ನೂತನ ಜಗದಾ ಬಾಗಿಲು – ವಿವಿಧ ಲೇಖಕರ ಕಥಾಸಂಕಲನ
ನಾನು ನನ್ನ ಮೊದಲ ಕಾದಂಬರಿ ’ಆವರ್ತ’ ದ ಅರಿಕೆಯಲ್ಲಿ ಒಂದು ಸಾಲು ಬರೆದಿದ್ದೆ. ’ಭಾಷೆಯೊಂದನ್ನು ಆಡಲು ಕಲಿತ ಮೇಲೆ ಅದು ಎಂದಿನಿಂದಲೋ ನನ್ನ ಧ್ವನಿಯಲ್ಲಿ ಅಡಗಿತ್ತು ಎನ್ನಿಸುವಂತೆ, ಕೃತಿಯೊಂದನ್ನು ರಚಿಸಿದ ಮೇಲೆ ಅದು ಎಂದಿನಿಂದಲೋ ನನ್ನೊಳಗೆ ಅಡಗಿದ್ದ ಬುದ್ಧಿಭಾವಾನುಭವಗಳ ಒಟ್ಟಾರೆ ಪ್ರಕ್ರಿಯೆಯ ಹೊರಚೆಲ್ಲಿದ ಒಂದು ಭಾಗ ಎನ್ನಿಸುತ್ತದೆ’ ಎಂದು. ಅಂತೆಯೇ ಎಲ್ಲರೊಳಗೂ ಅಸಂಖ್ಯಾತ ಕಥೆಗಳಿವೆ. ಅದು ಯಾವುದಾವುದೋ ರೂಪದಲ್ಲಿ ಹೊರಗೆ ಪ್ರಕಟಗೊಳ್ಳುತ್ತದೆ. ಬರವಣಿಗೆಯ ಮೂಲಕ ಹೊರಹಾಕಲು ಗೊತ್ತಿಲ್ಲದವರೂ ಕೂಡ ಯಾವುದೋ ಬಗೆಯಲ್ಲಿ ಅಭಿವ್ಯಕ್ತಿಗೊಳಿಸುತ್ತಾರೆ. ಇನ್ನು ಬರವಣಿಗೆಯ ಮಾರ್ಗವನ್ನು ಕಂಡುಕೊಂಡವರಂತೂ ತಮ್ಮೊಳಗೆ ಹುಟ್ಟಿದ ಕಥೆಗೆ ಕಲಾತ್ಮಕವಾದ ರೂಪು ಕೊಟ್ಟು ನಿರೂಪಿಸುತ್ತಾರೆ.ಹಾಗೆ ಈ ಕಥಾಸಂಕಲನದಲ್ಲಿ ಐವತ್ತೆಂಟು ಕಥೆಗಾರರ ಕಥೆಗಳಿವೆ. ಇವರಲ್ಲಿ, ಇದಾಗಲೇ ಒಂದೆರಡು ಪುಸ್ತಕಗಳನ್ನು ಪ್ರಕಟ ಮಾಡಿರುವಂತಹ ಕಥೆಗಾರರು ಕೆಲವರಷ್ಟೇ. ಉಳಿದವರೆಲ್ಲಾ ಹೊಸ ಕಥೆಗಾರರು. ತಮ್ಮ ವಿನೂತನವಾದ ಕಥಾ ಹಂದರ, ನಿರೂಪಣೆಯ ಶೈಲಿ, ಭಾಷಾ ಬಳಕೆಗಳಿಂದ ತಮ್ಮದೇ ಆದ ಹೊಸ ಜಗತ್ತನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆದ್ದರಿಂದಲೇ ಸಂಕಲನದ ಕಥೆಯೊಂದರ ಹೆಸರು ಈ ಕಥಾಸಂಕಲನಕ್ಕೆ ಅತ್ಯಂತ ಪೂರಕವಾಗಿ ಹೊಂದತ್ತದೆಯೆಂದು, ಕಥಾಸಂಕಲನಕ್ಕೆ ’ನೂತನ ಜಗದಾ ಬಾಗಿಲು’ ಎಂದು ಶೀರ್ಷಿಕೆಯನ್ನಾಗಿ ಇರಿಸಿದ್ದೇನೆ. ಹೊಸ ಕಥೆಗಾರರ ನೂತನ ಜಗತ್ತಿಗೆ ಬಾಗಿಲು ತೆರೆದಂತಿದೆ ಈ ಕಥಾ ಸಂಕಲನ.

ವಾಸುದೇವ ನಾಡಿಗ್ ಅವರ ’ವಾಸನೆಗಳು’ ಕಥೆಯಲ್ಲಿ ಕಥೆಯೇ ನಿರೂಪಕ. ನನ್ನ ಬಗ್ಗೆ ಹೇಳು, ನನ್ನ ಬಗ್ಗೆ ಹೇಳು… ಎಂದು ತಾಂಡವವಾಡುವ ಪಾತ್ರಗಳ ಸುಖ ದುಃಖಗಳನ್ನು ನೋಡುತ್ತಾ, ನಿರೂಪಿಸುತ್ತಾ, ಪಾತ್ರದ ಸಂಕಟದ ಬದುಕಿನ ಕಥೆಯ ಭಾರವನ್ನು ತನ್ನಿಂದ ಹೊರಲಾಗುವುದಿಲ್ಲವೆಂಬ ಕಾರಣಕ್ಕೆ, ಕೇಳಲೇ ತನ್ನಿಂದ ಸಾಧ್ಯವಿಲ್ಲವೆಂದು ಕಥೆಯೇ ನಿರಾಕರಿಸುವ ಪ್ರಕ್ರಿಯೆಯನ್ನು ಇಲ್ಲಿ ಕಾಣಬಹುದು.
ಸುರೇಶ್ ಹೆಗಡೆಯವರ ’ವಿಮುಕ್ತಿ’ ಕಥೆಯು ಖಲೀಲ್ ಗಿಬ್ರಾನ್ ನ ’ಮುಕ್ತಿಯಿಲ್ಲದ ಬದುಕು ಆತ್ಮವಿಲ್ಲದ ದೇಹದಂತೆ’ ಎಂಬ ಮಾತಿನಂತೆ, ಮುಕ್ತಿಯೆಡೆಗೆ ತುಡಿಯುವ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ತಾನು ಮಾಡದ ಅಪರಾಧಕ್ಕೆ ಶಿಕ್ಷೆ ಅನುಭವಿಸಿ ಬಿಡುಗಡೆಗೊಳ್ಳುವ ಪಾಚಣ್ಣ, ಆಧ್ಯಾತ್ಮಿಕ ನೆಲೆಯಲ್ಲೂ ಬಿಡುಗಡೆ ಹೊಂದುವುದು ಈ ಕಥೆಯ ತಿರುಳು. ಸೋಮಶೇಖರ್ ಅವರ ’ತಿರುಗಣಿ’ ಕಥೆಯು ತನ್ನ ಗಂಡನಿಂದ ಕಾಣದ ಸುಖವನ್ನು ಮೈದುನನಲ್ಲಿ ಕಂಡು, ಆ ಪ್ರೇಮಕ್ಕೊಂದು ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳಲಾಗದೆ ವಿಫಲವಾಗುವ ಮಹಿಳೆಯ ಅಂತರಂಗದ ಹೊಯ್ದಾಟವನ್ನು ಚಿತ್ರಿಸುತ್ತದೆ. ಲಿಂಗರಾಜ ಸೊಟ್ಟಪ್ಪನವರ ಅವರ ’ಒಂದು ಪಾವತಿಯಾಗದ ರಸೀದಿ’ ಕಥೆಯು, ಹಿನ್ನೆಲೆಯನ್ನು ಅರಿಯದೆ ಮಹಿಳೆಯೊಬ್ಬಳನ್ನು ಏಕಮುಖವಾಗಿ ಪ್ರೀತಿಸತೊಡಗಿ, ಅದನ್ನು ವ್ಯಕ್ತಪಡಿಸಲು ಸಿದ್ಧನಾಗುವ ವೇಳೆಗೆ ಅವಳು ನನ್ ಆಗಿಬಿಡುವುದಕ್ಕೆ ಸಾಕ್ಷಿಯಾಗುವ ವ್ಯಕ್ತಿಯೊಬ್ಬನ ತುಮುಲಗಳನ್ನು