ದೂರದೂರಿನ ಪ್ರಯಾಣಕ್ಕೆ ಪೂರ್ವ ತಯಾರಿಯಿರಲಿ
ದೂರದ ಊರಿಗೆ ಪ್ರಯಾಣ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರಯಾಣ ಮತ್ತು ಪ್ರವಾಸವೆಂದರೆ ಹೆಚ್ಚಿನೆಲ್ಲರಿಗೂ ಅಚ್ಚುಮೆಚ್ಚು ಹಾಗೂ ಖುಷಿಯ ವಿಚಾರ. ಪ್ರವಾಸವೆಂದರೆ ವಾಹನವಿಲ್ಲದಿದ್ದರೆ ಅದು ಪ್ರವಾಸವೇ ಅಲ್ಲ ಎಂಬಂತಾಗಿದ್ದು, ಪ್ರವಾಸದ ಸಂದರ್ಭದಲ್ಲಿ ವಾಹನದೊಂದಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ತೆಗೆಸಿಕೊಳ್ಳುವುದೇ ಒಂದು ವಿಶೇಷವಾದ ಸಂದರ್ಭವಾಗಿ ಮಾರ್ಪಟ್ಟಿದೆ.
ಪ್ರಯಾಣಕ್ಕೆ ಬಹುತೇಕರು ಸ್ವಂತ ವಾಹನ ಹಾಗೂ ಬಾಡಿಗೆ ವಾಹನವನ್ನು ಬಳಸುತ್ತಾರೇನೋ ನಿಜ ಆದರೆ ವಾಹನವನ್ನು ಯಾವ ರೀತಿ ಚಲಾಯಿಸ್ತಾರೆ ಎಂಬುವುದು ಮುಖ್ಯವಾಗುತ್ತದೆ. ವಾಹನಗಳು ಇಂದು ಪ್ರತಿಯೊಬ್ಬನ ಜೀವನಾಡಿಗಳಾಗಿ ಬಿಟ್ಟಿದ್ದು, ವಾಹನಗಳಿಲ್ಲದೆ ಬದುಕೇ ಇಲ್ಲವೆಂಬಂತಾಗಿದೆ. ವಾಹನವನ್ನು ಬಳಸುವುದೇನೋ ಅರಿ ಆದರೆ ವಿವಿಧ ಸಂದರ್ಭಗಳು ಹಾಗೂ ವಿವಿಧ ರೀತಿಯ ರಸ್ತೆಗಳಲ್ಲಿ ವಾಹನವನ್ನು ಚಲಾಯಿಸುವಾಗ ಚಾಲಕನಿಗೆ ಕೆಲವೊಂದು ವಿಚಾರಗಳ ಜ್ಞಾನವಿರಬೇಕಾಗುತ್ತದೆ. ವಾಹನಗಳನ್ನು ಸಾಮಾನ್ಯ ರಸ್ತೆಗಳು, ಕಚ್ಚಾ ರಸ್ತೆಗಳು, ಸ್ಥಳೀಯ ರಸ್ತೆಗಳು, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಚತುಷ್ಪಥ ಮತ್ತು ಅಷ್ಟಪಥ ರಸ್ತೆಗಳಲ್ಲಿ ಚಲಾಯಿಸುವ ಸಂದರ್ಭಗಳು ಚಾಲಕರಿಗೆ ಬರುತ್ತವೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ, ಚತುಷ್ಪಥ ರಸ್ತೆಗಳು ಹಾಗೂ ಅಷ್ಟಪಥ ರಸ್ತೆಗಳಲ್ಲಿ ಚಾಲಕರು ಕೆಲವೊಂದು ವಿಚಾರಗಳ ಸ್ಪಷ್ಟವಾದ ಜ್ಞಾನವನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ ಹಲವಾರು ಗಂಡಾಂತರಗಳನ್ನು ಚಾಲಕನು ಎದುರಿಸಬೇಕಾಗುವ ಸಂದರ್ಭಗಳು ಬರಬಹುದಾದ್ದರಿಂದ ದೂರದೂರಿನ ಪ್ರಯಾಣದ ಪೂರ್ವ ತಯಾರಿ ಹಾಗೂ ಮುನ್ನೆಚ್ಚರಿಕೆಗಳು ಹೇಗಿರಬೇಕೆಂದು ತಿಳಿಯೋಣ.
