ಜಾತ್ರೆಯ ಮೂರು ಗೊಂಬೆಗಳು
ಒಂದು ಊರಿನ ಜಾತ್ರೆಯು ವಿಜೃಂಭಣೆಯಿಂದ ನಡೆದಿತ್ತು. ಜಾತ್ರೆಯಲ್ಲಿ ಇಡೀ ಊರಿಗೆ ಊರೇ ಸೇರಿತ್ತು. ವೈವಿಧ್ಯಮಯ ಅಂಗಡಿಗಳು, ಹೋಟೆಲ್ಗಳ ಹಬ್ಬವೇ ಅಲ್ಲಿತ್ತು. ಜಾತ್ರೆಗೆ ಒಬ್ಬ ಒಬ್ಬ ರೈತ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದ. ಜಾತ್ರೆಯಲ್ಲಿ ಮಗಳಿಗೆ ತಿಂಡಿ ತಿನಿಸು, ಬಟ್ಟೆಬರೆ, ಪುಸ್ತಕಗಳನ್ನು ಕೊಡಿಸಿ ಮನೆಗೆ ಹೊರಡುತ್ತಾನೆ. ಹೀಗೆ ಮನೆಗೆ ಹೋಗುತ್ತಿರಬೇಕಾದರೆ ಅಲ್ಲಿನ ಗೊಂಬೆಗಳ ಮಳಿಗೆಯ ಮುಂಭಾಗಕ್ಕೆ ಮಗಳೊಂದಿಗೆ ಬರುತ್ತಾನೆ.
ಗೊಂಬೆಯ ಅಂಗಡಿಯಲ್ಲಿದ್ದ ಸುಂದರವಾದ ಗೊಂಬೆಗಳನ್ನು ನೋಡಿ ರೈತನ ಮಗಳು ತನಗೆ ಗೊಂಬೆ ಬೇಕು ಎಂದು ಹಠ ಹಿಡಿಯುತ್ತಾಳೆ. ಮಗಳ ಹಠಕ್ಕೆ ಸೋತ ತಂದೆಯು ಗೊಂಬೆ ಖರೀದಿಸಲು ಗೊಂಬೆಯ ಅಂಗಡಿಯೊಳಕ್ಕೆ ಮಗಳನ್ನು ಕರೆದೊಯ್ಯುತ್ತಾನೆ. ವಿವಿಧ ಗಾತ್ರದ, ವಿವಿಧ ರೂಪದ ಹಲವಾರು ಗೊಂಬೆಗಳನ್ನು ಅಲ್ಲಿ ನೇತು ಹಾಕಲಾಗಿತ್ತು. ಗೊಂಬೆಗಳನ್ನು ನೋಡಿ ಗೊಂದಲಕ್ಕೊಳಗಾಗಿ ಯಾವುದನ್ನು ಖರೀದಿಸಲಿ ಎಂದು ಯೋಚಿಸುತ್ತಾನೆ. ತಂದೆಯು ಅಂಗಡಿಯವನಲ್ಲಿ ಅಂಗಡಿಯಲ್ಲಿ ಜೋಡಿಸಿಟ್ಟಿದ್ದ ವಿವಿಧ ಗೊಂಬೆಗಳ ದರವನ್ನು ವಿಚಾರಿಸುತ್ತಾನೆ. ಮೊದಲನೆಯ ಗೊಂಬೆಯನ್ನು ತೋರಿಸಿ ಅದರ ದರ ಎಷ್ಟು ಎಂದು ಕೇಳುತ್ತಾನೆ. ಆಗ ಅಂಗಡಿಯಾತ ಅದರ ದರ ಐವತ್ತು ರೂಪಾಯಿ ಎಂದು ತಿಳಿಸುತ್ತಾನೆ. ಅದಕ್ಕೆ ತಂದೆಯು ಐವತ್ತು ರೂಪಾಯಿ ದರವೇನೋ ಸರಿ ಆದರೆ ಆ ಗೊಂಬೆಯ ವಿಶೇಷತೆ ಏನು ಎಂದು ಅಂಗಡಿಯವನಿಗೆ ಮರುಪ್ರಶ್ನೆಯನ್ನು ಹಾಕುತ್ತಾನೆ. ಆಗ ಅಂಗಡಿಯವನು ಈ ಗೊಂಬೆಯ ಎಡ ಕಿವಿಯಲ್ಲಿ ನೀರನ್ನು ಹಾಕಿದರೆ ಅದು ಬಲಗಿವಿಯಲ್ಲಿ ಹೊರಕ್ಕೆ ಬರುತ್ತದೆ ಎನ್ನುತ್ತಾನೆ.
