ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ
ಜನಪದ ಕರಕುಶಲ ಕಲೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇವುಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದು ವಿಂಗಡಿಸಲಾಗಿದೆ. ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲೆ ಆಗಿದ್ದು, ದುಡಿಮೆಗಾಗಿ ಮತ್ತು ಆದಾಯದ ಉದ್ದೇಶದಿಂದ ಈ ಕಲೆಗಳನ್ನು ಬಳಸುತ್ತಾರೆ. ಇವು ಜೀವನೋಪಾಯಕ್ಕೆ ಆಧಾರವಾಗಿವೆ ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ವಿನೋದದ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತದೆ. ಕರಕುಶಲ ಕಲೆಗಳು ಇಂದು ಪೂರ್ತಿ ಅವಸಾನದ ಹಂತದಲ್ಲಿ ಇದ್ದು, ಇದಕ್ಕೆ ಪುನಶ್ಚೇತನ ನೀಡುವ ಅವಶ್ಯಕತೆ ಇದೆ. ಇಲ್ಲೊಬ್ಬರು ವಿಭಿನ್ನ ಕರಕುಶಲ ಕಲಾಸೇವಕರಿದ್ದು, ಅವರು ವಿಭಿನ್ನವಾಗಿ ತಮ್ಮ ಕಲಾಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅವರೇ ಧಾರವಾಡದ ಕೆಲಗೇರಿಯ ಜಗದೀಶ್ ವಿರೂಪಾಕ್ಷಗೌಡ ಭಾವೀಕಟ್ಟಿ.
ಇವರು ನಾರೀಕೇಳದಿಂದ (ತೆಂಗಿನಕಾಯಿ) ವೈವಿಧ್ಯಮಯ ಕಲಾಕೃತಿಗಳನ್ನು ತಯಾರಿಸುತ್ತಾರೆ. ಅದರಲ್ಲೂ ಗಣೇಶ ಚತುರ್ಥಿ ಸಮಯದಲ್ಲಿ ಪಿ.ಒ.ಪಿ ಗಣೇಶನ ಬದಲು ಪರಿಸರ ಸ್ನೇಹಿ ನಾರಿಕೇಳದಲ್ಲಿ ಗಣೇಶನ ಮೂರ್ತಿಯ ಕೆತ್ತನೆಯ ಕೆಲಸವನ್ನು ಭಾವಿಕಟ್ಟಿಯವರು ಮಾಡುತ್ತಿದ್ದಾರೆ. ಈ ಕಲೆಯಲ್ಲಿ ಇವರು ನಿಪುಣರು. ಇವರು ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಉದ್ಯಾನ ನಿರ್ವಾಹಕರಾಗಿದ್ದು, ಅವರಿಗೆ ಬಲಿತ ದೊಡ್ಡ ಗಾತ್ರದ ಸಿಪ್ಪೆಸಹಿತ ತೆಂಗಿನಕಾಯಿ ಸಿಕ್ಕಿದರೆ ಸಾಕು ಅವರ ಕೈಗಳು ಆ ತೆಂಗಿನಕಾಯಿ ಮೇಲೆ ತನ್ನ ಕೈಚಳಕವನ್ನು ತೋರಿಸಲು ಪ್ರಾರಂಭಿಸುತ್ತದೆ. ಇವರು ತೆಂಗಿನಕಾಯಿಯಿಂದ ಗಣಪತಿ, ಬುದ್ಧ, ನವರಾತ್ರಿಯ ದುರ್ಗೆ, ಶಿವಲಿಂಗ, ಹೂದಾನಿ, ಮಂಗ, ಬಸವ, ಗೋಮಟೇಶ್ವರ, ಗೂಬೆ ಮತ್ತು ಆಮೆ ಮುಂತಾದ ಆಕೃತಿಗಳನ್ನು ತಯಾರಿಸುತ್ತಾರೆ.
ಭಾವಿಕಟ್ಟಿ ಅವರ ಹೆತ್ತವರೂ ಕರಕುಶಲ ಕಲಾವಿದರು ಆಗಿದ್ದು, ತನ್ನ ಹೆತ್ತವರಿಂದ ಇವರ ಸಣ್ಣ ವಯಸ್ಸಿನಲ್ಲೇ ಇವರಿಗೆ ಈ ಕಲೆ ಕರಗತವಾಗಿದೆ. ಮನೆಯಲ್ಲಿ ಇದ್ದ ಸಿಪ್ಪೆ ಸಹಿತ ತೆಂಗಿನಕಾಯಿಯಲ್ಲಿ ಕೆತ್ತನೆ ಮಾಡಿದ್ದ ಮೊದಲ ಕಲಾಕೃತಿಯನ್ನು ಅವರ ಸಹೋದರ ಮಳಿಗೆಯಲ್ಲಿ ಇಟ್ಟಿದ್ದರು. ಆ ಸುಂದರ ಕೆತ್ತನೆಯ ನೋಡಿದ ಒಬ್ಬ ಗ್ರಾಹಕರು ಅದನ್ನು ದುಡ್ಡುಕೊಟ್ಟು ಖರೀದಿಸಿದ್ದರು. ಅಂದಿನಿಂದ ಈ ಕಲೆಯಲ್ಲೇ ಜೀವನ ನಡೆಸುವುದಿದ್ದರೆ ಅದಕ್ಕೆ ಅಗತ್ಯ ಇರುವಷ್ಟು ನೈಪುಣ್ಯವನ್ನೂ ಜಗದೀಶ್ ಗಳಿಸಿದ್ದಾರೆ.
