ಸಾಹಸಿ ಕ್ಯಾಪ್ಟನ್ ಮೋನಿಕಾ ಖನ್ನಾ
ಪಾಟ್ನಾದಿಂದ ದೆಹಲಿಗೆ ಹೊರಟಿಟ್ದ ಸ್ಪೈಸ್ ಜೆಟ್ ಬೋಯಿಂಗ್ – 737 ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ವಿಮಾನದ ಕ್ಯಾಪ್ಟನ್ ಮೋನಿಕಾ ಖನ್ನಾಗೆ ಈಗ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ
ಇಂದಿನ ದಿನ ತಂತ್ರಜ್ಞಾನದಲ್ಲಿ ತೀರಾ ಮುಂದುವರಿದಿದ್ದು, ಕೆಲವೇ ಗಂಟೆಗಳಲ್ಲಿ ಪ್ರಪಂಚದ ಯಾವುದೇ ಮೂಲೆಯನ್ನೂ ತಲುಪಬಹುದು. ಇದನ್ನು ಸಾಧ್ಯವಾಗಿಸಿದ್ದು ಜೆಟ್ ಮತ್ತು ಸೂಪರ್ ಸಾನಿಕ್ ಇಂಜಿನ್’ಗಳು. ಜೆಟ್ ಮತ್ತು ಸೂಪರ್ ಸಾನಿಕ್ ಇಂಜಿನ್ಗಳನ್ನು ಚಲಾಯಿಸಲು ಧೈರ್ಯ ಮತ್ತು ಗಟ್ಟಿ ಗುಂಡಿಗೆಯೂ ಬೇಕು. ಇಂತಹ ಇಂಜಿನ್’ಗಳನ್ನು ಹಿಂದೆ ಪುರುಷರಷ್ಟೇ ಚಲಾಯಿಸುತ್ತಿದ್ದರು. ಆದರೆ ಇಂದು ಮಹಿಳೆಯರೂ ಪುರುಷರಿಗಿಂತ ಕಡಿಮೆಯೇನಿಲ್ಲ ಎನ್ನುವಂತೆ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡುತ್ತಿದ್ದಾರೆ. ಅವುಗಳ ಪೈಕಿ ವಿಮಾನಯಾನ ಕ್ಷೇತ್ರವೂ ಒಂದು ಎನ್ನಬಹುದು.
ವಿಮಾನವನ್ನು ಚಲಾಯಿಸುವುದು ಬಹಳ ಜಾಣ್ಮೆ ಮತ್ತು ಸೂಕ್ಷ್ಮ ಕೆಲಸವೆಂದೇ ಪರಿಗಣಿತವಾಗಿದೆ. ಇಂತಹ ವಿಮಾನಗಳ ಪೈಲಟ್ಗಳು ಇಂದು ಪ್ರಪಂಚದಾದ್ಯಂತ ಬಹಳಷ್ಟು ಮಂದಿ ಇದ್ದಾರೆ. ಆಗಸದಲ್ಲಿ ಹಾರಾಟ ನಡೆಸುತ್ತಿರುವಾಗ ವಿಮಾನದ ಇಂಜಿನ್ನಲ್ಲಿ ಏನಾದರೂ ತೊಂದರ ಕಾಣಿಸಿಕೊಂಡರೆ ವಿಮಾನವನ್ನು ಮತ್ತೆ ಮರಳಿ ಭೂಸ್ಪರ್ಷ ಮಾಡಿಸುವುದೇ ಕಷ್ಟದ ಕೆಲಸ. ಇಂತಹ ಕಠಿಣ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿದ ಮೋನಿಕಾ ಖನ್ನಾ ಇಂದು ಎಲ್ಲರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾಳೆ.
