ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ

ಕನ್ನಡ ಸಾಹಿತ್ಯ ಸಮ್ಮೇಳನ – 87 ಮಂಡ್ಯ

ಕನ್ನಡ ಬರೀ ಒಂದು ಭಾಷೆಯಲ್ಲ. ಅದೊಂದು ಸಂಸ್ಕಾರ ಮತ್ತು ಸಂಸ್ಕೃತಿ. ಎಷ್ಟೇ ಸಂಖ್ಯೆಯಲ್ಲಿ ಬೇರೆ ಬೇರೆ ಭಾಷೆಗಳಿದ್ದರೂ, ಅಪ್ಪಟ ಕನ್ನಡಿಗರಿಗೆ ಕನ್ನಡವನ್ನ ದಿನ ನಿತ್ಯ ಬಳಸುವವರಿಗೆ ದಿನವೂ ಹಬ್ಬವೇ. ಇದೀಗ ಎಲ್ಲೆಡೆ ಕನ್ನಡ ಹಬ್ಬದ್ದೇ ಮಾತು.

ಅಖಿಲ ಭಾರತ 87 ನೇ ಕನ್ನಡ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20, 21,ಹಾಗೂ 22 ರಂದು ನೆಡೆಯುತ್ತಿದೆ. ಮಂಡ್ಯದ ಪ್ರಮುಖ ಬೀದಿಯಲ್ಲಿ ಕೆಂಪೇಗೌಡರ ಪ್ರತಿಮೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ ನಡೆಸಿದೆ.

ಸಮಾರಂಭದಲ್ಲಿ ಮಂಡ್ಯದ ಸೊಗಡಿನ ಅನೇಕ ರುಚಿಕರ ಭೋಜನವೂ ಕನ್ನಡಿಗರ, ಇತರೆ ಭಾಷಿಗರು ಹಾಗು ವಿದೇಶಿಗರ ಕೈಬೀಸಿದೆ. ಹಾಗೆಯೇ ಧ್ವಜಾರೋಹಣದ ನಂತರ ಜಾನಪದ ನೃತ್ಯ, ಡೊಳ್ಳು ಕುಣಿತ, ಪುಸ್ತಕ ಬಿಡುಗಡೆ, ನುಡಿ ಜಾತ್ರೆ, ಚಿಂತನ ಮಂಥನ, ಸಂಗೀತ ಹೀಗೆ ಹಲವು ಮನರಂಜನೆಯೊಂದಿಗೆ ಮೂರೂ ದಿನವೂ ರಸದೌತಣವೇ. ಪ್ರತೀ ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನಗಳು, ಕನ್ನಡಿಗರಿಗೂ, ಕನ್ನಡೇತರರಿಗೂ, ಉತ್ತೇಜಿಸುವುದಷ್ಟೇ ಅಲ್ಲ, ಕನ್ನಡ ಸಾಹಿತ್ಯ,ಸಂಸ್ಕೃತಿಯ ಸಂರಕ್ಷಣೆಯ ಹೊಣೆ ಹೊತ್ತಿದೆ.

ಇಂಥ ಪರಿಕಲ್ಪನೆಗಳೇ, ಕನ್ನಡ ಬೆಳವಣಿಗೆಯ ಸಧ್ಯದ ಜೀವರಕ್ಷೆ. ಅದರರ್ಥ ಕನ್ನಡ ನೇಪಥ್ಯದಲ್ಲಿದೆ ಅಂತಲ್ಲ. ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಕನ್ನಡ ಎಂದೂ ಮೂಲೆ ಸೇರಿಲ್ಲ. ಈ ಮಣ್ಣಲ್ಲಿ ಕನ್ನಡ ಅಂದೂ, ಇಂದು ಗಟ್ಟಿಯಾಗಿ ನೆಲೆಯಾಗಿದೆ, ಇಂಥ ಸಮ್ಮೇಳನಗಳ ಜಾಗೃತಿ ಇಂದ ನಮ್ಮ ಕನ್ನಡ ಮತ್ತಷ್ಟು ಪ್ರಭಲವಾಗಲೆಂಬ ಆಶಯವಷ್ಟೇ. ಯುವ ಬರಹಗಾರರಿಗೆ ಪ್ರೋತ್ಸಾಹಿಸಿ, ನಮ್ಮ ಭಾಷಾ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ, ಹಾಗೂ ಕನ್ನಡಕ್ಕಾಗಿ ಜೀವ ಸವೆಸಿದ ಎಷ್ಟೋ ಹಿರಿಯ, ಕಿರಿಯ ಜೀವಗಳಿಗೆ ಅಭಿನಂದನೆ ಸಲ್ಲಿಸಿ ಕನ್ನಡ ಬಾವುಟ ಎತ್ತಿ ಹಿಡಿಯುವ ಮಹಾನ್ ಕಾರ್ಯವೇ ಇದರ ಮೂಲ ಉದ್ದೇಶ. ಒಂದೇ ಮಾತಲ್ಲಿ ಹೇಳುವುದಾದರೆ, ಇದು ಕನ್ನಡಿಗರ ಒಗ್ಗಟ್ಟು. ಅಂಥ ಒಗ್ಗಟ್ಟಿನ ಬಲ ಪ್ರದರ್ಶನವೇ ಕನ್ನಡ ಸಾಹಿತ್ಯ ಹಬ್ಬ.

