ಗುದದ ರೋಗಗಳು (Anal diseases) – 2

ಗುದದ ರೋಗಗಳು (Anal diseases)2

ಗುದದ್ವಾರದ ಬಿರುಕು/ಸೀಳು

ವಯಸ್ಸು ಐವತ್ತು ತುಂಬಿದ ಶೇಕಡ ಐವತ್ತರಷ್ಟು ಜನರು ಈ ಜಗತ್ತಿನಲ್ಲಿ, ಅವರ ಜೀವಿತಾವಧಿಯಲ್ಲಿ ಮೂಲವ್ಯಾಧಿ ರೋಗದಿಂದ ಬಳಲಬಹುದು ಎಂಬ ಒಂದು ಅಂದಾಜಿದೆ. ಆದರೆ ಗುದದ್ವಾರದ ಸೀಳು ಅಥವ ಬಿರುಕಿನ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಪ್ರತಿ ಐದು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುವ ಸಾಧ್ಯತೆ ಇದೆಯಂತೆ. ಮೇಲಾಗಿ, ಮುಜುಗರ ಅಥವ ನಾಚಿಕೆಯಿಂದ ವೈದ್ಯರ ಸಲಹೆ ಪಡೆಯದೆ ದೂರ ಉಳಿಯುವವರ ಲೆಕ್ಕವನ್ನೂ ಸೇರಿಸಿದರೆ, ಒಟ್ಟಾರೆ ರೋಗಿಗಳ ಸಂಖ್ಯೆ ಇನ್ನು ಹೆಚ್ಚಿರಬಹುದು.

ಜಗತ್ತಿನಾದ್ಯಂತ ಅಧಿಕ ಪ್ರಮಾಣದ ಜನರಲ್ಲಿ ಕಂಡುಬರುವ ಗುದದ್ವಾರದ ಬಿರುಕು ಅಥವ ಸೀಳು (Fissure in ano) ಎಂಬುದು ಹೆಚ್ಚಿನ ತೊಂದರೆ ನೀಡುವ ಮತ್ತು ಅಧಿಕ ನೋವನ್ನು ಉಂಟುಮಾಡುವ ರೋಗ. ಹಸುಳೆಗಳಲ್ಲಿ ಮತ್ತು ಚಿಕ್ಕ ಮಕ್ಕಳಲ್ಲಿ ಸಹ ಗುದದ ರಕ್ತಸ್ರಾವಕ್ಕೆ ಕಾರಣವಾಗುವ ಇದು ಸರ್ವಸಾಮಾನ್ಯ ರೋಗ. ಇಂಥ ಬಿರುಕಿನ ಸುತ್ತಮುತ್ತ, ಉರಿಯೂತದಿಂದ ಕೂಡಿದ ರಕ್ತನಾಳ ಸಹ ಕಂಡುಬಂದರೆ ಅದು ಖಂಡಿತ ಗೊಂದಲಕ್ಕೆ ದಾರಿ ಆಗಬಹುದು. ಸಾಮಾನ್ಯವಾಗಿ, ಗಡುಸಾದ ಮಲವಿಸರ್ಜನೆಯ ಸಮಯದಲ್ಲಿ, ಗುದದ ಲೋಳೆಪೊರೆಯನ್ನು (anal mucosa) ಬಲವಾಗಿ ಎಳೆದಂತಾಗಿ ಅದು ಹರಿಯುವುದು ಸಹಜ. ಹಾಗೆ ಒಮ್ಮೆ ಹರಿದ ಬಿರುಕು ಆಗಾಗ, ನಮ್ಮ ದೈನಂದಿನ ಪ್ರಕ್ರಿಯೆಯಿಂದ, ಘಾಸಿಗೊಳಗಾಗುವುದೂ ಸಾಮಾನ್ಯ. ಹಾಗೆ ತೆರೆದಿಟ್ಟಂಥ ಗಾಯದ ಕೆಳಗೆ ಸ್ನಾಯುವಿನ ಅತೀವ್ರ ಸೆಳೆತವಾಗಿ ನೋವಿಗೆ ಕಾರಣವಾಗುತ್ತದೆ. ಅಷ್ಟಲ್ಲದೆ, ಸ್ನಾಯು ಸೆಳೆತದಿಂದ ಬಿರುಕಿನ ಅಂಚುಗಳನ್ನು ಎಳೆದಂತಾಗಿ ರೋಗ ಬೇಗ ಗುಣವಾಗುವುದೂ ಕಷ್ಟ. ಅನೇಕ ಬಾರಿ ಇಂಥ ಬಿರುಕು ತೀವ್ರವಲ್ಲದೆ ಇದ್ದರೂ ಕೂಡ ನೋವು ಮಾತ್ರ ಅತಿ ಹೆಚ್ಚಿರಬಹುದು. ಹಾಗಾಗಿ ಸಾಕಷ್ಟು ರೋಗಿಗಳು ನೋವಿಗೆ ಹೆದರಿ, ದಿನಗಟ್ಟಲೆ ಮಲವಿಸರ್ಜನೆ ಮಾಡದೆ ಇದ್ದು, ವಿಸರ್ಜನೆ ಮಾಡಲೇ ಬೇಕಾದ ಅನಿವಾರ್ಯತೆ ಬಂದಾಗ, ಮಲ ಅತಿ ಘಟ್ಟಿಯಾಗಿ ಬಿರುಕನ್ನು ಇನ್ನೂ ಅಧಿಕ ಮಾಡಿ, ಒಂದು ರೀತಿಯ ‘ವಿಷ ವರ್ತುಲ’ ಆದಂತಾಗುತ್ತದೆ. ಈ ರೋಗವನ್ನು ತೀವ್ರವಾದದ್ದು (acute) ಅಥವ ದೀರ್ಘಕಾಲದ್ದು (chronic) ಎಂದು ಎರಡು ರೀತಿಯಲ್ಲಿ ವರ್ಗೀಕರಿಸಬಹುದು.

