ಸಹ್ಯಾದ್ರಿಯ ನಗೆಮಲ್ಲರು – Laughingthrush 2
ಮುಂದುವರೆದ ಭಾಗ
ಹಿಂದಿನ ಭಾಗ ಓದಲು ಕೆಳಗಿನ ಲಿಂಕ್ ಬಳಸಿ
ಪಳನಿ ನಗೆಮಲ್ಲ – Palani Laughingtrush
ಪಶ್ಚಿಮ ಘಟಗಳ ಪೂರ್ವಕ್ಕೆ ವಿಸ್ತರಣೆಯಾಗಿರುವ ಪರ್ವತ ಶ್ರೇಣಿಗಳನ್ನು ಪಳನಿ ಬೆಟ್ಟಗಳು ಎಂದು ಕರೆಯುತ್ತಾರೆ. ದಟ್ಟ ಕಾಡುಗಳನ್ನು ಹೊಂದಿರುವ ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿಗಳ ಪಶ್ಚಿಮದಿಂದ ಶುರುವಾಗುವ ಪಳನಿ ಬೆಟ್ಟಗಳು ಕೇರಳದ ಸೀಮೆ ಹಾಗೂ ಭಾರತದ ಪಶ್ಚಿಮ ಕರಾವಳಿಗೆ ಸಮಾನಂತರವಾಗಿ ಸಾಗುತ್ತದೆ. ಈ ಪಳನಿ ಬೆಟ್ಟಗಳಲ್ಲಿನ ದಟ್ಟ ಅಡವಿಗಳಲ್ಲಿ ಕಾಣಸಿಗುವುದೇ ಈ ಪಳನಿ ನಗೆಮಲ್ಲಗಳು.
ಬೂದುಬಣ್ಣದ ಈ ಹಕ್ಕಿಯನ್ನು ‘ಮಾಂಟೆಸಿಂಕ್ಲ ಫೇರ್ ಬಂಕಿ’ (Montecincla fairbanki) ಎಂಬ ಹೆಸರಿನಿಂದ ನಗೆಮಲ್ಲಗಳಲ್ಲಿ ವಿಭಾಗಿಸಲಾಗಿದೆ. ಪಳನಿ ಚಿಲಪ್ಪನ್ ಎಂದು ಸಹ ಕರೆಯಲ್ಪಡುವ ಈ ಹಕ್ಕಿಯ ಮೈ ಮೇಲಿನ ಬಣ್ಣ ಆಲಿವ್ ಮಿಶ್ರಿತ ಕಂದು, ಎದೆಯ ಭಾಗದ ಬಿಳಿ ಬಣ್ಣ ಬೂದು ಗೆರೆಗಳಿಂದ ಕೂಡಿದೆ. ಕಡು ಕಣ್ಣಿನ ಪಟ್ಟಿ ಮತ್ತು ಅಗಲವಾದ ಆಕರ್ಷಕ ಬಿಳಿ ಹುಬ್ಬುಗಳನ್ನು ಹೊಂದಿರುವ ಈ ಹಕ್ಕಿಯ ಗಾತ್ರ 20 ರಿಂದ 21 ಸೆಂಟಿಮೀಟರುಗಳು.
ಪಳನಿ ನಗೆಮಲ್ಲಗಳು ಡಿಸೆಂಬರ್ ನಿಂದ ಜೂನ್ ತಿಂಗಳಾದ್ಯಂತ ಸಂತಾನೋತ್ಪತಿಯಲ್ಲಿ ತೊಡಗಿ ಎರಡು ಒಮ್ಮೆಗೆ ಎರಡು ಮೊಟ್ಟೆಗಳನ್ನು ಇಡುತ್ತವೆ. ಗೂಡು ಕಟ್ಟುವಿಕೆ, ಮೊಟ್ಟೆಗಳಿಗೆ ಕಾವು ಕೊಡುವುದು ಮತ್ತು ಮರಿಗಳಿಗೆ ಆಹಾರ ತಿನಿಸುವುದರಲ್ಲಿ ಗಂಡು ಹಾಗು ಹೆಣ್ಣು ಹಕ್ಕಿಗಳರೆಡೂ ಸಮಾನವಾಗಿ ಪಾತ್ರ ವಹಿಸುತ್ತವೆ. ಕಾಡು ಹಣ್ಣುಗಳು, ಹುಳ ಹುಪ್ಪಟ್ಟೆಗಳು, ಒಮ್ಮೊಮ್ಮೆ ಗಿಡ ಗಂಟಿಗಳ ಎಲೆ ಚಿಗುರುಗಳನ್ನು ತಿನ್ನುವ ಇವು ಮೊಗ್ಗುಗಳಿಗೆ ಪರಾಗ ಸ್ಪರ್ಶ ನೀಡಿ ಹೂವಾಗಿಸಿ ಪ್ರಕೃತಿಯ ಸುಂದರತೆಗೆ ಸಾಕ್ಷಿಯಾಗುತ್ತವೆ.
