ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ…
ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ (ರಿ ) ಅಮೀನಗಡ ಹಾಗೂ ಬರಹವೇ ಶಕ್ತಿ ವೇದಿಕೆಯ ವತಿಯಿಂದ ಹುನಗುಂದ ತಾಲೂಕಿನ ಐಹೊಳೆಯಲ್ಲಿ ದಿನಾಂಕ 07-07-2024 ರವಿವಾರ ದಂದು ನಡೆಯುತ್ತಿರುವ ಪ್ರಥಮ ಚಾಲುಕ್ಯ ಸಾಹಿತ್ಯ ಸಮ್ಮೇಳನ ಹಾಗೂ ಬಹು ಭಾಷಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಚವಾಣ್ ರವರು ಪತ್ರಿಕಾಗೋಷ್ಠಿಗೆ ತಿಳಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ನಿವಾಸಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಉದಯೋನ್ಮುಖ ಕವಿ, ಶಿಕ್ಷಕರಾಗಿರುವ ಶ್ರೀ ಮುತ್ತು ಯ. ವಡ್ಡರ ರವರು ಹಲವಾರು ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರ ಕನ್ನಡ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಪ್ರಥಮ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾಗಿರುವ ಚಂದ್ರಕಾಂತ ಚವಾಣ್ ಹಾಗೂ ರಾಜ್ಯಾಧ್ಯಕ್ಷರಾಗಿರುವ ಎಚ್ ವೈ ರಾಠೋಡ್ ರವರು ತಿಳಿಸಿದ್ದಾರೆ.
ಶ್ರೀ ಮುತ್ತು ಯ. ವಡ್ಡರ ರವರು ಶಿಕ್ಷಕ ವೃತ್ತಿಯ ಜೊತೆಗೆ ಕಥೆ ಕವನ ಲೇಖನಗಳು ಸೇರಿ ಸಾಹಿತ್ಯದ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿರುವರು. ನಾಡಿನ 50 ಜನ ಸಾಧಕರ ಪರಿಚಯವಿರುವ ಎಲೆ ಮರೆ ಕಾಯಿಗಳು ಎಂಬ ಪುಸ್ತಕವನ್ನು ಇತ್ತೀಚೆಗೆ ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದಾರೆ. 2023-24 ರ ಹುನಗುಂದ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರು ಪ್ರತಿನಿತ್ಯ 4000 ಕ್ಕೂ ಹೆಚ್ಚು ಜನರಿರುವ ಜ್ಞಾನಜ್ಯೋತಿ ದಿನಂಪ್ರತಿ ಎಂಬ ವ್ಯಾಟ್ಸಪ್ ಬಳಗದಲ್ಲಿ ದಿನವೂ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಕವನಗಳು ಚುಟುಕುಗಳು ಹೈಕುಗಳು ತನಗಗಳು ರೂಬಾಯಿಗಳು ಸಣ್ಣ ಕಥೆಗಳ ಜೊತೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಕೂಡ ಬರೆದು ಪ್ರಕಟಿಸಿದ್ದಾರೆ.
ಇದುವರೆಗೂ ಸುಮಾರು 15 ರಿಂದ 16 ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಇವರ ಕನ್ನಡ ಸಾಹಿತ್ಯ ಸೇವೆ ಹೀಗೆ ಇರಲೆಂದು ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ ಹಾಗೂ ಬರಹವೇ ಶಕ್ತಿ ವೇದಿಕೆಯಿಂದ ಹಾರೈಸಿದ್ದಾರೆ. ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಇವರಿಗೆ ಸಮಸ್ತ ಶಿಕ್ಷಕ ಬಳಗ ಕುಟುಂಬ ವರ್ಗ ಹಾಗೂ ಸ್ನೇಹ ಬಳಗ ಮತ್ತು ಊರಿನ ಗಣ್ಯಮಾನ್ಯರು ಪ್ರೋತ್ಸಾಹದ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯಮೈತ್ರಿ ತಂಡ