ಸರಿ ಎಂದು ಕುತೂಹಲದಿಂದ ತಂದೆಯು ಇನ್ನೊಂದು ಗೊಂಬೆಯನ್ನು ತೋರಿಸಿ ಅದರ ದರ ಎಷ್ಟೆಂದು ಕೇಳುತ್ತಾನೆ. ಆಗ ಅಂಗಡಿಯಾತ ಅದರ ದರ ಎಪ್ಪತೈದು ರೂಪಾಯಿ ಎನ್ನುತ್ತಾನೆ. ಆಗ ತಂದೆಯು ಎರಡೂ ಗೊಂಬೆಗಳು ನೋಡಲು ಒಂದೇ ರೀತಿ ಇವೆ, ಎಪ್ಪತೈದು ರೂಪಾಯಿಯ ಗೊಂಬೆಯಲ್ಲಿ ಅಂತಹ ವಿಶೇಷತೆ ಏನಿದೆ ಎಂದು ಅಂಗಡಿಯಾತನನ್ನು ಪ್ರಶ್ನಿಸುತ್ತಾನೆ. ಆಗ ಅಂಗಡಿಯವನು ಈ ಗೊಂಬೆಯ ಎರಡೂ ಕಿವಿಯಲ್ಲಿ ನೀರನ್ನು ಹಾಕಿದರೆ ಅದು ಗೊಂಬೆಯ ಹೊಟ್ಟೆಯ ಒಳಗಡೆ ಶೇಖರಣೆಯಾಗುತ್ತಾ ಹೋಗುತ್ತದೆ ಎನ್ನುತ್ತಾನೆ. ಪರವಾಗಿಲ್ವೇ ಎಂದು ಯೋಚಿಸಿ ತಂದೆಯು ಮತ್ತೊಂದು ಗೊಂಬೆಯನ್ನು ತೋರಿಸಿ ಅದರ ದರ ಎಷ್ಟೆಂದು ಪ್ರಶ್ನಿಸುತ್ತಾನೆ. ಅದಕ್ಕೆ ಅಂಗಡಿಯವನು ಈ ಗೊಂಬೆಯ ದರ ನೂರು ರೂಪಾಯಿಗಳು ಎನ್ನುತ್ತಾನೆ. ತಂದೆಯು ಹಾಗಾದರೆ ಈ ಗೊಂಬೆಯ ವಿಶೇಷತೆ ಏನು ಎಂದು ಮರುಪ್ರಶ್ನೆಯನ್ನು ಹಾಕುತ್ತಾನೆ. ಆಗ ಈ ಗೊಂಬೆಯ ಎರಡೂ ಕಿವಿಗಳಲ್ಲಿ ನೀರನ್ನು ಹಾಕಿದರೆ ಅದು ಬಾಯಿಯ ಮೂಲಕ ಹೊರಗೆ ಬರುತ್ತದೆ. ಎಂದು ಅಂಗಡಿಯವ ಹೇಳುತ್ತಾನೆ.
ಸಮಾಜದಲ್ಲಿ ಈ ಮೂರು ಗೊಂಬೆಗಳ ರೀತಿಯ ಮನಸ್ಥಿತಿಯ ವ್ಯಕ್ತಿಗಳಿರುತ್ತಾರೆ. ಮೊದಲನೇ ಗೊಂಬೆಯ ರೀತಿಯ ವ್ಯಕ್ತಿಗಳು ತಾವು ಎಡಗಿವಿಯಿಂದ ಕೇಳಿದ್ದನ್ನು ಬಲ ಕಿವಿಯಿಂದ ಬಿಟ್ಟು ಬಿಡುತ್ತಾರೆ. ಎರಡನೇ ಗೊಂಬೆಯ ರೀತಿಯ ಮನಸ್ಥಿತಿಯ ವ್ಯಕ್ತಿಗಳು ತಮ್ಮ ಎರಡೂ ಕಿವಿಗಳನ್ನು ಕೇಳಿದ್ದನ್ನು ಕೇಳಿಯೂ ಕೇಳದಂತೆ ನಟಿಸಿ ಸುಮ್ಮನಿದ್ದು ಬಿಡುತ್ತಾರೆ. ಮೂರನೇ ಗೊಂಬೆಯ ರೀತಿಯ ವ್ಯಕ್ತಿತ್ವದ ವ್ಯಕ್ತಿಗಳು ಎರಡೂ ಕಿವಿಗಳಿಂದ ಕೇಳಿದಂತಹ ವಿಚಾರಗಳನ್ನು ತಾನು ಚೆನ್ನಾಗಿ ಅರ್ಥ ಮಾಡಿಕೊಂಡು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉಳಿದವರಿಗೂ ಹಂಚಿ ಅವರ ಜೀವನದಲ್ಲೂ ಪರಿವರ್ತನೆಯನ್ನು ತರಲು ಸಾಧ್ಯವಾದಷ್ಟು ಸಹಾಯವನ್ನು ಮಾಡುತ್ತಾರೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160