ಪ್ರಾಚೀನ ಕಟ್ಟೆಯ ಅರಳೀ ಮರ

ಪ್ರಾಚೀನ ಕಟ್ಟೆಯ ಅರಳೀ ಮರ

ಹಳ್ಳಿಗಳಲ್ಲಿನ ಕೆರೆ ಕಟ್ಟೆಗಳ ಪಕ್ಕದಲ್ಲಿ ಅಥವಾ ದೇವಸ್ಥಾನಗಳ ಸಮೀಪದಲ್ಲಿ ಸುಲಭವಾಗಿ ಕಾಣಸಿಗುವ, ಪ್ರತೀ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಇದ್ದೇ ಇರುವಂತಹ ಮರ ಅರಳಿಮರ ಅಥವಾ ಅಶ್ವತ್ಥ ಮರ.

ಬೆಂಗಳೂರಿನ ಹಳೇ ವಸತಿ ಪ್ರದೇಶಗಳಾದ ಬಸವನಗುಡಿಯ ಗುಟ್ಟಳ್ಳಿ, ರಾಜಾಜಿನಗರದ ಶಿವನಹಳ್ಳಿ, ಮಲ್ಲೇಶ್ವರಂ, ಚಾಮರಾಜಪೇಟೆ, ಹಳೇ ಮೈಸೂರಿನ ವಿದ್ಯಾರಣ್ಯಪುರಂ, ಚಾಮುಂಡಿಪುರಂ ಮತ್ತೂ ನಮ್ಮ ಇತರೇ ನಗರಗಳಲ್ಲಿ ಈಗಲೂ ಸಹ ನಮ್ಮ ಬಾಲ್ಯವನ್ನು ಹಾಗು ಹಿರಿಯರ ನೆನಪುಗಳನ್ನು ಸದಾ ನೆನಪಿಸಿ ಕ್ಷಣಕಾಲ ಭಾವುಕಾರಾಗಿ ಮಾಡುವ ಮರ ಎಂದರೆ ಅದು ಅರಳಿ ಮರ.

ಅರಳಿ ಅಥವಾ ಅಶ್ವತ್ಥ ಮರವು ಹಳೆಯ ನೆನಪುಗಳನ್ನಷ್ಟೇ ಅಲ್ಲದೇ ಅದು ಕೊಡುವ ಹಿತವಾದ ತಂಗಾಳಿ ನಮಗೆ ಸದಾ ಪ್ರಿಯ, ಪಕ್ಷಿಗಳಿಗೆ ಮತ್ತು ಅವುಗಳ ಮರಿಗಳಿಗೆ ಈ ಮರವು ಮುಖ್ಯ ಆಶ್ರಯದಾತ. ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಸೊಂಪಾಗಿ ಬೆಳೆದು ವಿಶಾಲವಾಗಿ ಹರಡಿ, ನೋಡುಗರಿಗೆ ತನ್ನ ಸೌಂದರ್ಯದಿಂದಲೂ ಕಣ್ಮನ ಸೆಳೆಯುವ ಅರಳಿ ಮರದ ನೆರಳಿನಲ್ಲಿ ಕೆಲ ಕ್ಷಣ ಕುಳಿತು ದಣಿವಾರಿಸಿಕೊಂಡು, ಮುಂದೆ ಸಾಗುವವರು ಹಲವರಾದರೆ, ಇನ್ನೂ ಕೆಲವರಿಗೆ ಮನೆಮಠಗಳಿದ್ದರೂ, ಇಡೀ ದಿನ ಅರಳೀ ಕಟ್ಟೆಯ ತಂಪನ್ನು ಸವಿಯುತ್ತಾ, ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ, ಕಾಲ ಕಳೆಯುವುದು, ನಿತ್ಯದ ದಿನಚರಿಯೇ ಆಗಿದೆ. ಹಾಗಾಗಿ ಇದೊಂದು ಸೋಮಾರಿ ಕಟ್ಟೆಯೂ ಹೌದು ಹಾಗು ನಮ್ಮ ಹಳ್ಳಿಗಳ ಪ್ರಾಚಿನತೆಯನ್ನು ಬಿಂಬಿಸುವ ಅಸ್ಮಿತೆಯೂ ಹೌದು. ಮತ್ತೆ ಕೆಲವರು ವ್ರತಗಳ ನೆಪದಲ್ಲಿ ಭಕ್ತಿಯಿಂದ ಮರವನ್ನು ಸುತ್ತಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡವರಿಗೆ ಅರಳಿ ಮರ ಇರುವ ಜಾಗ ಪೂಜ್ಯನೀಯ ಸ್ಥಳ.

