ಪರಶುರಾಮ ಸೃಷ್ಟಿಯ ನಾಡಿನಲ್ಲೊಂದು ಥೀಂ ಪಾರ್ಕ್
ಕರಾವಳಿ ಜಿಲ್ಲೆಗಳನ್ನು (ತುಳುನಾಡು) ಪರಶುರಾಮ ಸೃಷ್ಟಿಸಿದ ನಾಡು ಎಂದು ಕರೆಯುತ್ತಾರೆ. ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾರಮರು ಸೃಷ್ಟಿಸಿದ್ದು ಎಂಬ ಪುರಾಣ ಪ್ರತೀತಿಯಿದೆ.
ಸುಮಾರು 5,000 ವರ್ಷಕ್ಕೂ ಮೊದಲು ಈ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, (ವಿಷ್ಣುವಿನ ಆರನೆಯ ಅವತಾರ) ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ. ಇವರು ರೇಣುಕೆ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ತಮ್ಮ ತಾಯಿಗಾಗಿ ಪರಶುಘಡದಲ್ಲಿ (ಸವದತ್ತಿ) ತಪಸ್ಸು ಮಾಡಿ ವಿಷ್ಣುವಿನಿಂದ ಪರುಶು (ಕೊಡಲಿ)ವನ್ನು ಆಶೀರ್ವಾದವಾಗಿ ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಮಂದಿ ಚಿರಂಜೀವಿಗಳ ಪೈಕಿ ಒಬ್ಬರು. ಜಮದಗ್ನಿ ಮುನಿಯ ಪುತ್ರ ಪರಶುರಾಮ ಅತ್ಯಂತ ಕೋಪಿಷ್ಠನಾಗಿದ್ದು, ಆತ ತನ್ನ ತಂದೆಯನ್ನು ಕೊಂದಿದ್ದ ಕ್ಷತ್ರಿಯ ರಾಜ ಕಾರ್ತವೀರ್ಯಾರ್ಜುನನ ಮೇಲಿನ ಸೇಡಿಗಾಗಿ ಭೂಲೋಕದಲ್ಲಿದ್ದ ಸಮಸ್ತ ಕ್ಷತ್ರಿಯರನ್ನು ಸಂಹರಿಸಿದನು.
ಕ್ಷತ್ರಿಯರ ಸಂಹಾರದ ಬಳಿಕ ಪರಶುರಾಮನು ತನ್ನ ಆಯುಧವಾದ ಪರಶುವನ್ನು (ಕೊಡಲಿ) ತ್ಯಜಿಸಲು ನಿರ್ಧರಿಸಿದನು. ಇದಕ್ಕಾಗಿ ಸಹ್ಯಾದ್ರಿ ಪರ್ವತ ಸಾಲಿನ ಮೇಲೆ ನಿಂತು ತನ್ನ ಕೊಡಲಿಯನ್ನು ಬೀಸಿ ಎಸೆದನು. ಅದು ಎಲ್ಲಿ ಬೀಳುತ್ತದೋ ಅಲ್ಲಿಯವರೆಗೆ ಸಮುದ್ರವು ಹಿಮ್ಮುಖವಾಗಿ ಚಲಿಸುವಂತೆ ಸಮುದ್ರರಾಜ ವರುಣ ದೇವನನ್ನು ಬೇಡಿದನು. ಅದರಂತೆ ಸಮುದ್ರವು ಹಿಮ್ಮುಖವಾಗಿ ಚಲಿಸಿ ಉಂಟಾದ ಭೂಭಾಗವೇ ಗೋಕರ್ಣ. ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಭೂಮಿಯು ಉಪ್ಪುಮಿಶ್ರಿತ ಭೂಮಿಯಾಗಿ ವಾಸಯೋಗ್ಯವಲ್ಲವಾಗಿತ್ತು. ಇದಕ್ಕಾಗಿ ಪರಶುರಾಮನು ಸರ್ಪರಾಜ ವಾಸುಕಿಯನ್ನು ತಪಸ್ಸಿನಿಂದ ಒಲಿಸಿ ಈ ಭೂಮಿಯಲ್ಲಿ ಸಿಹಿ ನೀರು ತುಂಬಿ ಭೂಮಿಯನ್ನು ವಾಸಕ್ಕೆ ಯೋಗ್ಯವಾಗುವಂತೆ ಮಾಡಿದನು. ಹೀಗೆ ಸೃಷ್ಟಿಯಾದ ಭೂ ಪ್ರದೇಶವೇ ಕರಾವಳಿ ಎಂಬ ಉಲ್ಲೇಖ ಪುರಾಣದಲ್ಲಿದೆ.