ಈ ತುರ್ತು ಲ್ಯಾಂಡಿಂಗ್ ಸಂದರ್ಭ ವಿಮಾನದ ಸಿಬ್ಬಂದಿಗಳು ಸೇರಿ ಒಟ್ಟು 191 ಪ್ರಯಾಣಿಕರಿದ್ದು, ಇವರ್ಯಾರಿಗೂ ಯಾವುದೇ ಗಾಯಗಳಾಗದೇ ಯಶಸ್ವೀ ಲ್ಯಾಂಡಿಂಗ್ ಮಾಡಿದ್ದು ವಿಶೇಷ. ಸಾಮಾನ್ಯವಾಗಿ ವಿಮಾನವೊಂದು ಲ್ಯಾಂಡಿಂಗ್ ಮಾಡುವಾಗ ಅದರ ಎರಡೂ ಬದಿಯ ಇಂಜಿನ್ ಸುಸ್ಥಿತಿಯಲ್ಲಿದ್ದು, ಕಾರ್ಯನಿರ್ವಹಿಸಬೇಕು. ಆದರೆ ಮೋನಿಕಾ ಚಲಾಯಿಸುತ್ತಿದ್ದ ವಿಮಾನ ಲ್ಯಾಂಡ್ ಮಾಡುವ ವೇಳೆ ಕೇವಲ ಒಂದೇ ಇಂಜಿನ್ ಕಾರ್ಯನಿರ್ವಹಣೆ ಮಾಡುತ್ತಿತ್ತು. ವಿಮಾನ ಲ್ಯಾಂಡ್ ಆದ ಕೂಡಲೇ ವೈಮಾನಿಕ ಇಂಜಿನಿಯರ್ಗಳು ವಿಮಾನದ ಪರಿಶೀಲನೆ ನಡೆಸಿ, ವಿಮಾನದ ಇಂಜಿನ್ಗೆ ಹಕ್ಕಿ ಡಿಕ್ಕಿ ಹೊಡೆದ ಕಾರಣ ಫ್ಯಾನ್ ಬ್ಲೇಡ್ ಮತ್ತು ಇಂಜಿನ್ಗೆ ಹಾನಿಯಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದರು. ಕ್ಯಾಪ್ಟನ್ ಮೋನಿಕಾ ಖನ್ನಾ ಈ ದುರ್ಘಟನೆಯ ಸಂದರ್ಭ ತೀರಾ ಕಾಳಜಿಯಿಂದ ಕಾರ್ಯನಿರ್ವಹಣೆ ಮಾಡಿದ್ದು, ವಿಮಾನ ಸೇಫ್ ಆಗಿ ಲ್ಯಾಂಡ್ ಆಗುವವರೆಗೂ ಮೋನಿಕಾ ತೀರಾ ಶಾಂತವಾಗಿ ಇದ್ದರು, ಅವರು ವಿಮಾನ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು.
ಮೋನಿಕಾ ಅನುಭವಿ ಪೈಲಟ್ ಆಗಿದ್ದು ಅವರು 2018 ರಲ್ಲಿ ಸ್ಪೈಸ್ ಜೆಟ್ ಗೆ ಪೈಲಟ್ ಆಗಿ ಸೇರಿದ್ದರು. ಎಮಿರೇಟ್ಸ್ ಏವಿಯೇಷನ್ ವಿವಿಯಿಂದ ಪದವಿ ಪಡೆದ ಬಳಿಕ ಅವರು ಎರಡು ವರ್ಷ ಜೆಟ್ ಏರ್ವೇಸ್ ವಿಮಾನ ಕಂಪನಿಯಲ್ಲಿ ಕೆಲಸ ಮಾಡಿ 2019 ರಲ್ಲಿ ಸ್ಪೈಸ್ ಜೆಟ್ ಕಂಪನಿ ಸೇರಿದ್ದರು.
