ಶಿಲೆಯೊಳಗಿನ ಚೇತನ
ತಮ್ಮೊಳಗಿನ ಹೊಂಬೆಳಕ
ನಂದಿಸಿ, ಕತ್ತಲ ಹಾದಿಯಲಿ
ಕಂದೀಲಿಗಾಗಿ ಕಾಯುತ್ತ
ನಿಂತಹ ಅಹಲ್ಯೆಯರು !
ಘನ ಗಾಂಭೀರ್ಯದ
ನಡುವೆಯೂ, ಅಚ್ಚರಿಯ
ಕಂಗಳ ಮತ್ತಷ್ಟರಳಿಸಿ
ನೋಡುವ ಅಹಲ್ಯೆಯರು!
ತಾವು ಮಾಡಿದ-ಮಾಡದ
ಪಾಪಕ್ಕೆ ಮನನೊಂದು,
ಕಲ್ಲಿನಂತೆ ಕುಳಿತು ತಪಗೈವ
ಶಾಪಗ್ರಸ್ತ ಅಹಲ್ಯೆಯರು!
ಮನೆಯೊಳ ಹೊರಗೆ
ದುಡಿದರೂ, ಎಲ್ಲರಿಂದ
ಅಂದಾಜಿಸಲ್ಪಡುತ್ತಿರು
ಸೌಮ್ಯ ಅಹಲ್ಯೆಯರು!
ಒಡಲಾಳದಿ ಕುದಿವ,
ಹೊಯ್ದಾಡುತ್ತಿರುವ,
ತಳಮಳಿಪ ಪರ್ವತವ
ಹೊತ್ತ ಅಹಲ್ಯೆಯರು !
ನವ ಭಸ್ಮಾಸುರರ
ಕೈಯೊಳಗೆ ಸಿಕ್ಕಿ ಬಿದ್ದು,
ಸುಟ್ಟು ಕರಕಲಾಗುತ್ತಿರುವ
ನತದೃಷ್ಟ ಅಹಲ್ಯೆಯರು !
ಅವತಾರ ಪುರುಷನ
ಆಗಮನಕೆ, ಆತನ ಚರಣ
ಸ್ಪರ್ಶಕೆ ಕಾಯುತಿರುವ
ಆಧುನಿಕ ಅಹಲ್ಯೆಯರು !!
ಶ್ರೀವಲ್ಲಿ ಮಂಜುನಾಥ