ಮೈನಾ ಓ ಮೈನಾ
ಪಾರಿವಾಳ, ಗಿಳಿ, ಬಾತುಕೋಳಿ ಇನ್ನೂ ಮುಂತಾದ ಪಕ್ಷಿಗಳು ಮನುಷ್ಯನ ಸ್ನೇಹಜೀವಿಗಳು. ಮನುಷ್ಯನ ಕಂಡರೆ ಭೀತಿ ಇಲ್ಲದೆ, ಆಸುಪಾಸು ಓಡಾಡಿ, ಹಾರಡಿ, ಅವ ಇಡಿದು ಪಳಗಿಸಿ ಪಂಜರದಲ್ಲಿಟ್ಟರೆ, ಸಾಕು ಪಕ್ಷಿಗಳಾಗಿ ಕೆಲವೊಮ್ಮೆ ಅವನ ಹೊಟ್ಟೆಗೆ ಆಹಾರವಾಗಿ ತನ್ನ ಜೀವಿತಾವದಿಯನ್ನು ಕಳೆಯುವುದುಂಟು. “ಮೈನಾ” ಹಕ್ಕಿ ಕೂಡ ಈ ಸ್ನೇಹಜೀವಿ ಪಕ್ಷಿಗಳ ಸಾಲಿನಲ್ಲಿ ಸೇರುತ್ತದೆ.
ಹಿಲ್ಲ್ ಮೈನಾ, ಕಾಮನ್ ಮೈನಾ ಮತ್ತು ಬಾಲಿ ಮೈನಾ ಎಂದು ಮೈನಾ ಹಕ್ಕಿಗಳನ್ನು ಪ್ರಮುಖವಾದ ಮೂರು ವಿಧದಲ್ಲಿ ವಿಂಗಡಿಸಲಾಗಿದೆ . ಹಿಲ್ಲ್ ಮೈನಾ ಮನುಷ್ಯನ ಸಾಕು ಪಕ್ಷಿಯಾದರೆ, ಕಾಮನ್ ಮೈನಾ ರೈತರ ಸ್ನೇಹಜೀವಿ, ಮೂರನೆಯ ಬಾಲಿ ಮೈನಾ ಅಳಿವಿನಂಚಿನಲ್ಲಿರುವ ಅಪರೂಪದ ಪಕ್ಷಿ. ಇಡೀ ಜಗತ್ತಿನಲ್ಲಿ ಕೇವಲ ೧೦೦ ರಿಂದ ೧೫೦ ಹಕ್ಕಿಗಳಷ್ಟು ಮಾತ್ರ ಬಾಲಿ ಮೈನಾ ಹಕ್ಕಿಗಳ ಸಂತತಿ ಇದೇ ಎಂಬುದು ದುಃಖಕರ.
ಹಿಲ್ಲ್ ಮೈನಾ: ಕೆಂಪುಮಿಶ್ರಿತ ಹಳದಿ ಕೊಕ್ಕು, ನೇರಳೆ ಮಿಶ್ರಿತ ಹೊಳೆವ ಕಪ್ಪು ಮೈ ಹಾಗು ಹಳದಿ ಕಾಲಿನ ಹಿಲ್ಲ್ ಮೈನಾ ಗಾತ್ರದಲ್ಲಿ 25 ರಿಂದ 35 ಸೆಂಟಿಮೀಟರ್ ನಷ್ಟು ಬೆಳೆಯುತ್ತವೆ. ಹಿಲ್ಲ್ ಮೈನಾ ವಿಶಿಷ್ಟತೆ ಏನೆಂದರೆ ಥೇಟ್ ಮನುಷ್ಯರ ಹಾಗೆ ಧ್ವನಿ ಅನುಕರಿಸಿ ಮಾತನಾಡುತ್ತಾದರಿಂದ ಇವು ಸಾಕು ಪಕ್ಷಿಗಳಾಗಿ ಮನುಷ್ಯನ ಪಂಜರದಲ್ಲಿ ಈಗಲೂ ಬಂದಿಗಳಾಗಿವೆ. ಮನುಷ್ಯ ಮಾತನಾಡುವ ಕನಿಷ್ಠ 100 ಪದಗಳನ್ನು ಕಲಿತು ಅನುಕರಿಸಿ ಮಾತನಾಡುತ್ತವೆ. ಇವು ಜಗತ್ತಿನಲ್ಲೇ ಅತ್ಯುತ್ತಮ ಮಾತನಾಡುವ ಹಕ್ಕಿಗಳು ಎಂದೇ ಪ್ರಸಿದ್ದಿಯಾಗಿವೆ. ಪುರಾತನ ಗ್ರೀಸ್ ನಲ್ಲಿ ಇವುಗಳು ಶ್ರೀಮಂತರ ಸಾಕು ಪಕ್ಷಿ ಎಂದೇ ಹೆಸರಾಗಿತ್ತು.
