ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿರುವ ತಿಮ್ಮಕ್ಕ ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ವೃಕ್ಷ ಪ್ರೇಮಿ ಮತ್ತು ಪರಿಸರವಾದಿ ಎಂದರೆ ತಪ್ಪಾಗಲಾರದು.
ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿಯೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿರುವುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ತಿಮ್ಮಕ್ಕ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾರೆ. ಇವರು ಮಾಗಡಿ ತಾಲೂಕಿನ ಹುಲಿಕಲ್ ಮತ್ತು ಕುದೂರು ನಡುವಿನ ನಾಲ್ಕು ಕಿ.ಮೀ ಉದ್ದದ ಹೆದ್ದಾರಿಯಲ್ಲಿ 385 ಆಲದ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಿರುವ ಸಾಧನೆಯನ್ನು ಮಾಡಿದ್ದಾರೆ.
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಚಿಕ್ಕರಂಗಯ್ಯ ಮತ್ತು ವಿಜಯಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದೇ ಅಲ್ಲಿಯೇ ಕಲ್ಲಿನ ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಇವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್‌ನ ಚಿಕ್ಕಯ್ಯ ಎಂಬ ದನಗಾಹಿಯನ್ನು ಮದುವೆಯಾದರು. ದುರದೃಷ್ಟವಶಾತ್ ಇವರಿಗೆ ಮಕ್ಕಳಾಗದೇ ಇದ್ದಾಗ ತಿಮ್ಮಕ್ಕ ಅವರು ತಮಗೆ ಮಕ್ಕಳಿಲ್ಲದ ದುಃಖವನ್ನು ಮರೆಯಲು ತಮ್ಮ ಊರು ಹುಲಿಕಲ್‌ನ ರಸ್ತೆಯ ಇಕ್ಕೆಲಕ್ಕೂ ಆಲದ ಮರಗಳನ್ನು ನೆಡಲಾರಂಭಿಸಿದರು.
ತಿಮ್ಮಕ್ಕ ಅವರ ಸಾಧನೆ
ತಿಮ್ಮಕ್ಕ ಅವರ ಹುಲಿಕಲ್ ಗ್ರಾಮದ ಸುತ್ತಮುತ್ತ ಫಿಕಸ್ (ಆಲದ) ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲಾರಂಭಿಸಿದರು. ಮೊದಲ ವರ್ಷ ಹತ್ತು ಸಸಿಗಳನ್ನು ಕಸಿ ಮಾಡಿ ಅವುಗಳನ್ನು ನೆರೆಯ ಕುದೂರು ಗ್ರಾಮದ ಬಳಿ 5 ಕಿ.ಮೀ ದೂರದಲ್ಲಿ ನೆಟ್ಟರು. ಎರಡನೇ ವರ್ಷದಲ್ಲಿ 15 ಹಾಗೂ ಮೂರನೇ ವರ್ಷದಲ್ಲಿ 20 ಸಸಿಗಳನ್ನು ಇದೇ ರೀತಿ ನೆಟ್ಟರು. ಈ ಮರಗಳನ್ನು ನೆಡಲು ತಿಮ್ಮಕ್ಕ ತಮ್ಮಲಿದ್ದ ಅಲ್ಪಸ್ವಲ್ಪ ಹಣವನ್ನು ವ್ಯಯಿಸಿದರು. ನೆಟ್ಟ ಈ ಸಸಿಗಳಿಗೆ ನೀರು ಹಾಕಲು ತಿಮ್ಮಕ್ಕ ದಂಪತಿಗಳು ನಾಲ್ಕು ಕಿ.ಮೀ ದೂರಕ್ಕೆ ನೀರಿಗೆ ದುಡ್ಡು ಕೊಟ್ಟು ಬಿಂದಿಗೆ ಮತ್ತು ಕೊಳಗಗಳ ಮೂಲಕ ಒಯ್ಯುತ್ತಿದ್ದರು. ನೆಟ್ಟ ಗಿಡಗಳನ್ನು ಜಾನುವಾರುಗಳಿಂದ ರಕ್ಷಿಸಲು ಗಿಡಗಳ ಸುತ್ತಲೂ ಮುಳ್ಳಿನ ಪೊದೆಗಳ ಬೇಲಿಯನ್ನು ಹಾಕಿದ್ದರು.