ನಾರಿಕೇಳ ಗಣೇಶ ವಿಗ್ರಹಗಳಿಗೆ ಇದೀಗ ಸಾಕಷ್ಟು ಬೇಡಿಕೆ ಬರುತ್ತಿದೆ. ಗಣೇಶ ಹಬ್ಬದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜಿಸಿದ ಬಳಿಕ ಬಕೆಟ್ ನೀರಿನಲ್ಲಿ ವಿಸರ್ಜಿಸಿ ನಂತರ ಜಮೀನಿನ ಮಣ್ಣಲ್ಲಿ ಹೂತರೆ ಮುಂದಕ್ಕೆ ಅದು ಕಲ್ಪವೃಕ್ಷ ಆಗಿ ಬೆಳೆಯುತ್ತದೆ ಅಥವಾ ಪೂಜೆಯ ನಂತರ ಈ ಮೂರ್ತಿಯನ್ನು ಮನೆಯ ಶೋಕೇಸ್ಗೂ ಸೇರಿಸಬಹುದು. ಆದ್ದರಿಂದ ಇತರೆಲ್ಲಾ ಕಲಾಕೃತಿಗಳಿಗಿಂತ ಗಣೇಶನ ಆಕೃತಿಗೆ ಹೆಚ್ಚಿನ ಬೇಡಿಕೆಯಿದೆ.
ಪ್ರಸ್ತುತ ತೆಂಗಿನಕಾಯಲ್ಲಿ ಶಿವ, ಗಣಪತಿ, ಸಾಯಿಬಾಬಾ, ಮಹಾವೀರ, ಗೌತಮ ಬುದ್ಧ, ಸರ್.ಎಂ. ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಸೇರಿ ದೇವರ ಹಾಗೂ ಅನೇಕ ಮಹನೀಯರ ಕಲಾಕೃತಿಗಳನ್ನು ಕೆತ್ತಿದ್ದಾರೆ. ವಿವಿಧ ಕೃಷಿ ಮೇಳ, ತೋಟಗಾರಿಕಾ ಮೇಳ, ಹಂಪಿ ಉತ್ಸವ ಹೀಗೆ ರಾಜ್ಯದ ಹಲವು ಉತ್ಸವಗಳಲ್ಲಿ ಇವರ ನಾರೀಕೇಳ ಕೆತ್ತನೆ, ಪೇಪರ್ ಕಾಫ್ಟ್ಸ್, ಕಸೂತಿ, ಐಸ್ಕ್ರೀಂ ಕಡ್ಡಿಗಳಿಂದ ತಯಾರಿಸಿದ ಹೂದಾನಿ ಮತ್ತು ಗೂಡುದೀಪ (ಆಕಾಶಬುಟ್ಟಿ), ಮರದ ಎತ್ತಿನಗಾಡಿ, ಇತ್ಯಾದಿ ಕಲಾಕೃತಿಗಳು ಅಮೃತ್ ಕರಕುಶಲ ಅಕಾಡೆಮಿ ಕೆಲಗೇರಿ ಧಾರವಾಡ ಎಂಬ ಹೆಸರಿನಲ್ಲಿ ಪ್ರದರ್ಶನ ಆಗುತ್ತವೆ. ಈ ಎಲ್ಲಾ ಕಲಾಕೃತಿಗಳನ್ನು ತಯಾರಿಸುವಲ್ಲಿ ಭಾವಿಕಟ್ಟಿ ನಿಪುಣರು.
ತಂದೆಯಿಂದ ಕಲಿತ ಕಲೆ:
ಇವರಿಗೆ ತನ್ನ ಎಳವೆಯಲ್ಲೇ ತನ್ನ ತಂದೆಯಿಂದ ತೆಂಗಿನಕಾಯಿ ಕೆತ್ತನೆಯ ಕಲೆ ಬಳುವಳಿಯಾಗಿ ಬಂದಿದ್ದು, ಇದೀಗ ಇವರ ಈ ಕಲೆ ಎಲ್ಲೆಡೆ ಬೆಳಕಿಗೆ ಬಂದಿದೆ. ಈ ಕಲೆಯು ಎಲ್ಲೆಡೆ ಪಸರಿಸಬೇಕು ಎನ್ನುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್ಸೆಟ್ ಮುಂತಾದ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಈ ಕಾಯಕಕ್ಕೆ ಇವರ ಸಹೋದರರು, ಮಕ್ಕಳು ಎಲ್ಲರೂ ಕೈಜೋಡಿಸಿದ್ದಾರೆ.
ಕೆತ್ತನೆ ಮಾಡುವ ವಿಧಾನ:
ತೆಂಗಿನಕಾಯಿ ಮೇಲಿನ ಒಂದು ಪದರನ್ನು ತೆಗೆದು ಅದರ ಮೇಲೆ ಪೆನ್ಸಿಲ್ನಿಂದ ಚಿತ್ರ ಬರೆಯುತ್ತಾರೆ. ನಂತರ ಈ ಚಿತ್ರದ ಪ್ರಕಾರ ಅಗತ್ಯವಿದ್ದಂತೆ ಆಳಕ್ಕೆ ಕೆತ್ತನೆಯನ್ನು ಮಾಡುತ್ತಾರೆ. ಆಕೃತಿ ಪೂರ್ಣವಾದ ನಂತರ ಅದಕ್ಕೆ ಟಚ್ವುಡ್ ಹಚ್ಚಿ ನೆರಳಿನಲ್ಲಿ ಒಣಗಲು ಇಡುತ್ತಾರೆ. ಕಲಾಕೃತಿ ಸಿದ್ಧಗೊಂಡ ಬಳಿಕ ಅಗತ್ಯಕ್ಕೆ ಅನುಗುಣವಾಗಿ ಕಿರೀಟ, ಕಿವಿ ಆಭರಣ, ಕಣ್ಣು ಇತ್ಯಾದಿ ಅಲಂಕಾರ ಸಹಿತ ಮಾಡುತ್ತಾರೆ. ಮಾರ್ಕರ್, ಹೈಲೈಟರ್, ಕಟ್ಟಿಂಗ್ಪ್ಲೇರ್, ಕೆತ್ತನೆಯ ಬ್ಲೇಡ್, ಸಣ್ಣ ಮತ್ತು ದೊಡ್ಡ ಗಾತ್ರದ ಚಾಕು, ಫೆವಿಕಾಲ್ ಮತ್ತು ಟಚ್ವುಡ್ ಇವುಗಳೇ ಇವರ ಪ್ರಮುಖ ಕೆತ್ತನೆಯ ಪರಿಕರಗಳು.
ಆರ್ಥಿಕ ಉದ್ದೇಶವಿಲ್ಲದ ಕಲಾಸೇವೆ:
ಭಾವಿಕಟ್ಟಿ ಅವರಲ್ಲಿ ಅಗಾಧ ಕಲೆಗಳಿದ್ದರೂ ಅದನ್ನು ಇವರು ಹಣಕ್ಕಾಗಿ ಮಾರುತ್ತಿಲ್ಲ. ಕೆತ್ತನೆ ಮಾಡಿದ ಕಲಾಕೃತಿಗಳನ್ನು ಹಣಕ್ಕಾಗಿ ಮಾರಾಟ ಮಾಡಿದ್ದೇ ಕಡಿಮೆ. ತಮ್ಮ ಕಲೆಯ ಕೆತ್ತನೆಯನ್ನು ಖರೀದಿಸಿದವರು ನೀಡಿದಷ್ಟು ಮೊತ್ತವನ್ನು ಮಾತ್ರ ಇವರು ಪಡೆಯುತ್ತಾರೆ. ಇವರ ಕಲೆಯನ್ನು ಕಂಡು ಖುಷಿಯಿಂದ ಬೆನ್ನು ತಟ್ಟಿದವರಿಗೆ ತಮ್ಮ ಕಲೆಯನ್ನು ಗುರುತಿಸಿದ್ದಕ್ಕಾಗಿ ಖುಷಿಯಿಂದ ಉಚಿತವಾಗಿ ಕಲಾಕೃತಿಗಳನ್ನು ಕೊಟ್ಟಿದ್ದಾರೆ.
ಕರಕುಶಲ ಕಲೆಗಳು ಇಂದು ಆಧುನಿಕ ಸ್ಪರ್ಶವನ್ನು ಪಡೆದುಕೊಂಡಿದ್ದು, ಪರಿಸರಕ್ಕೆ ಪೂರಕವಾಗಿ ಉಳಿದಿಲ್ಲ. ಪರಿಸರವು ವಿನಾಶದ ಕಡೆಗೆ ಸಾಗಿರುವ ಈ ಸಂದರ್ಭದಲ್ಲಿ ಪರಿಸರಸ್ನೇಹಿ ಆಗಿರುವ ನಾರಿಕೇಳ ಗಣೇಶ ಮೂರ್ತಿಗಳು, ಮತ್ತು ನಾರಿಕೇಳದಿಂದ ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ಬಳಸಲು ಪ್ರಾರಂಭಿಸಿದರೆ ಪರಿಸರ ರಕ್ಷಣೆಗಾಗಿ ಕಂಕಣಕಟ್ಟಿದವರ ಹೋರಾಟಕ್ಕೆ ಯಶಸ್ಸು ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160