ರೋಗ ಉಂಟುಮಾಡುವ ಅಂಶಗಳು:

…. ನಿಸ್ಸಂದೇಹವಾಗಿ ಈ ರೋಗವನ್ನು ಉಂಟುಮಾಡುವ ಏಕೈಕ ಮತ್ತು ಪ್ರಮುಖ ಕಾರಣವೆಂದರೆ ಅದು ಮಲಬದ್ಧತೆ ಎಂಬುದು ಸಾಬೀತಾಗಿದೆ. ಅದಲ್ಲದೆ, ಗಡುಸಾದ ಮಲವಿಸರ್ಜನೆ, ನಿಯಮರಹಿತ ಆಹಾರ ಕ್ರಮ, ಖಾರ ಹಾಗು ಮಸಾಲೆಯುಕ್ತ ಆಹಾರ ಸೇವನೆ, ದೋಷಪೂರಿತ ಮಲವಿಸರ್ಜನೆಯ ಅಭ್ಯಾಸಗಳು ಮತ್ತು ಸ್ಥಳೀಯ (ಅಂದರೆ ರೋಗ ಇರುವ ಜಾಗದ) ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮುಂತಾದುವು ರೋಗದ ಆರಂಭಕ್ಕೆ ಮೂಲ. ಮಹಿಳೆಯರಲ್ಲಿ ಈ ರೋಗಕ್ಕೆ ಪ್ರಚೋದನೆಯು ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ಹೆರಿಗೆಯ ನಂತರ ಕಂಡುಬರುತ್ತದೆ. ಮೇಲ್ನೋಟಕ್ಕೆ, ಇದೊಂದು ಚಿಕ್ಕ ಬಿರುಕಿನ ರೀತಿ ಕಾಣಿಸಿಕೊಂಡು ತನ್ನಷ್ಟಕ್ಕೆ ತಾನೆ ಗುಣವಾಗಲೂಬಹುದು, ಅಥವ ದೀರ್ಘಕಾಲದ ರೋಗವಾಗಿ ಪ್ರಗತಿ ಹೊಂದಲೂಬಹುದು — ಈ ರೀತಿ ನೂರಕ್ಕೆ ನಲವತ್ತರಷ್ಟು ರೋಗಿಗಳಲ್ಲಿ ‘ದೀರ್ಘಕಾಲದ ಗುದದ ಬಿರುಕು’ (chronic anal fissure) ಎನಿಸಿ ತೊಂದರೆ ಕೊಡುವುದುಂಟು.

