ಗಿಡುಗ ಬಂತು ಗಿಡುಗ
ಬಿರು ಬೇಸಿಗೆಯ ಒಂದು ದಿನ, ಆಗಷ್ಟೇ ಮಧ್ಯಾನದ ಊಟ ಮುಗಿಸಿ ಆಫೀಸಿನ ಕೆಲಸ ಶುರುಮಾಡಿಕೊಂಡಿದ್ದೆವು, ನಮ್ಮ ಆಫೀಸಿನ ಆವರಣದಲ್ಲಿ ಒಂದು ದೊಡ್ಡ ಮಾವಿನ ಮರವು ಬೃಹದ್ದಾಕಾರದಲ್ಲಿ ಬೆಳೆದು ನಿಂತು ಅದರ ರೆಂಬೆ ಕೊಂಬೆಗಳು ನಾವು ಕೆಲಸ ಮಾಡುವ ಮೊದಲನೇ ಮಹಡಿಯ ಕಿಟಕಿಯ ಸಮೀಪದಲ್ಲೇ ಹಾದು ಗಾಳಿಗೆ ಮರವು ಆಫೀಸಿನ ಏರ್ ಕಡೀಷನರ್ ಕೂಡ ನಾಚುವಷ್ಟು ತಂಗಾಳಿ ಸೂಸುತಿತ್ತು. ಇದ್ದಕಿದ್ದ ಹಾಗೆ ದಪ್ ಎಂದು ಏನೋ ಬಿದ್ದ ಸದ್ದು, ಕಿಟಕಿಯ ಮೂಲಕ ನೋಡಲು ಪ್ರಯತ್ನ ಪಟ್ಟು ಏನೂ ಕಾಣಿಸಲಿಲ್ಲ. ಮಾವಿನ ಮರದ ಕಾಯೇನಾದರೂ ಬಿತ್ತೇನೋ ಎಂದು ಸುಮ್ಮನಾದೆವು. ಒಂದಷ್ಟು ಹೊತ್ತಾದ ಮೇಲೆ ನಮ್ಮ ಗೆಳೆಯರ ಜೊತೆಗೆ ಕೆಳಗೆ ಬಂದರೆ ಮಾವಿನ ಮರದ ಬುಡದಲ್ಲಿ ನಮ್ಮ ಆಫೀಸಿನ ಒಂದಷ್ಟು ಜನ ಗುಂಪು ಕಟ್ಟಿ ಏನನ್ನೋ ಹುಡುಕುತಿದ್ದ ಹಾಗಿತ್ತು. ಕೊತೂಹಲದಲ್ಲಿ ಸೆಕ್ಯೂರಿಟಿ ಹುಡುಗನನ್ನು ವಿಚಾರಿಸಲು ಒಂದು ಹದ್ದು ಬಿದ್ದು ಬಿಟ್ಟಿದೆ ಸಾರ್ ಎಂದು ಮರದ ಕಡೆಗೆ ತೋರಿಸಿದನು. ಜನರ ಗುಂಪಿನಲ್ಲಿ ನಾವೂ ಹುಡುಕಲು ಒಂದು ಹದ್ದು ಮರದ ಹಿಂದೆ ಸದ್ದು ಮಾಡದೆ ಶಬ್ದವಿಲ್ಲದೆ ಕುಳಿತಿತ್ತು.
ನನ್ನನ್ನು ಸೇರಿ ಅಲ್ಲಿರುವರಿಗ್ಯಾರಿಗೂ ಅದನ್ನು ಮುಟ್ಟುವ ಧೈರ್ಯ ಬರಲಿಲ್ಲ. ಅದರ ಒಂದೆರಡು ಫೋಟೋ ತೆಗೆದು ನಮ್ಮ ಪರಿಸರ ಪ್ರೇಮಿ ಮಿತ್ರ ಕಿರಣ್ ರವರಿಗೆ ಕರೆ ಮಾಡಿ ಬೇಗನೆ ಬರಲು ಹೇಳಿದೆವು. ಕಿರಣ್ ಒಬ್ಬ ಪರಿಸರ ಪ್ರೇಮಿ, ಸ್ವತಂತ್ರ ಉದ್ಯೋಗಿ ಅನೇಕ ಪರಿಸರ ಸಂಸ್ಥೆಗಳ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಾ ಪ್ರಾಣಿ ಪಕ್ಷಿಗಳ ಬಗ್ಗೆ ಪರಿಸರ ಕಾಳಜಿಯ ಬಗ್ಗೆ ಬಹಳಷ್ಟು ತಿಳಿದುಕೊಂಡು ಸದಾ ಒಂದಿಲ್ಲೊಂದು ಅರಣ್ಯದಲ್ಲಿ ತಿರುಗಾಡುತ್ತಿರುತ್ತಾರೆ. ನಮ್ಮ ಪುಣ್ಯಕ್ಕೆ ಅವರು ಹತ್ತಿರದಲ್ಲೇ ಇದ್ದು ಕೂಡಲೇ ಆಫೀಸಿನತ್ತ ದಾವಿಸಿ ಬಂದರು.
