ಗುಡ್ಡೆಟ್ಟು ಗಣಪತಿ ಕ್ಷೇತ್ರ
ಕುಂದಾಪುರ ತಾಲೂಕಿನ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಗುಡ್ಡೆಟ್ಟು ಗಣಪತಿ ಕ್ಷೇತ್ರವು ಒಂದು. ಬ್ರಹ್ಮಾವರ, ಬಾರಕೂರು, ಸಾಯಬ್ರ ಕಟ್ಟೆ, ಮೆಕ್ಕೆಕಟ್ಟು ದಾಟಿ ಹಾಲಾಡಿ ಕಡೆಗೆ ಸಾಗುವಾಗ ಗುಡ್ಡೆಟ್ಟು ಕ್ಷೇತ್ರ ಇದೆ. ಇಲ್ಲಿ ಗಣಪತಿಯು ಸ್ವಯಂಭುವಾಗಿದ್ದು ಸದಾ ನೀರಿನೊಳಗೆ ಇರುತ್ತಾನೆ. ನೀರಿನ ಮೂಲಕವೇ ಆತನ ದರ್ಶನ ಮಾಡಬೇಕು. ದಿನಕ್ಕೆರಡು ಬಾರಿ ಸಂಪೂರ್ಣ ನೀರನ್ನು ಹೊರತೆಗೆದು ಸ್ವಾಮಿಗೆ ಅಲಂಕಾರ ಮತ್ತು ಮಂಗಳಾರತಿ ಮಾಡುತ್ತಾರೆ.
ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು, ತ್ರಿಪುರಾಸುರ ರಾಕ್ಷಸನನ್ನು ಕೊಲ್ಲಲು ಯುದ್ದಕ್ಕೆ ಹೊರಡುವ ಮುನ್ನ , ಪರಮೇಶ್ವರ ಆದಿಯಲ್ಲಿ ಗಣಪನನ್ನು ಪೂಜಿಸದೇ ಯುದ್ದ ಆರಂಭಿಸಿದ್ದಕ್ಕಾಗಿ ರಾಕ್ಷಸನಿಂದ ಸೋಲುಂಟಾಗುತ್ತದೆಯಂತೆ.. ತನಗೆ ಸೋಲಾಗಲು ಗಣಪತಿ ಕಾರಣನೆಂದು, ಕೋಪಗೊಂಡ ಶಿವನು, ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ.. ಆಗ ತ್ರಿಶೂಲದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಗಣಪತಿಯು ಜೇನು ತುಂಬಿದ ಕೊಳದಲ್ಲಿ ಬೀಳುತ್ತಾನೆ.. ಮತ್ತು ಅಲ್ಲಿ ಸಾಕಷ್ಟು ಜೇನುತಿಂದ ಖುಷಿಯಲ್ಲಿ, ಶಿವನಿಗೆ ಜಯವಾಗಲೆಂದು ಹಾರೈಸುತ್ತಾನೆ..
ಶಿವ ತ್ರಿಪುರಾಸುರನನ್ನು ಸಂಹರಿಸಿ, ಕೈಲಾಸಕ್ಕೆ ಮರಳುತ್ತಾನೆ..
ಆದರೆ ಜೇನು ಹೆಚ್ಚಾಗಿ ತಿಂದ ಕಾರಣ ಗಣಪತಿಯ ಮೈಯಲ್ಲಿ ಅಸಾಧ್ಯವಾದ ಪಿತ್ತವಾಗಿ ನರಳವುದನ್ನು ಕಂಡ ಶಿವಪಾರ್ವತಿಯರು, ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ, ಅದರಂತೆ ಗಣಪತಿಯು ಈ ದೇವಸ್ಥಾದಲ್ಲಿ ಬಂದು ನೆಲೆಸುತ್ತಾನೆ..
ಹತ್ತಿರದಲ್ಲೇ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಸೇರುತ್ತದೆ.. ಅದೇ ನೀರಿನಲ್ಲಿ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡ ನೀರು ಬಾವಿಯಿಂದ ತುಂಬಿಕೊಂಡು ಅಭಿಷೇಕ ನಿರಂತರವಾಗಿ ಜರಗುತ್ತಿದ್ದರೆ ಮಾತ್ರ ಗಣಪತಿ ಸ್ವಾಮಿಯ ಮೈಉರಿ ಶಮನವಾಗುತ್ತದೆಯಂತೆ ಎಂದು ಅಲ್ಲಿನ ಅರ್ಚಕರು ಸ್ಥಳ ಮಹಿಮೆಯನ್ನು ತಿಳಿಸಿದರು..
ಇಲ್ಲಿರುವ ಗಣಪತಿ ಬಲಮುರಿ ಗಣಪತಿ ಯಾಗಿದ್ದು ನಂಬಿ ಬರುವ , ಸೇವೆಗೈಯುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆ..
ಹೀಗಾಗಿ ಇಲ್ಲಿನ ಗಣಪನಿಗೆ ಪ್ರತಿದಿನವೂ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಆಯಿರಕೊಡ ಸೇವೆ ಎಂಬ ಹೆಸರಿನಿಂದ ಸುಮಾರು ಸಾವಿರ ಕೊಡಗಳಷ್ಟು ನೀರನ್ನು ಬಾವಿಯಿಂದ ಮೋಟಾರ್ ಬಳಸದೇ, ಅಥವಾ ಹಗ್ಗದಿಂದ ಸೇದದೇ ಬಾವಿಯೊಳಗೆ ಸಾಲಾಗಿ ಯುವಕರು ನಿಂತು ಕೊಡಗಳಲ್ಲಿ ನೀರು ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರ ಮಾಡುತ್ತಾ ಗರ್ಭಗುಡಿಯಲ್ಲಿನ ಗಣಪನಿಗೆ ಅಭಿಷೇಕ ಮಾಡುತ್ತಾರೆ. ಗಣಪತಿಯು ನಿಧಾನವಾಗಿ ನೀರಿನೊಳಗೆ ಸೇರಿಕೊಳ್ಳುತ್ತಾನೆ. ( ಈ ಸೇವೆಗೆ ಸುಮಾರು ಹತ್ತು ವರ್ಷಗಳ ಕಾಯುವಿಕೆ ಇದೆ ) ಇಲ್ಲಿ ಪ್ರತಿದಿನವೂ ಭೋಜನ ಪ್ರಸಾದದ ವ್ಯವಸ್ಥೆ ಇದ್ದು ಅದ್ಭುತ ಭೋಜನ ಇರುತ್ತದೆ.
ಸಿ. ಎನ್. ಮಹೇಶ್