ಕನ್ನಡ ಸಾಹಿತ್ಯಕ್ಕಾಗಿ – ಪುಸ್ತಕ ತಾಂಬೂಲ
ಕನ್ನಡ ನಮ್ಮ ಮಾತೃ ಭಾಷೆ ನಮ್ಮೆಲ್ಲರ ಅಸ್ಮಿತೆ. ರಾಜ್ಯಾದ್ಯಂತ ಕನ್ನಡ ಭಾಷೆಯ ಹೆಸರಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅನೇಕ ಕೆಲಸಗಳು ನೆಡೆಯುತ್ತಲೇ ಇರುತ್ತವೆ ಅದು ಕೆಲವರಿಗೆ ಭಾಷಾಭಿಮಾನದ ಪ್ರೀತಿ ಹಾಗು ಕೆಲವರಿಗೆ ಹೊಟ್ಟೆ ಪಾಡು ಹೌದು. ನವೆಂಬರ್ ಮಾಸ ಬಂತೆಂದರೆ ಇಡೀ ತಿಂಗಳು ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ. ರಾಜ್ಯೋತ್ಸವ ಸಮಾರಂಭಗಳು ಶಾಲಾ ಕಾಲೇಜು, ಸಾಹಿತ್ಯಲೋಕದವರು ಅಥವಾ ಸಿನಿಮಾ ರಂಗದವರೇ ಆಚರಿಸಬೇಕೆಂದಿಲ್ಲ! ಇಡೀ ದಿನ ಪ್ರಯಾಣಿಕರನ್ನು ಅತ್ತಿಂದಿತ್ತ ಸಾಗಿಸುವ ಆಟೋ ಚಾಲಕರು ಕೂಡ ತಮ್ಮ ಆಟೋ ನಿಲ್ದಾಣದಲ್ಲಿ ಕನ್ನಡ ಬಾವುಟ ನೆಟ್ಟು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಇನ್ನು ಸರ್ಕಾರದ ಕಡೆಯಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಉತ್ತಮರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವುದು ಪ್ರತೀ ವರ್ಷದ ವಾಡಿಕೆ. ಇದೇ ರೀತಿ ಪ್ರತೀ ವರ್ಷ ನವೆಂಬರ್ ತಿಂಗಳಾದ್ಯಂತ ಕನ್ನಡ ಭಾಷೆಯ ಮೇಲೆ ಪ್ರೀತಿ ಇರುವುವರನ್ನು ಸಾಹಿತ್ಯಾಸಕ್ತಿ ಇರುವವರನ್ನು ಗುರುತಿಸಿ ಅವರಿಗೆ ಪ್ರೀತಿಯಿಂದ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಾ “ಪುಸ್ತಕ ತಾಂಬೂಲ” ಎಂಬ ಹೆಸರಿನಿಂದ ಕನ್ನಡ ತಾಯಿಯ ಸೇವೆ ನೆಡೆಸುತ್ತಿರುವವರು ಸುನೀಲ್ ಹಳೆಯೂರು ಎಂಬ ಕನ್ನಡ ಪ್ರೇಮಿ.