ದೂರದ ಊರುಗಳಿಗೆ ಪ್ರಯಾಣವನ್ನು ಹೊರಡುವ ವೇಳೆ ಆ ಪ್ರದೇಶದ ಪರಿಸ್ಥಿತಿ, ಅಲ್ಲಿನ ಹವಾಮಾನ, ಚಾಲಕನ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚಾಲಕ ಅಥವಾ ವಾಹನ ಚಲಾಯಿಸುವವರು ಅನಾರೋಗ್ಯ ಪೀಡಿತರಾಗಿದ್ದರೆ ಪ್ರಯಾಣವನ್ನು ಅಥವಾ ವಾಹನ ಚಲಾನೆಯನ್ನು ಮುಂದೂಡುವುದೇ ಲೇಸು. ರಸ್ತೆಗಳಲ್ಲಿ ಅಥವಾ ಹೆದ್ದಾರಿಗಳ ಬದಿಯಲ್ಲಿ ವೇಗದ ಮಿತಿಯನ್ನು ಹಾಗೂ ರಸ್ತೆ ನಿಯಮವನ್ನು ಬರಹದ ರೂಪದಲ್ಲಿ ನಮೂದಿಸಲಾಗಿದೆಯಾದರೂ ಅವುಗಳು ಅನುಷ್ಠಾನವಾಗುತ್ತಿಲ್ಲವೆಂದೇ ಹೇಳಬಹುದು. ಚಲಿಸುತ್ತಿರುವ ರಸ್ತೆಯ ಪರಿಸ್ಥಿತಿಗೆ ಅನುಗುಣವಾಗಿ ವಾಹನದ ವೇಗವನ್ನು ನಿಯಂತ್ರಿಸಿಕೊಳ್ಳುವುದು ಅಥವಾ ಸರಿಯಾದ ವೇಗದಲ್ಲಿ ಚಲಾಯಿಸುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಚಾಲಕನಿಗೆ ವಾಹನವನ್ನು ಗುರಿ ತಲುಪಿಸುವುದೇ ಪರಮಗುರಿಯಾಗಿರದೆ ಆರೋಗ್ಯಕರವಾಗಿ ವಾಹನವನ್ನು ಚಲಾಯಿಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಗಳಾಗದಂತೆ ನಿಯಮ ಪಾಲನೆಯೊಂದಿಗೆ ಗುರಿ ತಲುಪಿಸುವ ಧ್ಯೇಯವನ್ನು ಚಾಲಕ ಹೊಂದಿರಬೇಕು. ಚಲಿಸುತ್ತಿರುವ ರಸ್ತೆಯಲ್ಲಿ ಕಂಡುಬವರುವ ಪ್ರಾಕೃತಿಕ ಸಮಸ್ಯೆಗಳಾದ ಮಂಜು, ಮಳೆ, ಭೂ ಕುಸಿತ ಟ್ರಾಫಿಕ್ ಮುಂತಾದ ತೊಂದರೆಗಳಿದ್ದಲ್ಲಿ ವಾಹನವನ್ನು ಸಾಧ್ಯವಾದಷ್ಟು ಸುರಕ್ಷಿ ಮಾಡಿಕೊಳ್ಳಿರಿ. ಎದುರುಗಡೆ ಚಲಿಸುತ್ತಿರುವ ಎಲ್ಲಾ ವಾಹನಗಳನ್ನು ಓವರ್ ಟೇಕ್ ಮಾಡಲೇಬೇಕೆಂಬ ಹಠಕ್ಕೆ ಚಾಲಕ ಎಂದೂ ಬೀಳಬಾರದು. ತನ್ನೊಂದಿಗೆ ಚಲಿಸುತ್ತಿರುವ ತರ ವಾಹನಗಳ ವೇಗಕ್ಕೆ ಅನುಗುಣವಾಗಿ ತಮ್ಮ ವಾಹನದ ವೇಗವನ್ನು ನಿಯಂತ್ರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು.
ಘಾಟಿ ರಸ್ತೆಯಲ್ಲಿ ಬೃಹತ್ ಗಾತ್ರದ ಬಸ್, ಕ್ಯಾಂಟರ್ ಮತ್ತು ಟ್ರಕ್ ಅತಿಯಾದ ಭಾರವನ್ನು ಹೊತ್ತುಕೊಂಡು ನಿಧಾನವಾಗಿ ಚಲಿಸುತ್ತಿರುತ್ತವೆ. ಇಂತಹ ಘನವಾಹನಗಳ ಹಿಂದುಗಡೆ ಚಲಿಸುವಾಗ ಸಾಕಷ್ಟು ಎಚ್ಚರಿಕೆಯಿಂದಿರಬೇಕು. ಈ ವಾಹನಗಳು ಯಾವಾಗ ಬೇಕಾದರೂ ಧುತ್ತನೆ ನಿಂತು ಬಿಡಬಹುದಾದ್ದರಿಂದ ಇವುಗಳ ಹಿಂದೆ ಚಾಲನೆ ಮಾಡುವಾಗ ಹೆಚ್ಚು ಎಚ್ಚರಿಕೆಯಿಂದಿರಬೇಕು. ದೂರದ ಪ್ರಯಾಣದ ಸಂದರ್ಭದಲ್ಲಿ ನಿರಂತರವಾಗಿ ವಾಹನ ಚಲಾಯಿಸಿ ಸುಸ್ತಾಗಿರುವ ಸಾಧ್ಯತೆಯಿರುವುದರಿಂದ ವಾಹನವನ್ನು ಹಿಂದಿಕ್ಕುವಾಗ ಮೈಯೆಲ್ಲ ಕಣ್ಣಾಗಿರಬೇಕು. ಯಾವುದೇ ಪ್ರಯಾಣ ಆರಂಭಿಸುವ ಮೊದಲು ತಲುಪಬೇಕಿರುವ ದೂರ ವಾಹನದ ಮೈಲೇಜ್ ಮತ್ತು ಅವಶ್ಯವಿರುವ ಇಂಧನ ಇವುಗಳ ಸಾಮಾನ್ಯ ಲೆಕ್ಕಾಚಾರ ಮಾಡಿಕೊಂಡು ನಿಮ್ಮ ವಾಹನದ ಇಂಧನ ಟ್ಯಾಂಕ್ ಭರ್ತಿಮಾಡಿಕೊಳ್ಳಿರಿ. ಇದರಿಂದ ಅರ್ಧ ದಾರಿಯಲ್ಲಿ ಇಂಧನ ಖಾಲಿಯಾಗಿ ನಿಲ್ಲುವ ಪ್ರಮೇಯವಿರುವುದಿಲ್ಲ ಹಾಗೂ ತಡ ರಾತ್ರಿಯ ಪ್ರಯಾಣದಲ್ಲಿ ಪೆಟ್ರೋಲ್ ಪಂಪ್ ಮುಚ್ಚಿರುವುದರಿಂದ ತೊಂದರೆ ಅನುಭವಿಸುವ ಸಾಧ್ಯತೆ ಕಡಿಮೆ. ಚಾಲನೆಯ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡು ಪವರ್ ಬ್ಯಾಂಕ್ ಇದ್ದಲ್ಲಿ ಅದನ್ನು ನಿಮ್ಮ ವಾಹನದಲ್ಲಿ ಇಟ್ಟುಕೊಳ್ಳಿರಿ. ಇಲ್ಲವಾದಲ್ಲಿ ಸಂಪರ್ಕದ ಪ್ರಮುಖ ಸಾಧನವೇ ಬಳಕೆಗೆ ಸಿಗದೇ ಸಮಸ್ಯೆಗೀಡಾಗಬಹುದು.