ಅಷ್ಟರಲ್ಲಿ ಆ ಹದ್ದು ಜನರ ಗಲಾಟೆಗೆ ಮರದ ಮರೆಯಿಂದ ಹೊರಬಂದು ರಸ್ತೆ ದಾಟಿ ಮುಂದಿನ ಆಫೀಸಿನ ಆವರಣದ ಒಳಗೆ ಹೋಗಿ ಅಲ್ಲಿದ್ದ ಕಾರ್ ಗ್ಯಾರೇಜ್ ನಲ್ಲಿ ಅಡಗಿಕೊಂಡಿತ್ತು. ಕಾಲಿಗೋ ರೆಕ್ಕೆಗೋ ಏಟಾಗಿರಬೇಕು ಅದಕ್ಕೆ ಹಾರಲು ಬರುತ್ತಿರಲಿಲ್ಲ ಕಿರಣ್ ಬಂದೊಡನೆ ಹದ್ದು ಅಡಗಿ ಕೂತ ಜಾಗವನ್ನು ತೋರಿಸಲು ತಾನು ತಂದಿದ್ದ ಬಲೆಯಂತಹ ಹಿಡಿಕೆಯಿದ್ದ ವಸ್ತುವಿನ ಮೂಲಕ ಹದ್ದಿನ ತಲೆಯನ್ನು ಸ್ವಲ್ಪ ಹೊರಗೆ ಎಳೆದು ತನ್ನ ಬರಿಗೈಯಲ್ಲೇ ಅದರ ಕಾಲುಗಳನ್ನು ಹಿಡಿದು ಮೇಲೆ ಎತ್ತಿದರು. ಆಗ ಅದು ತನ್ನ ರೆಕ್ಕೆಗಳನ್ನು ವೇಗದಿಂದ ಪಟಪಟಿಸಿ ತನ್ನ ಕೊಕ್ಕಿನ ಮೂಲಕ ಕಿರಣ್ ರವರ ಕೈ ಕುಕ್ಕಿತ್ತು. ಇವುಗಳ ಅಭ್ಯಾಸವಿದ್ದ ಕಿರಣ್ ಅದರ ತಲೆಯನ್ನು ನೇವರಿಸಿ, ರೆಕ್ಕೆಗಳನ್ನು ಕೊಂಚ ಅಗಲಿಸಿ ಮಸಾಜು ಮಾಡಿ ಒಂದೆರಡು ನಿಮಿಷದಲ್ಲೇ ಅದನ್ನು ಸುಮ್ಮನಾಗಿಸಿದರು.
ಕಿರಣ್ ಅದರ ಮುಂಬಾಗವನ್ನು ನಮಗೆ ತೋರಿಸಿ ಆ ಪಕ್ಷಿಯ ಬಗ್ಗೆ ವಿವರಿಸಿದನಂತರವೇ ತಿಳಿದದ್ದು ಅದು ಹದ್ದಲ್ಲ ಎಂದು ಹದ್ದಿನ ಜಾತಿಯಲ್ಲೇ ಹದ್ದಿಗಿಂತ ತುಸು ದೊಡ್ಡದಾದ “ಗಿಡುಗ” ಅದರಲ್ಲೂ ನಗರ ಪ್ರದೇಶದಲ್ಲಿ ಬಹಳ ಅಪರೂಪಕ್ಕೆ ಕಾಣಿಸುವ “ಕ್ರೆಸ್ಟೆಡ್ ಹಾಕ್” ಜುಟ್ಟಿನ ಗಿಡುಗ ಎಂದು ಹೆಸರು. ಮತ್ತೂ ಆಶ್ಚರ್ಯದ ವಿಷಯವೇನೆಂದರೆ ಅದು ಪ್ರಾಯಕ್ಕೆ ಬಂದ ಗಿಡುಗವಾಗಿರಲಿಲ್ಲ ಬದಲಿಗೆ ಕೇವಲ ಒಂದು ತಿಂಗಳ ಮರಿಯೆಂದು ತಿಳಿದು ಆ ಅಗಾಧ ಗಾತ್ರಕ್ಕೆ .