ಟೀ ಎಸ್ಟೇಟ್ ಹಾಗು ಏಲಕ್ಕಿ ತೋಟಗಳಲ್ಲಿ ಸಣ್ಣಗುಂಪುಗಳಲ್ಲಿ ಕಾಣಸಿಗುವ ಇವುಗಳಿಗೆ ಸಹ ಆವಾಸಸ್ಥಾನ ನಷ್ಟ ಅನುಭವಿಸುತ್ತಿವೆ ಹಾಗೂ ಪರಭಕ್ಷಕಗಳಿಂದ ಸಂತತಿ ನಾಶ ಇದ್ದದ್ದೇ! ಅವಾಸದಂಚಿನ ಹಕ್ಕಿಗಳೆಂದು ಐ ಯು ಸಿ ಎನ್ ಪಟ್ಟಿಯಲ್ಲಿ ಸೇರಿರುವ ಇವುಗಳು ಪಳನಿ ಬೆಟ್ಟಗಳಲ್ಲದೆ, ಕೇರಳದ ಮುನ್ನಾರ್ ಬೆಟ್ಟಗಳಲ್ಲಿ ಹಾಗೂ ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ಸಹ ಕಾಣಸಿಗುತ್ತವೆ.
ಅಶಂಭು ನಗೆಮಲ್ಲ – Ashambu Laughingtrush
ದಕ್ಷಿಣ ತಮಿಳುನಾಡು ಹಾಗು ಕೇರಳ ರಾಜ್ಯಗಳನ್ನು ಬೇರ್ಪಡಿಸುವ ಪಶ್ಚಿಮ ಘಟ್ಟಗಳ ಗುಡ್ಡಗಾಡು ಕಾಡುಗಳಲ್ಲಿ ಅಶಂಭು ನಗೆಮಲ್ಲ ಹಕ್ಕಿಗಳು ಕಾಣಸಿಗುತ್ತವೆ. ಮಾಂಟೆಸಿಂಕ್ಲ ಮೆರಿಡಿಯೋನಲಿಸ್ (Montecincla meridionalis) ಎಂಬ ಈ ಹಕ್ಕಿಯನ್ನು ಟ್ರಾವನ್ಕೋರ್ ನಗೆಮಲ್ಲ ಅಥವಾ ಅಶಂಭು ಚಿಲಪ್ಪನ್ ಎಂದು ಸಹ ಕರೆಯುತ್ತಾರೆ. ಇದು ಪಳನಿ ನಗೆಮಲ್ಲಗಳಿಗೆ ತೀರಾ ಹತ್ತಿರದ ಸಂಬಂಧಿ, ಒಂದೇ ವ್ಯತ್ಯಾಸವೆಂದರೆ ಅಶಂಭು ಹಕ್ಕಿಗಳ ಕಣ್ಣಿನ ಸುತ್ತ ಇರುವ ಬಿಳಿ ಹುಬ್ಬು, ಮಿಕ್ಕಂತೆ ಗಾತ್ರದಲ್ಲಿ ಮತ್ತು ಇತರೆ ವಿಷಯಗಳಲ್ಲಿ ಅಂತಹ ವ್ಯತ್ಯಾಸವೇನಿಲ್ಲ.
ಡಿಸೆಂಬರ್ ನ ಚಳಿಗಾಲ ಹಾಗು ಜೂನ್ ಮಳೆಗಾಲದವರೆಗೂ ಗಂಡು ಹೆಣ್ಣುಗಳೆರಡು ಮಿಲನಿಸಿ ಗೂಡು ಕಟ್ಟಿ ಎರಡರವರೆಗೂ ಮೊಟ್ಟೆಗಳನ್ನು ಇಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಇವೂ ಕೂಡ ಹೂ ಮೊಗ್ಗಿನ ಪರಾಗಸ್ಪರ್ಶ ಮಾಡಿ ಮಕರಂದವನ್ನು ಹೀರಿ ಕಾಡು ಹಣ್ಣುಗಳು, ಹುಳು ಹುಪ್ಪಟ್ಟೆಗಳನ್ನು ತಾವು ತಿಂದು ಮರಿಗಳಿಗೂ ಉಣಬಡಿಸುತ್ತವೆ.