ವಾಹನದಲ್ಲಿ ವಾಹನದ ನೋಂದಣಿ ಪತ್ರ, ವಿಮಾ ಪತ್ರ, ಡ್ರೈವಿಂಗ್ ಲೈಸೆನ್ಸ್ ಹಾಗೂ ಎಮಿಷನ್ ಪ್ರಮಾಣಪತ್ರ, ಬ್ಯಾಡ್ಜ್ ಇವುಗಳ ಛಾಯಾ ಪ್ರತಿಯನ್ನು ಸದಾ ವಾಹನದಲ್ಲಿಟ್ಟುಕೊಳ್ಳಬೇಕು. (ಡಿಜಿ ಲಾಕರ್ ಬಳಕೆಯೂ ಮಾಡಬಹುದು.) ದೂರದ ಪ್ರಯಾಣ ಪೂರ್ವದಲ್ಲಿ ಸಾಗಬೇಕಿರುವ ರಸ್ತೆಯ ಸಂಪೂರ್ಣವಾದ ಜ್ಞಾನವಿಲ್ಲದಿದ್ದಲ್ಲಿ ರಸ್ತೆಯ ಬದಿ ಅಳವಡಿಸಲಾಗಿರುವ ಸೂಚನಾ ಫಲಕಗಳನ್ನು ಹಾಗೂ ಅಲ್ಲಿನ ಕೆಲವೊಂದು ಚಿಹ್ನೆಗಳನ್ನು ಅನುಸರಿಸಿರಿ. ಮುಖ್ಯವಾಗಿ ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕು ವಕ್ರಾಕೃತಿಯ ರಸ್ತೆಗಳು, ಜೀಬ್ರಾ ಕ್ರಾಸಿಂಗ್, ಶಾಲಾ ಆವರಣಗಳು, ರಸ್ತೆ ವೇಗದ ಮಿತಿಗಳು ಅಥವಾ ಇಳಿಜಾರು ರಸ್ತೆಗಳು ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲಾ ಸಂಜ್ಞೆಗಳನ್ನು ನೋಡಿಕೊಂಡು ವಾಹನವನ್ನು ಚಲಾಯಿಸಿರಿ. ರಾತ್ರಿಯ ಚಾಲನೆಯಲ್ಲಿ ಚಾಲಕರು ವೇಗವಾಗಿ ವಾಹನವನ್ನು ಚಲಾಯಿಸುತ್ತಿರುವಾಗ ರಸ್ತೆ ಹೊಂಡಗಳು, ರಸ್ತೆಯ ಉಬ್ಬುಗಳನ್ನು ದಿನ್ನೆಗಳನ್ನು ಅರಿಯದೆ ವಾಹನವನ್ನು ಹಾಯಿಸುವ ಸಾಧ್ಯತೆಗಳಿದ್ದು, ರಸ್ತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಿ. ಇಂತಹ ಸೂಚನೆಗಳು ಕೆಲವೊಂದು ರಸ್ತೆಗಳಲ್ಲಿದ್ದರೆ ಕೆಲವೊಂದು ರಸ್ತೆಗಳಲ್ಲಿ ಯಾವುದೇ ಸೂಚನೆಗಳಿಲ್ಲದಿರಬಹುದು. ಆದ್ದರಿಂದ ಚಾಲಕ ಸದಾ ಜಾಗೃತನಾಗಿ ವಾಹನವನ್ನು ಚಲಾಯಿಸಬೇಕು.