ವಿಮಾನ ಹಾರಾಟ ನಡೆಸುತ್ತಿದ್ದಾಗ ಕಾಕ್ಪಿಟ್ನಲ್ಲಿದ್ದ ಸಿಬ್ಬಂದಿಗಳು ವಿಮಾನದ ಒಂದು ಎಂಜಿನಿಗೆ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ಶಂಕಿಸಿದ್ದರು. ಆದರೂ ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸದ ಕಾರಣ ವಿಮಾನ ಹಾರಾಟ ಮುಂದುವರಿಸಿತ್ತು. ಆದರೆ ನಂತರ ವಿಮಾನದ ಕ್ಯಾಬಿನ್ ಸಿಬ್ಬಂದಿ, ಇಂಜಿನ್ ನಂ.1 ರಿಂದ ಬೆಂಕಿಯ ಕಿಡಿಗಳು ಬರುತ್ತಿರುವುದನ್ನು ಗಮನಿಸಿ ಕೂಡಲೇ ಇಂಜಿನ್ ಬೆಂಕಿಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ (SOP) ನಡೆಸಿ ಪೈಲಟ್ ಉಸ್ತುವಾರಿಗೆ ಮಾಹಿತಿ ನೀಡಿದರು. ಅಪಾಯವನ್ನರಿದ ಕ್ಯಾಪ್ಟನ್ ಮೋನಿಕಾ ಬೆಂಕಿ ಹತ್ತಿಕೊಂಡಿದ್ದ ಎಂಜಿನ್ನ್ನು ಸ್ಥಗಿತಗೊಳಿಸಿ, ಅವರು ವಾಯು ಸಂಚಾರ ನಿಯಂತ್ರಣಕ್ಕೆ ಎಚ್ಚರಿಕೆಯ ಸಂಕೇತವನ್ನು ನೀಡಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. 185 ಪ್ರಯಾಣಿಕರಿದ್ದ ಸ್ಪೈಸ್ ವಿಮಾನ ಪಾಟ್ನಾದಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಆ ಬಳಿಕ ನಡೆದ ತನಿಖೆಯಲ್ಲಿ ವಿಮಾನ ಟೇಕ್ಆಫ್ ಆಗುವ ಸಂದರ್ಭ ಹಕ್ಕಿಯೊಂದು ಬಡಿದ ಬಳಿಕ ಟರ್ಬೈನ್ನ ಫ್ಯಾನಿನ ಮೂರು ಬ್ಲೇಡ್ಗಳಿಗೆ ಹಾನಿಯಾಗಿರುವುದು ಕಂಡು ಬಂತು. ಈ ಘಟನೆ ಸಂಭವಿಸಿದ ನಂತರದ 19 ನಿಮಿಷದ ಆತಂಕಕಾರಿ ವಿಮಾನ ಹಾರಾಟದ ಬಗ್ಗೆ ಸ್ಪೈಸ್ ಜೆಟ್ ಅಚ್ಚರಿಪಟ್ಟಿದೆ.
ಆತಂಕದ ಸಂದರ್ಭ
ದೆಹಲಿಯ ಸ್ಪೈಸ್ ಜೆಟ್ ಫ್ಲೈಟ್ ಅನ್ನು ಪಾಟ್ನಾ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.00 ಗಂಟೆಗೆ ಟೇಕಾಫ್ ಮಾಡಿದರು. ವಿಮಾನ ಟೇಕ್ಫ್ ಆಗುತ್ತಿದ್ದಾಗ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆಯಿತು. ನಂತರ ಬೆಂಕಿ ಹೊತ್ತಿಕೊಂಡಿತು. ಆಗ ಪೈಲೆಟ್ ಮೋನಿಕಾ ಖನ್ನಾ ರವರೇ ವಿಮಾನವನ್ನು ಮುನ್ನಡೆಸುತ್ತಿದ್ದರು. ವಿಮಾನದ ಪೈಲೆಟ್ ಇನ್ ಕಮಾಂಡರ್ (PIC) ಇವರೇ ಆಗಿದ್ದರು ಇವರಿಗೆ ಹಾಗೂ ಇವರ ಕೋ ಪೈಲೆಟ್ ಬಲ್ಪ್ರೀತ್ ಸಿಂಗ್ ಭಾಟಿಯಾರವರಿಗೆ ಇಂಜಿನ್ಗೆ ಹಕ್ಕಿ ಡಿಕ್ಕಿ ಹೊಡೆದ ಶಬ್ದ ಕೇಳಿತ್ತು. ಅಷ್ಟರಲ್ಲೇ ಎ.ಟಿ.ಸಿ ಯಿಂದ ಇಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಸೂಚನೆ ಪೈಲೆಟ್ ಹಾಗೂ ಕೋ ಪೈಲೆಟ್ಗೆ ತಲುಪಿತು. ಆಗ ವಿಮಾನದ ಎಂಜಿನ್ಗಳ ಪೈಕಿ ಒಂದನ್ನು ಆಫ್ ಮಾಡಲಾಯಿತು. ಇದರಿಂದ ವಿಮಾನದ ಸಿಬ್ಬಂದಿಗಳು, ಪ್ರಯಾಣಿಕರು ಮತ್ತು ನಿಲ್ದಾಣದ ಸಿಬ್ಬಂದಿಗಳು ಆತಂಕಕ್ಕೀಡಾದರು. ಏಕೆಂದರೆ ಬೆಂಕಿ ಹತ್ತಿಕೊಂಡ ವಿಮಾನದಲ್ಲಿ ಸುಮಾರು 191 ಪ್ರಯಾಣಿಕರಿದ್ದರು. ಆ ಕಠಿಣ ಪರಿಸ್ಥಿಯ ಸಂದರ್ಭವನ್ನು ಅರಿತ ಪಾಟ್ನಾ ವಿಮಾನ ನಿಲ್ದಾಣ ಆಡಳಿತ ಮಂಡಳಿಯು ತರಾತುರಿಯಲ್ಲಿ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಿತ್ತು. ಅಂದರೆ ಮುಂದಿನ 40 ನಿಮಿಷಗಳ ಕಾಲ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಟೇಕಾಫ್ ಹಾಗೂ ಲ್ಯಾಂಡ್ ಆಗುವಂತಿಲ್ಲ. ಇಷ್ಟೆಲ್ಲಾ ವ್ಯವಸ್ಥೆಗಳು ಆಗುತ್ತಿದ್ದಂತೆ ವಿಮಾನದ ಒಳಗಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಕೆಲಸ ಪೈಲೆಟ್ ಕ್ಯಾಪ್ಟನ್ ಮೋನಿಕಾ ಅವರ ಹೆಗಲ ಮೇಲಿತ್ತು.
