ಸಂಗೀತ – ಸಮರ್ಪಣೆ ಭಾಗ 2

ಸಂಗೀತ – ಸಮರ್ಪಣೆ ಭಾಗ 2

ಒಮ್ಮೆಯಾದರೂ ತಮಗೆ ಇಷ್ಟವಾದ ಗೀತೆಯನ್ನು ಗುನುಗದೆ ಇರುವವರು ತುಂಬಾ ವಿರಳ. ಪ್ರತಿಯೊಂದು ಸಂದರ್ಭಕ್ಕೂ , ಪ್ರತಿಯೊಂದು ಭಾವನೆಗೂ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ಗೀತೆ ಯಾವುದೋ ಕಾರಣಕ್ಕೆ ಅಚ್ಚುಮೆಚ್ಚು ಆಗಬಹುದು. ಇನ್ನು ಗಾಯಕರಿಗೆ ಒಂದೇ ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಪ್ರೇಕ್ಷಕರು ಇರುವುದರಿಂದ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ತರಹದ್ದು ಆಗಿರುತ್ತದೆ. ಕೆಲವರಿಗೆ, ಪ್ರೀತಿ ವ್ಯಕ್ತ ಪಡಿಸುವ ಗೀತೆ ಇಷ್ಟವಾದರೆ, ಇನ್ನೂ ಕೆಲವರಿಗೆ ಸಂತೋಷದ ಗೀತೆ, ಮತೊಬ್ಬರಿಗೆ ದುಃಖದ ಗೀತೆ, ಇನ್ನೂ ಹಲವರಿಗೆ ಭಕ್ತಿ ಭಾವ, ತತ್ವಪದ.. ಹೀಗೇ. ಇಲ್ಲಿ ಗಾಯಕನ ಕೆಲಸ ಎಲ್ಲರ ಅಭಿರುಚಿಯನ್ನು ಗೌರವಿಸಿ ಪೂರೈಸುವುದು.

ಯಾವುದೇ ನಮ್ಮಿಷ್ಟದ ಗೀತೆ ಕೇಳಲಿ ಹಾಡುಗಾರನಿಗೂ ಕೇಳುಗನಿಗೂ ಒಂದು ಪರಿಚಿತ ಸಂಬಂಧ ಏರ್ಪಡುತ್ತದೆ. ನಮ್ಮ ಸ್ವಂತ ಭಾವನೆಗಳನ್ನೇ ಅವರು ಹಾಡಿನ ಮೂಲಕ ಹಂಚಿಕೊಳ್ಳುತ್ತಿದ್ದರೆಂದು ಅನ್ನಿಸುವುದು ಉಂಟು. ಅದಕ್ಕೆ ಗಾಯಕರು ಮನಸ್ಸಿಗೆ ಹತ್ತಿರವಾಗುವುದು. ಉದಾಹರಣೆಗೆ ಎಸ್. ಪಿ .ಬಾಲ ಸುಭ್ರಮಣ್ಯಂ ಅವರ ಸಾವಿರಾರು ಗೀತೆಗಳಲ್ಲಿ, ದುಖಃದ ಗೀತೆಗಳು, ಪ್ರಣಯ ಗೀತೆಗಳು, ಭಕ್ತಿ ಗೀತೆಗಳು, ಇನ್ನೂ ಎಲ್ಲಾ ಪ್ರಕಾರದ ಗೀತೆಗಳನ್ನು ಅವರು ಹಾಡಿದ್ದಾರೆ. ಆಗೆಲ್ಲ ನಮ್ಮ ಸ್ವಂತ ಭಾವನೆಯನ್ನೇ ಅವರು ಹಾಡಿನಲ್ಲಿ ಹೇಳಲು ಹೊರಟಿದ್ದಾರೆ ಎಂದು ಅನ್ನಿಸುವುದು ಸುಳ್ಳಲ್ಲ. ಮತೊಬ್ಬರ ಭಾವನೆಗಳನ್ನು ಅಷ್ಟರ ಮಟ್ಟಿಗೆ ಒಬ್ಬ ಹಾಡುಗಾರ ಮಾತ್ರ ವ್ಯಕ್ತ ಪಡಿಸಬಲ್ಲ. ಇದು ಪ್ರತಿಯೊಬ್ಬ ಸಂಗೀತ ಪ್ರೇಮಿಯ ಅನುಭವ.

ಒಮ್ಮೆ ಹೀಗೆ ಸಹ ಗಾಯಕರು ಹೇಳಿದ ಅನುಭವ ನೆನಪಾಯಿತು. ಅವರು ಹೀಗೆ ಒಂದು ಸಲ ಯಾವುದೋ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ ನೀಡಲೆಂದು ಹೋಗಿದ್ದಾಗ, ಅಲ್ಲಿ ಎಲ್ಲೆಲ್ಲೂ ಕಿಕ್ಕಿರಿದ ಜನಸಂದಣಿ, ಸಡಗರ , ಸಂಭ್ರಮ. ಇನ್ನೇನು ಸಡಗರದಲ್ಲಿ ಗಾಯಕರು ಸಹ ಭಾಗಿಯಾಗುವ ಸಮಯ. ಮೊದಲನೇ ಗೀತೆ ಹಾಡಿ ಮುಗಿಸುವ ಸಮಯದಲ್ಲಿ, ಮನೆಯಿಂದ ಸಂದೇಶ ಬರುತ್ತದೆ. ಅವರ ತಂದೆಯ ಮರಣ ಆಗಿದೆಯೆಂದು. ಆಗ ಏನು ಮಾಡಬೇಕು! ಅಳಲು ಕೂಡ ಆಗುವುದಿಲ್ಲ, ಹಾಡಲು ಕೂಡ ಆಗುವುದಿಲ್ಲ. ದುಃಖ ಉಕ್ಕಿ ಬಂದರೂ ತಡೆಯಬೇಕು. ಹತ್ತು ನಿಮಿಷ ಅಷ್ಟೇ, ಸಮಯ ತೆಗೆದು ಕೊಂಡು ಮತ್ತೆ ಅವರು ಹಾಡಲು ತೊಡಗಿದ್ದು, ಎಂತಹವರಿಗೂ ನೋವು ತರಿಸುತ್ತದೆ. ಯಾರಿಗೂ ಹೇಳಲಾಗದ ನೋವು ಅಂದು ಅವರು ಅನುಭವಿಸಿದ್ದು. ನಾವು ಕಲ್ಪನೆಯನ್ನಷ್ಟೆ ಮಾಡಬಹುದು ಅಲ್ಲವೇ!! ಇದು ಎಂಥ ವಿಪರ್ಯಾಸ … ದುಃಖವನ್ನೂ ಸಹ ಮೂರು ಘಂಟೆಗಳ ಕಾಲ ಮುಂದೂಡಬೇಕು. ಇದು ಗಾಯಕರ ಜೀವನ… ದುಃಖದಲ್ಲೂ ನಗು! ನಗುವಿನಲ್ಲೂ ದುಃಖ!!

ಶೈಲಾ
ಬೆಂಗಳೂರು

Related post

Leave a Reply

Your email address will not be published. Required fields are marked *