ದ್ವಿಪಥ ರಸ್ತೆಯಲ್ಲಿ ಚಾಲನೆಯ ಸಂದರ್ಭದಲ್ಲಿ ಎದುರನಿಂದ ವಾಹನಗಳು ನಿಮ್ಮ ವಾಹನದ ಸಮೀಪ ಬಂದಾಗ ಅಥವಾ ಎದುರಿನ ವಾಹನ ನಿಮಗೆ ಫ್ಲಾಶ್ ಲೈಟ್ ಮೂಲಕ ಸೂಚನೆಯನ್ನು ನೀಡಿದಾಗ ವಾಹನದ ವೇಗವನ್ನು ಕಡಿಮೆ ಮಾಡಿ ಎದುರಿನ ವಾಹನ ಸರಾಗವಾಗಿ ಸಾಗಲು ಅನುವು ಮಾಡಿಕೊಡಿರಿ. ರಾತ್ರಿ ಚಾಲನೆಯಲ್ಲಿ ನಿಮ್ಮ ಎದುರುಗಡೆಯಿಂದ ವಾಹನವು ಬರುತ್ತಿರುವಾಗ ನಿಮ್ಮ ವಾಹನದ ದೀಪದ ಪ್ರಖರತೆಯನ್ನು ಕಡಿಮೆಗೊಳಿಸಿರಿ. ಇಲ್ಲವಾದಲ್ಲಿ ಎದುರುಗಡೆಯ ವಾಹನದ ವಾಹನ ಚಾಲಕನ ಗಲಿಬಿಲಿಗೊಲ್ಳುವ ಸಾಧ್ಯತೆಗಳು ಅಧಿಕ. ದೂರದ ಪ್ರಯಾಣದ ಚಾಲನೆಯ ಸಂದರ್ಭದಲ್ಲಿ ನಿಮ್ಮ ವಾಹನ ರಸ್ತೆಯ ಎಡಭಾಗದಲ್ಲೇ ಚಲಿಸುತ್ತಿರುವಂತೆ ಗಮನವನ್ನು ವಹಿಸಿರಿ. ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಷ್ಟೇ ರಸ್ತೆಯ ಬಲ ಭಾಗಕ್ಕೆ ಹೋಗಿ ಓವರ್ ಟೇಕ್ ಸಂಪೂರ್ಣಗೊಂಡ ನಂತರ ತಕ್ಷಣದಲ್ಲಿ ನಿಮ್ಮ ವಾಹನವ ಎಡಬದಿಯ ಲೇನಿಗೆ ಬರುವಂತೆ ನೋಡಿಕೊಳ್ಳಿ. ವಾಹನದ ವೇಗಕ್ಕನುಗುಣವಾಗಿ ಎದುರಿನ ವಾಹನ ಮತ್ತು ನಿಮ್ಮ ವಾಹನದ ಮಧ್ಯದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ಅಭ್ಯಾಸ ದೂರದ ಚಾಲನೆಯನ್ನು ಹೆಚ್ಚು ಹಿತಕರವಾಗಿಸಬಹುದು.
ಹೊಸ ಪ್ರದೇಶಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ತಲುಪಬೇಕಾದ ಸ್ಥಳ ಹಾಗೂ ಮಧ್ಯ ಮಧ್ಯ ಸಿಗುವ ಪ್ರಮುಖ ಸ್ಥಳಗಳನ್ನು ಗುರುತು ಮಾಡಿಕೊಳ್ಳಿ. ತಲುಪಬೇಕಾದ ಸ್ಥಳದ ಮೊದಲು ಸಿಗುವ ಪ್ರಮುಖ ಪಟ್ಟಣ ಅಥವಾ ಪ್ರಮುಖ ಲ್ಯಾಂಡ್ ಮಾರ್ಕ್ ಗುರುತಿಸಿಕೊಂಡು ಆ ಪ್ರದೇಶವನ್ನು ಮೊದಲು ತಲುಪಿದ ನಂತರದಲ್ಲಿ ಮುಂದಿನ ಲ್ಯಾಂಡ್ ಮಾರ್ಕ್ ಗುರುತು ಹಾಕಿಕೊಂಡು ತಲುಪಬೇಕಾದ ಸ್ಥಳವನ್ನು ತಲುಪುವಂತಹ ಯೋಜನೆಯನ್ನು ಹಾಕಿಕೊಳ್ಳಬಹುದು. ಇದರಿಂದ ವ್ಯರ್ಥ ಪ್ರಯಾಣ ಸಮಯ ಹಾಗೂ ಇಂಧನ ದುರ್ಬಳಕೆಯನ್ನು ನಿಯಂತ್ರಿಸಬಹುದು. ವಾಹನದ ಜಿಪಿಎಸ್ ಅಥವಾ ಮೊಬೈಲ್ ಜಿಪಿಎಸ್ ಬಳಸಿಕೊಂಡು ನಿರ್ದಿಷ್ಟ ಪ್ರದೇಶವನ್ನು ನಿರ್ದಿಷ್ಟ ಸಮಯದೊಳಗೆ ಸಮರ್ಪಕವಾಗಿ ತಲುಪುವ ವ್ಯವಸ್ಥೆ ಮಾಡಿಕೊಳ್ಳಬಹುದು. ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಲ್ಲಿ ಹೋಟೆಲ್ ಆಹಾರವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಮನೆಯಿಂದಲೇ ಅಗತ್ಯವಿರುವಷ್ಟು ಆಹಾರ, ನೀರು ಮತ್ತಿತರ ವಸ್ತುಗಳನ್ನು ಪೊಟ್ಟಣ ರೂಪದಲ್ಲಿ ಕಟ್ಟಿಕೊಂಡು ಹೋಗಿ ತಿನ್ನುವ ವ್ಯವಸ್ಥೆ ಮಾಡಿಕೊಂಡು ವಿನಾಕಾರಣ ಖರ್ಚು ಮತ್ತು ಆರೋಗ್ಯದ ಸಮಸ್ಯೆಯನ್ನು ತಡೆಯಬಹುದು. ತಿಂದ ಆಹಾರದ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರಕ್ಕೆ ಹಾನಿ ಮಾಡದೇ ಸೂಕ್ತವಾಗಿ ವಿಲೇವಾರಿ ಮಾಡುವಂತಹ ಪರಿಸರ ಸಂರಕ್ಷಣೆಯ ಪ್ರಜ್ಞೆಯನ್ನು ವಾಹನ ಚಾಲಕರು ಮತ್ತು ಪ್ರಯಾಣಿಕರು ಅಳವಡಿಸಿಕೊಳ್ಳಬೇಕು.
