ಹೆಣ್ಣಿನ ನಡಿಗೆಯಲಿ ಜಗತ್ತು
ಅನವರತ ದುಡಿವ ಹೆಣ್ಣಾಗಿ
ಎಲ್ಲರ ಬದುಕಿನ ಕಣ್ಣಾಗಿ..
ಇವಳಾಗಿಹಳು ಸಕಲರ ಭಾವಚೇತನ..
ನೀಡುವಿರಾ ಇವಳಿಗೆ ಪ್ರತಿಸ್ಪಂದನ..!!?
ಹೊಂಗನಸಿನ ಭಾವ ರೆಕ್ಕೆಯಲಿ
ಮನ ಹಾರುತಿದೆ ಬಾನಂಗಳದಲಿ..
ಅರಿಯದ ದ್ವಂದ್ವ,ನಿಡುಸುಯ್ದ ಮನಸು..
ಅವಳ ಕನಸಾಗುವುದೇ ಎಂದಾದರೂ ನನಸು..!!?
ಸಂಸಾರದ ನಗುಮೊಗವ ನೋಡಿ
ಭವ ಸಾಗರದಿ ಬಿಡದೆ ಈಜಾಡಿ..
ಸಬಲೆಯಾಗಿ ಮಾಡಿದ ಮಂಥನಕೆ..
ಬೆಲೆ ದೊರೆವುದೇ ಅವಳ ತ್ಯಾಗ ಜೀವನಕೆ..!!?
ಬಾಳಿನಲಿಹ ಉತ್ತರವಿರದ ಜಟಿಲತೆಗೆ
ಉತ್ತರಿಸಿದೆ ಅವಳ ಸ್ನಿಗ್ಧ ಸರಳತೆ..
ತಲೆಬಾಗಿ ನಡೆದಿಹಳು ಲೋಕದ ನಿಯಮಕೆ..
ಸಾಟಿ ಎಲ್ಲಿದೆ ಅವಳ ಸಂಯಮಕೆ..!!?
ಬದುಕಲಿ ಬರುವ ಅಡೆತಡೆಗಳ ರಭಸಕೆ
ಎದುರಿಸಿಹಳು ದಿಟ್ಟತನದಿ ಅದರ ಹೊಡೆತಕೆ..
ಕಾದಿಹಳು ಸಮಾಧಾನದ ನುಡಿಗಳಿಗೆ..
ಓಗೊಡುವಿರಾ ಅವಳ ಮನಸಿನ ಕರೆಗೆ..!!?
ಸುಮನಾ ರಮಾನಂದ