ತುಳುನಾಡಿನ ಸೃಷ್ಟಿಕರ್ತ ನಾಥ ಪರಂಪರೆಯನ್ನ ಎಲ್ಲೆಡೆ ಪಸರಿಸಿದ ಪರಶುರಾಮನಿಗೆ ಒಂದು ಥೀಂ ಪಾರ್ಕ್ ನಿರ್ಮಿಸಲಾಗಿದ್ದು, ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಎರ್ಲಪಾಡಿಯ ಉಮಿಕ್ಕಲ್ ಬೆಟ್ಟದ ಮೇಲಿದೆ. ಇದೊಂದು ಪ್ರವಾಸಿ ತಾಣವಾಗಿದ್ದು, ಇಲ್ಲಿ ಪರಶುರಾಮನ ಕಂಚಿನ ಮೂರ್ತಿಯನ್ನು ಬೆಟ್ಟದ ಮೇಲಿರುವ ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಈ ಕಂಚಿನ ಮೂರ್ತಿಯ ಬಲದ ಕೈಯಲ್ಲಿ ಕೊಡಲಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಎಡಗಾಲನ್ನು ಎತ್ತರಿಸಿ ಇಟ್ಟಿರುವಂತೆ ನಿರ್ಮಿಸಲಾಗಿದೆ.
ಪಾಳು ಕಲ್ಲುಗುಡ್ಡದ ಮೇಲೆ ಪರಶುರಾಮ
ಕರಾವಳಿಗೆ ಪರಶುರಾಮ ಸೃಷ್ಟಿಯ ನಾಡೆಂಬ ಹೆಸರಿದ್ದರೂ ಇದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಆದ್ದರಿಂದ ಕಾರ್ಕಳದಲ್ಲಿ ಒಂದು ಪರಶುರಾಮ ಥೀಂ ಪಾರ್ಕ್ ನಿರ್ಮಿಸಲಾಗಿದೆ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶ್ರೀ ಅರುಣ್ ಕುಮಾರ್ ರವರ ನೇತೃತ್ವದಲ್ಲಿ ಕೈಗೆತ್ತಿಕೊಂಡಿದ್ದ ಈ ಥೀಂ ಪಾರ್ಕ್ 2023 ಜನವರಿ 27 ರಂದು ಲೋಕಾರ್ಪಣೆಯಾಗಿದೆ. ಉಡುಪಿ ಮತ್ತು ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬೆಟ್ಟದ ಮೇಲೆ ಐದು ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣಗೊಂಡಿದ್ದು, ಇಲ್ಲಿನ ಪಾಳು ಬಿದ್ದಿದ್ದ ಕಲ್ಲುಗುಡ್ಡವೊಂದಕ್ಕೆ ಇದೀಗ ಹೊಸ ಮೆರುಗು ಬಂದಿದೆ. ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಕಲ್ಲುಬಂಡೆಗಳೇ ತುಂಬಿದ್ದ ಗುಡ್ಡವೊಂದು ಇದೀಗ ಪ್ರವಾಸಿಗರ ಹಾಟ್ಸ್ಪಾಟ್ ಆಗಿದೆ.
ಪ್ರವಾಸೋದ್ಯಮ ತಾಣ: ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ 10 ಕೋಟಿ ರೂ.ಗಳ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಭಜನಾ ಮಂದಿರ, ಆಧುನಿಕ ಆಡಿಯೋ ವಿಶುವಲ್ ಮ್ಯೂಸಿಯಂ, 500 ಆಸನಗಳ ಆಂಫಿಥಿಯೇಟರ್, ಸಸ್ಯರಾಶಿಗಳ ನಡುವೆ ವೀಕ್ಷಣಾ ಗೋಪುರಗಳು, ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಕುರಿತು ಬಿಡಿಸಲಾದ ಉಬ್ಬುಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಹೊಂದಿದೆ. ಜೊತೆಗೆ ನೇಯ್ಗೆ ಡೆಕ್ ಗ್ಯಾಲರಿ, ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ರಂಗ ಮಂದಿರ, ಏಕಕಾಲಕ್ಕೆ ನೂರು ಜನ ಕೂರಬಹುದಾದ ಚಿತ್ರಮಂದಿರ ಮತ್ತು ತುಳುನಾಡಿನ ಕಡಲತಡಿಯ ದೃಶ್ಯವನ್ನು ಈ ಬೆಟ್ಟದ ಮೇಲೆ ನಿಂತು ನೋಡಬಹುದು. ಗುಡ್ಡದ ಮೇಲೆ ಸ್ಥಾಪಿಸಿರುವ ಪರಶುರಾಮನ ಈ ಥೀಂ ಪಾರ್ಕ್ ವೀಕ್ಷಣೆಯಿಂದ ತುಳುನಾಡೇಕೆ ಸೃಷ್ಟಿಯಾಯಿತು ಎಂಬ ಅನುಭವ ಪ್ರವಾಸಿಗರಿಗೆ ಆಗಲಿದ್ದು, ಇಲ್ಲಿನ ಪ್ರಶಾಂತ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ.