ದೂರದೂರಿಗೆ ವಾಹನ ಚಾಲನೆಯ ಪೂರ್ವದಲ್ಲಿ ಚಾಲಕನು ಕನಿಷ್ಟ ಏಳು ಗಂಟೆಗಳಷ್ಟು ನಿದ್ದೆಯನ್ನು ಮಾಡಿರಬೇಕು. ಇದರಿಂದ ದೂರದ ಪ್ರಯಾಣಕ್ಕೆ ಬೇಕಾದ ಶಕ್ತಿಯನ್ನು ಗಳಿಸಿಕೊಳ್ಳಬಹುದು. ದೂರದೂರಿನ ವಾಹನ ಚಾಲನೆಯನ್ನು ಮದ್ಯಾಹ್ನ ಒಂದು ಗಂಟೆಯಿಂದ ಮದ್ಯಾಹ್ನ ಮೂರು ಗಂಟೆಯ ಅವಧಿಯಲ್ಲಿ ಚಾಲಕರು ಮಾಡಲೇಬಾರದು. ಏಕೆಂದರೆ ಈ ಸಂದರ್ಭದಲ್ಲಿ ಮನುಷ್ಯನ ದೇಹದ ಉಷ್ಣತೆ ಅತ್ಯಂತ ಕಡಿಮೆಯಿರುವುದರಿಂದ ಸಾಮಾನ್ಯವಾಗಿ ಮನುಷ್ಯ ನಿದ್ದೆಗೆ ಜಾರುವ ಸಾಧ್ಯತೆಗಳು ಹೆಚ್ಚು. ಚಾಲಕನು ಚಾಲನೆಯ ಸಂದರ್ಭದಲ್ಲಿ ವಾಹನದ ಇಂಧನಕ್ಕೆಷ್ಟು ಪ್ರಾಮುಖ್ಯತೆಯನ್ನು ಕೊಡಬೇಕೋ ಅಷ್ಟೇ ಪ್ರಾಮುಖ್ಯತೆಯನ್ನು ಚಾಲಕ ತನ್ನ ದೇಹದ ಇಂಧನಕ್ಕೂ ಪ್ರಾಮುಖ್ಯತೆಯನ್ನು ಕೊಡಬೇಕು. ಮುರುಕಲು ತಿಂಡಿಗಳನ್ನು ತಿನ್ನುವ ಬದಲು ಸಾಕಷ್ಟು ವಿಟಮಿನ್ ಹಾಗೂ ಪೋಷಕಾಂಶಗಳನ್ನು ಒದಗಗಿಸುವ ಆಹಾರಗಳೊಂದಿಗೆ ಕ್ಯಾರೆಟ್ ಮತ್ತು ಬದಾಮಿಯನ್ನು ತಿಂದಲ್ಲಿ ಲವಲವಿಕೆಯಿಂದ ವಾಹನ ಚಲಾಯಿಸಬಹುದು. ಈ ಸಂದರ್ಭದಲ್ಲಿ ವಾಹನದಲ್ಲಿ ಸಾಕಷ್ಟು ಶುದ್ಧ ಕುಡಿಯುವ ನೀರನ್ನು ಶೇಖರಿಸಿಟ್ಟುಕೊಳ್ಳುವುದರಿಂದ ಹೊರಗಡೆಯ ಅಶುದ್ಧ ನೀರನ್ನು ಕುಡಿದು ಅನಾಯೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು.