ಈ ಪರಿಸ್ಥಿತಿಯಲ್ಲಿ ಪೈಲೆಟ್ ಕ್ಯಾಪ್ಟನ್ ಮೋನಿಕಾ ಜಾಣತನ ಹಾಗೂ ಸಮಯ ಪ್ರಜ್ಞೆ ಮೆರೆದು, ಬೆಂಕಿ ಹಾಗೂ ಹೊಗೆ ಹೊರಬರುತ್ತಿದ್ದ ವಿಮಾನದ ಇಂಜಿನನ್ನೇ ಬಂದ್ ಮಾಡಿದರು. ಆಗ ವಿಮಾನ ಕೇವಲ ಎಮರ್ಜೆನ್ಸಿ ಇಂಜಿನ್ ಮೂಲಕ ಹಾರಾಟ ನಡೆಸುತ್ತಿತ್ತು. ಈ ವೇಳೆಗೆ ಯಾವುದೇ ಅವಘಡ ಸಂಭವಿಸಿದರೂ ಮುನ್ನೆಚ್ಚರಿಕೆಗಾಗಿ ಎಂಬ ಕಾರಣಕ್ಕೆ ಬೆಂಕಿ ನಂದಿಸುವ ವಾಹನಗಳು ಹಾಗೂ ಅಂಬುಲೆನ್ಸ್ ಗಳನ್ನು ವಿಮಾನ ನಿಲ್ದಾಣದಲ್ಲಿ ಸಾಲಾಗಿ ನಿಲ್ಲಿಸಲಾಗಿತ್ತು. ವಿಮಾನಕ್ಕೆ ಬೆಂಕಿ ಹತ್ತಿಕೊಂಡ ವಿಚಾರ ಎ.ಟಿ.ಸಿಯ ಗಮನಕ್ಕೆ ಬಂದು ಪೈಲೆಟ್ಗಳಿಗೆ ಸಂದೇಶ ರವಾನೆಯಾದಾಗ ವಿಮಾನವು ಅದಾಗಲೇ 2000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಈ ಕಡೆ ಬೆಂಕಿ ಹತ್ತಿಕೊಂಡ ಕಾರಣ ವಿಮಾನದ ಮುಖ್ಯ ಇಂಜಿನ್ ಬಂದ್ ಮಾಡಿ ಕೇವಲ ಎಮರ್ಜೆನ್ಸಿ ಎಂಜಿನ್ ಮೂಲಕ ವಿಮಾನ ಹಾರಾಟ ನಡೆಸುತ್ತಿರುವ ವಿಚಾರ ತಿಳಿದ ಪ್ರಯಾಣಿಕರು ತೀರ ಭಯಭೀತರಾಗಿದ್ದರು. ಪ್ರಯಾಣಿಕರ ಈ ಭೀತಿಯ ಸ್ಥಿತಿಯನ್ನು ಗಮನಿಸಿದ ಕ್ಯಾಪ್ಟನ್ ಮೋನಿಕಾರವರು ಭಯಪಡಬೇಡಿ ನಾವು ಸುರಕ್ಷಿತವಾಗಿ ಶೀಘ್ರವೇ ಪಾಟ್ನಾ ತಲುಪಲಿದೆ ಎಂದು ಸಂದೇಶವನ್ನು ಪ್ರಯಾಣಿಕರಿಗೆ ರವಾನಿಸಿದ್ದರು.