ಇವರು ಸಸಿಗಳನ್ನು ಮಳೆಗಾಲದಲ್ಲಿ ನೆಡುತ್ತಿದ್ದರಿಂದ ನೆಟ್ಟ ಸಸಿಗಳು ಸೊಂಪಾಗಿ ಬೆಳೆಯುತ್ತಿದ್ದವು. ಮುಂದಿನ ಮುಂಗಾರು ಆರಂಭಕ್ಕೆ ಹೊತ್ತಿಗೆ ಸಸಿಗಳು ಚೆನ್ನಾಗಿ ಬೇರು ಬಿಡುತ್ತಿದ್ದವು. ಇವರು ಹೀಗೆ ಒಟ್ಟು 384 ಮರಗಳನ್ನು ನೆಟ್ಟಿದ್ದು, ಇಂದು ಅವುಗಳ ಒಟ್ಟು ಮೌಲ್ಯವೇ ಸುಮಾರು 15 ಲಕ್ಷ ರೂಪಾಯಿಗಳು ಎಂದು ಮೌಲ್ಯಮಾಪನ ಮಾಡಲಾಗಿದೆ. ಈ ಮರಗಳ ನಿರ್ವಹಣೆಯನ್ನು ಪ್ರಸ್ತುತ ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ತಿಮ್ಮಕ್ಕ ನೆಟ್ಟು ಪೋಷಿಸಿದ 385 ಆಲದ ಮರಗಳನ್ನು 2019ರಲ್ಲಿ ಬಾಗೇಪಲ್ಲಿ ಹಲಗೂರು ರಸ್ತೆ ವಿಸ್ತರಣೆಗಾಗಿ ಕತ್ತರಿಸಲಾಗುತ್ತದೆ ಎನ್ನುವ ವದಂತಿ ಇದ್ದಾಗ ಸದರಿ ಯೋಜನೆಯನ್ನು ಮರುಪರಿಶೀಲಿಸುವಂತೆ ತಿಮ್ಮಕ್ಕ ಅವರು ಆಗಿನ ಮುಖ್ಯಮಂತ್ರಿಗಳನ್ನು ಕೋರಿದ್ದರ ಫಲವಾಗಿ 70 ವರ್ಷಗಳಷ್ಟು ಹಳೆಯದಾದ ಈ ಮರಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಹುಡುಕಿ ಮರಗಳನ್ನು ಉಳಿಸಿತು.
ತಿಮ್ಮಕ್ಕ ಅವರು ಸುಮಾರು 8000 ಇತರ ಮರಗಳನ್ನೂ ನೆಟ್ಟಿದ್ದು, ತನ್ನ ಗಂಡನ ಸಹಕಾರದಿಂದ ತಮಗೆ ಮಕ್ಕಳಿಲ್ಲದ ಕೊರಗಿಗೆ ಮರಗಳನ್ನು ನೆಟ್ಟು ಪೋಷಿಸುವುದರಲ್ಲಿ ಸಾಂತ್ವನವನ್ನು ಕಂಡುಕೊಂಡಿದ್ದಾರೆ. ತನ್ನ ಹಳ್ಳಿಯಲ್ಲಿ ಪ್ರತಿ ವರ್ಷವೂ ನಡೆಯುವ ವಾರ್ಷಿಕ ಜಾತ್ರೆಗಾಗಿ ಮಳೆನೀರನ್ನು ಸಂಗ್ರಹಿಸಲು ಟ್ಯಾಂಕ್ ನಿರ್ಮಿಸುವ ವಿನೂತನ ಸಾಮಾಜಿಕ ಚಟುವಟಿಕೆಗಳಲ್ಲಿ ತಿಮ್ಮಕ್ಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನ್ನ ಪತಿಯ ನೆನಪಿಗಾಗಿ ತನ್ನ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನು ನಿರ್ಮಿಸುವ ಕನಸನ್ನು ಅವಳು ಹೊಂದಿದ್ದು, ಇದಕ್ಕಾಗಿ ಒಂದು ಟ್ರಸ್ಟನ್ನೂ ಸಹ ಸ್ಥಾಪಿಸಲಾಗಿದೆ. 2016 ರಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿ.ಬಿ.ಸಿ) ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರು ಎಂದು ಪಟ್ಟಿ ಮಾಡಿದೆ.