ನಿರಂತರವಾಗಿ ವಾಹನಗಳನ್ನು ಚಲಾಯಿಸಬೇಕಾದ ಸಂದರ್ಭಗಳಿದ್ದಲ್ಲಿ ಪ್ರತೀ ಎರಡು ಗಂಟೆಗೊಮ್ಮೆ ವಾಹನಕ್ಕೆ ನಿಲುಗಡೆಯನ್ನು ನೀಡಿ ಚಾಲಕ ಸ್ವಲ್ಪ ದೂರ ನಡೆದು ತನ್ನ ಕಾಲುಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದು ಉತ್ತಮ. ಇದಕ್ಕಾಗಿ ಪ್ರಯಾಣದ ದೂರದ ಮಧ್ಯದಲ್ಲಿ ಅಲ್ಲಲ್ಲಿ ವಿರಾಮದ ಸ್ಥಳಗಳನ್ನು ಮೊದಲಾಗಿ ಗುರುತಿಸಿಟ್ಟುಕೊಳ್ಳಬೇಕು. ಪ್ರಯಾಣದ ಸಂದರ್ಭದಲ್ಲಿ ಚಾಲಕನು ಚಾಕೋಲೇಟ್ ಅಥವಾ ಚ್ಯೂಯಿಂಗ್ ಗಮ್ ಜಗಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ಚಾಲನೆಯ ಆಲಸ್ಯವನ್ನು ತಡೆಯಬಹುದು. ಪ್ರಯಾಣದ ಸಂದರ್ಭದಲ್ಲಿ ಚಾಲಕ ವಾಹನದ ಸೀಟ್ ದೇಹಕ್ಕೆ ಒಗ್ಗುವಂತೆ ಹೊಂದಿಸಿಕೊಳ್ಳಬೇಕು. ಇದರಿಂದಾಗಿ ಆರಾಮದಾಯಕ ಕುಳಿತುಕೊಳ್ಳುವಿಕೆಯಿಂದ ದೇಹದ ಎಲ್ಲೆಡೆ ಸುಗಮ ರಕ್ತ ಸಂಚಾರವಾಗಿ ಚಾಲನೆಯು ಸುಸ್ತೆನಿಸುವುದಿಲ್ಲ. ಕುಳಿತಲ್ಲೇ ಆಗಿಂದಾಗ್ಗೆ ದೇಹವನ್ನು ನಿಯಮಿತವಾಗಿ ಚಾಲನೆಯಲ್ಲಿಡುವುದು ಉತ್ತಮ. ಚಾಲನೆಯ ಸಂದರ್ಭದಲ್ಲಿ ಜತೆಗಿರುವ ಸಹ ಪ್ರಯಾಣಿಕರೊಂದಿಗೆ ಹಿತಮಿತವಾಗಿ ಚರ್ಚಿಸುತ್ತಾ ಪ್ರಯಾಣವನ್ನು ರಸವತ್ತಾಗಿಸಿಕೊಳ್ಳಬಹುದು. ಎದುರುಗಡೆಯಿಂದ ಬರುವ ಅಥವಾ ಹಾದು ಹೋಗುವ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತಿಸುವ, ವಾಹನಗಳ ಮಾದರಿಯನ್ನು ಗುರುತಿಸುವ ಅಥವಾ ರಸಮಂಜರಿ/ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಯಾಣವನ್ನು ಸುಮಧುರವಾಗಿಸಬಹುದು.
ವಾಹನದೊಳಗೆ ತಮಾಷೆಯ ಸಂಭಾಷಣೆಗಳು ಮತ್ತು ಇಂಪಾದ ಸಂಗೀತವನ್ನು ಹಾಕಿಕೊಂಡು ಕೇಳುವುದರಿಂದ ಪ್ರಯಾಣವನ್ನು ಹ್ಲಾದಗೊಳಿಸಬಹುದು. ಪ್ರಯಾಣದ ಸಂದರ್ಭದಲ್ಲಿ ಅಚಾತುರ್ಯಗಳು ಸಂಭವಿಸಿದಲ್ಲಿ ಅವುಗಳ ನಿಭಾವಣೆಗಾಗಿ 24X7 ಅವಧಿಯ ಸಹಾಯವಾಣಿ ಹಾಗೂ ಸಹಾಯದ ವ್ಯವಸ್ಥೆಯನ್ನು ಹೊಂದಿರುವುದು ಉತ್ತಮ. ಪ್ರಯಾಣದ ಸಂದರ್ಭದಲ್ಲಿ ಹೆಚ್ಚುವರಿ ಚಾಲಕರಿದ್ದಲ್ಲಿ ನಿರಂತರ ಚಾಲನೆಯಿಂದ ಸುಸ್ತಾಗುವುದನ್ನು ತಡೆದು ನಿದ್ದೆಯಲ್ಲಿ ಚಾಲಕ ಹೆಚ್ಚಿನ ಸಮಯವನ್ನು ಕಳೆಯುವುದು ತಡೆಯಬಹುದು. ಮುಖ್ಯ ಚಾಲಕನು ಸುಸ್ತಾದ ಸಂದರ್ಭದಲ್ಲಿ ಬದಲಿ ಚಾಲಕರು ವಾಹನವನ್ನು ಚಲಾಯಿಸಿದಾಗ ಸುಸ್ತಾದ ಚಾಲಕನು ವಾಹನದಲ್ಲೇ ನಿದ್ದೆ ಮಾಡಿ ಸಮಯವನ್ನು ಉಳಿಸಬಹುದು. ದೂರದ ಊರಿನ ನಿರಂತರ ಪ್ರಯಾಣದ ಸಂದರ್ಭದಲ್ಲಿ ವಾಹನದಲ್ಲಿ ಲಭ್ಯವಿರುವ ಟೇಪ್ ರೇಕಾರ್ಡರ್ ಅಥವಾ ಎಫ್.