ಅಂದಿನಿಂದಲೂ ಪರಂಪರೆಯ ಸಂಕೇತವಾಗಿರುವ ಹಾಗೂ ಧಾರ್ಮಿಕ ಕ್ಷೇತ್ರವಾಗಿಯೇ ಗುರುತಿಸಿಕೊಂಡಿರುವ ಅಶ್ವತ್ಥ ಮರವು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರನ್ನು ಪ್ರತಿನಿಧಿಸುವುದೆಂಬ ಉಲ್ಲೇಖವಿದೆ. ಅರಳಿ ಮರವನ್ನು ಪೂಜಿಸಿದರೆ, ಸಾಕ್ಷಾತ್ ವಿಷ್ಣು ಹಾಗೂ ಮಹಾಲಕ್ಷ್ಮಿಯ ಅನುಗ್ರಹ ದೊರೆಯುವುದಲ್ಲದೆ, ಅನೇಕ ರೀತಿಯ ಗ್ರಹಗತಿಗಳು ದೂರಾಗಿ, ಸಮೃದ್ಧಿ, ಸಂತೋಷಗಳು ಲಭಿಸುವುದೆಂಬ ಪ್ರತೀತಿ ಇದೆ. ಪ್ರಾಚೀನ ಕಾಲದಿಂದಲೂ ಮರಗಳನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗಿದೆ. ಅದರಲ್ಲಿ ಅರಳೀ ಮರವು ಪ್ರಮುಖವೆಂದೇ ಹೇಳಬಹುದು. ಗೌತಮ ಬುದ್ಧನು ಧ್ಯಾನಾಸಕ್ತನಾಗಿರುವಾಗ ಜ್ಞಾನೋದಯವಾದ ಬೋದಿವೃಕ್ಷವು ಇದೇ ಎಂಬ ನಂಬಿಕೆ ಬುದ್ಧ ಪುರಾಣದಲ್ಲಿ ಉಲ್ಲೇಕಿತವಾಗಿದೆ.ನಮ್ಮ ಭಾರತದ ಧರ್ಮಗ್ರಂಥಗಳಲ್ಲಿ ಭಗವಾನ್ ಶ್ರೀ ಕೃಷ್ಣನು ಬೇಡನೊಬ್ಬನ ಬಾಣವು ಅಂಗಾಲಿಗೆ ತಗುಲಿ ಕೃಷ್ಣಾವತಾರವು ಕೊನೆಗೊಂಡಿದ್ದು ಸಹ ಇದೇ ಅಶ್ವತ್ಥ ಮರದ ಕೆಳಗೆ ಎಂಬ ಮಾಹಿತಿ ಇದೆ. ಅಶ್ವತ್ಥ ಮರದ ನೆರಳು ಕಲಿಯುಗದ ಆರಂಭದ ಮುನ್ನುಡಿ ಎಂದೇ ಹೇಳಬಹುದು. ಆದ್ದರಿಂದಲೇ ಈ ಮರವು ಮತ್ತಷ್ಟು ಪಾವಿತ್ರ್ಯತೆ ಹೊತ್ತ ಪೂಜಾವೃಕ್ಷವಾಗಿದೆ.

ಆಲದ ಮರದ ಜಾತಿಯನ್ನೇ ಹೋಲುವ ಅರಳೀ ಮರವು, ಚಕ್ರವರ್ತಿ ಅಶೋಕನ ಆಳ್ವಿಕೆಯ ಕಾಲದಲ್ಲಿ ದೇಶದೆಲ್ಲೆಡೆ ನೆಡಲಾಯಿತಂತೆ. ಹಾಗಾಗಿ ಇದರ ಉಗಮ ಸ್ಥಾನ ಭಾರತವೆಂದೇ ಹೇಳಬಹುದು. ಆಗಿನಿಂದಲೂ ಈ ಮರವು ಶತಮಾನಗಳ ಕಾಲವೂ ಜೀವಂತವಾಗಿರುವ ಸಾಕ್ಷಿಗಳಿವೆ. ಅರಳಿಯ ಎಳೆಯ ಎಲೆ ತಾಮ್ರವರ್ಣದ್ದು, ಬಲಿತ ಎಲೆ ಹಸಿರು, ಹೂಗೊಂಚಲು ಹೈಪ್ಯಾಂತೋಡಿಯಂ ಮಾದರಿಯದು. ಬೆಳೆಯುವ ಆರಂಭದಲ್ಲಿ ಇದು ಅಪ್ಪುವ ಸಸ್ಯವಾಗಿದ್ದು, ಅನಂತರ ಬೆಳೆಯುತ್ತಾ ಸ್ವತಂತ್ರ ಮರವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳಿರುವ ಇದು ನಿತ್ಯಹರಿದ್ವರ್ಣದ ಮರ. ಅರಳಿ ಮರವನ್ನು ಪೀಪಲ್ ಟ್ರೀ, ಬೋಧಿ ವೃಕ್ಷ, ಅಶ್ವತ್ಥ, ಹೀಗೆ ಹಲವಾರು ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಕರೆಯುವುದುಂಟು. ವೈಜ್ಞಾನಿಕವಾಗಿ ‘ಫೈಕಸ್ ರಿಲಿಜಿಯೋಸ್’ ಎಂದು ಕರೆಯುತ್ತಾರೆ.

