ಅಂತರಗಂಗೆ
“ರತ್ನಾಕರ ನೋಡು, ಪಕ್ಕದ ಮನೆಗೆ ಬಾಡಿಗೆಗೆ ಬಂದವರಿಗೆ ರೀತಿ, ರಿವಾಜು, ಮಡಿ, ಮೈಲಿಗೆ ಒಂದೂ ಇಲ್ಲ, ಹೇಸಿಗೆ ಆಗುತ್ತದಪ್ಪ”.
“ಅಮ್ಮ, ಅದು ಎಷ್ಟಾದರೂ ಪಕ್ಕದ ಮನೆ, ನಾವೇ ಸ್ವಲ್ಪ ಅಡ್ಜೆಸ್ಟ ಮಾಡ್ಕೊಬೇಕು. ನಿನ್ನಿಷ್ಟದಂತೆ ಆಮರನಾಥ್ ಯಾತ್ರೆಗೆ ಟಿಕೆಟ್ ಬುಕ್ ಮಾಡಿದ್ದೀನಿ”
ರತ್ನಾಕರ, ಹೆಂಡತಿ ಸುಜಾತ ಮತ್ತು 74 ವರ್ಷದ ತಾಯಿ ವಿಶಾಲಮ್ಮ ಆಮರನಾಥ್ ಯಾತ್ರೆಗೆ ಹೊರಟರು, ಹೋಟೆಲಿನ ಊಟ ಮಾಡದ ವಿಶಾಲಮ್ಮನಿಗಾಗಿ ಚಪಾತಿ, ಶೇಂಗ ಚಟ್ನಿ ಕಟ್ಟಿಕೊಂಡರು. ಬೆಂಗಳೂರಿನಿಂದ ಕಾಶ್ಮೀರದ ಪೆಹಲ್ಗಾಂವರೆಗಿನ ಯಾತ್ರೆ ಯಾವ ತೊಂದರೆಯೂ ಇಲ್ಲದೆ ಸಾಗಿತು, ಅಲ್ಲಿಂದ ಮುಂದೆ ಹೆಲಿಕಾಪ್ಟರಿನಲ್ಲಿ ಸಾಗಬೇಕಿತ್ತು. ಆದರೆ ಅಚಾನಕ ಆಗಿ ಹವಾಮಾನ ಹದಗೆಟ್ಟು ಹೆಲಿಕಾಪ್ಟರ್ ಸಂಚಾರ ಬಂದಾಯಿತು, ಅಲ್ಲಿರುವ ಹೋಟೆಲುಗಳೂ ಭರ್ತಿಯಾದವು.
ಡೋಲಿ ಹೋರುವ ಅಶ್ರಫನೆಂದ “ಸಾಬ್, ನನ್ನದೊಂದು ಚಿಕ್ಕ ಮನೆ ಇದೆ, ಅಲ್ಲಿರಬಹುದು”, ಆದರೆ ಅಮ್ಮ ಒಪ್ಪಿಯಾಳೇ? “ಅಮ್ಮ ಒಂದೆರಡು ದಿನಗಳ ಮಟ್ಟಿಗೆ ಅಶ್ರಫನ ಮನೆಯಲ್ಲಿರೋಣ, ಅಷ್ಟರಲ್ಲಿ ಹೆಲಿಕಾಪ್ಟರ್ ಸಂಚಾರ ಪುನಃ ಶುರುವಾಗಬಹುದು”, ವಿಶಾಲಮ್ಮನಿಗೆ ಇಷ್ಟವಾಗದಿದ್ದರೂ ದೇವರು ಪರೀಕ್ಷಿಸುತ್ತಿದ್ದಾನೆ, ಎರಡು ದಿನದ ಮಟ್ಟಿಗೆ ತಾನೇ ಎಂದುಕೊಂಡು ಒಪ್ಪಿದರು.
ಹೆಂಡತಿ, ಮಗಳು, ಪುಟ್ಟ ಮೊಮ್ಮಗಳೊಂದಿಗೆ ಅಶ್ರಫ್ ಪುಟ್ಟ ಮನೆಯಲ್ಲಿದ್ದ, ಅಳಿಯ ಎರಡು ವರ್ಷಗಳ ಕೆಳಗೆ ಕಾಣೆಯಾಗಿದ್ದಾನಂತೆ. ಹೊರಗಿನ ಕೋಣೆಯನ್ನು ರತ್ನಾಕರನ ಕುಟುಂಬಕ್ಕೆ ಬಿಟ್ಟು ಕೊಡಲಾಯಿತು, ಬೆಂಕಿಯಲ್ಲಿ ಬಿದ್ದವರಂತೆ ವಿಶಾಲಮ್ಮ ಎರಡು ದಿನ ಕಳೆದರು. ಅಷ್ಟರಲ್ಲಿ ಹೆಲಿಕಾಪ್ಟರ್ ಸರ್ವಿಸ್ ಶುರುವಾಯಿತು ಆದರೆ ವಿಶಾಲಮ್ಮನ ಕಾಲಲ್ಲಿ ವಿಪರೀತ ನೋವು ಕಾಣಿಸಿತು, ರತ್ನಾಕರ ವಾಪಸ್ಸು ಹೋಗೋಣವೆಂದರು, “ರತ್ನಾಕರ ನೀವಿಬ್ಬರೂ ಹೋಗಿ ಶಿವಲಿಂಗದ ದರ್ಶನ ಮಾಡಿಕೊಂಡು ಬನ್ನಿ, ನನಗೇ ಅದೃಷ್ಟವಿಲ್ಲ, ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು, ಅಲ್ಲಿಯವರೆಗೆ ನಾನು ಇಲ್ಲೇ ಇರ್ತಿನಿ”.
ಯಾತ್ರೆಗೆ ಹೊರಟಿರುವುದೇ ಅಮ್ಮನಿಗಾಗಿ, ಅವರನ್ನೇ ಬಿಟ್ಟು ಹೋಗುವುದೆಂದರೆ!!! ಅಲ್ಲದೆ ಸದಾ ಮಡಿ, ಮಡಿ ಎನ್ನುವ ಅಮ್ಮನನ್ನು ಇಲ್ಲಿ ಬಿಟ್ಟು ಹೋಗುವುದಾದರೂ ಹೇಗೆ? ಬೇರೆ ಉಪಾಯವಿಲ್ಲದೆ ಗಂಡ, ಹೆಂಡತಿ ಆಮರನಾಥ್ ಗುಹೆಯತ್ತ ಹೊರಟರು.
5-6 ದಿನಗಳ ನಂತರ ಯಾತ್ರೆ ಮುಗಿಸಿ ರತ್ನಾಕರ ಬಂದಾಗ…. ಅಶ್ರಫನ ಮಗಳು ಬಿಸಿ ರೊಟ್ಟಿ ತಟ್ಟಿ ಕೊಡುತ್ತಿದ್ದರೆ ವಿಶಾಲಮ್ಮ ಸೊಪ್ಪಿನ ಹುಳಿ ನಂಜಿಕೊಂಡು ತಿನ್ನುತ್ತಿದ್ದರು, “ನೋಡೋ, ಅಶ್ರಫ್ ಕಾಲಿಗೆ ಎಣ್ಣೆ ಹಾಕಿ ತಿಕ್ಕಿ, ತಿಕ್ಕಿ ನಾನು ನಡೆಯುವಂತೆ ಮಾಡಿದ್ದಾನೆ”, “ಅಮ್ಮ ಹವಾಮಾನ ಸರಿಯಾಗಿದೆ, ಆಮರನಾಥ್ ಗುಹೆಗೆ ಹೋಗಲು ವ್ಯವಸ್ಥೆ ಮಾಡುತ್ತೇನೆ, ಹೋಗಿ ಬಾ”, “ಬೇಡ ರತ್ನಾಕರ, ನನ್ನೊಳಗಿನ ಅಂತರಗಂಗೆ ಎದುರಾದಳು, ಪರಮಾತ್ಮನ ದರ್ಶನವಾಯಿತು, ಸತ್ಯ ಅರಿಯಲು ಇಲ್ಲಿಯವರೆಗೆ ಬರಬೇಕಾಯಿತು ನೋಡು, ನಡಿ ಊರಿಗೆ ಹೋಗೋಣ” ಎನ್ನುತ್ತಾ ಮೇಲೆದ್ದರು, ಅವರ ಮುಖದಲ್ಲಿ ಇನ್ನಿಲ್ಲದ ಖುಷಿ ಕಾಣಿಸುತ್ತಿತ್ತು, ಅಶ್ರಫನ ಮಗಳನ್ನು ತಬ್ಬಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಟ್ಟರು.
ಗೀತಾ ಕುಂದಾಪುರ