ಎಂ ಸುಸ್ಥಿತಿಯಲ್ಲಿ ಇಟ್ಟುಕೊಂಡಲ್ಲಿ ನಿರಂತರ ವಾಹನ ಚಾಲನೆಯ ಆಲಸ್ಯವನ್ನು ತಡೆಯಬಹುದು. ವಾಹನ ಚಲಾಯಿಸಿ ಸುಸ್ತಾಗಿದ್ದಲ್ಲಿ ವಾಹನವನ್ನು ರಸ್ತೆಯಿಂದ ಸಂಪೂರ್ಣ ಹೊರಭಾಗದಲ್ಲಿ ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಮಿಸಿ ನಂತರದಲ್ಲಿ ವಾಹನವನ್ನು ಮುಂದಕ್ಕೆ ಚಲಾಯಿಸುವುದು ಉತ್ತಮ ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಬಾರದು. (ಇದರಿಂದ ತನ್ನ ಜೀವಕ್ಕಷ್ಟೇ ಅಲ್ಲದೆ ಇತರ ವಾಹನಗಳ ಪ್ರಯಾಣಿಕರ ಜೀವಕ್ಕೂ ಕುತ್ತಾಗಬಹುದು ಹಾಗೂ ರಾತ್ರಿಯ ಹೊತ್ತು ಪಾರ್ಕಿಂಗ್ ದೀಪಗಳನ್ನು ಹಚ್ಚಿಡಲು ಮರೆಯಬಾರದು)
ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ ಕುರಿತಾದ ಕಾನೂನಾತ್ಮಕ ನಿಯಮವನ್ನು ಚಾಲಕನ ಸಮಗ್ರವಾಗಿ ಅರಿತಿರಬೇಕು. ಯಾವುದೇ ಕಾರಣಕ್ಕೂ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು ಹಾಗೇನಾದರೂ ದೂರವಾಣಿಯನ್ನು ಬಳಸಲೇಬೇಕು ಅಥವಾ ದೂರವಾಣಿಯಲ್ಲಿ ಮಾತನಾಡಲೇ ಬೇಕೆಂದಿದ್ದಲ್ಲಿ ವಾಹನದಲ್ಲಿ ಲಭ್ಯವಿರುವ ಬ್ಲೂಟೂತ್ ಡಿವೈಸ್ ಮೊಬೈಲ್ ಗೆ ಅಥವಾ ಇಯರ್ ಫೋನ್ ಸಂಪರ್ಕ ಕಲ್ಪಿಸಿಕೊಂಡು ಮಾತನಾಡಬಹುದು. ಯಾವುದೇ ಕಾರಣಕ್ಕೂ ವಾಹನ ಚಲಾವಣೆ ಸಂದರ್ಭದಲ್ಲಿ ಮದ್ಯಪಾನವನ್ನು ಮಾಡಬಾರದು ಹಾಗೂ ಮದ್ಯಪಾನ ಸಹಿತವಾಗಿ ವಾಹನವನ್ನು ಚಲಾಯಿಸಬಾರದು ಎಂಬುದನ್ನು ಚಾಲಕ ಸ್ಪಷ್ಟವಾಗಿ ಅರಿತಿರಬೇಕು. ಚಾಲಕನು ಹವಾಮಾನದಲ್ಲಿ ಉಂಟಾಗುವ ವೈಪರೀತ್ಯಗಳು ಹಾಗೂ ಬದಲಾವಣೆಗಳ ಕುರಿತಾದ ಪ್ರಜ್ಞೆಯನ್ನು ಸದಾಕಾಲ ಹೊಂದಿರುವುದು ಉತ್ತಮ. ಪ್ರಯಾಣದ ಸಂದರ್ಭದಲ್ಲಿ ವಾಹನ ಚಾಲಕನು ತನ್ನ ಮೊಬೈಲ್ ನಲ್ಲಿ ಅಥವಾ ಕಾರಿನಲ್ಲಿ ವಿಶೇಷವಾಗಿ ರಸ್ತೆಯ ದಿಕ್ಸೂಚಿಯನ್ನು ಹೊಂದಿರುವ ಗೂಗಲ್ ಮ್ಯಾಪ್ ಹೊಂದಿರುವುದು ಉತ್ತಮ. ಇದರಿಂದ ರಸ್ತೆಯಲ್ಲಿ ವಾಹನ ದಟ್ಟಣೆಯ ರಸ್ತೆಯನ್ನು ತಪ್ಪಿಸಿಕೊಂಡು ಚಲಾಯಿಸಬಹುದು.