ಬೆಂಗಳೂರಿನಲ್ಲಿ ಕನ್ನಡದ ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳನವು 1915 ರಲ್ಲಿ ಶುರುವಾಯಿತು. ಹೆಚ್.ವಿ.ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಶುರುವಾದ ಕನ್ನಡ ಹಬ್ಬ, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆಯುತ್ತ ಬಂದಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕನ್ನಡ ಕಂಪು ಮೂಡಿದೆ. ಪ್ರತೀ ವರ್ಷವೂ ಅನೇಕ ಸುಶಿಕ್ಷಿತ ಕವಿಗಳು, ಬರಹಗಾರರು ಅಧ್ಯಕ್ಷತೆಯ ಜವಾಬ್ದಾರಿ ಹೊತ್ತು ವೇದಿಕೆಯ ತೂಕ ಹೆಚ್ಚಿಸಿದ್ದಾರೆ. ಆದರೆ ಅಧ್ಯಕ್ಷತೆಯ ಹೊಣೆ ಹೊತ್ತ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯೇ. ಇಷ್ಟು ವರ್ಷಗಳಲ್ಲಿ ಕೆಲವೇ ಕೆಲವು ಮಹಿಳೆಯರಿಗೆ ಅವಕಾಶ ಒದಗಿರುವುದು. ಕಮಲ ಹಂಪನಾ, ಶಾಂತದೇವಿ ಮಾಳವಾಡ, ಗೀತ ನಾಗಭೂಷಣ್ ಹೀಗೆ ಬೆರಳೆಣಿಕೆಯಷ್ಟು ಕವಿಯತ್ರಿಯರು ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಾಧನೆ ಮಾಡಿರುವ ಮಹಿಳೆಯರು ಸಾಕಷ್ಟು ಜನ ನಮ್ಮೆಲ್ಲರ ಮಧ್ಯೆ ಇದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾದರೆ, ಮುಂದಿನ ದಿನಗಳಲ್ಲಿ ಮಹಿಳಾ ಬಲವು ಜೊತೆಗೂಡಿ ಮತ್ತಷ್ಟು ಉತ್ಸಾಹದಿಂದ ಕನ್ನಡ ಕೆಲಸಗಳು ಚುರುಕಾಗುತ್ತದೆ. ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ ರು ಚನ್ನಬಸಪ್ಪ ಅವರು ಈ ಸಲದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

‘ಕನ್ನಡ ಉಳಿಯೋದು ಕಥೆ ಕಾದಂಬರಿ ಓದುವುದರಿಂದಲ್ಲ, ದಿನವೂ ಬಳಸುವುದರಿಂದ’ ಅಂತ ನಮ್ಮೆಲ್ಲರ ಪ್ರೀತಿಯ ಪೂರ್ಣಚಂದ್ರ ತೇಜಸ್ವಿ ಹೇಳಿದ್ದಾರೆ. ಶುದ್ಧವಾದ ಭಾಷೆ ಬಳಕೆ ಮಾತ್ರವೇ ಶಾಶ್ವತ ಪರಿಹಾರ. ಬಳಕೆ ಮಾಡಿದಷ್ಟೂ ಅದರ ಜ್ಞಾನ ದುಪ್ಪಟ್ಟು ಆಗಲಿದೆ. ಇಲ್ಲಿ ವಲಸೆ ಬಂದ ಅನ್ಯ ಭಾಷಿಗರಿಗೂ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಅಥವಾ ಕನ್ನಡ ಭಾಷೆ ಕಲಿತವರಿಗೆ ಉದ್ಯೋಗ ಅವಕಾಶಗಳು ಒದಗಬೇಕು. ಅಂಥ ವ್ಯವಸ್ಥೆ ಕಲ್ಪಿಸಿದರೆ ಅನ್ಯ ಭಾಷಿಗರಿಗೂ ಕನ್ನಡ ಕಲಿಯುವ ಆಸಕ್ತಿ ಬರುವುದರಲ್ಲಿ ಸಂಶಯವಿಲ್ಲ. ಆಗ ಅನಿವಾರ್ಯದಿಂದಲಾದರೂ ಸ್ವಲ್ಪ ಮಟ್ಟಿಗೆ ಕಲಿಕೆಯಾಗುವುದು. ನಮ್ಮತನದ ಅಸ್ತಿತ್ವ ಉಳಿಸಿಕೊಳ್ಳಲು ಇದು ನಮಗೂ ಅನಿವಾರ್ಯವೇ.

ಶೈಲಾ
ಬೆಂಗಳೂರು

Related post