ಸಹ್ಯಾದ್ರಿಯ ನಗೆಮಲ್ಲರು – Laughingthrush
ಭಾರತದಲ್ಲಿನ ಪರ್ವತ ಶ್ರೇಣಿಗಳಲ್ಲಿ ಹಿಮಾಲಯದ ನಂತರ ಅತಿ ಉದ್ದವಾದದ್ದು ಪಶ್ಚಿಮ ಘಟ್ಟದ ಶ್ರೇಣಿಗಳು. ಸಹ್ಯಾದ್ರಿ ಘಟ್ಟಗಳು ಎಂದು ಸಹ ಹೆಸರಿರುವ ಈ ಶ್ರೇಣಿಗಳು ಬರೋಬರಿ 1600 ಕಿಲೋಮೀಟರಿನಷ್ಟು ವ್ಯಾಪ್ತಿಯಲ್ಲಿ ದಟ್ಟ ಅರಣ್ಯ ಗುಡ್ಡ ಪ್ರದೇಶಗಳಿಂದ ಹರಡಿಕೊಂಡಿದೆ. ಮಹಾರಾಷ್ಟ್ರ ಗುಜರಾತ್ ಗಳ ಗಡಿಪ್ರದೇಶದಲ್ಲಿನ ತಪತೀ ನದಿಯ ದಕ್ಷಿಣದಿಂದ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಅಲ್ಲಲ್ಲಿ ಕವಲೊಡೆದು ಕನ್ಯಾಕುಮಾರಿಯವರೆಗೆ ಚಾಚಿಕೊಂಡಿದೆ. ಇದರ ಒಟ್ಟೂ ಪ್ರದೇಶಗಳ ಅರ್ಧಕ್ಕೂ ಹೆಚ್ಚು ಭಾಗವಿರುವುದು ನಮ್ಮ ಕರ್ನಾಟಕದಲ್ಲೇ ಎಂಬುದು ನಮ್ಮೆಲ್ಲರ ಹೆಮ್ಮೆಯ ವಿಷಯ.
ಈ ಶ್ರೇಣಿಯು ಹಿಮಾಲಯಗಳಿಗಿಂತಲೂ ಪ್ರಾಚೀನವಾದದ್ದೆಂದು ಉಲ್ಲೇಖಿತವಾಗಿದೆ. ಸಹ್ಯಾದ್ರಿಯ ಒಡಲಲ್ಲಿರುವ ಗಿಡ ಮರಗಳ ಪ್ರಭೇದಗಳು, ಪ್ರಾಣಿ ಪಕ್ಷಿ ಕೀಟಗಳು, ನದಿಗಳಲ್ಲಿನ ಜಲಜೀವಿಗಳು ಅಗಣಿತ. ಪಶ್ಚಿಮ ಘಟ್ಟವೊಂದರಲ್ಲೇ ಎಲೆ ಉದುರುವ ಅರಣ್ಯ, ಉಷ್ಣ ವಲಯದ ಅರಣ್ಯ, ನಿತ್ಯಹರಿದ್ವರ್ಣ ಕಾಡುಗಳು, ಶೋಲಾ ಕಾಡುಗಳು ಹೀಗೆ ನಾಲ್ಕು ತರಹದ ಕಾಡುಗಳು ಇವೆ. ಶೋಲಾ ಕಾಡುಗಳೆಂದರೆ ಎರಡು ಬೆಟ್ಟಗಳ ಇಳಿಜಾರಿನ ಕಣಿವೆಯ ನಡುವೆ ಹಬ್ಬಿದ ಸಸ್ಯ ಸಂಪತ್ತು. ನಮ್ಮಲ್ಲಿನ ಕೊಡಗು, ಕುದುರೆಮುಖ, ಬಾಬಾ ಬುಡಾನ್ ಗಿರಿಯಂತಹ ಎತ್ತರದ ಶ್ರೇಣಿಗಳ ಮದ್ಯದಲ್ಲಿ ಶೋಲಾ ಕಾಡುಗಳನ್ನು ಕಾಣಬಹುದು.