ಕಾಮನ್ ಮೈನಾ : ಇಂಡಿಯನ್ ಮೈನಾ ಎಂದೇ ಹೆಸರುವಾಸಿಯಾದ ಇವುಗಳ ಮೈ ಬಣ್ಣ ಕಂದು, ಕೊಕ್ಕು ಹಾಗು ಕಾಲುಗಳು ಹಳದಿ ಬಣ್ಣದಿಂದ ಕೂಡಿದೆ. ಕಾಮನ್ ಮೈನಾ ಕೀಟ ನಿಯಂತ್ರಣಕ್ಕೆ ಪ್ರಸಿದ್ದಿಯಾಗಿದೆ. ಬಹಳ ಹಿಂದೆ ಏಷ್ಯಾ ಖಂಡದ ದಟ್ಟ ಕಾಡಿನಲ್ಲಿ ಮಾತ್ರ ವಾಸಿಸುತ್ತಿದ್ದ ಇವುಗಳನ್ನು 1860 ರಲ್ಲಿ ಕೀಟಗಳ ಹಾವಳಿಯಿಂದ ಬೆಳೆ ಕೈಗೆಟುಕದೆ ಪರದಾಡುತ್ತಿದ್ದ ಆಸ್ಟ್ರೇಲಿಯಾ ದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಪರಿಚಯಿಸಲಾಯಿತು. ಯಾವುದೇ ಬಗೆಯ ಕೀಟಗಳನ್ನು ಹೆಕ್ಕಿ ಹೆಕ್ಕಿ ತಿನ್ನುವ ಇವುಗಳನ್ನು ಪರಿಚಯಿಸಿದ್ದು ಆಸ್ಟ್ರೇಲಿಯಾ ಖಂಡಕ್ಕೆ ವರದಾನವಾಯಿತು. ಅಲ್ಲಿನ ಕ್ವೀನ್ಸ್ ಲ್ಯಾಂಡ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕಬ್ಬು ಮತ್ತು ಇತರೆ ಪ್ರಮುಖ ಬೆಳೆಗಳನ್ನು ಬಹುವಾಗಿ ಆಕ್ರಮಿಸಿದ್ದ ಕೀಟಗಳನ್ನು ಮೈನಾ ಹಕ್ಕಿಗಳು ಭಕ್ಷಿಸಿ ಬಹುತೇಕ ನಿಯಂತ್ರಣಕ್ಕೆ ತಂದವು. ಕ್ರಮೇಣ ಆಸ್ಟ್ರೇಲಿಯಾ ತನ್ನ ಇತರೆ ಪ್ರದೇಶಗಳಲ್ಲಿ ಇವುಗಳನ್ನು ಪರಿಚಯಿಸಿದ್ದರಿಂದ ಈಗ ಕಾಮನ್ ಮೈನಾ ಅಲ್ಲಿನ ಪ್ರಮುಖ ಪಕ್ಷಿಗಳಲ್ಲೊಂದಾಗಿದೆ. ಆಸ್ಟ್ರೇಲಿಯಾ ಅಷ್ಟೇ ಅಲ್ಲದೇ ನಂತರ ಇವುಗಳನ್ನು ಕೆನಡಾ, ನ್ಯೂಜಿಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ನ ದಕ್ಷಿಣ ಫ್ಲೋರಿಡ ಇನ್ನೂ ಮುಂತಾದ ರಾಷ್ಟ್ರಗಳಲ್ಲಿ ಕೀಟಗಳ ಹಾವಳಿಯನ್ನು ನಿಯಂತ್ರಿಸಲು ಪರಿಚಯಿಸಲಾಯಿತು.