ಸುರಕ್ಷಿತ ಲ್ಯಾಂಡಿಂಗ್
ವಿಮಾನದೊಳಗಿದ್ದ ಪ್ರಯಾಣಿಕರಿಗೆ ಧೈರ್ಯವಷ್ಟೇ ತುಂಬಲಿಲ್ಲ ಬದಲಾಗಿ ಅತ್ಯಂತ ಆತಂಕ ಮತ್ತು ಕ್ಲಿಷ್ಟಕರ
ಸನ್ನಿವೇಶದಲ್ಲೂ ಅತ್ಯುತ್ತಮ ನಿರ್ಧಾರವನ್ನು ಕೈಗೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತಾನು ಚಲಾಯಿಸುತ್ತಿದ್ದ ವಿಮಾನವನ್ನು ಓವರ್ ವೇಟ್ ಲ್ಯಾಂಡಿಂಗ್ ಮಾಡುವ ಮೂಲಕ ಸುರಕ್ಷಿತವಾಗಿ ರನ್ವೇನಲ್ಲಿ ಲ್ಯಾಂಡಿಂಗ್ ಮಾಡಿದರು. ಈ ಮೂಲಕ ಅವರು 185 ಪ್ರಯಾಣಿಕರು ಸೇರಿದಂತೆ 191 ಜನರ ಪ್ರಾಣ ಉಳಿಸಿದರು. ವಿಮಾನ ಸುರಕ್ಷಿತವಾಗಿ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದಾಗಲೂ ಅದರ ಇಂಜಿನ್ನಲ್ಲಿ ಮತ್ತೂ ಬೆಂಕಿ ಬರುತ್ತಲೇ ಇತ್ತು. ಆದರೆ 191 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಭೂಮಿಯನ್ನು ತಲುಪಿದರು. ವಿಮಾನ ಇಳಿದ ತಕ್ಷಣ ಪ್ರಯಾಣಿಕರು ಪೈಲಟ್ ಮೋನಿಕಾ ಹಾಗೂ ಕೋ ಪೈಲಟ್ ಬಲಪ್ರೀತ್ ಸಿಂಗ್ ಅವರಿಗೆ ನಿಮ್ಮ ಸಾಹಸ ಹಾಗೂ ಧೈರ್ಯದಿಂದ ನಾವೆಲ್ಲರೂ ಬದುಕಿ ಉಳಿದೆವು ಎನ್ನುತ್ತಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇಡೀ ದೇಶವೇ ಮೋನಿಕಾರವರ ಸಾಹಸ ಮತ್ತು ಧೈರ್ಯವನ್ನು ಕೊಂಡಾಡುತ್ತಿದೆ.
ಮೋನಿಕಾ ಸ್ಪೈಸ್ ಜೆಟ್ ಸಂಸ್ಥೆಯ ಅನುಭವಿ ಪೈಲೆಟ್ ಆಗಿದ್ದು ಇವರಿಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಇಚ್ಛೆಯಿತ್ತು. ಅದರಂತೆಯೇ ಇಂದು ಪೈಲೆಟ್ ಆಗಿದ್ದಾರೆ. ವಿಮಾನವನ್ನು ಮುನ್ನಡೆಸುವ ಓರ್ವ ಪೈಲೆಟ್ಗೆ ಧೈರ್ಯ ಅತಿ ಹೆಚ್ಚಿರಬೇಕು. ಅದರಲ್ಲೂ ಆಕಾಶದಲ್ಲಿ ಬೆಂಕಿ ಹತ್ತಿಕೊಂಡ ವಿಮಾನವನ್ನು ಸೇಫ್ ಆಗಿ ಲ್ಯಾಂಡಿಂಗ್ ಮಾಡಿದ ಮೋನಿಕಾರವರ ಧೈರ್ಯವೂ ಕೂಡ ಅತ್ಯಂತ ಉಚ್ಚ ಮಟ್ಟದ್ದು ಎನ್ನಬಹುದು. ಹ್ಯಾಟ್ಸ್ ಆಫ್ ಟು ಯು ಮೋನಿಕಾ…..
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884180