“ಆಕ್ಸಿಪಿಟ್ರಿಡೆ” ಎಂಬ ಕುಟುಂಬಕ್ಕೆ ಸೇರಿದ ಈ ಕ್ರೆಸ್ಟೆಡ್ ಹಾಕ್” ಜುಟ್ಟಿನ ಗಿಡುಗ ನೀಳವಾದ ಒಂದು ಅರಣ್ಯ ಪಕ್ಷಿ. ಇದರ ಮೇಲ್ಬಾಗದ ಮೈ ಕಂದು ಬಣ್ಣದಿಂದ ಕೂಡಿದ್ದರೆ ತಳಭಾಗ ಉದ್ದನೆಯ ಕಂದುಗೆರೆಗಳಿಂದ ಕೂಡಿದ ಬಿಳುಪು. ಇದರ ತಲೆಯ ಮೇಲೆ ಈಗಿನ ಹುಡುಗರು ಬಿಡುವ ಹಾಗೆ ಜುಟ್ಟಿನ ಸ್ಪಯ್ಕ್ (ಜುಟ್ಟು) ಆದ್ದರಿಂದ ಇದನ್ನು “ಶಿಖಾಗೃರ್ಧ” ಎಂದು ಸಹ ಕರೆಯುತ್ತಾರೆ.
ಗಾತ್ರದಲ್ಲಿ ಎರಡರಿಂದ ಎರಡೂವರೇ ಅಡಿಗಳವರೆಗೆ ರೆಕ್ಕೆ ಅಗಲಿಸಿದರೆ ಅನಾಮತ್ತು ೫ ಅಡಿಯವರೆಗೂ ಗೋಚರಿಸುವ ಈ ಗಿಡುಗಗಳು ಗಟ್ಟಿಯಾಗಿ ಉಚ್ಛಶ್ರಾಯಿಯಿಂದ ಕಿ, ಕ್ಕಿ, ಕೀ ಎಂದು ಏರು ಕಂಠದಲ್ಲಿ ಕೂಗುತ್ತವೆ. ಬೆಳೆದ ಮೇಲೆ ಸುಮಾರು ೧೩೦೦ ರಿಂದ ೧೯೦೦ ಗ್ರಾಮ್ ವರೆಗೂ ತೂಗುತ್ತವೆ. ಹೆಣ್ಣು ಹಕ್ಕಿಯು ಗಂಡು ಹಕ್ಕಿಕಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.
ಕಡು ದಟ್ಟ ಕಾಡುಗಳ ಕಡಿದು ಬಯಲಾದ ಪ್ರದೇಶದಲ್ಲಿ ಮಾತ್ರ ವಾಸಿಸುವ ಇವುಗಳು ಮರದ ತುದಿಯಲ್ಲಿ ಎಲೆಗಳ ಮರೆಯಲ್ಲಿ ನಿಶ್ಯಬ್ದವಾಗಿ ತನ್ನ ಬೇಟೆಗಾಗಿ ತನ್ನ ತೀಕ್ಷ್ಣ ದೃಷ್ಟಿಯನ್ನು ಹಾಯಿಸುತ್ತ ಹೊಂಚಿ ಕುಳಿತಿರುತ್ತವೆ. ಮರದ ಸಮೀಪ ಹಾದು ಬರುವ ಕಾಡು ಕೋಳಿ, ಕೆಂಬೂತ, ಮೊಲ ಹಾಗು ಅಳಿಲಿನಂತಹ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳ ಮೇಲೆ ಮಿಂಚಿನಂತೆ ಎರಗಿ ತನ್ನ ಬಲಶಾಲಿ ಕಾಲುಗಳಿಂದ ಅದನ್ನು ಹಿಡಿದು ಹೊತ್ತೊಯ್ದು ಮರಗಳ ಮೇಲೆ ತಿನ್ನುವುದು ಇದರ ಬೇಟೆಯ ವಿಶಿಷ್ಟತೆ. ಅಪರೂಪಕ್ಕೊಮ್ಮೆ ಸತ್ತ ಪ್ರಾಣಿಗಳನ್ನು ಸಹ ತಿಂದ ಉದಾಹರಣೆ ಇದೆ.