ಸಾಮಾನ್ಯ ಲಕ್ಷಣಗಳು:
…. ಮಲವಿಸರ್ಜನೆಯ ಸಮಯದಲ್ಲಿ ಮತ್ತು ನಂತರ ಕಂಡುಬರುವ ನೋವು.
…. ಆ ಸ್ಥಳದಲ್ಲಿ ಕಾಣಿಸುವ ಸೀಳು
…. ಮಲವಿಸರ್ಜನೆಯ ಸಮಯದಲ್ಲಿ ಮತ್ತು ನಂತರ ಕೆಂಪು ರಕ್ತಸ್ರಾವ ಮುಂತಾಗಿ.

ಅಪಾಯದ ಅಂಶಗಳು:
ಕೆಲವು ಪರಿಸ್ಥಿತಿಗಳು ಗುದದ್ವಾರದ ಸೀಳುವಿಕೆಗೆ ಕಾರಣವಾಗಬಹುದು —
…. ಮಲಬದ್ಧತೆ ಮತ್ತ ಒತ್ತಡದಿಂದ (ಮುಲುಕುವುದರಿಂದ) ಮಲವಿಸರ್ಜನೆ
…. ಕಡಿಮೆ ನಾರಿನಂಶ ಇರುವ ಆಹಾರ ಸೇವನೆ
…. ತೀವ್ರವಾದ ಭೇದಿ
…. ಗುದದ ಸುತ್ತಮುತ್ತ ಉರಿಯೂತ
…. ಯೋನಿಯ ಮೂಲಕ ಹೆರಿಗೆ
…. ಭೇದಿಗೆ ಕಾರಣವಾಗಬಹುದಾದ ಇತ್ತೀಚಿನ ತೂಕ ಇಳಿಕೆಯ ಶಸ್ತ್ರಚಿಕಿತ್ಸೆ
…. ಎತ್ತರದ ಗುಡ್ಡದ ಮೇಲಿನ ಬೈಕ್ ಸವಾರಿಯಿಂದ ಉಂಟಾಗಬಹುದಾದ ಅಥವ ಇನ್ನಿತರ ಕಾರಣದಿಂದ ಆದ ಗಾಯ ಮುಂತಾಗಿ. ಇಷ್ಟೇ ಅಲ್ಲದೆ ಕರುಳಿನ ಉರಿಯೂತಕ್ಕೆ ಕಾರಣವಾಗುವ ಕಾಯಿಲೆಗಳಿಂದ, ಕೆಲವು ಶಸ್ತ್ರಚಿಕಿತ್ಸೆಗಳಿಂದ, ಕರುಳಿನ ಚಲನವಲನಕ್ಕೆ ಮತ್ತು ಗುದದ್ವಾರಕ್ಕೆ ಧಕ್ಕೆ ತರುವ ಯಾವುದಾದರು ಚಿಕಿತ್ಸೆ ಮುಂತಾದ ಕಾರಣಗಳಿಂದ ಸಹ ಗುದದ ಸೀಳು ರೋಗ ಬರುವುದು ಸಾಧ್ಯ.

ರೋಗ ಪತ್ತೆ:
ಪ್ರಥಮವಾಗಿ ರೋಗಿ ಬಣ್ಣಿಸುವ ಆತನ ಆರೋಗ್ಯದ ಇತಿಹಾಸ ಮತ್ತು ರೋಗ ಲಕ್ಷಣಗಳ ವಿವರಗಳಷ್ಟೆ ಅಲ್ಲದೆ, ರೋಗಿಯ ಗುದನಾಳದ ಪರೀಕ್ಷೆಯಿಂದ ರೋಗದ ಪತ್ತೆ ಸಾಧ್ಯ. ಅಲ್ಲದೆ, ಇನ್ನಿತರ ಕೆಲವು ತೊಂದರೆಗಳೂ ಇದೇ ರೀತಿಯ ರೋಗ ಲಕ್ಷಣಗಳಿಂದ ಕೂಡಿರಬಹುದಾದ್ದರಿಂದ, ವೈದ್ಯರು ರೋಗಿಯ ಮಲದಲ್ಲಿ ಇರಬಹುದಾದ ರಕ್ತದ ಪರೀಕ್ಷೆ ಕೂಡ ಕೇಳಬಹುದು.