ಲಾಫಿಂಗ್ ತ್ರಷ್ (ನಗೆಮಲ್ಲ) ಎಂಬ ವಿಶಿಷ್ಟ ಹಾಡು ಹಕ್ಕಿಯ ಸಂಕುಲವು ಈ ಶೋಲಾ ಕಾಡು ಪ್ರದೇಶಗಳಲ್ಲಿ ಜೀವಿಸುತ್ತಿರುವ ಪ್ರಮುಖ ಪಕ್ಷಿ ಪ್ರಬೇಧ. ಈ ಪಕ್ಷಿಸಂಕುಲಕ್ಕೆ ನಮ್ಮ ಕನ್ನಡದಲ್ಲಿ ಸೊಗಸಾಗಿ ನಗೆಮಲ್ಲಗಳು ಎಂದು ಕರೆಯುತ್ತಾರೆ. ಈ ನಗೆಮಲ್ಲಗಳು ‘ಲಿಯೋಥ್ರಿಚಿಡೆ’ ಎಂಬ ಪ್ರಾಚೀನ ಕುಟುಂಬ ವರ್ಗಕ್ಕೆ ಸೇರಿದವು. ಈ ‘ಲಿಯೋಥ್ರಿಚಿಡೆ’ ಕುಟುಂಬದಲ್ಲಿ ಸೇರುವ ನಗೆಮಲ್ಲಗಳನ್ನು ಪ್ರಪಂಚಾದ್ಯಂತ ಸುಮಾರು 133 ವಿಧದಲ್ಲಿ ತಜ್ಞರು ವಿಂಗಡಿಸಿದ್ದಾರೆ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಈಗ ಅಳಿವಿನಂಚಿನಲ್ಲಿರುವ ನಗೆಮಲ್ಲಗಳೆಂದರೆ
- ನೀಲಗಿರಿ ನಗೆಮಲ್ಲ – Nilgiri Laughingthrush
- ಬಾಣಾಸುರ ನಗೆಮಲ್ಲ – Banasura Laughingthrush
- ಪಳನಿ ನಗೆಮಲ್ಲ – Palani Laughingthrush
- ಅಶಂಬು ನಗೆಮಲ್ಲ – Ashambhu Laughingthrush
ನೀಲಗಿರಿ ನಗೆಮಲ್ಲ – Nilgiri Laughingthrush
ನೀಲಗಿರಿ ಪರ್ವತ ಶ್ರೇಣಿಗಳಲ್ಲಿ ಕಾಣಸಿಗುವ ಈ ಪುಟ್ಟ ಹಕ್ಕಿಯ ಗಾತ್ರ ಕೇವಲ 24 ರಿಂದ 28 ಸೆಂಟಿಮೀಟರ್. ‘ಮಾಂಟೆಸಿಂಕ್ಲಾ ಕ್ಯಾಚಿನ್ನಾನ್ಸ್’ (Montecincla cachinnans) ಎಂದು ಪಕ್ಷಿ ಸಂಕುಲದಲ್ಲಿ ಗುರುತಿಸಲ್ಪಡುವ ಇವುಗಳ ಮುಖ ಕಪ್ಪು, ಕೆಂಪು ಕಣ್ಣುಗಳು, ಕಣ್ಣಿನ ಮೇಲ್ಬಾಗದ ಹುಬ್ಬು ಬಿಳಿಯ ಬಣ್ಣದಿಂದ ಕೂಡಿದ್ದರೆ ಮಿಕ್ಕ ದೇಹದ ಭಾಗವೆಲ್ಲ ಆಲಿವ್ ಕಂದು ಬಣ್ಣ ಮಿಶ್ರಿತದಿಂದ ಕೂಡಿದೆ.
