ಕಾಣೆಯಾದಾಗ ಕಂಡದ್ದು – ಶರ್ಮಿಳಾ. ಎಸ್
“ಕಾಣೆಯಾದಾಗ ಕಂಡದ್ದು ಎನ್ನುವ ಭಾವವೇ ವಿಶಿಷ್ಠವಾದ ಅನುಭವ. ಹಾಗೆ ಕಾಣಲು ನಾನು ನಾನಾಗಬೇಕು ,ನನ್ನೊಳಗಿನ ಭಾವ ನಿಷ್ಕಲ್ಮಶವಾಗಿರಬೇಕು”.
ಕವಯತ್ರಿಯ ಮೊದಲ ಕವನ ಸಂಕಲನ ಇದು. ವಿವಿಧ ಕಾಲಘಟ್ಟಗಳಲ್ಲಿ ಹೊಮ್ಮಿದ ಭಾವಗಳನ್ನು ಪದಮಾಲೆ ಕಟ್ಟಿ ಬರಹವಾಗಿಸಿರುವ ಕವನಗಳ ಸಂಕಲನ ಇದು.
ಶಮಾ ಎಂಬ ಕಾವ್ಯನಾಮದಲ್ಲಿ ಬರೆದಿರುವ ಎಲ್ಲಾ ಕವನಗಳೂ ಅಂತರಂಗದ ಅರಿವಿನ ಸುತ್ತಲೂ ಸುತ್ತುತ್ತಾ ಕಾಣೆಯಾದದ್ದನ್ನು ಕಾಣುವ ಪ್ರಯತ್ನದಲ್ಲಿ ಅರಿವಿನ ಆಡುಂಬೊಲವನ್ನು ಹುಡುಕುತ್ತವೆ.
ಸಾವಿತ್ರಿ ಎಂದರೆ ಸೂರ್ಯನ ಕಿರಣ ಎಂಬ ಅರ್ಥವೂ ಇದೆ.
ಆ ಕಿರಣಗಳೇ ಬೆಳಕಿನರಮನೆಯಲ್ಲಿ
ಕುಳಿತವಗೆ ಅಂತರಂಗದ ಕತ್ತಲೆಯ
ತೊಡೆವ ದಾರಿ.
ಸಾವಿತ್ರಿಯಾಗಿ ಅವರ ಕವನಗಳ ಕಟ್ಟೋಣ ಚೆಂದವೆನಿಸುತ್ತವೆ. ಅವರ ಕವನ “ಜಂಟಿವರಸೆ”ಯ
ಉಪನಿಷತ್ತುಗಳು ಕರಗತವಾಗಿದ್ದರೂ,
ಇಹ-ಪರ ತತ್ವಗಳ ಅರಿತು ಅರಗಿಸಿಕೊಂಡರೂ,
ಮಾಯಾಮೃಗದ ಎದುರು ಮರೆವು ಸರ್ವಜ್ಞಾನ;
ಪುಸ್ತಕ ತೆರೆದರೆ ಇನ್ನೂ ಜಂಟಿವರಸೆಯಷ್ಟೇ !
ಸಾಲುಗಳು ಮತ್ತೆ ಮತ್ತೆ ಕಾಡುತ್ತವೆ.
ಹರೆಯದಲ್ಲಿ ಪ್ರೇಯಸಿಯಾದಾಗ ಉಂಟಾಗುವ ಭಾವವಂತೂ
“ಉರಿ ಬಿಸಿಲಿಗೆ ಬಿಳಿ ಮುಗಿಲಿಗೆ
ಮೈಯೊಡ್ಡಿ ಬೆಂದು ಬರಡಾಗಿ
ಅಲ್ಲಲ್ಲಿ ತಂಪೆರೆವ ಹಿತದಲಿ
ಮೀಯುವ ಆಶಾಭಾವ!”.
“ನೀನು ನೀನಾಗು
ನಾನಾಗ ನೀನಾಗುತ್ತೇನೆ
ಬದುಕೊಂದು ಅರಳು-ಮರಳು”
ಎಂಬ ಸಂದೇಶವನ್ನು ನೀಡುವ ಪ್ರಬುದ್ಧತೆ ಅವರ ಕವನಗಳಲ್ಲಿ ಕಾಣಬಹುದು.
ಅವರ ಕವನಗಳ ಒಟ್ಟಾರೆ ಭಾವ ಹೀಗಿದೆ
“ಬದುಕಿನಾ ಅಲೆಗಳಿಗೆ
ಸಿಲುಕಿ ತೊಳಲಾಡದೇ
ತೇಲುತ್ತ ಜೀಕುತಲಿ
ಸಾಗಬೇಕಿದೆ ಬದುಕು”
“ಅಂಟಿಯೂ ಅಂಟದಿಹ
ಗುಣವ ಮೈಗೂಡಿಸಿ
ಸೋಲಿನಲೂ ಗೆಲುವರಸಿ
ಹೊರಡಬೇಕಿದೆ ಮನಸು”
ಶರ್ಮಿಳಾ ಅಮ್ಮನಾದಾಗ,ಮಕ್ಕಳಿಗೆ “ಶಮ್ಮ” ಆಗುತ್ತಾಳೆ.
ಶಮ್ಮ ಎಂದರೆ ‘ಆಸರೆ’,ಸಂತಸದ ಖನಿ.
ಅಮ್ಮನ ಅಕ್ಕರೆಯೊಂದು
ಮೊಗೆದಷ್ಟೂ ತುಂಬುವ
ಅಕ್ಷಯ ಪಾತ್ರೆ
ಚಂದಿರನ ಬಿಂಬವ
ಬಾವಿಯಲಿ ತೋರಿ
ಚಂದ್ರಮನ ಕೊಟ್ಟ
ಮಾಂತ್ರಿಕ ಸುಂದರಿ ಅಮ್ಮ,
ಅವಳ ಕೈ ಬೆರಳಲಿ ಅಡಗಿಹುದು
ಜಗದ ಜವಾಬುದಾರಿ
“ಕಾಣೆಯಾದಾಗ ಕಂಡದ್ದು”
ತನ್ನ ಬದುಕಿನ ಪಯಣದ ವಿವಿಧ ಮಜಲಗಳಲ್ಲಿ ಅನುಭವಿಸಿದ ಎಲ್ಲಾ ತರಹದ ಭಾವಗಳ ‘ನುಡಿತೋರಣ’ .
ಒಟ್ಟಾರೆ ಹೇಳುವುದಾದರೆ,
ಮನವೆಲ್ಲ ತಿಳಿಯಾಗಿ
ದೇಹವದು ಹಗುರಾಗಿ
ಕಷ್ಟಗಳ ಕರಗಿಸಲು
ಶರಣಾಗಬೇಕಿದೆ ನಾವು
ಎಂಬ ಭಾವ ಅವರ ಕಾವ್ಯದ ಭಾವ.
ಶರ್ಮಿಳಾ ಅವರ ಅನುಭವದ ಮೂಸೆಯಿಂದ ಮತ್ತಷ್ಟು ಕವನ ಸಂಕಲನಗಳು ಬರಲಿ ಅವರಿಗೆ ಒಳಿತಾಗಲಿ. ಕವನ ಸಂಕಲನದ ಪ್ರತಿ ಕೊಳ್ಳಲು ಈ ಲಿಂಕ್ ಉಪಯೋಗಿಸಬಹುದು
ಸುನೀಲ್ ಹಳೆಯೂರು