ರಾಷ್ಟ್ರ ಧ್ವಜ
ಪ್ರತಿಯೊಂದು ರಾಷ್ಟವು ತನ್ನದೇ ಆದ ಧ್ವಜವನ್ನು ಹೊಂದಿದೆ. ನಮ್ಮ ರಾಷ್ಟ್ರವು ತ್ಯಾಗದ ಹಾಗೂ ಧೈರ್ಯದ ಸಂಕೇತವಾಗಿ ಕೇಸರಿ ಬಣ್ಣ, ಶಾಂತಿಯ ಸಂಕೇತವಾಗಿ ಬಿಳಿ ಬಣ್ಣ, ಸಮೃದ್ಧಿಯ ಸಂಕೇತವಾಗಿ ಹಸಿರು ಬಣ್ಣ, ಹಾಗೂ ಮದ್ಯದಲ್ಲಿ ಧರ್ಮ, ವಿಜಯದ ಸಂಕೇತವಾಗಿ ನೀಲಿ ಬಣ್ಣದಿಂದ ಕೂಡಿರುವ ಆಶೋಕ ಚಕ್ರದಿಂದ ನಮ್ಮ ರಾಷ್ಟಧ್ವಜವನ್ನು ವಿನ್ಯಾಸಗೊಳಿಸಲಾಯಿತು.
ಇದು ತಿರಂಗಾ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದೆ. ಪ್ರತಿಯೊಂದು ಭಾರತೀಯನ ಹೆಮ್ಮೆ, ಪ್ರತಿಷ್ಠೆ, ಗೌರವದ ಸಂಕೇತ ನಮ್ಮ ರಾಷ್ಟ್ರಧ್ವಜ. 1921ರಲ್ಲಿ ವಿಜಯವಾಡದಲ್ಲಿ ಅಖಿಲ ಭಾರತ ಅಧಿವೇಶನದಲ್ಲಿ, ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ “ಪಿಂಗಲಿ ವೆಂಕಯ್ಯ” ಅವರು ಕೆಂಪು ಮತ್ತು ಹಸಿರು ಅಡ್ಡ ಪಟ್ಟಿಯನ್ನು ಧ್ವಜವನ್ನಾಗಿ ಮಾಡಿದರು. ಇದರಲ್ಲಿ ಕೆಂಪು ಹಿಂದೂಗಳ ನಂಬಿಕೆಯ ಸಂಕೇತವಾಗಿತ್ತು. ಹಸಿರು ಮುಸ್ಲಿಮರ ನಂಬಿಕೆಯಾಗಿತ್ತು. ಮಹಾತ್ಮ ಗಾಂಧೀಜಿಯವರು ಇತರ ಧರ್ಮಗಳ ಭಾವನೆಗಳನ್ನು ಗೌರವಿಸಿ ಅದಕ್ಕೆ ಇನ್ನೊಂದು ಬಣ್ಣ ಸೇರಿಸಿ ಮಧ್ಯದಲ್ಲಿ ತಿರುಗುವ ಚಕ್ರವಿರಬೇಕು ಎಂದು ಸಲಹೆ ನೀಡಿದರು.
1931 ಧ್ವಜದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವರ್ಷವಾಗಿದೆ. ಈ ವರ್ಷ ರಾಷ್ಟ್ರಧ್ವಜ ಅಳವಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿ ರಾಷ್ಟ್ರಧ್ವಜಕ್ಕೆ ಮಾನ್ಯತೆ ನೀಡಲಾಗಿದೆ. ಇದರಲ್ಲಿ ಪ್ರಸ್ತುತ ಧ್ವಜದ ರೂಪವಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಗೆ ಪ್ರಾಮುಖ್ಯತೆ ನೀಡಿ ಮಧ್ಯದಲ್ಲಿ ನೂಲುವ ಚಕ್ರವನ್ನು ಮಾಡಲಾಯಿತು. 22 ನೇ ಜುಲೈ 1947 ರಂದು, ಅಂತಿಮವಾಗಿ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಅಂಗೀಕರಿಸಲಾಯಿತು. ಧ್ವಜದಲ್ಲಿ ಬಿಳಿ ಬಣ್ಣದ ಮಧ್ಯ ಭಾಗದಲ್ಲಿ ಆಶೋಕ ಚಕ್ರವರ್ತಿಯ ಧರ್ಮಸಾರದ ಸಂಕೇತವಾಗಿ ಆಶೋಕ ಚಕ್ರದ ಸ್ಥಾನವನ್ನು ನೀಡಲಾಯಿತು. ಧ್ವಜವನ್ನು ನಿರ್ಮಿಸಲು ತನ್ನದೇ ಆದ ವೈಶಿಷ್ಟ್ಯಗಳಿವೆ. ಧ್ವಜವನ್ನು ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ. ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯ ನೂಲುಗಳನ್ನು ನೇದಿದ ಬಟ್ಟೆಯನ್ನೇ ಬಳಸಬೇಕಾಗುತ್ತದೆ. ಧ್ವಜವನ್ನು ತಯಾರಿಸಲು ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ. ಇದನ್ನು ಭಾರತೀಯ ಸ್ಟಾಂಡಡ್ಸ್ ಬ್ಯೂರೋದ ನಿಯಮದ ಮಾನದಂಡಕ್ಕೆ ಅನುಸಾರವಾಗಿ ಇದರ ಅಧಿಕಾರ ಖಾದಿ ಅಭಿವೃದ್ಧಿ ಮತ್ತು ಗ್ರಾಮೋದ್ಯೋಗ ಆಯೋಗ ಸಂಸ್ಥೆಗೆ ಈ ಅಧಿಕಾರವನ್ನು ನೀಡಲಾಗಿದೆ. ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ರಾಷ್ಟ್ರಧ್ವಜಗಳನ್ನು ತಯಾರಿಸಲಾಗುತ್ತದೆ. ಇದರ ಉದ್ದ ಮತ್ತು ಅಗಲಗಳು 2:3ರ ಅನುಪಾತದಲ್ಲಿಯೇ ಇರಬೇಕು. ಅಂದರೆ ಅಗಲಕ್ಕಿಂತಲೂ ಉದ್ದ ಒಂದೂವರೆ ಪಟ್ಟು ಇರಬೇಕು.