ಸುನೀಲ್ ಹಳೆಯೂರು ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಾ ಕನ್ನಡ ಸಾಹಿತ್ಯದ ಅಭಿರುಚಿ ಹೊಂದಿರುವ ಸದಭಿರುಚಿಯ ಲೇಖಕರು. “ಬಾಳು ಬಾಳದೆ ಬಿಡದು” ಎಂಬ ಕವನ ಸಂಕಲನ, “ನವ್ಯ ಜೀವಿ” ಎಂಬ (ಮುಕ್ತಕಗಳ ವ್ಯಾಖ್ಯಾನ) ಪುಸ್ತಕಗಳನ್ನು ಹೊರತಂದಿದ್ದಾರೆ. “ಮನದೊಳಮಿಡಿತ” ಎಂಬ ಅವರ ಪುಸ್ತಕ ಬಿಡುಗಡೆಯ ಹಂತದಲ್ಲಿದೆ. “ಆ ಒಂದು ಕ್ಷಣ” ಎಂಬ ದೀರ್ಘ ಮಾಲಿಕೆಯ ಮೂಲಕ ನಮ್ಮ ಸಾಹಿತ್ಯಮೈತ್ರಿಯಲ್ಲಿ ವ್ಯಕ್ತಿತ್ವ ವಿಕಾಸನದ ಅನೇಕ ಲೇಖನಗಳನ್ನು ಸಹ ಬರೆದಿದ್ದಾರೆ. ಇತ್ತೀಚಿಗೆ ಡಾ|| ಟಿ. ಆರ್ ಅನಂತರಾಮು ರವರ ಸಂಪಾದಕೀಯತ್ವದಲ್ಲಿ ಬಿಡುಗಡೆಗೊಂಡ “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು” ಎಂಬ ಬೃಹತ್ ಪುಸ್ತಕದಲ್ಲಿ ಇವರದೊಂದು ಲೇಖನ ಸಹ ಸೇರಿದೆ. “ಕಂಪನಾಂಕ” ಎಂಬ ರೇಡಿಯೋ ಸರಣಿಯಲ್ಲಿ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗಗಳನ್ನು ಸೊಗಸಾಗಿ ವಾಚಿಸಿ ಅವುಗಳ ವಿಶ್ಲೇಷಣೆ ಸಹ ಮಾಡುತ್ತಾ ಬಂದಿದ್ದಾರೆ.
ಸುನೀಲ್ ತಾವು ಹಾಜರಾಗುತ್ತಿದ್ದ ಮದುವೆ ಅಥವಾ ಹುಟ್ಟು ಹಬ್ಬದ ಸಮಾರಂಭಗಳಲ್ಲಿ ಜನರು ಅನಾವಶ್ಯಕವಾಗಿ ದುಬಾರಿ ಉಡುಗೊರೆಯನ್ನು ಅಥವಾ ನಗದನ್ನು ಕೊಡುತ್ತಿರುವುದನ್ನು ನೋಡಿ ಒಂದು ಅಭಿಯಾನ ಆರಂಭಿಸುತ್ತಾರೆ ಅದುವೇ ಪುಸ್ತಕ ತಾಂಬೂಲ. ಸಮಾರಂಭಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡೊಯ್ದು ಅವುಗಳನ್ನೇ ಉಡುಗೊರೆಯಾಗಿ ಕೊಡಲು ಆರಂಭಿಸಿದಾಗ ಮೊದಮೊದಲು ಸ್ವೀಕರಿಸುತ್ತಿದ್ದ ಜನರು ಅಚ್ಚರಿಯಿಂದ ನೋಡಲಾರಂಭಿಸಿದರು ಆನಂತರ ಇದರಿಂದ ಪ್ರೇರಿತಗೊಂಡ ಎಷ್ಟೋ ಜನರು ಉಡುಗೊರೆಯಾಗಿ ಪುಸ್ತಕಗಳನ್ನೇ ಕೊಡುತ್ತಾ ಬಂದಿದ್ದಾರೆ. ಇದಲ್ಲದೆ ಸುನೀಲ್ ನಗರದಲ್ಲಿ ಸಂಚರಿಸುವಾಗ ಪಾದಚಾರಿ ರಸ್ತೆಗಳಲ್ಲಿ ತರಕಾರಿ, ಹಣ್ಣು, ಗಡಿಯಾರ, ಕಾಲುಚೀಲ ಮಾರುವ ಸಾಮಾನ್ಯ ಜನರನ್ನು ಮಾತನಾಡಿಸುತ್ತಾ ಅವರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಿ ಓದಲು ಪ್ರೇರೇಪಿಸುತ್ತ ಬಂದಿದ್ದಾರೆ.
