ಅಳಿವಿಲ್ಲದ ಕನ್ನಡ

ಅಳಿವಿಲ್ಲದ ಕನ್ನಡ

ಒಂದು ಭಾಷೆಯನ್ನು ಮಾತನಾಡಲು ಕಲಿತರೆ ಸಾಕು, ಪ್ರೀತಿಸಿದರೆ ಸಾಕು, ಅದರ ಬಗ್ಗೆ ತಿಳಿಯುವ, ಕಲಿಯುವ, ಬೆಳೆಸುವ ಹಂಬಲ ತಾನಾಗಿಯೇ ಮೊಳಕೆಯೊಡೆಯುತ್ತದೆ.

ಕನ್ನಡಕ್ಕೆ ಬೇಕಾಗಿರುವುದೂ ಅದೇ ಪ್ರೀತಿಸುವ ಜನತೆ. ಪರಭಾಷಾ ವ್ಯಾಮೋಹ ಇರಬಾರದೆಂದಲ್ಲ, ಪ್ರಥಮ ಆದ್ಯತೆ ಮಾತೃಭಾಷೆ ಆಗಬೇಕು. ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು, ಅದೇ ತಾಯ್ನುಡಿಯ, ನೆಲದ ಭಾಷೆಯ ಸೇವೆ ಅದು ನಮ್ಮದೇ ಮನೆಯಲ್ಲಿ, ಪರಿಸರದಲ್ಲಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಆರಂಭಗೊಂಡರೆ ಸಾಕು, ಕನ್ನಡ ಸೇವೆಗೆ ಕಂಕಣ ಕಟ್ಟಿ ನಿಂತಂತೆ.

ಕನ್ನಡ ಭಾಷೆ, ಪ್ರಪಂಚದ ಪುರಾತನ ಭಾಷೆಗಳಲ್ಲಿ ಒಂದು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅತಿ ಹೆಚ್ಚು ಮಾತನಾಡುವ ಪ್ರಪಂಚದ ಭಾಷೆಗಳಲ್ಲಿ ೫.೬ ಕೋಟಿ ಜನ ಮಾತನಾಡುವ ಕನ್ನಡದ್ದು ೨೯ ನೆಯ ಸ್ಥಾನ.

ಸುಮಾರು ೨೦೦೦ ವರ್ಷಗಳ ಇತಿಹಾಸವುಳ್ಳ ಭಾಷೆ, ಮಹಾಭಾರತದಲ್ಲಿ ಕರ್ನಾಟಕದ ಉಲ್ಲೇಖವಿರುವ, ತಮಿಳಿನ ಶಿಲಪ್ಪದಿಗಾರಂ ಕೃತಿಯಲ್ಲಿ “ಕರುನಾಟ್”ಎನಿಸಿಕೊಂಡಿರುವ ಕರುನಾಡು ನಮ್ಮ ಕರ್ನಾಟಕ.

ಸಾಗರದಾಚೆಗಿನ ಇಂಡೋನೇಷಿಯಾ ದೇಶದ ಜಾವಾ ದ್ವೀಪದಲ್ಲಿನ ೧೨ನೆಯ ಶತಮಾನದ ಶಾಸನದಲ್ಲಿ ಕರ್ಣಾಟಕದ ಉಲ್ಲೇಖವಿದೆ. ಅಮೋಘವರ್ಷ ನೃಪತುಂಗನ ಆಸ್ಥಾನಕವಿ ಶ್ರೀವಿಜಯನ “ಕವಿರಾಜಮಾರ್ಗ”ದಲ್ಲಿ ಕಾವೇರಿಯಿಂದ ಗೋದಾವರಿ ವರೆಗೆ ಹಬ್ಬಿದ ನಾಡು ಕನ್ನಡ ಎಂಬ ಮಾತು ಕರ್ನಾಟಕದ ವಿಸ್ತಾರವನ್ನು ಗುರುತಿಸುತ್ತದೆ.