ಚಿಕಿತ್ಸೆ: ಸಾಂಪ್ರದಾಯಿಕ ಚಿಕಿತ್ಸೆಯಿಂದಲೆ ತೀವ್ರ ಥರ ಗುದದ ಬಿರುಕು ಸಹ ಆರು ವಾರಗಳಲ್ಲಿ ಗುಣವಾಗುತ್ತದೆ. ಇನ್ನು ಕೆಲವರಲ್ಲಿ ಮಲಬದ್ಧತೆಗೆ ನೀಡಿದ ಚಿಕಿತ್ಸೆಯ ನಂತರ ಕೂಡ ರೋಗ ಮಾಯವಾಗುವುದೂ ಉಂಟು.
ಆರು ವಾರಗಳಿಗೂ ಮಿಕ್ಕಿ ಉಳಿಯುವ
ಗುದದ ಸೀಳುಗಳನ್ನು ದೀರ್ಘಕಾಲದ ರೋಗಗಳೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ಚಿಕಿತ್ಸೆ ವಿಫಲವಾದಾಗ, ಹೆಚ್ಚಿನ ಶಸ್ತ್ರಚಿಕಿತ್ಸೆ ಬೇಕಾಗಬಹುದು.

ಕೆಲವೊಮ್ಮೆ ಗುದದ್ವಾರದ ಒತ್ತಡದ ಏರುಪೇರಿಂದ ಕೆಲವು ರೋಗಿಗಳ ಗುದದ ಸುತ್ತಮುತ್ತಲಿನ ರಕ್ತಸ್ರಾವಕ್ಕೆ ಧಕ್ಕೆಯಾಗಿ, ರೋಗ ಸಂಪೂರ್ಣವಾಗಿ ಗುಣವಾಗುವುದು ಕಷ್ಟವಾಗಬಹುದು. ಅಂತಹ ಸ್ಥಿತಿಯಲ್ಲಿ ಕಡಿತಗೊಂಡ ರಕ್ತದ ಹರಿವು ರೋಗ ಗುಣವಾಗುವುದನ್ನು ತಡೆಯುತ್ತದೆ. ಆಗ, ರಕ್ತದ ಹರಿವನ್ನು ಹೆಚ್ಚು ಮಾಡುವ ಔಷಧೋಪಚಾರ ಮಾಡುವುದರಿಂದ ರೋಗ ಗುಣವಾಗಬಹುದು.

ಇನ್ನುಳಿದ ಹಾಗೆ –…. ಆಹಾರ ಕ್ರಮದ ಬದಲಾವಣೆ, ಹೆಚ್ಚು ನೀರು ಕುಡಿಯುವುದು, ಭೇದಿ ಅಥವ ಮಲಬದ್ಧತೆ ಆಗದಹಾಗೆ ಎಚ್ಚರ ವಹಿಸುವುದು…. ಬಸಿ ನೀರಿನ ಶಾಖ (sitz bath) ಕನಿಷ್ಠ 20 ನಿಮಿಷ ಪ್ರತಿದಿನ …. ಮಲವನ್ನು ಮೃದುಗೊಳಿಸುವ ಔಷಧ ಸೇವನೆ…. ಸ್ಥಳೀಯವಾಗಿ ಉಪಯೋಗಿಸುವ ಕೆಲವು ಔಷಧೋಪಚಾರ …. ಅಂತಿಮವಾಗಿ ಶಸ್ತ್ರಚಿಕಿತ್ಸೆ.

ತೊಂದರೆಗಳು:
ಗುದದ ಸೀಳು ರೋಗದಿಂದ ಆಗಬಹುದಾದ ತೊಂದರೆಗಳೆಂದರೆ –
…. ನೋವು ಮತ್ತು ಅಸ್ವಸ್ಥತೆ
…. ಮಲವಿಸರ್ಜನೆ ಸಮಯದ ಸಂಕಷ್ಟ;
ಅನೇಕರು ನೋವಿಗೆ ಭಯಪಟ್ಟು ಎಷ್ಟು ಸಾಧ್ಯವೋ ಅಷ್ಟು ಬಾತ್ ರೂಮಿನತ್ತ ಹೋಗುವುದನ್ನೆ ತಡೆಹಿಡಿಯುವರು
…. ಚಿಕಿತ್ಸೆಯ ನಂತರ ಸಹ ರೋಗ ಮರುಕಳಿಸುವ ಸಾಧ್ಯತೆ
…. ರಕ್ತ ಹೆಪ್ಪುಗಟ್ಟುವುದು
…. ಹಿಡಿತ ತಪ್ಪಿದ ಮಲವಿಸರ್ಜನೆ ಮತ್ತು ಉದರದೊಳಗೆ ವಾಯು ಮುಂತಾಗಿ.