ಬಾಡಿಗೆ ವಾಹನವನ್ನು ಪ್ರಯಾಣಕ್ಕೆ ಬಳಸುತ್ತಿದ್ದಲ್ಲಿ ವಾಹನವನ್ನು ಚಲಾಯಿಸಲು ಅಥವಾ ಪ್ರಯಾಣಿಸಲು ಪ್ರಾರಂಭಿಸುವ ಮೊದಲು ವಾಹನದಲ್ಲಿ ಅಗತ್ಯವಾಗಿ ಇರಬೇಕಾದ ಕೆಲವೊಂದು ಪರಿಕರಗಳು ಹಾಗೂ ಸೌಲಭ್ಯಗಳ ಪೂರ್ವಾವಲೋಕನವನ್ನು ಮಾಡುವುದು ಉತ್ತಮ. ಬಾಡಿಗೆಗೆ ಪಡೆದುಕೊಂಡ ವಾಹನವನ್ನು ಚಲಾಯಿಸುವ ಚಾಲಕನ ಮೊದಲ ಹತ್ತು ನಿಮಿಷಗಳ ಚಾಲನೆಯನ್ನು ತನ್ನ ಅಭ್ಯಾಸಕ್ಕಾಗಿ ಅಥವಾ ನಿಯಂತ್ರಣಕ್ಕಾಗಿ ಇರುವ ಚಾಲನೆ ಎಂದು ಪರಿಗಣಿಸಿ ಅತ್ಯಂತ ಜಾಗರೂಕವಾಗಿ ಚಲಾಯಿಸಿ ವಾಹನವು ತನ್ನ ಹಿಡಿತಕ್ಕೆ ಸಿಕ್ಕ ನಂತರ ಸಾಮಾನ್ಯವಾಗಿ ವಾಹನವನ್ನು ಚಲಾಯಿಸಲು ಪ್ರಾರಂಭಿಸಬೇಕು. ವಾಹನವನ್ನು ನಿಲ್ಲಿಸಿ ಹೊರ ಹೋಗುವ ಸಂದರ್ಭದಲ್ಲಿ ವಾಹನದಲ್ಲಿರುವ ಅಮೂಲ್ಯ ವಸ್ತುಗಳನ್ನು ಅತ್ಯಂತ ಜಾಗರೂಕವಾಗಿ ಟ್ರಂಕ್ ಒಳಗೆ ಇಟ್ಟು ಬೀಗ ಹಾಕಿ ನಂತರದಲ್ಲಿ ವಾಹನದ ಲಾಕನ್ನು ಹಾಕುವುದು ಉತ್ತಮ ಇದರಿಂದ ತಮ್ಮ ವಸ್ತುಗಳನ್ನು ಹೆಚ್ಚು ಸುಭದ್ರವಾಗಿ ಕಾಪಾಡಿಕೊಳ್ಳಬಹುದು. ತಮ್ಮ ಮೂಲ ಸ್ಥಾನವನ್ನು ಬಿಟ್ಟು ಹೊರ ಪ್ರದೇಶಗಳಿಗೆ ವಾಹನವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ಅಲ್ಲಿನ ರಸ್ತೆಯ ನಿಯಮಗಳು ಹಾಗೂ ವಾಹನದಟ್ಟಣೆಯ ಮಾಹಿತಿಯನ್ನು ಹೊಂದಿರಬೇಕು.
ಚಲಾಯಿಸುತ್ತಿರುವ ವಾಹನವು ಅತ್ಯಂತ ಕಡಿಮೆ ಇಂಧನವನ್ನು ಬಳಕೆ ಮಾಡುವ ರೀತಿಯಲ್ಲಿ ವಾಹನವನ್ನು ಚಲಾಯಿಸುವ ಕಲೆಯನ್ನು ಅರಿತು ಅಳವಡಿಸಿಕೊಳ್ಳಬೇಕು. ಅನಗತ್ಯ ಹಾಗೂ ಅನಿರೀಕ್ಷಿತ ವೇಗವರ್ಧನೆ, ಅನಿರೀಕ್ಷಿತವಾಗಿ ವಾಹನವನ್ನು ನಿಲ್ಲಿಸುವ ಪ್ರಕ್ರಿಯೆಯನ್ನು ಕಡಿಮೆಗೊಳಿಸಿ ವಾಹನವನ್ನು ಸಾಧ್ಯವಾದಷ್ಟು 55-70 ಕಿ.ಮೀ ಪ್ರತಿ ಗಂಟೆಗೆ ವೇಗದಲ್ಲಿ ಚಲಾಯಿಸುವುದರಿಂದ ಇಂಧನದಲ್ಲಿ ಹೆಚ್ಚಿನ ಮಿತವ್ಯಯವನ್ನು ಸಾಧಿಸಬಹುದು. ದೂರದ ಪ್ರಯಾಣದ ಸಂದರ್ಭದಲ್ಲಿ ವಾಹನಕ್ಕೆ ಅನಗತ್ಯ ಭಾರವನ್ನು ತುಂಬಿಸದೇ ಇರುವುದರಿಂದ ವಾಹನದ ವೇಗವನ್ನು ಹಾಗೂ ವೇಗದ ಮಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಾಹನದಲ್ಲಿ ಕುಳಿತಿರುವ ಪ್ರಯಾಣಿಕರೆಲ್ಲರೂ ಕಡ್ಡಾಯವಾಗಿ ವಾಹನದ ಸೀಟ್ ಬೆಲ್ಟನ್ನು ಧರಿಸಿರುವುದನ್ನು ಚಾಲಕ ಖಚಿತಪಡಿಸಿಕೊಂಡೇ ವಾಹನವನ್ನು ಮುನ್ನಡೆಸಬೇಕು. ಇದರಿಂದ ಅಪಘಾತಗಳ ಸಂದರ್ಭದಲ್ಲಿ ಉಂಟಾಗುವ ಪ್ರಾಣ ಹಾನಿಯನ್ನು ಗಣನೀಯವಾಗಿ ತಗ್ಗಿಸಬಹುದು. ದೂರದ ಊರಿಗೆ ಪ್ರಯಾಣವನ್ನು ಮಾಡುವ ಸಂದರ್ಭದಲ್ಲಿ ವಾಹನದಲ್ಲಿ ಆದಷ್ಟು ವಾಹನದಲ್ಲಿ ಬೆಳೆಸಬಹುದಾದ ಮೊಬೈಲ್ ಚಾರ್ಜರ್, ಬೆಡ್ ಶೀಟ್ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ತಲೆದಿಂಬು ಇತ್ಯಾದಿಗಳನ್ನು ಇಟ್ಟುಕೊಂಡಲ್ಲಿ ಪ್ರಯಾಣವನ್ನು ಸುಖಕರವಾಗಿಸಬಹುದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ,
ಬೆಳ್ತಂಗಡಿ ತಾಲೂಕು,
ದೂ: 9742884160