ಅನಾವರಣಗೊಳಿಸುತ್ತದೆ. ಸುಷ್ಮಾ ಎಂ ಸವಸುದ್ದಿಯವರ ’ಗುಡಿಕಟ್ಟೆ’ ಕಥೆಯಲ್ಲಿ ಪಂಚಾಯಿತಿ ಕಟ್ಟೆಯೇ ಆದ ಗುಡಿಕಟ್ಟೆಯಲ್ಲಿ ವಿಧವೆಯಾದ ಸಾಕವ್ವ ಎಂಬ ಮಹಿಳೆಯನ್ನು ಊರಿನ ಹಿರಿಯರು ಗುಡಿಯನ್ನು ದೊಡ್ಡಲು ಮಾಡಲು ಅವಳ ಭೂಮಿಯನ್ನು ದೇವರಿಗೆ ಕೊಡಬೇಕೆಂದು ಕೇಳುತ್ತಾರೆ. ಅವಳು ತನಗೆ, ತನ್ನ ಮಗನಿಗೆ ಇರುವುದು ಅದೊಂದೇ ಆಧಾರವೆಂದು ಹೇಳಿ, ನಿರಾಕರಿಸುತ್ತಾಳೆ. ಊರಿನ ದೇವರು ವ್ಯಕ್ತಿಯೊಬ್ಬನ ಮೇಲೆ ಬಂದು, ಅವನನ್ನು ಪ್ರತಿ ಮನೆಗಳ ಮುಂದೂ ಕರೆದುಕೊಂಡು ಹೋಗಲಾಗುತ್ತದೆ. ಆಗ, ಇದೇ ಸಾಕವ್ವಳನ್ನು ಅವಳ ಮಗನನ್ನು ದೇವರ ಸೇವೆಗೆ ಬಿಟ್ಟುಬಿಡಬೇಕೆಂದು ದೇವರ ಆದೇಶವಾಗುತ್ತದೆ. ಆಗಲೂ ಪ್ರತಿಭಟಿಸುವ ಸಾಕವ್ವಳು ಕಡೆಗೆ ತೋಟದ ಹಾದಿಯಲ್ಲಿ ಹೆಣವಾಗಿ ಸಿಗುತ್ತಾಳೆ. ಅದು ದೇವರು ಕೊಟ್ಟ ಶಿಕ್ಷೆಯೆಂದು ಎಲ್ಲರೂ ಭಾವಿಸುತ್ತಾರೆ. ಕೆಳವರ್ಗದ ಮನೆಯ ಮಕ್ಕಳನ್ನೇ ಗುರಿಯಾಗಿ ಓದುಬಿಟ್ಟು, ದೇವರ ಸೇವೆಗೆ ಮೀಸಲಾಗುವಂತೆ ದೇವರು ಮೈಮೇಲೆ ಬಂದ ವ್ಯಕ್ತಿ ಆದೇಶಿಸುವುದು ವಾಡಿಕೆಯೆಂಬ ಸಂಗತಿಯು ಚಿಂತನೆಗೆ ಈಡುಮಾಡುತ್ತದೆ.

ವಿಜಯಶ್ರೀ ಹಾಲಾಡಿಯವರ ’ವಕ್ರ ಕೋಡಿನ ಬಸವ’ ಕಥೆಯಲ್ಲಿ ಬಾಲ್ಯದಲ್ಲಿ ರಕ್ಷಣೆ ಒದಗಿಸಬೇಕಾಗಿದ್ದ ಕುಟುಂಬದ ಹಿರಿಯನೊಬ್ಬನಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕಥಾನಾಯಕಿಗೆ ಆಗಾಗ ವಕ್ರ ಕೋಡಿನ ಬಸವ ಕನಸಿನಲ್ಲಿ ಇಂತಹ ಪಾತಕ ಪುರುಷ ಸಮಾಜದ ಪ್ರತೀಕದಂತೆ ಕಾಣಿಸುಕೊಳ್ಳುತ್ತಿರುತ್ತದೆ. ಗಂಡಸೊಬ್ಬನಿಂದ ಆದ ಇಂತಹ ಅನುಭವವನ್ನು ಮರೆಯಲು ಸಾಧ್ಯವೇ ಆಗದೆ ಮದುವೆಯನ್ನು ಮುಂದೂಡುತ್ತಾ ಬಂದಿದ್ದು, ಕಡೆಗೆ ಒಬ್ಬ ಯೋಗ್ಯ ಸಹೋದ್ಯೋಗಿಯಿಂದ ಮದುವೆಯ ಪ್ರಸ್ತಾಪ ಬಂದಾಗ, ಒಪ್ಪಿಕೊಳ್ಳುವುದರಲ್ಲಿದ್ದ ನಾಯಕಿಯ ಕಣ್ಣುಗಳ ಮುಂದೆ ಪುನಃ ವಕ್ರ ಕೋಡಿನ ಬಸವ ಕಾಣಿಸಿಕೊಂಡು ಕನಸೆಲ್ಲಾ ಕದಡಿಹೋಗುತ್ತದೆ. ವಾಣಿ ಭಟ್ಟ ಹಂಡ್ರಮನೆ ಅವರ ’ಭರತಮಾತೆ ಶಾಕುಂತಲೆ’ ಕಥೆಯಲ್ಲಿ ಮಾಧವಿ ಎಂಬ ಕಾಲೇಜಿನ ಕಲಾ ವಿಭಾಗದ ಉಪನ್ಯಾಸಕಿಯು ಕಾಲೇಜಿನ ನಾಟಕೋತ್ಸವದ ದಿನಕ್ಕಾಗಿ ಕಾಳಿದಾಸನ ’ಅಭಿಜ್ಞಾನ ಶಾಕುಂತಲೆ’ ಯನ್ನು ಆಧರಿಸಿ ಮೊದಲಿಗೆ ನಾಟಕ ಬರೆಯಲು ತೊಡಗುತ್ತಾಳೆ. ಆದರೆ ನಂತರದಲ್ಲಿ ಶಾಕುಂತಲೆಯನ್ನು ಅಬಲೆಯಂತೆ ಅಲ್ಲದೆ, ಆಧುನಿಕ ದೃಷ್ಟಿಕೋನದಲ್ಲಿ ಭರತನ ಮಾತೆ ಶಾಕುಂತಲೆಯಂತೆ ಚಿತ್ರಿಸಿ, ನಿರೂಪಿಸಿ, ನಿರ್ದೇಶಿಸಿ ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಾಳೆ. ಪ್ರವೀಣ್ ಕುಮಾರ್ ಅವರ ’ಗುರುತು ನೇತಾಡಲು’ ಕಥೆಯು ಬಾಲಕನೊಬ್ಬನ ನಿರೂಪಣೆಯಲ್ಲಿ ಚಿತ್ರಿತಗೊಂಡಿದೆ. ಕಥೆಯ ಆರಂಭದಲ್ಲಿ ಬಾಲಕನ ತಾಯಿ ಭಾಗ್ಯ, ತನ್ನ ಕರಿಮಣಿ ಸರ ಕಿತ್ತುಹೋದಾಗ, ಕೊರಳಿಗೆ ಅರಿಶಿಣದ ದಾರ ಕಟ್ಟಿಕೊಂಡು ಕರಿಮಣಿಯನ್ನು ಪೋಣಿಸಿಕೊಳ್ಳುತ್ತಾಳೆ. ಅಷ್ಟರಮಟ್ಟಿಗೆ ಕೊರಳಿಗೆ ಮಾಂಗಲ್ಯವಿಲ್ಲದೆ ಇದ್ದರೆ ಅಪಶಕುನವೆಂದು ಭಾವಿಸುವವಳು, ತನ್ನ ಗಂಡ ಇನ್ಯಾರನ್ನೋ ಕಟ್ಟಿಕೊಂಡಿರುವ ಸಂಗತಿ ತಿಳಿದು ರಂಪಾಟವಾಗಿ, ತನ್ನ ತವರಿಗೆ ಬಂದು, ನಾಟಕವೊಂದರಲ್ಲಿ ಗೃಹಿಣಿಯ ಪಾತ್ರ ವಹಿಸುತ್ತಿದ್ದ ತನ್ನ ತಮ್ಮನಿಗೆ ನಿರ್ಭಾವುಕಳಾಗಿ ತನ್ನ ಕೊರಳ ಕರಿಮಣಿ ಸರವನ್ನು ತೆಗೆದುಕೊಟ್ಟುಬಿಡುತ್ತಾಳೆ. ಬಿರುಕು ಮೂಡಿದ ದಾಂಪತ್ಯದ, ಅರ್ಥ ಕಳೆದುಕೊಂಡ, ಕೇವಲ ಕೊರಳಿಂದ ನೇತಾಡುವ ಗುರುತಾಗಿ ಉಳಿದುಬಿಡುವ ಮಾಂಗಲ್ಯದ ಪ್ರಸಂಗಕ್ಕೆ ಮುಗ್ಧ ಬಾಲಕ ಸಾಕ್ಷಿಯಾಗುತ್ತಾನೆ. ನಳಿನಿ ಭೀಮಪ್ಪ ಅವರ ’ಆಸರೆ’ ಕಥೆಯು ಚಿಕ್ಕ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡು, ಐದು ವರ್ಷದ ಎಳೆಯ ಮಗನೊಂದಿಗೆ ಜೀವನ ಸಾಗಿಸುತ್ತಾ, ಅತ್ತ ಗಂಡನ ಮನೆಯ ಆಸ್ತಿಯೂ ಸಿಗದೆ, ಇತ್ತ ತವರಿನ ಆಸ್ತಿಯೂ ಸರಿಯಾಗಿ ಸಿಗದೆ, ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು, ಊರ ಗಂಡಸರ ಕೆಟ್ಟ ದೃಷ್ಟಿಗೆ ಬಿದ್ದು, ಹೆಸರು ಕೆಡಿಸಿಕೊಂಡು, ಸಮಾಜದ ಆಡಿಕೊಳ್ಳುವ ಬಾಯಿಗೆ ಅವಲಕ್ಕಿಯಂತೆ ದೈನ್ಯದಿಂದ ಬದುಕು ದೂಡುವ ಲಲಿತ ಎಂಬ ಹೆಣ್ಣುಮಗಳ ಬವಣೆಯನ್ನು ನಿರೂಪಿಸುತ್ತದೆ. ಸುಮಂತ್ ಗಾಣಿಗ ಅವರ ’ಕಡಲ ಪಿಸುಮಾತು’ ಕಥೆಯಲ್ಲಿ ಕಥಾನಾಯಕ ತನ್ನ ಮನೆಯ ಸಮೀಪವೇ ಇರುವ ಕಡಲ ಕಿನಾರೆಗೆ ಹೋಗುತ್ತಾನೆ. ಅಲ್ಲಿಗೆ ಒಬ್ಬಳು ಹುಡುಗಿಯೂ ಇವನು ಹೋಗುವ ಮೊದಲೇ ಬಂದು ಕುಳಿತಿರುತ್ತಾಳೆ. ಅವಳಿಗಾಗಿ ನಿತ್ಯ ಹೋಗುವ ಇವನಿಗೆ ಅವಳು ಆರು ತಿಂಗಳಿನಿಂದ ತಾನು ಅಲ್ಲಿಗೆ ಬರುತ್ತಿರುವುದಾಗಿ ಹೇಳುತ್ತಾಳೆ. ಕಡಲೇ ಕರೆದಂತಾಗಿ ಬಂದಿರಲ್ಲವೇ ಎನ್ನುವ ಅವಳ ಮಾತಿನಲ್ಲಿಯೇ ಕಥೆಯ ನಿಗೂಢತೆಯು ಅಡಗಿದೆ. ಅವನೊಂದಿಗೆ ತೃಪ್ತಿಯಾಗುವಷ್ಟು ಮಾತನಾಡಿದ ದಿನ ಅವನಿಗೆ ಕೃತಜ್ಞತೆ ಹೇಳುವವಳು ಪುನಃ ಅವನಿಗೆ ಅಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಅವಳ ಅನುಪಸ್ಥಿತಿಯನ್ನು ನೆನೆಯುತ್ತ ಅವನಿಗೆ ಏನೋ ಹೊಳೆದಂತಾಗಿ ಪೇಚಾಡಿಕೊಳ್ಳುವುದೇ ಕಥೆಯ ಕೊನೆಯಾಗುತ್ತದೆ. ಅವಳ ಮಾತುಗಳೇ ಇಲ್ಲಿ ಕಡಲ ಪಿಸುಮಾತಾಗಿದೆ.
ಅಪರ್ಣಾ ಸರಳಾಯ ಅವರ ’ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಿಮಿಣಿ’ ಕಥೆಯಲ್ಲಿ ಕಥಾ ನಿರೂಪಕಿಯ ಪೂರ್ವಿಕಳಾದ ಅಜ್ಜಿಯ ಬದುಕಿನ ಬವಣೆಯು ಅವಳ ಕೊರಳ ಅವಲಕ್ಕಿ ಸರದ ವೃತ್ತಾಂತದ ಮೂಲಕ ತೆರೆದುಕೊಳ್ಳುತ್ತದೆ. ತನ್ನ ಗಂಡ ತನ್ನಿಂದ ತನ್ನ ತವರುಮನೆಯವರು ಮಾಡಿಸಿಕೊಟ್ಟಿದ್ದ ಅವಲಕ್ಕಿ ಸರವನ್ನು ಕಿತ್ತುಕೊಂಡು ಹೋದ ಮೇಲೆ, ಗಂಡನೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಒಂಟಿಯಾಗಿಬಿಡುವ ವಾಗ್ಧೇವಿಯ ಬದುಕಿನ ತುಣುಕು ತುಣುಕನ್ನು ನಿರೂಪಕಿಯಾದ ಮೊಮ್ಮಗಳು ಕೂಡಿಸುತ್ತಾ ಸಾಗುತ್ತಾಳೆ. ಅವಳ ಮಗನನ್ನು ಕೈಹಿಡಿಯಲು ಬಂದ ಹೆಣ್ಣಿನ ಮೂಲಕ ಅಜ್ಜಿಯು ಕಳೆದುಕೊಂಡ ಅವಲಕ್ಕಿ ಸರವು ಮನೆಸೇರುವ ಪ್ರಸಂಗ ಒದಗಿಬರುವುದೊಂದು ಸೋಜಿಗವೆನಿಸುತ್ತದೆ. ನೀತಾ ರಾವ್ ಅವರ ’ನೂತನ ಜಗದ ಬಾಗಿಲು’ ಕಥೆಯಲ್ಲಿ ಚಿಕ್ಕಂದಿನಿಂದಲೂ ಒಂದು ಕಾಲಿನ ಸ್ವಾಧೀನವಿಲ್ಲದ ಪಾರು, ಜೀವನದಲ್ಲಿ ಜಿಗುಪ್ಸೆ ಹುಟ್ಟಿ, ತನ್ನ ಬದುಕನ್ನು ಅಂತ್ಯ ಮಾಡಿಕೊಳ್ಳಲು ಯತ್ನಿಸಿದಾಗ, ದಿಗ್ವಿಜಯನು ಅವಳನ್ನು ಆ ಸ್ಥಿತಿಯಿಂದ ಹೊರತರುತ್ತಾನೆ. ಅವನ ಸ್ನೇಹದಿಂದ ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವ ಪಾರುವಿಗೆ, ಕಡೆಯಲ್ಲಿ ವಿಮಾನಯಾನ ಮಾಡುವಾಗ, ಕೆಳಗಿನಿಂದ ಅಗಾಧವಾಗಿ ಕಂಡದ್ದೆಲ್ಲಾ ಮೇಲಕ್ಕೆ ಏರುತ್ತಾ ಏರುತ್ತಾ ಚಿಕ್ಕದಾಗಿ ಕಾಣುತ್ತವೆ ಎನ್ನುವ ತತ್ವ ಅರಿವಿಗೆ ಬರುತ್ತದೆ. ಡಾ.