ಅರಳಿ ಮರದ ಎಲೆಗಳಲ್ಲಿ ಹುಲ್ಲಿಗಿಂತ ಎರಡು ಮೂರು ಪಟ್ಟು ಪ್ರೋಟೀನು ಹೆಚ್ಚಾಗಿರುವುದರಿಂದ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಬರ್ಮದಲ್ಲಿ ಇದರ ನಾರಿನಿಂದ ಕಾಗದ ತಯಾರಿಸುತ್ತಿದ್ದರಂತೆ. ಇದರ ತೊಗಟೆಯಿಂದ ಟ್ಯಾನಿನ್ ಸಹ ತೆಗೆಯುತ್ತಾರೆ. ಕೆಲವು ಪ್ರದೇಶದಲ್ಲಿ ಇದರ ಎಲೆಗಳನ್ನು ಒಂದು ಬಗೆಯ ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಾರೆ. ಇದರ ಎಲೆಗಳ ಚಿಗುರು ವಿರೇಚಕ. ತೊಗಟೆ ಬಾಯಿಹುಣ್ಣು, ಆಮಶಂಕೆ, ಮೇಹ ರೋಗಗಳಿಗೆ ದಿವ್ಯ ಔಷಧ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಸಹ ಬಳಸುವುದುಂಟು. ಅರಳಿಮರವನ್ನು ಸೌದೆಯಾಗಿ ಉಪಯೋಗಿಸುವುದಲ್ಲದೇ ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ.

ದೈವಿಕ ಹಿನ್ನೆಲೆಯ ಮಹತ್ವದಿಂದಲೋ ಏನೋ ಅಶ್ವತ್ಥ ಮರವು ಔಷಧಿಗಳ ಆಗರವೇ ಆಗಿದೆ. ಅದರ ತೊಗಟೆ, ಬೇರು, ಎಲೆ, ಮತ್ತಿತರ ಭಾಗಗಳಿಂದ ನಾನಾ ರೀತಿಯ ರೋಗಗಳು ಶಮನವಾಗುತ್ತದೆ. ಹೆಚ್ಚಿನ ಆಮ್ಲಜನಕವನ್ನು ಉತ್ಪಾದಿಸುವ ಗುಣ ಸಾಮರ್ಥ್ಯವಿರುವ ಅರಳೀ ಮರದ ಕೆಳಗೆ ಕುಳಿತು ಅದರ ನಿರ್ಮಲವಾದ ಗಾಳಿಯ ಸೇವನೆಯಿಂದಾಗಿ ಆಸ್ತಮದಂತಹ ಅನೇಕ ಉಸಿರಾಟದ ಸಮಸ್ಯೆಗಳು ಬಹುಪಾಲು ನಿವಾರಣೆಯಾಗುತ್ತದೆ. ಅದೇನೇ ಇರಲಿ ಶತಮಾನಗಳಿಂದಲೂ ಭಾರತೀಯರ ಪೂಜ್ಯ ಭಾವನೆಗೆ ಕನ್ನಡಿ ಹಿಡಿದಂತೆ ಇರುವ ಅರಳೀ ಮರವನ್ನು ಸಂರಕ್ಷಿಸುವ ಹೊಣೆ ಕೂಡ ನಮ್ಮದೇ. ಈಗಾಗಲೇ ಅನೇಕ ಮನೆಗಳ ಲೇಔಟ್ ಗಳಿಗಾಗಿ ಆಹುತಿಯಾದ ಎಷ್ಟೋ ಅರಳಿ ಮರಗಳ ಅಳಲನ್ನು ಕೇಳಿದವರಿಲ್ಲ. ಇನ್ನು ಮುಂದಾದರೂ ಇಂಥ ಹಲವು ಪುರಾತನ ಮರಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಿಸುವ ಕೆಲಸ ನಮ್ಮಿಂದಲೇ ಆಗಬೇಕಿದೆ.

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಅರಳೀಮರದ ಬಗ್ಗೆ ಎಷ್ಟು ತಿಳಿದರೂ ಕಮ್ಮಿಯೇ, ಎಲ್ಲಾ ರೀತಿಯಲ್ಲೂ ಉಪಯೋಗಕಾರಿಯಾಗಿದೆ. ಅದರ ಪ್ರಶಾಂತತೆಗೆ ಮನ ಸೊಲದವರಿಲ್ಲ. ಲೇಖನವನ್ನು ಓದಿದ ಮೇಲೊಮ್ಮೆ ಹತ್ತಿರದ ಅರಳೀಮರವನ್ನು ಸುತ್ತಿ ಬರೋಣವೆಂದು ಅನ್ನಿಸದೇ ಇರಲಾರದು. ಅಲ್ಲವೇ!!

ಶೈಲಾ
ಬೆಂಗಳೂರು

Related post

Leave a Reply

Your email address will not be published. Required fields are marked *