ಸಾಮಾನ್ಯವಾಗಿ ಜೋಡಿಹಕ್ಕಿಗಳಾಗಿ ಕಾಣಸಿಗುವ ಇವುಗಳ ಕೊಕ್ಕು ಸಣ್ಣದಿದ್ದರು ಚೂಪಾಗಿದೆ. ಸ್ವಲ್ಪ ಉದ್ದ ಹಾಗು ಗಟ್ಟಿಯಾದ ಕಪ್ಪನೆ ಕಾಲುಗಳಿರುವ ಇವು ಮರದ ಕೊಂಬೆಗಳನ್ನು ಭದ್ರವಾಗಿ ಹಿಡಿದುಕೊಂಡಿರುತ್ತವೆ. ಒಂದೇ ಸಾಮ್ಯವಿರುವ ಹೆಣ್ಣು ಹಾಗು ಗಂಡು ಹಕ್ಕಿಗಳನ್ನು ಗುರುತಿಸುವುದು ಕಷ್ಟ. ನೈಸರ್ಗಿಕ ಅರಣ್ಯವನ್ನೇ ಅವಲಂಬಿಸಿರುವ ಇವುಗಳು ನೀಲಗಿರಿಯ ಟೀ ಎಸ್ಟೇಟ್ ನ ಸುತ್ತ ಮುತ್ತ ಹಾಗು ಅಕೇಶಿಯಾ ತೋಟಗಳಲ್ಲಿ ಕಾಣಿಸಿಕೊಳ್ಳುವುದು ವಿರಳ. ಇದರ ಉಪಜಾತಿಯಾದ ‘ಜೇರ್ಡೋಣಿ’ ಎಂಬ ಹಕ್ಕಿ ಪ್ರಬೇಧ ನಮ್ಮ ಕೊಡಗಿನ ಬ್ರಹ್ಮಗಿರಿ ಬೆಟ್ಟಗಳಲ್ಲಿ ಕಾಣಸಿಗುತ್ತದೆ.
ಇವುಗಳ ಮುಖ್ಯ ಆಹಾರ ಅಕಶೇರುಕಗಳಾದ ಶಂಖದ ಹುಳುಗಳಂತಹ ಕೀಟಗಳು, ಕಾಡು ಹಣ್ಣುಗಳು ಜೊತೆಗೆ ಹೂವಿನ ಮಕರಂದವನ್ನು ಸಹ ಹೀರುತ್ತವೆ. ಜನವರಿಯಿಂದ ಜೂನ್ ತಿಂಗಳವರೆಗೂ ಸಂತಾನೋತ್ಪತ್ತಿ ಮಾಡುವ ಇವು ಒಮ್ಮೆಗೆ ಎರಡರವರೆಗೂ ಮೊಟ್ಟೆಗಳನ್ನು ಇಡುತ್ತವೆ. ಗಿಡ ಮರಗಳ ಬೇರುಗಳು, ಸಣ್ಣ ಕೊಂಬೆಗಳಿಂದ ಗೂಡು ಕಟ್ಟಿ ಒಳಪದರದಲ್ಲಿ ಒಣ ಎಲೆಗಳು ಹಾಗು ಕೆಲ ಜಾತಿಯ ಹೂವುಗಳನ್ನು ಹರಡುವ ಮೂಲಕ ಸುಂದರ ಗೂಡನ್ನು ರಚಿಸುತ್ತದೆ. ಗೂಡು ರಚಿಸುವಲ್ಲಿ ಗಂಡು ಹಾಗು ಹೆಣ್ಣು ಎರಡೂ ಒಟ್ಟಿಗೆ ಸಮಾನ ಪಾತ್ರ ವಹಿಸುತ್ತವೆ. ಹಾಡು ಹಕ್ಕಿ ಎಂದೇ ವಿಶೇಷಿತವಾಗಿರುವ ಇವುಗಳು ತಮ್ಮ ಏರು ಧ್ವನಿಗಳಲ್ಲಿ ವಿಧವಿಧವಾದ ಸ್ವರ ವಿನ್ಯಾಸ ಮಾಡುತ್ತವೆ. ತಜ್ಞರು ಇವು ಮಾಡುವ ಸ್ವರ ವಿನ್ಯಾಸದಿಂದಲೇ ಇದರ ಇರುವಿಕೆಯನ್ನು ಗುರುತಿಸುತ್ತಾರೆ.