ಕರುಣಾಕರ್ ಶೆಟ್ಟಿ ಅವರ ’ಅದು ಸುಮ್ಮನೆ’ ಕಥೆಯು, ತಾವು ತಮ್ಮ ಪತಿಯೊಂದಿಗೆ ಕೂಡಿ ಕಟ್ಟಿದ ಮನೆ, ಬೆಳೆಸಿದ ಗಿಡ ಮರ ಬಳ್ಳಿ, ಸಾಕಿದ ದನಕರುಗಳು ಎಲ್ಲವನ್ನೂ ಮಗನಿಂದ ಕಳೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುವ ಜಾನಕಿ ಎನ್ನುವ ಪಾತ್ರದ ಮನೋಗತವನ್ನು ಅನಾವರಣ ಮಾಡುತ್ತದೆ. ಮನೆ, ತೋಟ, ದರಕರುಗಳೊಂದಿಗೆ ತಾಯಿಯ ಭಾವನಾತ್ಮಕ ಸಂಬಂಧಕ್ಕೆ ಎಳ್ಳಷ್ಟೂ ಬೆಲೆ ಕೊಡದ ಮಗ ಗೌರವ್ ಇಂದಿನ ವ್ಯಾವಹಾರಿಕ ದೃಷ್ಟಿಕೋನ ಮಾತ್ರವೇ ಹೊಂದಿರುವ ಬಹುತೇಕ ಯುವಪೀಳಿಗೆಯ ಪ್ರತಿನಿಧಿಯಾಗಿ ಕಾಣುತ್ತಾನೆ. ಜ್ಯೋತಿ ಬಿ ದೇವಣಗಾವ್ ಅವರ ’ಎರಡು ಮಾಸಿ ಬೆಂಡೋಲಿ’ ಕಥೆಯಲ್ಲಿ ಪಂಚಾಯಿತಿಗೆ ಸೇರಿದ ಸರ್ಕಾರಿ ಕೂಲಿ ಕೆಲಸಕ್ಕೆ ಹೋದರೆ ಕೈತುಂಬ ಪಗಾರ ಸಿಗುವುದೆಂದೂ, ಅದರಿಂದ ತಾನು ಬಹಳ ಕಾಲದಿಂದ ಆಸೆ ಪಟ್ಟಿದ್ದ ಎರಡು ಮಾಸಿ ಬೆಂಡೋಲಿ ಮಾಡಿಸಿಕೊಳ್ಳಬಹುದೆಂದು ಆಸೆ ಇಟ್ಟುಕೊಂಡಿದ್ದ ಈರಮ್ಮನಿಗೆ ಕಾರಣಾಂತರದಿಂದ ಆ ಕೆಲಸ ತಪ್ಪಿಹೋದಾಗ ಕೆಡುಕೆನಿಸುತ್ತದೆ. ಆದರೂ ಮತ್ತೊಂದು ಹೊಲದ ಕೆಲಸಕ್ಕೆ ಹೋಗಿ ಕಷ್ಟಪಟ್ಟು ದುಡಿದು ಹಣ ಒಟ್ಟುಹಾಕುವ ಈರಮ್ಮನ ಗಂಟನ್ನು ಮಗ ಹಾರಿಸಿಕೊಂಡು ಹೋದಾಗ, ತನ್ನ ಬೆಂಡೋಲೆಯ ಆಸೆಗೆ ಮಣ್ಣು ಹೊಯ್ದುಕೊಂಡು ಕೂರುವ ಈರಮ್ಮನ ಅಸಹಾಯಕತೆ ಮನಮಿಡಿಯುವಂತಿದೆ. ಡಾ.ಮಾಧವಿ ಎಸ್ ಭಂಡಾರಿ ಅವರ ’ನನ್ನ ಕುಂಕುಮ ಉಳಿಸಿದವರು’ ಕಥೆಯು ಕಥಾ ನಿರೂಪಕಿಯು ತನ್ನ ಪತಿಯೊಂದಿಗೆ ಸಮಾರಂಭವೊಂದಕ್ಕೆ ಹೋಗಿದ್ದಾಗ, ಮಹಿಳೆಯೊಬ್ಬರು ಹೊರ ಊರಿನಲ್ಲಿ ಬ್ಯಾಂಕಿನ ಕೆಲಸದಲ್ಲಿದ್ದ ತಮ್ಮ ಪತಿಗೆ ಅಪಾಯ ಒದಗಿದಾಗ, ಅದರ ಮಾಹಿತಿ ಕೊಟ್ಟು ತಮ್ಮ ಪತಿಯನ್ನು ರಕ್ಷಿಸಿದವರು ನಿರೂಪಕಿಯ ಪತಿ ಎಂದು ಎಲ್ಲರ ಸಮ್ಮುಖದಲ್ಲಿ ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಇದರಿಂದ ನಿರೂಪಕಿಯ ಹೃದಯ ತುಂಬಿಬರುತ್ತದೆ.

ಡಾ.ನಮ್ರತಾ ಬಿ ಅವರ ’ಅವಶೇಷ’ ಕಥೆಯಲ್ಲಿ ವಿದೇಶಕ್ಕೆ ಹೋಗಿ ತನ್ನದೇ ಲೋಕದಲ್ಲಿ ಮುಳುಗಿ, ಹೆತ್ತ ತಾಯಿಗೆ ಕಡೆಯ ಪಕ್ಷ ಕರೆಯಾದರೂ ಮಾಡಿ ಸಂಪರ್ಕದಲ್ಲಿರದೆ, ಒಮ್ಮೆ ಆಕಸ್ಮಿಕವಾಗಿ ಭಾರತಕ್ಕೆ ಬಂದು ತಮ್ಮ ಫ್ಲಾಟಿನಲ್ಲಿ ಸತ್ತು ಅಸ್ಥಿಪಂಜರವೇ ಆಗಿಹೋಗಿರುವ ತಾಯಿಯನ್ನು ಕಾಣುವ ಬೇಜವಾಬ್ದಾರಿ ಮಗನ ಚಿತ್ರಣವಿದೆ. ತಾಯಿ ಬದುಕಿದ್ದಾಗ ಬಂದು ಪಕ್ಕದಲ್ಲಿ ಕೂತು ಮಾತನಾಡಲಿಲ್ಲ, ಸತ್ತಾಗ ಅಂತ್ಯಕ್ರಿಯೆ ಮಾಡಲಿಲ್ಲ, ಅಪರ ಕರ್ಮಗಳನ್ನು ಮಾಡುವನೋ ಇಲ್ಲವೋ ಗೊತ್ತಿಲ್ಲ, ಆದರೆ ತಾಯಿಯ ಸ್ಮಾರಕ ಮತ್ತು ಟ್ರಸ್ಟ್ ಅಗತ್ಯವಾಗಿ ಮಾಡುತ್ತಾನೆಂಬ ನಿರೂಪಕಿಯ ವ್ಯಂಗ್ಯದ ಮಾತಿನೊಂದಿಗೆ ಕಥೆ ಕೊನೆಗೊಳ್ಳುತ್ತದೆ. ಅನಂತ ಕುಣಿಗಲ್ ಅವರ ’ಓಲ್ಯಾ’ ಕಥೆಯು ಊರಿನ ರಾಜಕಾರಣಕ್ಕಾಗಿ ದೇವರ ಹೆಸರಿನಲ್ಲಿ ನಾರಾಯಣ ಎಂಬ ಅಮಾಯಕನನ್ನು ಕುರುಡನಾಗಿಸುವ, ಅವನು ತನಗೆ ಹಾಗೆ ಮಾಡಿದ ದಾಸಪ್ಪ, ಶಶಾಂಕ, ಊರ ಪಂಚಾಯತಿ ಅಧ್ಯಕ್ಷರು ಮೂವರ ಮೇಲೂ ’ಓಲ್ಯಾ’ ಎಂದು ಕೂಗಿಕೊಂಡು ಬಂದು ಪ್ರತೀಕಾರ ತೀರಿಸಿಕೊಳ್ಳುವ ಚಿತ್ರಣವನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. ಮಹಮ್ಮದ್ ಶರೀಫ್ ಕಾಡುಮಠ ಅವರ ’ಅರ್ಧ ಮನುಷ್ಯ’ ಕಥೆಯಲ್ಲಿ ಕುಮಾರನು ಐದು ವರ್ಷಗಳ ಹಿಂದೆ ಆದ ತನ್ನ ಗೆಳತಿಯ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣದ ಆರೋಪಿ ಸುರೇಂದ್ರನಿರುವ ದೂರ ಲಖನೌಗೆ ಕೆಲಸದ ನೆಪದಿಂದ ಬಂದು ಸೇರಿಕೊಂಡು, ನೀಚ ಪ್ರವೃತ್ತಿಯವನಾಗಿದ್ದ ಸುರೇಂದ್ರನ ಮನಃಪರಿವರ್ತನೆ ಮಾಡಿ ಮನುಷ್ಯನನ್ನಾಗಿಸುತ್ತಾನೆ. ತನ್ನ ತಪ್ಪಿನ ಅರಿವು ಅವನಿಗೆ ಆಗುವಂತೆ ಮಾಡಿದ ನಂತರ ಹಿಂತಿರುಗಿ ಹೊರಟುಹೋಗುವ ಕುಮಾರ ಎರಡೇ ದಿನಗಳ ಅವಧಿಯಲ್ಲಿ ಸುರೇಂದ್ರನು ಪೋಲೀಸರಿಗೆ ಶರಣಾಗುವ ಸುದ್ದಿಯನ್ನು ವಾಹಿನಿಯೊಂದರಲ್ಲಿ ನೋಡುತ್ತಾನೆ. ಡಾ.