ಮುಂಬೈ, ಹೈದರಾಬಾದು, ಮದರಾಸು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡದ ಏಕೀಕರಣಕ್ಕೆ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದವರು ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು. ಇದಕ್ಕೆ ಪೂರಕವಾಗಿ ತಮ್ಮ ಸಾಹಿತ್ಯದ, ಬರವಣಿಗೆಯ ಮೂಲಕ ಕನ್ನಡದ ಕಿಚ್ಚನ್ನು ಹೊತ್ತಿಸಿದವರು ಹಲವಾರು ಸಾಹಿತಿಗಳು.

“ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳೊಂದಿಗೆ ಕನ್ನಡಿಗರ ಮನೆ ಮನಗಳಲ್ಲಿ ಕನ್ನಡದ ದೀಪ ಹೊತ್ತಿಸಿದ ಹಿರಿಮೆ ಡಾ.ಡಿ.ಎಸ್.ಕರ್ಕಿ ಅವರದ್ದು. ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು”, ಅಡಿಗರ “ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು”, ಗೋವಿಂದ ಪೈ ಅವರ “ತಾಯೆ ಬಾರ ಮೊಗವ ತೋರ”,ಸಿದ್ದಯ್ಯ ಪುರಾಣಿಕರ “ಹೊತ್ತಿತೋ ಹೊತ್ತಿತು ಕನ್ನಡದ ದೀಪ” ಕನ್ನಡಿಗರಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದಂತೂ ಸತ್ಯ. ಕನ್ನಡದ ಡಿಂಡಿಮವನ್ನು ಬಾರಿಸಿದ ಕುವೆಂಪು,”ಬೆಂಕಿಬಿದ್ದಿದೆ ಮನೆಗೆ ಓ ಬೇಗ ಬನ್ನಿ” ಎಂದು ಗಡಿನಾಡ ಕನ್ನಡಿಗರನ್ನು ಎಚ್ಚರಿಸಿದ ಕಯ್ಯಾರ ಕಿಞ್ಞಣ್ಣ ರೈ, ಪ್ರಾಥಮಿಕ ವಿದ್ಯಾಭ್ಯಾಸ ಕನ್ನಡದಲ್ಲಿ ಇರಬೇಕು ಎಂದ ವಿ.ಕೃ.ಗೋಕಾಕ್ ಇವರುಗಳ ಸೇವೆಯನ್ನು ನಾವು ಮರೆಯಲಾಗದು.

ಮಾತೃಭಾಷೆ ಅಲ್ಲದಿದ್ದರೂ ತಾಯ್ನೆಲದ ಭಾಷೆಯಲ್ಲಿ ಬರೆದು ಜನಮಾನಸದಲ್ಲಿ ಅಜರಾಮರವಾಗಿ ಉಳಿದಿರುವ ದ.ರಾ.ಬೇಂದ್ರೆ, ಮಾಸ್ತಿ, ನಾ.ಕಸ್ತೂರಿ, ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗದ ಡಿ.ವಿ.ಗುಂಡಪ್ಪ ಇವರೆಲ್ಲರೂ ಪ್ರಾತಃಸ್ಮರಣೀಯರು. ಎಲ್ಲರನ್ನೂ ಇಲ್ಲಿ ನೆನಯಲಾಗದಿದ್ದರೂ ನಾಟಕ ರತ್ನ ಕೈಲಾಸಂ, ರತ್ನನ ಪದಗಳ ಜಿ.ಪಿ.ರಾಜರತ್ನಂ, ಭಾರತೀಯ ಕಾವ್ಯ ಮೀಮಾಂಸೆಯ ಆಚಾರ್ಯ ತೀ.ನಂ.ಶ್ರೀ, ಕರುಣಾಳು ಬಾ ಬೆಳಕೆ ಎಂದ ಬಿ.ಎಂ.ಶ್ರೀ ,ಶಿವರಾಮ ಕಾರಂತರು, ಎಸ್.ಎಲ್.ಭೈರಪ್ಪ , ಕನ್ನಡ ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯರು, ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳು, ತ.ಸು.ಶಾಮರಾಯರು, ವಿ.ಸೀತಾರಾಮಯ್ಯ, ಎಂ.ಆರ್.ಶ್ರೀ, ಸಿದ್ದವ್ವನಹಳ್ಳಿ ಕೃಷ್ಣಶರ್ಮ, ಗಳಗನಾಥರು ಇವರನ್ನು ಮರೆಯಲಾಗದು.
ರನ್ನ,ಪೊನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ ರಾದಿಯಾಗಿ ಮುದ್ದಣನ ವರೆಗೆ ಹಳಗನ್ನಡ, ನಡುಗನ್ನಡದ ಕಾವ್ಯ ಸಾರಸ್ವತರ ನೆನಪು ಕನ್ನಡವಿರುವವರೆಗೂ ಶಾಶ್ವತ. ದಾಸರ ಕೀರ್ತನೆಗಳು, ಬಸವಾದಿ ಶರಣರ, ಸರ್ವಜ್ಞನ ವಚನಗಳು ವಿಶ್ವಸಾಹಿತ್ಯಕ್ಕೆ ಕನ್ನಡದ ಕೊಡುಗೆ ಎಂದರೆ ಅತಿಶಯೋಕ್ತಿ ಅಲ್ಲ.