ಕಳೆದ ಇನ್ನೂರು ವರ್ಷಗಳಿಂದ ನೀಲಗಿರಿಯ ಸುತ್ತ ಮುತ್ತ ಶೋಲಾ ಕಾಡುಗಳನ್ನು ತರಿದು ಟೀ ಎಸ್ಟೇಟ್ ಗಳನ್ನಾಗಿ ಪರಿವರ್ತಿಸಿದ್ದರಿಂದ ಇವುಗಳು ಆವಾಸ ನಷ್ಟ ಅನುಭವಿಸುತ್ತಿವೆ. ಈಗ ಇವುಗಳು ಇರುವ ವ್ಯಾಪ್ತಿ ಕೇವಲ 270 ಚದರ ಕಿಲೋಮೀಟರುಗಳು ಮಾತ್ರ ಎಂದು ಇವುಗಳ ಮೇಲಿನ ಅಧ್ಯಯನ ಸೂಚಿಸುತ್ತದೆ. ಇಡೀ ಪ್ರಪಂಚದಲ್ಲೇ ಇವುಗಳ ಇರುವಿಕೆಯ ಸಂಖ್ಯೆ 2000 ರ ಗಡಿ ದಾಟಿಲ್ಲ ಎಂದು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟವು (ಐ ಯು ಸಿ ಎನ್) ಇವುಗಳ ಪ್ರಭೇದವನ್ನು ತನ್ನ ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಸ್ಥಳೀಯ ಪ್ರಭೇದದ ಕಾಗೆಗಳು, ಮುಂಗೂಸಿಗಳಂತಹ ಪರಭಕ್ಷಕಗಳಿಂದ ಇವುಗಳ ಮೊಟ್ಟೆಗಳು ಮರಿಗಳಾಗಿ ಹೊರಬರುವುದು ಶೇಕಡಾ 70 ರಷ್ಟು ಮಾತ್ರ.
ಅಂದಹಾಗೆ ಈ ಹಕ್ಕಿಗೆ ನೀಲಗಿರಿ ಚಿಲಪ್ಪನ್ (ಮಲಯಾಳಿ ಭಾಷೆಯಲ್ಲಿ ಸಂತೋಷದಿಂದ ಕೂಗುವ ಹಕ್ಕಿ ಎಂದು ಅರ್ಥ) ಎಂಬ ಇನ್ನೊಂದು ಹೆಸರು ಸಹ ಇದೆ.
ಬಾಣಾಸುರ ನಗೆಮಲ್ಲ – Banasura Laughingthrush
ಕೇರಳದ ವೈನಾಡಿನ ಬಾಣಾಸುರ ಸಾಗರ ಜಲಾಶಯದ ಬೆಟ್ಟ ಗುಡ್ಡಗಳ ಶೋಲಾ ಕಾಡುಗಳಲ್ಲಿ ಕಾಣಿಸುವ ಮಾಂಟೆಸಿಂಕ್ಲಾ ಜೆರ್ಡೋನಿ (Montecincla Jerdoni) ಎಂಬ ಈ ಪುಟ್ಟ ಹಕ್ಕಿಯನ್ನು ಬಾಣಾಸುರ ನಗೆಮಲ್ಲ ಅಥವಾ ಬಾಣಾಸುರ ಚಿಲಪ್ಪನ್ ಎಂದು ಕರೆಯುತ್ತಾರೆ.