ಬಾಲಿ ಮೈನಾ : ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ಮಾತ್ರ ಕಾಣಸಿಗುವ ಈ ಮೈನಾ ಇತರೆ ಮೈನಾಗಳಿಗಿಂತ ವಿಭಿನ್ನ. ಮೈ ಬಣ್ಣ ಸಂಪೂರ್ಣ ಬಿಳಿ, ಕಪ್ಪು ಕಣ್ಣಿನ ಸುತ್ತ ನೀಲಿ ಬಣ್ಣ ಇದೊಂದು ಸುಂದರವಾದ ಅಪರೂಪದ ಹಕ್ಕಿಯೆಂದೇ ಹೇಳಬಹುದು. 1912 ರಲ್ಲಿ ಜರ್ಮನ್ ಪಕ್ಷಿತಜ್ಞ “ಎರ್ವಿನ್ ಸ್ಟ್ರೆಸ್ಮನ್” ರಿಂದ ಈ ಅಪರೂಪದ ಹಕ್ಕಿಯ ಸಂತತಿ ಬೆಳಕಿಗೆ ಬಂತು.
ಮಿಕ್ಕ ಮೈನಾಗಳ ಹಾಗೆ ಇದೂ ಕೂಡ ಮಾತನಾಡುವ ಹಕ್ಕಿ ಆದ್ದರಿಂದಲೇ ಬಾಲಿ ದ್ವೀಪದಿಂದ ಇವುಗಳನ್ನು ಅಪಹರಿಸಿ ಪಂಜರದಲ್ಲಿ ಸಾಕಲು ಶುರುವಾಯಿತು. ಆಗ ಇವುಗಳ ಸಂತತಿ ಬಹುತೇಕ ಕ್ಷೀಣಿಸಿ ಬೆರಳೆಣಿಕೆಯಷ್ಟು ಹಕ್ಕಿಗಳು ಮಾತ್ರ ಉಳಿದಾಗ ಅಲ್ಲಿನ ಸರ್ಕಾರ ಹೆಚ್ಚೆತ್ತುಕೊಂಡು ಅನೇಕ ಯೋಜನೆಗಳನ್ನು ತಂದ ಪರಿಣಾಮ ಈಗಿನ ಇವುಗಳ ಸಂಖ್ಯೆ ನೂರರವರೆಗೆ ಮತ್ತೆ ಬೆಳೆದಿದೆ.
ಮೈನಾ ಎಂಬ ಹೆಸರು ನಮ್ಮ ಹಿಂದಿ ಹಾಗು ಸಂಸ್ಕೃತ ಭಾಷೆಯಿಂದ ಪ್ರಚಲಿತವಾದದ್ದು. ಮೈನಾ ಎಂಬ ಹೆಸರಷ್ಟೇ ಅಲ್ಲದೇ ನಮ್ಮ ಭಾರತೀಯ ಸಾಹಿತ್ಯದಲ್ಲಿ ಇವುಗಳನ್ನು ಕಲಹಪ್ರಿಯಾ, ಚಿತ್ರನೇತ್ರ, ಪೀತನೇತ್ರ, ಪೀತಪಾದ ಎಂದು ಹೆಸರಿಸಲಾಗಿದೆ.
ಈ ಮೂರೂ ಬಗೆಯ ಮೈನಾಗಳಲ್ಲಿ ಬಹಳಷ್ಟು ಉಪಜಾತಿಯ ಹಕ್ಕಿಗಳಿವೆ. ಬ್ಯಾಂಕ್ ಮೈನಾ, ಬ್ರಾಹ್ಮಿನಿ ಮೈನಾ, ಜಂಗಲ್ ಮೈನಾ ಇನ್ನೂ ಬಹಳಷ್ಟು, ಆದರೆ ಇವೆಲ್ಲವುಗಳ ಚಹರೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯ ಹೊರತು ಮಿಕ್ಕೆಲ್ಲ ಬಹಳಷ್ಟು ಕಾಮನ್ ಮೈನಾಗಳನ್ನೇ ಹೋಲುತ್ತವೆ.
ಚಂದ್ರಶೇಖರ್ ಕುಲಗಾಣ