ಸಂದ ಪ್ರಶಸ್ತಿ ಮತ್ತು ಗೌರವಗಳು
ತಿಮ್ಮಕ್ಕ ಅವರ ಪರಿಸರ ಸಂರಕ್ಷಣೆಯ ಈ ವಿನೂತನ ಕೈಕರ್ಯವನ್ನು ಗಮನಿಸಿದ ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಇವರಿಗೆ ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳನ್ನು ಮಾಡಿದೆ. ಅವುಗಳೆಂದರೆ,
- 1995-ರಾಷ್ಟ್ರೀಯ ಪೌರ ಪ್ರಶಸ್ತಿ
- 1997-ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
- 1997-ವೀರಚಕ್ರ ಪ್ರಶಸ್ತಿ
- ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದಿಂದ ಮಾನ್ಯತೆಯ ಪ್ರಮಾಣ ಪತ್ರ
- ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ.
- 2000-ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ
- 2006-ಗಾಡ್ಫಿç ಫಿಲಿಪ್ಸ್ ಧೀರತೆ ಪ್ರಶಸ್ತಿ
- ಪಂಪಾಪತಿ ಪರಿಸರ ಪ್ರಶಸ್ತಿ
- ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ
- ವನಮಾತೆ ಪ್ರಶಸ್ತಿ
- ಮಾಗಡಿ ವ್ಯಕ್ತಿ ಪ್ರಶಸ್ತಿ
- ಶ್ರೀಮಾತಾ ಪ್ರಶಸ್ತಿ
- ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ
- ಕರ್ನಾಟಕ ಪರಿಸರ ಪ್ರಶಸ್ತಿ
- ಮಹಿಳಾರತ್ನ ಪ್ರಶಸ್ತಿ
- ನ್ಯಾಷನಲ್ ಸಿಟಿಜನ್ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- 2015-ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪುರಸ್ಕಾರ.
- ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ.
- 2010ರ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಲಭಿಸಿದೆ.
- 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ.
- 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ಸಂಘಟನೆಯೊಂದನ್ನು ಸ್ಥಾಪಿಸಿದ್ದು, ಇದಕ್ಕೆ ತಿಮ್ಮಕ್ಕರವರ ಸಾಧನೆಯನ್ನು ಆಧರಿಸಿ ಸಾಲುಮರದ ತಿಮ್ಮಕ್ಕ ಎಂದು ಹೆಸರಿಡಲಾಗಿದೆ. ತಿಮ್ಮಕ್ಕ ಅವರ ಪತಿ 1991ರಲ್ಲಿ ಮೃತಪಟ್ಟಿದ್ದು, ಪ್ರಸ್ತುತ ದೇಶದಾದ್ಯಂತ ಇವರನ್ನು ಹಲವಾರು ಕಾಡು ಬೆಳೆಸುವ ಮತ್ತು ಪರಿಸರ ಸಂಬಂಧಿತ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ.
ಪ್ರಸಿದ್ಧ ಸಸ್ಯ ವಿಜ್ಞಾನಿ ಡಾ|| ಜಗದೀಶ್ಚಂದ್ರ ಬೋಸರು ಸಸ್ಯಗಳೂ ಉಸಿರಾಡುತ್ತವೆ, ಅವುಗಳಿಗೂ ಚೈತನ್ಯವಿದೆ, ಸಸ್ಯಗಳಿಗೂ ನೋವು ನಲಿವುಗಳನ್ನು ಅನುಭವಿಸುವ ಸಾಮರ್ಥ್ಯವಿದೆ ಎಂದು ಜಗತ್ತಿಗೆ ತೋರಿದ್ದ ಸಿದ್ದಾಂತಕ್ಕೆ ಮಾನವೀಯ ಆಯಾಮ ನೀಡುವಂತೆ ಸಸಿನೆಟ್ಟು, ವಾತ್ಸಲ್ಯದ ನೀರೆರೆದು ಲಾಲಿಸಿ, ಪಾಲಿಸಿ, ಅವುಗಳ ಬೆಳವಣಿಗೆಯಲ್ಲಿ ತೃಪ್ತಿ, ಸಂತೋಷ, ಬದುಕಿನ ಸಾರ್ಥಕ್ಯವನ್ನು ಕಂಡ ವಾತ್ಸಲ್ಯಮಯಿ ಮಾತೆ ಶ್ರೀಮತಿ ತಿಮ್ಮಕ್ಕ ಅವರಿಗೊಂದು ಸಲಾಂ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160