ಇದು ಕೂಡ ‘ಲಿಯೋಥ್ರಿಚಿಡೆ’ ಕುಟುಂಬದ ಮಾಂಟೆಸಿಂಕ್ಲಾ ಎಂಬ ಕುಲಕ್ಕೆ ಸೇರಿದ್ದು ನೀಲಗಿರಿ ನಗೆಮಲ್ಲಗಳಿಗಿಂತ ತುಸು ದೊಡ್ಡದು. ಗಾತ್ರದಲ್ಲಿ 200 ರಿಂದ 230 ಸೆಂಟಿಮೀಟರ್ ನಷ್ಟು ಉದ್ದ ಹಾಗು 36 ರಿಂದ 52 ಕೇಜಿಯಷ್ಟು ತೂಕವಿರುತ್ತದೆ. ಇದರ ವ್ಯಾಪ್ತಿ ಕೂಡ ಚಿಕ್ಕದೇ ಬಾಣಾಸುರ ಬೆಟ್ಟ ದ್ವೀಪಗಳು ಹಾಗು ನಮ್ಮ ಕೊಡಗಿನ ಬ್ರಹ್ಮಗಿರಿಯ ಪರ್ವತ ಶ್ರೇಣಿಗಳು 1400 ರಿಂದ 2400 ಚದರ ಕಿಲೋಮೀಟರ್ ಗಷ್ಟೇ ಸೀಮಿತವಾಗಿದೆ.
ಈ ಹಕ್ಕಿಗಳ ಮುಖವು ಸಹ ನೀಲಗಿರಿ ನಗೆಮಲ್ಲಗಳ ಹಾಗೆ ಕಪ್ಪು ಆದರೆ ಕಪ್ಪು ಕಣ್ಣುಗಳು, ತೆಳು ಬೂದು ಬಣ್ಣದ ಎದೆ ಹಾಗು ಮಿಕ್ಕ ದೇಹ (ರೆಕ್ಕೆಯು ಸೇರಿ) ಕಿತ್ತಳೆ ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಕಂದು ಬಣ್ಣದ ಇವುಗಳ ಕಾಲುಗಳು ಸಹ ಗಟ್ಟಿಯಾಗಿದ್ದು ಎಂತಹ ಟೊಳ್ಳು ಕೊಂಬೆಯನ್ನು ಸಹ ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಇವು ಗುಡ್ಡ ಪ್ರದೇಶದ ಕಾಡು ಹಣ್ಣುಗಳು ಹಾಗು ಕೀಟ ಜಂತುಗಳನ್ನು ತನ್ನ ಆಹಾರವಾಗಿ ಭಕ್ಷಿಸುತ್ತವೆ. ಇವು ಮರಗಳ ಕೊಂಬೆಯಲ್ಲಷ್ಟೇ ಅಲ್ಲದೆ ನೆಲದಲ್ಲೂ ಸಹ ಕೀಟಗಳನ್ನು ಭಕ್ಷಿಸುವಾಗ ಕಾಣಸಿಗುತ್ತವೆ.
ಇವುಗಳ ಸಂತಾನೋತ್ಪತಿ ಸಮಯ ಡಿಸೆಂಬರ್ ನಿಂದ ಜೂನ್ ತಿಂಗಳವರೆಗೂ, ಒಮ್ಮೆಲೇ ಎರಡೂ ಮೊಟ್ಟೆಯವರೆಗೂ ಇಡುವ ಇವು ಕೂಡ ನೀಲಗಿರಿ ನಗೆಮಲ್ಲನ ಹಾಗೆ ಬಟ್ಟಲಾಕಾರದಲ್ಲಿ ಗೂಡು ಕಟ್ಟುತ್ತವೆ. ತನ್ನ ಎತ್ತರದ ಧ್ವನಿಯಿಂದ ಆಕರ್ಷಕವಾಗಿ ವಿವಿಧ ಸ್ವರಗಳಲ್ಲಿ ಕೂಗಿ, ಶಿಳ್ಳೆ ಹೊಡೆದು ಒಮ್ಮೊಮ್ಮೆ ಹಾಡಿ ತನ್ನ ಇರುವನ್ನು ಸೂಚಿಸುತ್ತದೆ.
