ಎಂಥಾ ಸ್ನೇಹದಲ್ಲಿಯೂ ಒಡಕು ಕಾಣಬಹುದು, ನೆಚ್ಚಿನವರು ಬೆನ್ನು ತೋರಿಸಬಹುದು.. ಆದರೆ ಸಾಹಿತ್ಯವನ್ನು ಆಶ್ರಯಿಸಿದರೆ ಮಾತ್ರ ಅದೆಂದಿಗೂ ವಂಚಿಸುವುದಿಲ್ಲ. ನಗು, ಅಳು, ವಿಷಾದ, ಉನ್ಮಾದ, ಸಂತೋಷ, ನೋವು, ನಾಚಿಕೆ, ಉತ್ಕರ್ಷ, ಹಾಸ್ಯ ಎಲ್ಲಾ ಸ್ತರದ ಏರಿಳಿತಗಳೊಂದಿಗೂ ಜೊತೆಜೊತೆಗೆ ಸಾಗಬಲ್ಲದು.. ಇದು ‘ಸಾಹಿತ್ಯ ಮೈತ್ರಿ’..! ಈ ಬೆಚ್ಚನೆಯ ಹೆಸರಿನ ಸೆರಗು ಹಿಡಿದೇ ಉತ್ಸಾಹಿ ತಂಡದೊಂದಿಗೆ ಕು.ಶಿ.ಚಂದ್ರಶೇಖರ್ ಅವರು ಹೊಸದಾಗಿ ಕನ್ನಡದ ವೆಬ್ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈಚೆಗೆ ಇಂತಹ ಹಲವು ಕನ್ನಡದ ಆನ್ ಲೈನ್ ಪತ್ರಿಕೆಗಳು ಹುಟ್ಟಿಕೊಂಡಿದ್ದು ಸಕ್ರಿಯವಾಗಿ ಇಂದಿನ ಆಧುನಿಕ ಓದುಗನನ್ನು ರಂಜಿಸುವುದರೊಂದಿಗೆ ಬೌದ್ಧಿಕವಾಗಿಯೂ ಬೆಳೆಸುತ್ತಿವೆ. ‘ಸಾಹಿತ್ಯ ಮೈತ್ರಿ’ಯೂ ಕೂಡಾ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತ, ಹತ್ತರಲ್ಲಿ ಮುತ್ತಾಗಿ ಪಸರಿಸಲಿ ಎಂದು ಆಶಿಸುತ್ತೇನೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪತ್ರಿಕೆಯನ್ನು ಓದುವ, ಅದಕ್ಕಾಗಿ ಬರೆಯುವ, ಕುರಿತು ಪ್ರತಿಕ್ರಿಯಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿರುವುದು ಕರ್ತವ್ಯ ಎಂದು ಬಗೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಮತ್ತೊಮ್ಮೆ ‘ಸಾಹಿತ್ಯ ಮೈತ್ರಿ’ ಪತ್ರಿಕಾ ಬಳಗವನ್ನು ಅಭಿನಂದಿಸುತ್ತಾ, ಶುಭ ಹಾರೈಕೆಗಳನ್ನು ಹೇಳುತ್ತಾ ವಿರಮಿಸುತ್ತೇನೆ.
– ಆಶಾ ರಘು