ಡಿಸೆಂಬರ್ ನಿಂದ ಏಪ್ರಿಲ್ ತಿಂಗಳವರೆಗೂ ಈ ಗಿಡುಗಗಳು ತಮ್ಮ ಸಂತಾನಭಿವೃದ್ಧಿಯಲ್ಲಿ ತೊಡಗಿಕೊಳ್ಳುವ ಕಾಲ. ತಮ್ಮ ಜೀವಿತಾವಧಿಯಲ್ಲೇ ಒಂದೇ ಸಂಗಾತಿಯನ್ನು ನೆಚ್ಚಿಕೊಳ್ಳುವ ಇವು ಬಹಳ ಎತ್ತರದ ಮರಗಳಲ್ಲಿ (೪೦ ಅಡಿಗಳಿಗೂ ಮೇಲೆ) ಗಂಡು ಹಾಗು ಹೆಣ್ಣು ಹಕ್ಕಿ ಎರಡೂ ಸೇರಿ ಗೂಡು ಕಟ್ಟುತ್ತವೆ. ಹೆಣ್ಣು ಹಕ್ಕಿ ವರ್ಷಕ್ಕೆ ಒಂದು ಮೊಟ್ಟೆಯನ್ನಷ್ಟೇ ಇಡುತ್ತದೆ. ಮೊಟ್ಟೆಯು ಬೂದು ಮಿಶ್ರಿತ ಬಿಳಿ ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಎಳೆಗೆಂಪಿನ ಮಚ್ಚೆಗಳಿರುತ್ತವೆ. ಹೆಣ್ಣು ಹಕ್ಕಿ ಬಹಳ ಜತನದಿಂದ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ ೫೨ ದಿನಗಳ ಕಾಲ ಮರಿಗಳು ಬೆಳೆದು ರೆಕ್ಕೆ ಬಲಿತು ೬೦ ರಿಂದ ೮೦ ದಿನಗಳ ಒಳಗೆ ಗೂಡಿನಿಂದ ಆಚೆ ಹಾರಲು ಶುರು ಮಾಡುತ್ತವೆ, ಆಮೇಲಷ್ಟೇ ಅದರ ಬೇಟೆಯಾಡುವ ತರಬೇತಿ ಶುರು.
ಬಾಂಗ್ಲಾದೇಶ, ಮಾಯ್ನ್ಮಾರ್, ಶ್ರೀಲಂಕಾ, ಇಂಡೋನೆಷ್ಯಾ, ಭಾರತ ಮತ್ತಿತರ ಏಷ್ಯಾ ಖಂಡದ ದೇಶಗಳಲ್ಲಿ ಗಿಡುಗಗಳ ಸಂತತಿ ಹೆಚ್ಚು ಮತ್ತು ಕರ್ನಾಟಕದಲ್ಲಿ ಇದು ಹೆಚ್ಚಾಗಿ ಕಾಣಸಿಗುವುದು ಕಬಿನಿಯ ಕಾಡುಗಳಲ್ಲಿ. ಬೆಂಗಳೂರಿನಂತ ಜನನಿಬಿಡಿ ನಗರದಲ್ಲಿ ಇದು ಕಾಣಿಸಿಕೊಂಡಿದ್ದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು. ಕಿರಣ್ ರವರು ಗಿಡುಗನ ಮರಿಯನ್ನು ನಮ್ಮ ಕೈಲಿ ಹಿಡಿದುಕೊಳ್ಳಲು ಹೇಳಿದಾಗ ನಮ್ಮ ಸುನಿಲ್ ಹಾಗು ಲೋಹಿತ್ ಇಬ್ಬರು ಉತ್ಸಾಹದಲ್ಲಿ ಧೈರ್ಯವಾಗಿ ಹಿಡಿದುಕೊಂಡು ಫೋಟೋಗೆ ಪೋಸು ಕೊಟ್ಟರು. ಒಂದು ದೊಡ್ಡ ಡಬ್ಬವನ್ನು ಹುಡುಕಿ ಗಿಡುಗನ ಮರಿಯನ್ನು ಕಿರಣ್ ಬನ್ನೇರುಘಟ್ಟದ ಹತ್ತಿರ ಪುನರ್ವಸತಿ ಕೇಂದ್ರಕ್ಕೆ ಹೊತ್ತೋಯ್ದರು.