ಕಂಚಿನ ಪ್ರತಿಮೆ
ಕೈಯಲ್ಲಿ ಬಿಲ್ಲು, ಕೊಡಲಿ ಹಿಡಿದುಕೊಂಡ ಪೂರ್ತಿ ಕಂಚಿನಿಂದ ನಿರ್ಮಿಸಿರುವ ಪರಶುರಾಮನ ಮೂರ್ತಿಯನ್ನು ಇಲ್ಲಿ ಕಾಣಬಹುದು. ಈ ಪ್ರತಿಮೆಯು ಸುಮಾರು 450 ಅಡಿ ಎತ್ತರದ ಬೆಟ್ಟದ ಮೇಲಿನ ನೆಲದಿಂದ 57 ಅಡಿ ಎತ್ತರದ ಕಟ್ಟಡದ ಮೇಲೆ ನಿಲ್ಲಿದ್ದು, ಇದು 33 ಅಡಿ ಎತ್ತರ, 15 ಟನ್ ಭಾರವಿದೆ. ಇದರ ನಿರ್ಮಾಣಕ್ಕೆ 15 ಟನ್ ಕಂಚು ಮತ್ತು ಉಕ್ಕು ಬಳಸಲಾಗಿದ್ದು, ಸುಮಾರು 7 ತಿಂಗಳ ಹಿಂದೆ ಈ ಪ್ರತಿಮೆ ನಿರ್ಮಾಣ ಪ್ರಾರಂಭವಾಗಿತ್ತು. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಇಡಗುಂಜಿ ಮೂಲಕ 42 ವರ್ಷದ ಕೃಷ್ಣನಾಯ್ಕ ಅವರು ಮೂರ್ತಿಯನ್ನು ತಯಾರಿಸಿದ್ದು, ಈ ಪ್ರತಿಮೆ ನಿರ್ಮಾಣಕ್ಕೆ 70 ಕಾರ್ಮಿಕರು ದುಡಿದಿದ್ದಾರೆ. ಈ ಪರಶುರಾಮನ ಪ್ರತಿಮೆ ನಿರ್ಮಾಣಕ್ಕೆ 2 ಕೋಟಿ ರೂ. ವೆಚ್ಚವಾಗಿದೆ. ಇದು ಪಶ್ಚಿಮ ಘಟ್ಟದ ತಪ್ಪಲಿನ ಬೆಟ್ಟಗುಡ್ಡಗಳಿರುವ ಪ್ರದೇಶವಾದ್ದರಿಂದ ಇಲ್ಲಿ ಗುಡುಗು ಮಿಂಚು ಹೆಚ್ಚಿರುತ್ತದೆ. ಇದಕ್ಕಾಗಿ ಈ ಪ್ರತಿಮೆಗೆ ಸಿಡಿಲು ಮತ್ತು ಮಿಂಚಿನ ಬಾಧೆಯಾಗದಂತೆ ತಡೆಯಲು ಪ್ರತಿಮೆಯನ್ನು ಕಂಚಿನ ಜೊತೆಗೆ ವಿಶೇಷ ಮಿಶ್ರಣ ಬಳಸಿ ಮಿಂಚು ಪ್ರತಿಬಂಧಕ ವ್ಯವಸ್ಥೆಯನ್ನು ಮಾಡಲಾಗಿದೆ.
ಗೋಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ, ಅನಂತಶಯನ ದೇವಸ್ಥಾನ, ರಾಮಸಮುದ್ರ ಕೆರೆ, ಹಲವಾರು ಬಸದಿಗಳು, ಕಾಳಿಕಾಂಬ ದೇವಾಲಯ, ಸಂತ ಲಾರೆನ್ಸ್ ಚರ್ಚ್, ವರಂಗ ಕೆರೆ ಬಸದಿ, ಕೋಟಿ ಚೆನ್ನಯ ಥೀಂ ಪಾರ್ಕ್ ಹೀಗೆ ಹಲವು ಆಕರ್ಷಣೀಯ ಸ್ಥಳಗಳ ಮೂಲಕ ಪ್ರವಾಸಿ ತಾಣವಾಗಿ ಗಮನಸೆಳೆದಿರುವ ಕಾರ್ಕಳದ ಹಿರಿಮೆಗೆ ಪರಶುರಾಮ ಥೀಂ ಪಾರ್ಕ್ ಸೇರ್ಪಡೆಯಾದ್ದರಿಂದ ಕಾರ್ಕಳದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಮಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160