ಕನ್ನಡ ಸೇವೆಯ ಮಾಡಲು ತೀನಂಶ್ರೀ ಯವರಿಗೆ ಮಾತುಕೊಟ್ಟ ಕನ್ನಡದ ಜೀವಿ ಜಿ.ವೆಂಕಟಸುಬ್ಬಯ್ಯನವರ ನಿಘಂಟು ಸೇವೆ ಅನನ್ಯ, ಮಲ್ಲಿಗೆಯ ಕವಿ ಕೆ.ಎಸ್.ನ, ನಿತ್ಯೋತ್ಸವದ ನಿಸಾರ್ ಅಹಮದ್, ಅ.ರಾ.ಮಿತ್ರ, ಗೊರೂರು ಎ.ಎನ್.ಮೂರ್ತಿರಾಯರು, ಕನ್ನಡ ಪ್ರಮುಖ ಶತಾವಧಾನಿ ರಾ.ಗಣೇಶರು ಇವರ ಕನ್ನಡ ಸೇವೆ ಸ್ಮರಣೀಯ.

ಮಹಿಳೆಯರೇನು ಕಡಿಮೆಯಿಲ್ಲ ಎಂದು ಸಾರಿದ ಸಂಚಿಯ ಹೊನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿ, ನಂಜನಗೂಡು ತಿರುಮಲಾಂಬಾ, ಎಂ.ಕೆ.ಇಂದಿರಾ, ತ್ರಿವೇಣಿ, ಅನುಪಮಾ ನಿರಂಜನ, ವೈದೇಹಿ, ಕಮಲಾ ಹಂಪನಾ ಹೀಗೆ ಪಟ್ಟಿ ಬೆಳೆಯುತ್ತದೆ. ಚಲನಚಿತ್ರ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕು.ರಾ.ಸೀತಾರಾಮಶಾಸ್ತ್ರೀ, ಹುಣಸೂರು ಕೃಷ್ಣಮೂರ್ತಿ, ಎಸ್.ಕೆ.ಕರೀಂಖಾನ್, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ದೊಡ್ಡರಂಗೇಗೌಡ, ಹಂಸಲೇಖ, ಜಯಂತ ಕಾಯ್ಕಿಣಿ, ಕಲ್ಯಾಣ್ ಇವರನ್ನು ನಾವು ನೆನೆಯಲೇ ಬೇಕು.

ಪ್ರಸ್ತುತ ಕಾಲಮಾನದ ನಾವು ನಮ್ಮ ಮನೆ ಮೊದಲ್ಗೊಂಡು ಸುತ್ತಮುತ್ತಲೂ ಕನ್ನಡ ಭಾಷೆಯ ಬಳಕೆ ಮಾಡುವುದರ ಜೊತೆಗೆ ಕನ್ನಡ ಕಲಿಸುವ ಪರಿಪಾಠ ಬೆಳೆಸಿಕೊಂಡರೆ ಕನ್ನಡ ತಾಯಿಯ ಋಣಸಂದಾಯ ಮಾಡಿದಂತೆ.

ಉಸಿರಾಗಲಿ ಕನ್ನಡ , ಹಸಿರಾಗಲಿ ಕರ್ನಾಟಕ…

ಸುನೀಲ್ ಹಳೆಯೂರು

Related post