ಗುದದ ಬಿರುಕು ರೋಗಿಯ ಜೀವನ:ಗುದದ ಸೀಳು ರೋಗೀಗಳು ಕೆಳಗೆ ತಿಳಿಸಿರುವ ಕೆಲವು ಮುನ್ನೆಚ್ಚರಿಕೆಗಳಿಂದ ಆ ರೋಗ ಉಲ್ಬಣವಾಗದ ಹಾಗೆ ಮತ್ತು ಆಗಾಗ ಮರುಕಳಿಸದ ಹಾಗೆ ತಡೆಗಟ್ಟಿ ನೆಮ್ಮದಿಯಿಂದ ಜೀವಿಸಬಹುದು. …. ವೈದ್ಯರ ಸಲಹೆಯ ಎಲ್ಲ ಔಷಧಗಳ ನಿಯಮಿತ ಉಪಯೋಗ…. ಮಲಬದ್ಧತೆ ತಡೆಗಟ್ಟುವ ಕ್ರಮಗಳು ಮತ್ತು ಮಲದ ಪ್ರಮಾಣ ಅಧಿಕ ದಪ್ಪ ಮತ್ತು ಗಡುಸು ಕೂಡ ಆಗದ ಹಾಗೆ ಎಚ್ಚರಿಕೆ…. ಸಾಕಷ್ಟು ನೀರಿನ ಸೇವನೆ…. ನಿಯಮಿತ ಮಲವಿಸರ್ಜನೆಯ ರೂಢಿ…. ಮಸಾಲೆಯುಕ್ತ ಆಹಾರ ಕಡಿಮೆ ಉಪಯೋಗ ಮುಂತಾದ ಕ್ರಮಗಳಿಂದ ಗುದದ ಸೀಳು ರೋಗದ ತಹಬಂದು ಸಾಧ್ಯ.

ಮೇಲಾಗಿ ಶಸ್ತ್ರಚಿಕಿತ್ಸೆಯ ನಂತರ ಸಹ ಅದು ಮತ್ತೆಮತ್ತೆ ಮರುಕಳಿಸುವ ಸಾಧ್ಯತೆ ಇಲ್ಲವೆ ಇಲ್ಲ ಎನ್ನಲು ಸಾಧ್ಯವಿಲ್ಲ; ಏಕೆಂದರೆ, ಮಲವಿಸರ್ಜನೆಯ ಪ್ರಕ್ರಿಯೆ ದಿನನಿತ್ಯದ ಕಾರ್ಯ ಆದುದರಿಂದ, ಎಂದೂ ಮುಲುಕುವುದೆ ಇಲ್ಲ ಎಂದಾಗಲಿ ಅಥವ ಎಂದಿಗೂ ಮಲಬದ್ಧತೆ ಬರದ ಹಾಗೆ ತಡೆಗಟ್ಟುವಂತಹ ಪ್ರತಿಜ್ಞೆಗಳನ್ನು ಯಾರು ಸಹ ಕೈಗೊಳ್ಳುವುದು ಅಸಾಧ್ಯ. ಹಾಗಾಗಿ ನನ್ನ ಅನುಭವದಲ್ಲಿ ಇಂತಹ ರೋಗಗಳು ಬರದ ಹಾಗೆ ತಡೆಗಟ್ಟುವ ಪ್ರಯತ್ನ ಖಂಡಿತ ಮಾಡಬೇಕು ಹಾಗೂ ರೋಗ ಬಂದ ನಂತರ ಅದನ್ನು ಮೇಲೆ ತಿಳಿಸಿಕೊಟ್ಟ ಅನೇಕ ರೀತಿಗಳ ಅಳವಡಿಕೆಯಿಂದ ಉಲ್ಬಣವಾಗದಂತೆ ತಡೆಗಟ್ಟಬಹುದು ಮತ್ತು ಅನಂತ ಕಾಲ ಶಸ್ತ್ರಚಿಕಿತ್ಸೆ ರಹಿತ ಬದುಕನ್ನು ಬಾಳಿ ತೋರಿಸಬಹುದು!.

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459

Related post

Leave a Reply

Your email address will not be published. Required fields are marked *