ಕಾಡು ಕಡಿದು ನಾಗರೀಕತೆ ಹೆಚ್ಚಿಸುವ ಮನುಷ್ಯರ ಆಸೆಯಿಂದಾಗಿ ಬಿದಿರುಮಳೆಗಳ ನಾಶ, ಹೆಚ್ಚಿದ ಜಲವಿದ್ಯುತ್ ಯೋಜನೆಗಳಿಂದಾಗಿ ಇವುಗಳ ವಾಸಸ್ಥಾನಗಳಿಗೆ ನಷ್ಟ ಉಂಟಾಗಿ ಜೀವನ ಗೌಪ್ಯತೆ ಇಲ್ಲವಾಗಿ ಪರಭಕ್ಷಗಳ ಹಾವಳಿಯಿಂದಾಗಿ ಸಂತತಿ ನಾಶ ಅನುಭವಿಸಿ ಈ ಹಕ್ಕಿಯ ಸಂತತಿಯು ಅಳಿವಿನಂಚಿಗೆ ಬಂದು ನಿಂತಿದೆ.
ಇವೆರಡೂ ನಗೆಮಲ್ಲಗಳೂ ಕೂಡ ಹಾಡು ಹಕ್ಕಿಗಳೇ, ವಿಧವಿಧ ಸ್ವರ ವಿನ್ಯಾಸ ಮಾಡಿ ಮಧುರಕಂಠದಿಂದ ಕೂಗಿ ಪ್ರಕೃತಿ ಸೌಂದರ್ಯಕ್ಕೆ ಮೆರಗು ನೀಡುತ್ತಿವೆ. ಆಸಕ್ತರು ಕೆಳಗಿನ ಲಿಂಕ್ ಉಪಯೋಗಿಸಿ ಅವುಗಳ ಮಧುರವಾದ ಧ್ವನಿಗಳನ್ನು ಕೇಳಬಹುದು.
ಪಳನಿ ನಗೆಮಲ್ಲ : https://xeno-canto.org/species/Montecincla-fairbanki
ಅಶಂಭು ನಗೆಮಲ್ಲ : https://birdsoftheworld.org/bow/species/kerlau3/cur/multimedia?media=ಆಡಿಯೋ
ಉಪಸಂಹಾರ: ಪ್ರಪಂಚದಲ್ಲಿ ಅನೇಕ ಜಾತಿಯ ನಗೆಮಲ್ಲಗಳಿದ್ದರೂ ಸಹ ಈ ನಾಲ್ಕು ಹಕ್ಕಿಗಳ ಸಂತತಿ ಅಪಾಯದಂಚಿನಲ್ಲಿವೆ. ಹಾಡು ಹಕ್ಕಿಗಳಾದ ಇವು ಸ್ವಾಭಾವಿಕವಾಗಿ ವಲಸೆ ಹಕ್ಕಿಗಳಂತೆ ಅಲ್ಲ, ಮನುಷ್ಯನ ಆಸೇಬುರುಕತನದಿಂದಾಗಿ ತನ್ನ ಸ್ವಂತ ನೆಲೆಯನ್ನು ತೊರೆಯಬೇಕಾದ ಭೀತಿ ಎದುರಿಸುತ್ತಿವೆ. ಅಳಿವಿನಂಚಿನ ಜೀವಿಗಳಿಗಾಗಿ ಸರಕಾರ ಎಷ್ಟೇ ಯೋಜನೆಗಳನ್ನು ತಂದರು ನಾಗರೀಕತೆ ಅಭಿವೃದ್ಧಿಯ ನೆಪದಲ್ಲಿ ಸರಕಾರಗಳೇ ಪಾಲಿಸುತ್ತಿಲ್ಲವೆಂಬುದು ದುಃಖದ ಸಂಗತಿ.
ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ…
ಚಂದ್ರಶೇಖರ್ ಕುಲಗಾಣ