ಪ್ರತೀ ವರ್ಷ ನವೆಂಬರ್ ತಿಂಗಳಿನಾದ್ಯಂತ ತಮ್ಮ ಪರಿಚಯಸ್ತರು, ಸ್ನೇಹಿತರು ಹಾಗು ಸಾಹಿತ್ಯಾಸಕ್ತಿ ಇರುವ ಸಾಮಾನ್ಯ ಜನರಿಗೆ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಮೊದಲಿಗೆ ಕನ್ನಡದ ಪ್ರಸಿದ್ಧ ಲೇಖಕ ಲೇಖಕಿಯರ ಪುಸ್ತಕಗಳನ್ನು ಕೊಡಲು ಪ್ರಾರಂಭಿಸಿ ಈಗ ಕನ್ನಡದ ಹೊಸ ಬರಹಗಾರರ ಪುಸ್ತಕಗಳನ್ನು ಕೊಂಡು ಅವುಗಳನ್ನು ಕೊಡುಗೆ ರೂಪದಲ್ಲಿ ನೀಡುತ್ತಾ ನವ್ಯ ಬರಹಗಾರರಿಗೆ ತಮ್ಮ ಪ್ರೋತ್ಸಾಹ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಅವರಿಂದ ಪುಸ್ತಕಗಳನ್ನು ಕೊಡುಗೆ ರೂಪದಲ್ಲಿ ಪಡೆದ ಅನೇಕರು ಆ ಚಟುವಟಿಕೆಯನ್ನೇ ಮುಂದುವರೆಸುತ್ತಾ ಈ ಅಭಿಯಾನ ಇನ್ನೂ ಹೆಚ್ಚು ಯಶಸ್ಸುಗಳಿಸುವಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತಾ ಬಂದಿದ್ದಾರೆ.
ಕಾರ್ಪೊರೇಟ್ ಸಂಸ್ಥೆಯಲ್ಲಿನ ದುಡಿಮೆಗೊಸ್ಕರ ಬೆಂಗಳೂರಿನಲ್ಲಿ ನೆಲೆಗೊಂಡ ಎಷ್ಟೋ ಅನ್ಯ ಭಾಷಿಕರು ಕನ್ನಡ ಭಾಷೆ ಕಲಿಯುವ ಸಣ್ಣ ಪ್ರಯತ್ನವನ್ನು ಮಾಡದಿರುವುದನ್ನು ನೋಡಿ ಸುನೀಲ್ ತಮ್ಮ ಕಚೇರಿಯ ಅನೇಕ ಅನ್ಯಭಾಷಿಕರೊಡನೆ ಪ್ರಾಥಮಿಕ ಮಟ್ಟದಲ್ಲಿ ಅವರನ್ನು ಕನ್ನಡದಲ್ಲಿ ಮಾತನಾಡಿಸುತ್ತಾ ಈಗ ಅವರುಗಳು ಎಲ್ಲರ ಜೊತೆ ನಿರರ್ಗಳವಾಗಿ ಕನ್ನಡ ಭಾಷೆ ಮಾತನಾಡುತ್ತ ಕನ್ನಡ ಕಲಿತಿರುವುದನ್ನು ನೋಡಿ ಸಂತಸಗೊಂಡಿದ್ದಾರೆ.
ಕನ್ನಡ ಭಾಷೆಯ ಹಿತಾಸಕ್ತಿಯಿಂದ ಶುರುವಾಗಿರುವ ಈ “ಪುಸ್ತಕ ತಾಂಬೂಲ” ಅಭಿಯಾನವನ್ನು ಇನ್ನೂ ಹೆಚ್ಚು ಜನರು ಆರಂಭಿಸಲಿ ಎಂದು ನಮ್ಮೆಲ್ಲರ ಹಾರೈಕೆ.
ಚಂದ್ರಶೇಖರ್ ಕುಲಗಾಣ