ವನ್ಯಜೀವಿ ಕಾಯ್ದೆಯಡಿಯಲ್ಲಿ ಸೇರುವ ಯಾವುದೇ ಪ್ರಾಣಿ ಪಕ್ಷಿಗಳು ಈ ರೀತಿಯಾಗಿ ನಿರ್ವಸತಿಯಾದರೆ ಅವುಗಳನ್ನು ವನ್ಯಜೀವಿ ಪುನರ್ವಸತಿ ಹಾಗು ಸಂರಕ್ಷಣೆ ಕೇಂದ್ರಕ್ಕೆ ಸಾಗಿಸಿ ಅಲ್ಲಿ ಒಂದು ವಾರಗಳ ಕಾಲ ಅವುಗಳನ್ನು ಸಂರಕ್ಷಿಸಿ ನಿಗಾ ಇಡಲಾಗುತ್ತದೆ. ಕೆಲವೊಮ್ಮೆ ಎಳೆ ಮರಿಗಳು ಗೂಡಿನಿಂದ ಕೆಳಗೆ ಬಿದ್ದುಬಿಟ್ಟಿರುತ್ತವೆ ಆಗ ಅವುಗಳನ್ನು ಸಂರಕ್ಷಿಸುವುದು ಬಹಳ ಕಷ್ಟದ ಕೆಲಸವಾಗಿರುತ್ತದೆ. ಸರಿಯಾಗಿ ಕಣ್ಣು ಬಿಡದ ಮರಿಗಳಿಗೆ ಇಂಕ್ ಪಿಲ್ಲರ್ ಅಥವಾ ಸಣ್ಣ ಫೀಡಿಂಗ್ ಬಾಟಲಿನಲ್ಲಿ ದ್ರವ್ಯರೂಪದ ಆಹಾರ ಕೊಡುತ್ತಾರೆ. ವಾರ ಅಥವಾ ಹತ್ತು ದಿನಗಳ ನಂತರ ಆ ಪ್ರಾಣಿ ಅಥವಾ ಪಕ್ಷಿಯು ಎಲ್ಲಿ ಸಿಕ್ಕಿತ್ತೋ ಆ ಜಾಗದಲ್ಲೇ ಮತ್ತೆ ತಂದು ಬಿಡುತ್ತಾರೆ ಯಾಕೆಂದರೆ ಎಲ್ಲಾ ಪ್ರಾಣಿ ಪಕ್ಷಿಗಳು ತಮ್ಮದೇ ಜಾಗ ಗುರುತಿಸಿಕೊಂಡು ಬದುಕುತ್ತಿರುತ್ತವೆ.
ನಿಮಗೆ ಎಲ್ಲಾದರೂ ಈ ರೀತಿಯಾಗಿ ಪ್ರಾಣಿ ಪಕ್ಷಿಗಳು ಅಪಾಯದಲ್ಲಿರುವುದನ್ನು ಕಂಡು ಬಂದಲ್ಲಿ ಈ 91-9900025370 PFA Wild Life ಸಂಖ್ಯೆಗೆ ಕರೆ ಮಾಡಿ ಅವರು ಯಾವುದೇ ಹಣದ ಅಪೇಕ್ಷೆ ಪಡದೆ ಬಂದು ಅದನ್ನು ಸಂರಕ್ಷಿಸುತ್ತಾರೆ.
ಚಂದ್ರಶೇಖರ್ ಕುಲಗಾಣ
5 Comments
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ❤️
ಉತ್ತಮ ಕೆಲಸ ಸರ್ ಸದಾ ಒಳ್ಳೆದಾಗಲಿ
ಗಿಡುಗ ಎಂಬ ಆಕಾಶ ಜೀವಿಯ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ ಚಂದ್ರು ಅವರೆ. ಒಂದು ಸಲಹೆ – ಸಾಧ್ಯವಾದರೆ ಫೋಟೋಗಳು ಇನ್ನಷ್ಟು ಬ್ರೈಟ್ ಆಗಿ ಮುದ್ರಣವಾದರೆ, ನೋಡಿ ಅನುಭವಿಸಲು ಚಂದ, ಅಲ್ಲವೆ?
Good job maccchhi….
Thank you Macchi