ಮೂರೂ ಬಣ್ಣಗಳು ಸಮಾನವಾದ ಅಗಲ ಮತ್ತು ಉದ್ದವನ್ನು ಹೊಂದಿರಬೇಕು. ಅಲ್ಲದೇ ಆಶೋಕ ಚಕ್ರವನ್ನು ಧ್ವಜದ ಎರಡೂ ಬದಿಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಸಾಮಾನ್ಯವಾಗಿ ರಾಷ್ಟಧ್ವಜವನ್ನು ಒಂಬತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅತಿ ಚಿಕ್ಕದ್ದು 6 x 4 ಇಂಚು ಗಾತ್ರ ಹೊಂದಿದ್ದರೆ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರವನ್ನು ಪ್ರತಿನಿಧಿಸುವ ದೊಡ್ಡ ಧ್ವಜಗಳು 21x 14 ಅಡಿಯಷ್ಟು ವಿಶಾಲವಾಗಿರುತ್ತದೆ. ದೆಹಲಿಯ ಕೆಂಪುಕೋಟೆ, ರಾಷ್ಟ್ರಪತಿ ಭವನ ಮೊದಲಾದ ಕಟ್ಟಡಗಳ ಮೇಲೆ ಮಧ್ಯಮಗಾತ್ರದ, ಅಂದರೆ 12 x 8 ಅಡಿಯ ಅಳತೆಯ ಧ್ವಜವನ್ನು ಹಾರಿಸಲಾಗುತ್ತದೆ. ಆಶೋಕ ಚಕ್ರವು ಗಾಢ ನೀಲಿ ಬಣ್ಣದ್ದಾಗಿರಬೇಕು, ಅದರ 24 ಕಡ್ಡಿಗಳೂ ಸಮಾನಾಂತರವಾಗಿರಬೇಕು. ಹಾಗೂ ಧ್ವಜದ ನಡುವೆ ಬಿಳಿಪಟ್ಟಿಯ ಮೇಲೆ ಮಾತ್ರವೇ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಇದರ ಅಂಚು ಬಿಳಿ ಪಟ್ಟಿಯನ್ನು ದಾಟುವಂತಿಲ್ಲ. ಆಶೋಕ ಚಕ್ರವನ್ನು ಚಕ್ರವರ್ತಿ ಆಶೋಕನ ಲಾಂಛನದಲ್ಲಿರುವಂತೆಯೇ ವಿನ್ಯಾಸಗೊಳಿಸಲಾಗಿದೆ. ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಿಳಿಸಿದಂತೆ ಈ ಲಾಂಛನವನ್ನು ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ. ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ಧ್ವಜ ಸಂಹಿತೆ 2002 ನಿಂದ ನಿಯಂತ್ರಿಸಲಾಗುತ್ತದೆ. ಲಾಂಛಾನಗಳು ಮತ್ತು ಹೆಸರುಗಳ ಕಾಯ್ದೆ, 1950 ಮತ್ತು ರಾಷ್ಟ್ರೀಯ ಗೌರವ ಕಾಯ್ದೆ, 1971ಯು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನಗಳ ತಡೆಗಟ್ಟುವಿಕೆ, ಧ್ವಜದ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘನೆಗಾಗಿ ಮಾಡಿರುವಂತಹ ಕಾಯ್ದೆಗಳು. ಇದರ ಪ್ರಕಾರ ಇದನ್ನು ಉಲ್ಲಂಘಿಸಿದರೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆಯಾಗಬಹುದು. ದಂಡವನ್ನು ವಿಧಿಸಬಹುದು. ಇಲ್ಲದಿದ್ದರೆ ಎರಡೂ ಶಿಕ್ಷೆಗೂ ಗುರಿಯಾಗಬಹುದು. ನಮ್ಮ ರಾಷ್ಟ್ರ ನಮ್ಮ ಹೆಮ್ಮೆ. ನಮ್ಮ ರಾಷ್ಟ್ರವನ್ನೂ ರಾಷ್ಟ್ರಧ್ವಜವನ್ನೂ ಗೌರವಿಸೋಣ, ಆರಾಧಿಸೋಣ. ರಾಷ್ಟ್ರಾಭಿಮಾನ ನಮ್ಮ ಕಣಕಣಗಳಲ್ಲೂ ಹರಿಯಲಿ. ನಮ್ಮ ರಾಷ್ಟ್ರ ಜಾತ್ಯಾತೀತ ರಾಷ್ಟ್ರ ಎಲ್ಲರೂ ಒಟ್ಟಾಗಿ ಒಂದುಗೂಡೋಣ. ಜೈ ಹಿಂದ್
ಸೌಮ್ಯ ನಾರಾಯಣ್