ವ್ಯವಸಾಯ ಹಾಗು ಟೀ ಬೆಳೆಯುವಿಕೆಗಾಗಿ ಕಾಡುಗಳ ಕಡಿತ ಹಾಗು ಇತರೆ ಪರಭಕ್ಷಕ ಜೀವಿಗಳಿಂದ ಇವು ಆವಾಸ ನಷ್ಟ ಹಾಗು ಸಂತತಿಯಲ್ಲಿ ಕ್ಷೀಣತನದ ಅಪಾಯ ಅನುಭವಿಸುತ್ತಿವೆ. ಸಧ್ಯಕ್ಕೆ ಅಪಾಯದಂಚಿನಲ್ಲಿರುವ ಪಕ್ಷಿ ಪ್ರಬೇಧ ಎಂದು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟದ (ಐ ಯು ಸಿ ಎನ್) ಕೆಂಪು ಪಟ್ಟಿಯನ್ನು ಸೇರಿವೆ. ಕಳವಳಕಾರಿ ಸಂಗತಿಯೆಂದರೆ ಇತ್ತೀಚಿನ ವರದಿಗಳ ಪ್ರಕಾರ ಈ ಹಕ್ಕಿಗಳು ಆ ಪ್ರದೇಶದಲ್ಲಿ ಹೊಸದಾಗಿ ಯಾವ ತಜ್ಞರು ಅಥವಾ ಪಕ್ಷಿವೀಕ್ಷಕರ ಕಣ್ಣಿಗೆ ಬಿದ್ದಿಲ್ಲ ಎನ್ನುವುದು. ಸದ್ಯಕ್ಕೆ ಈ ಪಕ್ಷಿಗಳ ಸಂಖ್ಯೆ ಪ್ರಪಂಚದ್ಯಾಂತ 500 ರಿಂದ 2000 ದ ಒಳಗೆ ಅಷ್ಟೇ.
ಬಣ್ಣ ಹಾಗು ಗಾತ್ರದಲ್ಲಿ ಬಾಣಾಸುರ ನಗೆಮಲ್ಲಗಳು ನೀಲಗಿರಿ ನಗೆಮಲ್ಲಗಳಿಗಿಂತ ತುಸು ವಿಭಿನ್ನ ಎಂಬುವುದನ್ನು ಬಿಟ್ಟರೆ ಮಿಕ್ಕೆಲ್ಲ ವಿಷಯಗಳಲ್ಲಿ ಇವೆರಡೂ ಹಕ್ಕಿಗಳಲ್ಲಿ ಸಾಮ್ಯತೆ ಇದೆ.
ಇವೆರಡು ಹಕ್ಕಿಗಳ ಧ್ವನಿಗಳನ್ನು ಕೆಳಗಿನ ಲಿಂಕ್ ಉಪಯೋಗಿಸಿ ಕೇಳಬಹುದು ಪ್ರಯತ್ನಿಸಿ…
ನೀಲಗಿರಿ ನಗೆಮಲ್ಲ – https://xeno-canto.org/species/Montecincla-cachinnans
ಬಾಣಾಸುರ ನಗೆಮಲ್ಲ – https://xeno-canto.org/species/Montecincla-jerdoni
ಇನ್ನೆರಡು ನಗೆಮಲ್ಲರ ಸಂಗತಿಗಳು ಮುಂದಿನ ಸಂಚಿಕೆಯಲ್ಲಿ……
ಚಂದ್ರಶೇಖರ್ ಕುಲಗಾಣ
ಚಿತ್ರ ಕೃಪೆ: ಪಿ.ಫಲ್ಗುಣ