂಡುಗಳನ್ನು ನಾಶ ಮಾಡಿದುದರ ಫಲವಾಗಿ ಈ ಹಕ್ಕಿಗಳ ಅಸ್ತಿತ್ವವೇ ನಾಶವಾಗುತ್ತಿದೆ. ಭೂತಾನ್ ನಲ್ಲಿ ಶುರುವಾದ ಜಲ ವಿದ್ಯುತ್ ಯೋಜನೆಗಳು ಹಾಗು ಕಾಡುಗಳನ್ನು ಕಡಿದು ಹೆಚ್ಚು ಕೃಷಿ ಪ್ರದೇಶವನ್ನಾಗಿ ಮಾಡಿದರೆ ಪರಿಣಾಮ ಹೆಚ್ಚು ಸಂಖ್ಯೆಯಲ್ಲಿದ್ದ ಈ ಹಕ್ಕಿಗಳು ವಿನಾಶದ ಅಂಚನ್ನು ತಲುಪಿವೆ. ಇತ್ತೀಚಿನ ವರದಿಯ ಪ್ರಕಾರ ನೇಪಾಳದಲ್ಲಿ ಒಂದು ಹಕ್ಕಿಯು ಕಾಣಿಸಿಯೇ ಇಲ್ಲವೆಂದು ನಶಿಸಿ ಹೋಗಿದೆ ಎಂದು ತೀರ್ಮಾನಿಸಲಾಗಿದೆ.
ಇದೀಗ ಭೂತಾನ್ ಹಾಗು ನೇಪಾಳದಲ್ಲಿ ಸರ್ಕಾರಗಳು ಹೆಚ್ಚೆತ್ತು ಇದರ ಸಂರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಹೊರತಂದಿವೆ. ಇನ್ನು ನಮ್ಮ ಭಾರತದಲ್ಲಿ ಈಗಾಗಲೇ ಕೆಲವು ಯೋಜನೆಗಳು ಅಸ್ತಿತ್ವದಲ್ಲಿ ಇದ್ದು ಅನೇಕ ಸಂಘ ಸಂಸ್ಥೆಗಳು ಇದರ ಗೂಡುಗಳನ್ನು ಹುಡುಕಿ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸಗಳನ್ನು ಮಾಡುತ್ತಿರುವುದಾದರೂ ಇನ್ನೂ ಹೆಚ್ಚಿನ ಸಂಶೋದನೆಗಳು ಬೇಕಾಗಿವೆ ಎಂದು ತಜ್ಞರ ಅಭಿಪ್ರಾಯ. ಬಿಳಿ ಹೊಟ್ಟೆಯ ಈ ಹಕ್ಕಿಗಳು ಮಿಕ್ಕ ಬೆಳ್ಳಕ್ಕಿಗಳಂತೆ ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳಲ್ಲೆಂದು ಹಾರೈಸೋಣ.
ಕು ಶಿ ಚಂದ್ರಶೇಖರ್
ಚಿತ್ರ ಕೃಪೆ: ಸಾಗರ್ ಗೋಸವಿ