ಲೋಹಿತೇಶ್ವರಿ ಎಸ್. ಪಿ ಅವರ ’ಜೀವಾಮೃತವಾದ ಅಮೃತವಾಣಿ’ ಎಂಬ ಕಥೆಯು ಭಗ್ನಪ್ರೇಮಿಯಾದ ಮೇಲೆ ಒಂಟಿ ಬದುಕನ್ನು ಸಾಗಿಸುತ್ತ, ಕಡೆಗೆ ಜೀವಕ್ಕೆ ಒಂದು ಆಸರೆ ಬೇಕೆಂದು ಹೆಣ್ಣುಮಗುವೊಂದನ್ನು ದತ್ತು ಪಡೆದು, ಆ ಮಗುವಿನ ಬದುಕನ್ನು ರೂಪಿಸುವಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಮಹಿಳೆಯೊಬ್ಬಳ ಅಂತರಂಗವನ್ನು ಅನಾವರಣಗೊಳಿಸುತ್ತದೆ. ಮಾಧವಿ ಹೆಬ್ಬಾರ್ ಅವರ ’ಪತ್ರ’ ಕಥೆಯಲ್ಲಿ ಮಗನ ಮದುವೆ ನಿಶ್ಚಯಗೊಂಡ ಸಂದರ್ಭದಲ್ಲಿ ವಧುವಿನ ತಂದೆ ಕಳಿಸುವ ಅಣಕು ಪತ್ರವೊಂದು ವರನ ತಂದೆ ತಾಯಿಯರ ಬಿರುಕನ್ನು ಸರಿಪಡಿಸುತ್ತದೆ. ಅದೇ ವೇಳೆಗೆ ವರನ ಅಜ್ಜಿಗೂ ನೀತಿಪಾಠ ಆಗುವ ಹಾಗೆ ಮಾಡುತ್ತದೆ. ಮಲ್ಲಮ್ಮ ಜೊಂಡಿ ಅವರ ’ಇ ಗೋ’ ಕಥೆಯು, ವೃಥಾ ತನ್ನ ಗಂಡನ ಮೇಲೆ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧವಿದೆಯೆಂದು ಅನುಮಾನ ಪಟ್ಟು, ತನ್ನಷ್ಟಕ್ಕೆ ತಾನೇ ನರಳಿ, ನಿಜಾಂಶ ತಿಳಿದು ತಾನೇ ತಲೆತಗ್ಗಿಸಿ ನಿಲ್ಲುವ ನಾಯಕಿಯ ಮಾನಸಿಕ ತಲ್ಲಣವನ್ನು ಚಿತ್ರಿಸುತ್ತದೆ.
ಪದ್ಮಾವತಿ ಚಂದ್ರು ಅವರ ’ಎಡೆ’ ಕಥೆಯು, ಇಬ್ಬರು ಗಂಡುಮಕ್ಕಳಿದ್ದರೂ ಮಹಾಲಯ ಅಮಾವಾಸ್ಯೆಯ ದಿನದಂದು ಗತಿಸಿದ ತನ್ನ ಗಂಡನಿಗೆ ಎಡೆ ಇಡಲು ಹೋರಾಟವನ್ನೇ ಮಾಡಬೇಕಾದ ಮನೆಗೆಲಸ ಮಾಡುವ ತಾಯಮ್ಮ ಎಂಬ ಮಹಿಳೆಯ ಪಾಡನ್ನು ಮನಮುಟ್ಟುವಂತೆ ತೆರೆದಿಡುತ್ತದೆ. ಗೀತಾ ಎಸ್ ಅವರ ’ಅನಾಥಪ್ರಜ್ಞೆ’ ಕಥೆಯಲ್ಲಿ ಮಗಳನ್ನು ಕಳೆದುಕೊಂಡ ರಾಜಾರಾಮ್, ತಾಯಿಯನ್ನು ಕಳೆದುಕೊಂಡ ರಕ್ಷಿತ್ ಇಬ್ಬರೂ ಯಾರೂ ಇಲ್ಲದ ಅನಾಥರಂತೆಯೇ ಬದುಕು ಸಾಗಿಸುತ್ತ, ಕಡೆಗೆ ತಮ್ಮಿಬ್ಬರ ನಡುವಿನ ರಕ್ತಸಂಬಂಧದ ಅರಿವಾಗಿ ಒಂದಾಗುತ್ತಾರೆ. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ’ಗೆಜ್ಜೆಟೀಕಿ ಮುತ್ತಿನ ಬುಗುಡಿ’ ಕಥೆಯಲ್ಲಿ ಸಾವಂತ್ರಿಯ ಅಂತಿಮ ಯಾತ್ರೆಯ ವೇಳೆ ಅವಳಿಗೆ ಸೇರಿದ್ದ ಒಡವೆಗಳನ್ನು ಅವಳ ಆಪ್ತಳಾಗಿದ್ದ ಗೌರವ್ವ ಗೌಡಶಾನಿಯು ತೆಗೆದಿಟ್ಟುಕೊಂಡಿದ್ದಾಳೆಂಬ ಆಪಾದನೆ ಎದುರಾಗುತ್ತದೆ. ಆದರೆ ಒಂದು ತಿಂಗಳ ಅವಧಿಯ ನಂತರ ಏರ್ಪಡಿಸಲಾಗುವ ಪಂಚಾಯತಿಯಲ್ಲಿ ಅವಳು ನಿರಪರಾಧಿ ಎಂದು ಸಾಬೀತಾಗುವುದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಪುಷ್ಪಾ ಹಾಲಭಾವಿ ಅವರ ’ಬಳ್ಳಿಗೊಂದು ಆಸರೆ’ ಕಥೆಯಲ್ಲಿ ಅಕಾಲಿಕವಾಗಿ ಗಂಡನನ್ನು ಕಳೆದುಕೊಂಡು ವಿಧವೆಯಾಗುವ ಖುಷಿಯು ತನ್ನ ಗಂಡನ ನೆನಪಿನಲ್ಲೇ ಉಳಿದ ಬದುಕನ್ನು ಸವೆಸಲು ಇಚ್ಛೆ ಹೊಂದಿದ್ದರೂ, ಅವಳ ಸುತ್ತಲ ಸಮಾಜ, ಅವಳ ಅಭದ್ರತೆ, ಭಯ, ಆತಂಕ ಮೊದಲಾದ ಮಾನಸಿಕ ಸ್ಥಿತಿಗಳಿಂದ ಖಿನ್ನತೆಗೆ ಒಳಗಾಗುವ ಅವಳಿಗೆ, ಅವಳ ಮಕ್ಕಳೇ ಮತ್ತೊಬ್ಬ ಬಾಳ ಸಂಗಾತಿಯ ಅವಶ್ಯಕತೆ ಇದೆಯೆಂದು ಅವಳನ್ನು ಒಪ್ಪಿಸುವ ಚಿತ್ರಣವಿದೆ. ವಿಲಾಸ ನ ಹುದ್ದಾರ ಅವರ ’ಸಾರ್ಥಕತೆ’ ಕಥೆಯಲ್ಲಿ ಮದುವೆಯೇ ಬೇಡವೆಂದೂ, ತಾನು ಒಂಟಿಯಾಗಿಯೇ ಇರುವೆನೆಂದು ಸಂಕಲ್ಪಿಸಿಕೊಂಡಿದ್ದ ಇಳಾ, ಇದಾಗಲೇ ಸಾನಿಧ್ಯಳೊಂದಿಗೆ ಮದುವೆಯಾಗಿರುವ ಅನಿರುದ್ಧನಲ್ಲಿ ತನಗೆ ಅವನಿಂದ ತನ್ನದೇ ಆದ ಮಗುವೊಂದು ಬೇಕೆಂಬ ವಿಚಿತ್ರ ಬೇಡಿಕೆಯೊಂದನ್ನು ಇಡುತ್ತಾಳೆ. ತನ್ನದೇ ಆದ ಮಗುವನ್ನು ಪಡೆದರೆ ಅದೇ ಸಾರ್ಥಕತೆಯ ಕ್ಷಣವೆಂದು ಅವಳ ಭಾವವಾಗಿದ್ದು, ದಂಪತಿಗಳಲ್ಲಿ ಕಣ್ಣುಗಳ ತುಂಬ ನೀರು ತುಂಬಿಕೊಂಡು ಪ್ರಾರ್ಥಿಸಿಕೊಳ್ಳುತ್ತಾಳೆ. ಭೂಮಿಕ ಯು. ಕೆ ಅವರ ’ತೊಂಡೆಯ ತೋಟದಲಿ’ ಕಥೆಯು ಹೂ, ಬಳ್ಳಿ, ಗೂಡು, ಹಕ್ಕಿ, ಅದರ ಕಲರವ, ಚಿಟ್ಟೆ, ಆ ಚಿಟ್ಟೆಗೆ ಮುಕ್ತಿ ಕೊಡುವ ಯುವತಿ… ಹೀಗೆ ರಮ್ಯವಾದ ದೃಶ್ಯ ವೈಭವದಿಂದ ಕೂಡಿ, ಕಥೆಯ ಅಂತ್ಯದಲ್ಲಿ ಮಾನವೀಯ ಸ್ಪರ್ಶವನ್ನೂ ನೀಡುವ ಕಿರುದಾದರೂ ಸುಂದರವಾದ ಕಾವ್ಯದಂತಹ ಕಥಾನಕ. ಹರೀಶ್ ಕುಮಾರ್ ಮೇಲ್ಕಾರ್ ಅವರ ’ಅಂತರ್ದನಿ’ ಕಥೆಯಲ್ಲಿ ಪ್ರಸಾದ್ ಮನೆಯಿಂದ ಕಾರಿನಲ್ಲಿ ಹೊರಡುತ್ತಾ, ಬಹುಶಃ ಬೆಕ್ಕು ಹಾಕಿದ ಮರಿಗಳು ತೊಂದರೆ ಕೊಡುತ್ತಿವೆಯೆಂದೋ ಏನೋ ಅವನ್ನು ಹೊರಗೆಲ್ಲೋ ಬಿಟ್ಟು ಬರುತ್ತಾನೆ. ಹಿಂದಿರುಗುವಾಗ, ಅವನ ಮಗಳು ತಾಯಿಯಿನ್ನೂ ಮನೆಗೆ ಬಂದಿಲ್ಲವೆಂದು ಆತಂಕಗೊಂಡು ಕರೆ ಮಾಡುತ್ತಾಳೆ. ಪ್ರಸಾದ್ ಬದುಕಿ ಉಳಿದ ಇನ್ನೊಂದು ಮರಿಯನ್ನು ಮಾತ್ರ ಪುನಃ ತಂದು ಅದರ ತಾಯಿ ಬೆಕ್ಕಿನೊಂದಿಗೆ ಸೇರಿಸಿ, ಬೆಕ್ಕಿನ ಮರಿಯಂತೆಯೇ ಆತಂಕಗೊಂಡಿದ್ದ ಮಗಳನ್ನು ತಬ್ಬಿ ಕಣ್ಣೀರು ಹಾಕುತ್ತಾನೆ. ಟಿ.ಆರ್.ಉಷಾರಾಣಿ ಅವರ ’ಕತ್ತಲ ಹಾದಿಯಲ್ಲಿ ಮಿಣುಕು ದೀಪ’ ಕಥೆಯಲ್ಲಿ ಮಗುವಿನ ಕಲಿಕೆಯ ಇಚ್ಛೆಗೆ ವಿರುದ್ಧವಾಗಿ ಪೋಷಕರು ತಮ್ಮ ಪ್ರತಿಷ್ಠೆಗಾಗಿ ಮಗುವನ್ನು ತಮ್ಮ ಇಷ್ಟದ ಓದನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸಿದಾಗ ಮಗುವಿನ ಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಆವಂತಿಕಾಳೇ ನಿದರ್ಶನವಾಗುತ್ತಾಳೆ. ಮನೋವೈದ್ಯರ ಆಪ್ತ ಸಮಾಲೋಚನೆಯ ನಂತರ ಪುನಃ ಕತ್ತಲ ಹಾದಿಯಲ್ಲಿ ಮಿಣುಕು ದೀಪ ಕಂಡ ಅನುಭವ ಪೋಷಕರಿಗೆ ಆಗುತ್ತದೆ. ಶಾಂತಾ ಜಯಾನಂದ ಅವರ ’ಪದ್ಮರೇಖೆ’ ಕಥೆಯಲ್ಲಿ ಭಾರತದ ಕರುನಾಡಿನ ಕಡಲ ತಡಿಯ ಕುಗ್ರಾಮದ ಭಟ್ಟರ ಮಗಳಾಗಿ ಜನಿಸಿದ ಸೀತಾ, ಅಮೇರಿಕಾಕ್ಕೆ ಹಾರಿ ಅಲ್ಲಿ ದೊಡ್ಡ ಆಸ್ಪತ್ರೆಯೊಂದರಲ್ಲಿ ವೈದ್ಯಳಾಗಿ ಹೆಸರು ಗಳಿಸಿ, ಅಲ್ಲಿಯೇ ಒಬ್ಬಾತನನ್ನು ಮದುವೆಯಾಗಿ, ಗರ್ಭಿಣಿಯಾದ ಮೇಲೆ ಅವನಿಂದ ವಂಚಿತಳಾಗಿ ತನ್ನ ತಾಯ್ನಾಡನ್ನು ತವರನ್ನು ನೆನೆದು ಮರುಗುತ್ತಾಳೆ. ಸೀತೆಯಂತೆಯೇ ತನ್ನ ಬಾಳೂ ಕಣ್ಣೀರಿನ ಕಥೆಯೇ ಆಯಿತಲ್ಲ, ಸೀತೆಯೆಂದೇಕೆ ತನಗೆ ಹೆಸರಿಟ್ಟರು ಎಂದು ಚಿಂತಿಸುವುದರೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಎಂ.ರಮಿತಾ ಎ ಶೆಟ್ಟಿ ಅವರ ’ಮತ್ತೆ ಚಿಗುರಿತು’ ಕಥೆಯಲ್ಲಿ ಹೆಂಡತಿಯ ವಿವಾಹಪೂರ್ವದ ಕಥೆಯನ್ನು ಅಸ್ಪಷ್ಟವಾಗಿ ತಿಳಿದು ಅಪಾರ್ಥ ಮಾಡಿಕೊಂಡು ದೂರಾಗಿ, ಕಡೆಯಲ್ಲಿ ಹೆಂಡತಿಯ ನಿಜ ಹಿನ್ನಲೆ ತಿಳಿದು ಅವಳ ಬಗೆಗೆ ಅನುಕಂಪ ಹುಟ್ಟಿ ಒಂದಾಗುವ ಶೀನುವಿನ ಪ್ರೇಮ ವೃತ್ತಾಂತವನ್ನು ಚಿತ್ರಿಸಲಾಗಿದೆ. ಶೀನುವಿನ ಬದುಕು ಹಸನಾದಂತೆಯೇ, ಬಾಡಿದ್ದ ದಾಳಿಂಬೆ ಗಿಡವೂ ಮತ್ತೆ ಚಿಗುರುತ್ತದೆ. ಎಸ್.