ಹುಣಸೇ ಚಿಗರು ಮತ್ತು ಇತರ ಕಥೆಗಳು
ಲೇಖಕಿ : ದೀಪದ ಮಲ್ಲಿ
ಮುದ್ರಣ : ಕಾವ್ಯಮನೆ ಪ್ರಕಾಶನ
ಬೆಲೆ : 100/-
ಲೇಖಕಿ ಪರಿಚಯ : ಕವಿ, ಹೋರಾಟಗಾರ್ತಿ, ಕಲಾವಿದೆ ದೀಪದ ಮಲ್ಲಿ (ದೀಪಾ.ಕೆ ) ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು.
ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್ ತಾಯಿ, ಸುಲೋಚನಾ. ಇವರ ಮನೆಯ ಹಿರಿಯರು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕಾರಣ ದೀಪಾ ಪೂಜೆ-ಪುನಸ್ಕಾರ ಮತ್ತು ಸಂಪ್ರದಾಯಸ್ಥ ವಾತಾವರಣದ ಮಧ್ಯೆಯೇ ಬೆಳೆದರು. ದೀಪಾ ಹುಟ್ಟಿದ್ದು ಹಳ್ಳಿಯಲ್ಲಾದರೂ ಓದಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಪತ್ರಿಕೋದ್ಯಮ ಅಧ್ಯಯನ ಮಾಡಿರುವ ದೀಪಾ ಎಂ.ಎ.ಪದವೀಧರರು. ಓದಿದ್ದು ಪತ್ರಿಕೋದ್ಯಮವಾದರೂ ರಂಗಭೂಮಿ, ಸಾಹಿತ್ಯದೆಡೆಗೆ ಸದಾ ತುಡಿತ ಉಳ್ಳವರು.
ಓದುಗರ ಅಭಿಪ್ರಾಯ:
‘ಹೆಣ್ಣಿನ ಒಡಲು ಕಥೆಗಳ ಕಡಲು’ ಎಂಬ ಮಾತನ್ನು ಆಗಾಗ ಸಭೆ ಸಮಾರಂಭಗಳಲ್ಲಿ ಕೇಳಿಸಿಕೊಳ್ಳುತ್ತಿರುತ್ತೇವೆ. ಅಂತಹ ಹೆಣ್ಣಿನ ಒಡಲಿನ ಕಥೆಗಳನ್ನು ಅಕ್ಷರ ರೂಪಕ್ಕಿಳಿಸುವ ಮುಖಾಂತರ ಹೆಣ್ಣಿನ ಹೊಸ ಅನುಭವಗಳನ್ನು ಹೊಸ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ದೀಪದ ಮಲ್ಲಿಯವರು ತಮ್ಮ “ಹುಣಸೇ ಚಿಗುರು” ಕಥಾ ಸಂಕಲನದ ಮೂಲಕ ಸಾಕಾರಗೊಳಿಸಿದ್ದಾರೆ.
ಲಿಂಗರಾಜಕಾರಣದ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ‘ಓಡಿ ಹೋದವಳು’ ಕಥೆ ಗಟ್ಟಿ ಧ್ವನಿಯಲ್ಲಿ ಸ್ಪಷ್ಟಪಡಿಸುತ್ತೆ. “ನಾನು ಭಯದಲ್ಲಿ ನಿಂತಾಗ, “ನೀ ನನ್ನ ತಂಗಿ ಇದ್ದಂಗೆ ಕಣಮ್ಮ, ಮಲಕ್ಕೋ” ಅಂದರು. ನಾನು ಒಬ್ಬಳೇ ಹುಡುಗಿ, ಅವರು ಏಳೆಂಟು ಜನ ಗಂಡಸರು. ನಮ್ಮನ್ನು ಬೇರ್ಪಡಿಸುವ ಪಾರ್ಟಿಷನ್ ಎರಡು-ಮೂರು ಸೂಟ್ ಕೇಸು, ಟ್ರಂಕುಗಳು. ಮನಸ್ಸು ಗಟ್ಟಿಮಾಡಿ ಮಲಗಿದೆ. ಆ ಏಳೂ ಜನರು ಸ್ವಲ್ಪವೂ ಇರಸುಮುರಸಾಗುವ ಹಾಗೆ ನಡೆದುಕೊಳ್ಳಲಿಲ್ಲ”* (ಪುಟ- ೫೯).
ಸ್ತ್ರೀವಾದವೆಂದರೆ ಕೇವಲ ಅಪ್ಪ, ಅಮ್ಮ, ಮನೆ, ಸಂಸಾರ ಎನ್ನುವ ಭಾವುಕ ಲೋಕದ ಪ್ರಯಾಣ ಮಾತ್ರವೇ ಅಲ್ಲ, ಅದರಾಚೆಗಿನ ಲೋಕ ಸತ್ಯಗಳಿಗೆ ಕಣ್ಣಾಗಬಲ್ಲದು ಎಂಬುದನ್ನು ‘ಜಾಕ್ಸನ್ ತಿಪ್ಪೇಸ್ವಾಮಿ’ ಕಥೆ ಸಾಬೀತುಪಡಿಸಿದೆ. ಒಟ್ಟು ಈ ಕಥಾ ಸಂಕಲನ ವರ್ತಮಾನದಲ್ಲಿ ನಿಂತು, ಭೂತವನ್ನು ಹುಡುಕುವ, ಭವಿಷ್ಯತ್ತಿನ ಹೆಜ್ಜೆಗಳಿಗೆ ಸುಗಮ ದಾರಿಯನ್ನು ನಿರ್ಮಿಸುವ ಇರಾದೆಯನ್ನು ಹೊಂದಿದೆ.
ಹನಮಂತಪ್ಪ ಬನ್ನಿ
ಒಂದೇ ಬಾರಿಗೆ ಇಡೀ ಪುಸ್ತಕ ಮತ್ತು ಅದರೊಳಗಿನ ಪಾತ್ರಗಳು ನನ್ನ ಆವರಿಸಿದ ಪರಿ ಸೋಜಿಗವೇನಿಸುತ್ತದೆ. ಅದ್ಬುತವಾದ ಕಥೆಗಳು ಒಂದೊಂದು ಪಾತ್ರಗಳು ನಮ್ಮ ಸುತ್ತಲೇ ನಡೆದ ಅನೇಕ ಘಟನೆಗಳನ್ನು ಪೋಣಿಸಿ ನಮ್ಮ ಮುಂದಿಟ್ಟಿದ್ದಾರೆ.ಒಂದು ಒಳ್ಳೆಯ ಪುಸ್ತಕವನ್ನು ಓದಿಗೆ ಸಿದ್ಧಪಡಿಸಿದ ಕಾವ್ಯ ಮನೆ ಪ್ರಕಾಶನ ಕ್ಕೆ ಧನ್ಯವಾದಗಳು.
ಎಂ. ಜಿ. ಕೃಷ್ಣಮೂರ್ತಿ ಇಂಡ್ಲವಾಡಿ
ಈ ಕಥಾಸಂಕಲನವು ಹೆಚ್ಚು ಜನರಿಗೆ ತಲುಪಲಿ ಎಂದು ಸಾಹಿತ್ಯಮೈತ್ರಿ ತಂಡವು ಶುಭ ಹಾರೈಸುತ್ತದೆ.
ಸಾಹಿತ್ಯಮೈತ್ರಿ ತಂಡ