ರಾಮಸ್ವಾಮಿ (ಗೌತಮ) ಅವರ ’ಕೋಲು’ ಕಥೆಯಲ್ಲಿ ನಿರೂಪಕ ದಿನಪತ್ರಿಕೆಯಲ್ಲಿ ಕೊಲೆಯ ಸುದ್ದಿಯೊಂದನ್ನು ಓದಿ ವಿಚಲಿತನಾಗುತ್ತಾನೆ. ಆ ಕೊಲೆಯಾದ ವ್ಯಕ್ತಿಯೊಬ್ಬ ವಿಕೃತ ಕಾಮಿ, ಅವನ ಕೊಲೆಯ ಸಂಬಂಧ ಜೈಲಿಗೆ ಹೋಗುವ ಧನಶೇಖರನೆಂಬುವನೊಬ್ಬ ಕಾಮಿ, ಆ ಮೊದಲೇ ಜೈಲಿನಲ್ಲಿ ಕುಳಿತ ಧನಶೇಖರನ ತಂದೆಯೊಬ್ಬ ಕಾಮಿ. ಇವರ ಬಗ್ಗೆಯೇ ಯೋಚಿಸುತ್ತಾ ನಿರೂಪಕನ ಕನಸಿನಲ್ಲಿಯೂ ಧನಶೇಖರನೇ ಕಾಣಿಸಿಕೊಳ್ಳುತ್ತಾನೆ. ಸುಂದರವಾದ ಕೈತೋಟದ ಹೂವು, ಬಳ್ಳಿಗಳನ್ನೆಲ್ಲಾ ತನ್ನ ಕೈಗೆ ಸಿಗುವ ಒಂದು ಬೆತ್ತದ ಕೋಲಿನಿಂದ ಹಾಳುಮಾಡುವ ಅವನ ಪ್ರವೃತ್ತಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡುವುದಕ್ಕೆ ಸಮೀಕರಿಸಿದಂತೆಯೇ ತೋರುತ್ತದೆ. ಪ್ರಕಾಶ್ ಕುಗ್ವೆ ಅವರ ’ಡೆಡ್ ಲೈನ್’ ಕಥೆಯಲ್ಲಿ ಪತ್ರಕರ್ತನೊಬ್ಬ ತನ್ನ ಊರಿನ ಸ್ಮಶಾನದಲ್ಲಿ ವಯಸ್ಸಾದ ತಾಯಿಯನ್ನು ಇನ್ನೂ ಜೀವ ಇರುವಾಗಲೇ ಬಿಟ್ಟು, ಜೀವ ಹೋದ ಮೇಲೆ ಅಂತ್ಯಕ್ರಿಯೆ ಮಾಡಲು ಮೊದಲೇ ಹಣ ಕೊಟ್ಟ ಹೋಗುವ ಮಗನ ಕುರಿತು ಆಕ್ರೋಶಭರಿತವಾಗಿ ಸ್ಟೋರಿ ಮಾಡಿ ಪತ್ರಿಕೆಯಲ್ಲಿ ಪ್ರಕಟಿಸುತ್ತಾನೆ. ಮಗನ ಕುರಿತು ಸಾರ್ವಜರಿಕರಲ್ಲಿ ಆಕ್ರೋಶ ವ್ಯಕ್ತವಾಗಿ, ಅವನು ಅದರಿಂದ ತಪ್ಪಿಸಿಕೊಳ್ಳಲು ಎಲ್ಲಿಗೋ ಪಲಾಯನ ಮಾಡಿಬಿಡುತ್ತಾನೆ. ಅವನ ಹೆಂಡತಿ ಸಂಸಾರ ಸಾಗಿಸಲು ಕಷ್ಟಪಡುತ್ತಾ, ಮುಂದೆ ಪ್ರಗತಿಪರ ರೈತ ಮಹಿಳೆಯಾಗಿ ಹೊರಹೊಮ್ಮುತ್ತಾಳೆ. ವರ್ಷದ ನಂತರ ಅದೇ ಸ್ಮಶಾನದ ದ್ವಾರದಲ್ಲಿಯೇ ಗಡ್ಡಧಾರಿಯಾದ ಮಗ ಶವವಾಗಿ ಪತ್ತೆಯಾದನೆಂದು, ಪತ್ರಕರ್ತ ಹಿಂದುಮುಂದು ಯೋಚಿಸದೆ ಡೆಡ್ ಲೈನ್ ಒಳಗೆ ಸುದ್ದಿ ಮಾಡಿ ಕಳಿಸಿಯೇ ಬಿಡುತ್ತಾನೆ. ಅವನ ಹೆಂಡತಿ ಶವವನ್ನು ನೋಡಿ, ಈತ ತನ್ನ ಗಂಡನಲ್ಲವೇ ಅಲ್ಲವೆಂದು ಎಷ್ಟು ಹೇಳಿದರೂ ಯಾರೂ ಅವಳ ಮಾತನ್ನು ಕಿವಿಗೇ ಹಾಕಿಕೊಳ್ಳುವುದಿಲ್ಲ. ಡೆಡ್ ಲೈನ್ ಗುರಿಯಾಗಿಸಿಕೊಂಡು ಪತ್ರಕರ್ತರು ಸುದ್ದಿ ಮಾಡುವ ವೈಖರಿಯ ವ್ಯಂಗ್ಯ ಇಲ್ಲಿದೆ.

ಗೌರಿ ಭಟ್ಟ ಅವರ ’ವರಾಹಲೀಲೆ’ ಕಥೆಯಲ್ಲಿ ಕಷ್ಟಪಟ್ಟು ವ್ಯಾಪಾರದಲ್ಲಿ ಹೆಸರು ಹಣ ಗಳಿಸಿ ಮುಂದೆ ಬರುವ ಸೋಮಪ್ಪನ ವಿಷ್ಣುವಿನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಬೇಕೆಂದು ಆಲೋಚಿಸುತ್ತಾನೆ. ಊರಿನ ವಿರೋಧಿ ಬಣದವರು ಇವನ ವಿರುದ್ಧ ಕತ್ತಿ ಮಸೆಯುತ್ತಿದ್ದು, ಒಮ್ಮೆ ಕಾಡುಹಂದಿಯೊಂದು ಅಡ್ಡ ಬಂದು ಅಪಘಾತದಲ್ಲಿ ಮೃತನಾಗುತ್ತಾನೆ. ವೈಷ್ಣವಭಕ್ತನಾದ ಇವನ ಸಾವಿನ ಕುರಿತು ಇದು ’ವರಾಹಲೀಲೆ’ ಎಂದು ಎಲ್ಲರೂ ಭಾವಿಸುತ್ತಾರೆ. ಬೆ.ನ.ಜಯರಾಮ್ ಅವರ ’ಐ.ಟಿ. ರೈಡ್’ ಕಥೆಯಲ್ಲಿ ಅಡ್ಡದಾರಿಯಲ್ಲಿ ಸಂಪಾದಿಸುವುದೆಲ್ಲಾ ಎಂದೂ ನಮಗೆ ದಕ್ಕುವುದಿಲ್ಲವೆಂಬುದನ್ನು ಕಲ್ಲೇಶನ ಮನೆಯ ಐ.ಟಿ ರೈಡ್ ಪ್ರಸಂಗದಲ್ಲಿ ಕಟ್ಟಿಕೊಡಲಾಗಿದೆ. ಮಲ್ಲಜ್ಜ ಇಲ್ಲಿ ಕಲ್ಲೇಶನಿಗೆ ತನ್ನ ಒರಟು, ವ್ಯಂಗ್ಯ ಮಾತುಗಳಲ್ಲೇ ನೀತಿ ಪಾಠ ಹೇಳುತ್ತಾನೆ. ಸೌಂದರ್ಯ ಅವರ ’ಸರ್ವಮಂಗಳ’ ಕಥೆಯು ಹುಟ್ಟಿನಿಂದಲೇ ಕಿವಿ ಕೇಳದ ಮುಗ್ಧ ಹೆಣ್ಣುಮಗಳಾದ ಸರ್ವಮಂಗಳೆಯ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ದೈಹಿಕ ಅಸಮರ್ಥತೆ ಇದ್ದರೇನಂತೆ, ಅವಳಿಗೂ ಎಲ್ಲಾ ಹೆಣ್ಣುಮಕ್ಕಳಿಗಿರುವಂತೆ ಆಸೆ ಆಕಾಕ್ಷೆಗಳಿರುತ್ತವೆ ಎಂಬುದನ್ನು ಅವಳ ಕುಟುಂಬ, ಸರೀಕರು ಅರ್ಥ ಮಾಡಿಕೊಳ್ಳದೇ ಹೋಗುವುದು ವಿಪರ್ಯಾಸ. ಮನುಷ್ಯರು ತನ್ನನ್ನು ಅರ್ಥಮಾಡಿಕೊಳ್ಳದ ಕಾರಣ, ಮನೆಯ ಹಿತ್ತಲಿನ ಮಾವಿನ ಮರದೊಂದಿಗೆ ತನ್ನ ಕಷ್ಟಸುಖಗಳನ್ನು ಹಂಚಿಕೊಳ್ಳುವ ಮಂಗಳ, ಕಡೆಗೆ ಅದರ ಬುಡದಲ್ಲೇ ಅಸುನೀಗುತ್ತಾಳೆ. ವೆಂಕಟೇಶ ಬೈಲೂರ್ ಅವರ ’ಪಾದಧೂಳಿ’ ಕಥೆಯಲ್ಲಿ ಚಿಕ್ಕಂದಿನಿಂದ ಸಣ್ಣಪುಟ್ಟ ಅಪರಾಧಗಳನ್ನು ಮಾಡಿಕೊಂಡೇ ಬೆಳೆದ ರಾಮಣ್ಣನೆಂಬ ವ್ಯಕ್ತಿ, ಬೇರೆಯ ಊರಿಗೆ ವಲಸೆ ಹೋಗಿ ಅಲ್ಲಿ ಮುಕುಂದನೆಂಬ ಹೆಸರಿನಿಂದ ಮಠವೊಂದನ್ನು ಕಟ್ಟಿಕೊಂಡು, ಜನಗಳಿಗೆ ಉಪದೇಶವನ್ನು ಮಾಡುತ್ತಾ ಜೊತೆಗೆ ಅಪಾರವಾಗೆ ಭಕ್ತಾದಿಗಳಿಂದ ಧನಕನಕಗಳನ್ನು ಸಂಪಾದಿಸಿ, ಒಮ್ಮೆ ಕಾರ್ಯಕ್ರಮದ ಸಂಬಂಧ ಬಹುಸಂಖ್ಯೆಯ ಜನರ ಕಾಲ್ತುಳಿತಕ್ಕೆ ಕಾರಣನಾಗಿ ಪುನಃ ದೇಶಾಂತರ ಪಲಾಯನ ಮಾಡಲು ಹೋಗುವ ಕಳ್ಳಗುರುವಿನ ಗೋಜಲಿನ ಬದುಕಿನ ಅನಾವರಣವಿದೆ. ಸುಮಿತ್ರ ಭಟ್ ಅವರ ’ಜೀವನ ಚಕ್ರ’ ಕಥೆಯಲ್ಲಿ ಕಸಮುಸುರೆ ಕೆಲಸ ಮಾಡುವ ಗಂಗಿಗೆ ಯೋಗ್ಯನಾದ ಗಂಡನಿಲ್ಲ. ಮಗನಾದರೂ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾನೆಂದು ಕನಸು ಕಂಡರೆ, ಅವಳಿಂದ ಸಾಲ ಮಾಡಿಸಿ, ಬೈಕ್ ಕೊಂಡು ಹುಡುಗಿಯೊಂದಿಗೆ ಶೋಕಿ ಮಾಡುತ್ತಾನೆ. ಗಂಗಿ ತನಗೆ ಹಿಂದಿರುಗಿಸುತ್ತೇನೆಂದು ಹೇಳಿದ ಹಣ ಹಿಂದಕ್ಕೆ ಬರದು ಎಂದು ಗೊತ್ತಾದಾಗ, ತನ್ನ ಎಂದಿನ ಕಷ್ಟದ ನಿತ್ಯದ ಬವಣೆಯ ಚಕ್ರದೊಳಗೆ ಸಿಕ್ಕಿಕೊಂಡು ನಿಟ್ಟುಸಿರು ಬಿಡುತ್ತಾಳೆ. ಅಜಯ್ ಅಂಗಡಿ ಅವರ ’ಕಿನಾರೆಯ ಅಲೆಗಳು’ ಕಥೆಯಲ್ಲಿ ಪ್ರಗತಿಪರ ಲೇಖಕನ ಹತ್ಯೆಗೆ ಸಂಬಂಧಿಸಿ ಸತ್ಯ ಶೋಧಿಸಲು ಇಲಾಖೆಯಿಂದ ನಿಯೋಜನೆಗೊಂಡ ಹೂವೇಶ್ ಗ್ರಾಮದ ಶಾಲೆಯ ಶಿಕ್ಷಕನ ಹಾಗೆ ಊರಿಗೆ ಬಂದು, ಹರೀಶನೆಂಬ ಪುಸ್ತಕಪ್ರೇಮಿಯ ಸ್ನೇಹ ಮಾಡುತ್ತಾನೆ. ರಹಸ್ಯ ಭೇದಿಸುತ್ತಾ ಅವನಿಗೆ ಹರೀಶನೇ ಆರೋಪಿಯೆಂದು ಗೊತ್ತಾಗುವ ವೇಳೆಗೆ ಹರೀಶ ಸಮುದ್ರದ ನಡುವಿನ ದ್ವೀಪಕ್ಕೆ ಪಲಾಯನ ಮಾಡಲು ಸಜ್ಜಾಗುತ್ತಾನೆ.

ಕಿರಣ ಪಾರ್ವತಿಸುತ ಅವರ ’ರಾಮ ಮೆಚ್ಚದ ಸೀತೆ’ ಕಥೆಯಲ್ಲಿ ರಾಮನಹಳ್ಳಿಯ ಮುಖಂಡ ರಾಚಪ್ಪಗೌಡ ತನ್ನ ಹೆಂಡತಿ ತನ್ನಲ್ಲಿ ರಾಮನನ್ನು ಕಾಣಲು ಬಯಸಿದ್ದಾಳೆಂದು, ಆ ಬಾರಿ ಊರಿನಲ್ಲಿ ರಾಮಾಯಣದ ನಾಟಕವನ್ನು ತಾನೇ ಅತಿಹೆಚ್ಚು ಖರ್ಚು ಮಾಡಿ ಮಾಡಿಸಿ, ತಾನೇ ರಾಮನ ಪಾತ್ರ ವಹಿಸಿಕೊಳ್ಳುತ್ತಾನೆ. ಗೌಡರ ಮನೆಯ ಚಾಕರಿ ಮಾಡುವ ಮಾರ ಎಂಬಾತನಿಂದ ಸೀತೆಯ ಪಾತ್ರ ಮಾಡಿಸಲಾಗುತ್ತದೆ. ರಾಚಪ್ಪಗೌಡ ಎಷ್ಟೇ ಖರ್ಚು ಮಾಡಿದ್ದರೂ, ರಾಮನ ಪಾತ್ರಕ್ಕಿಂತ ಸೀತೆಯ ಪಾತ್ರ ಮಾಡಿದ ಮಾರನನ್ನೇ ಎಲ್ಲರೂ ಹೆಚ್ಚು ಹೊಗಳುವಾಗ ರಾಚಪ್ಪಗೌಡನಿಗೆ ಇರಿಸುಮುರಿಸಾಗುತ್ತದೆ. ನಾಟಕಕ್ಕೆ ಮೊದಲು ರಾಮನಂತೆಯೇ ವರ್ತಿಸುತ್ತಿದ್ದ ರಾಚಪ್ಪನ ನಡತೆಯಲ್ಲಿ ಹೆಂಡತಿ ಬದಲಾವಣೆಯನ್ನು ಗುರುತಿಸುತ್ತಾಳೆ. ರಂಜಿತ ವಿಕ್ರಮ ಮಹಾಜನ ಅವರ ’ಖೋಲಿ ಅಪ್ಪಾಜಿ’ ಕಥೆಯಲ್ಲಿ ಚರಂತಯ್ಯ ಹಾಗೂ ದುಂಡವ್ವರ ದಾಂಪತ್ಯದಲ್ಲಿ ಕಾರಣಾಂತರಗಳಿಂದ ಬಿರುಕು ಉಂಟಾಗಿ, ಒಂದೇ ಮನೆಯಲ್ಲಿದ್ದರೂ ಇಬ್ಬರೂ ಹಲವು ವರ್ಷಗಳ ಕಾಲ ದೂರದೂರವೇ ಇರುವ, ನಂತರ ಮನೆಯ ಸೊಸೆಯ ಚಾತುರ್ಯದಿಂದ ಅಡ್ಡಗೋಡೆ ಸರಿಯುವ ಸಂದರ್ಭ ಒದಗಿಬರುತ್ತದೆ. ತನ್ನ ಖೋಲಿಯಲ್ಲಿ ಸದಾ ತಾನೊಬ್ಬನೇ ಇರುತ್ತ ಖೋಲಿ ಅಪ್ಪಾಜಿಯೆಂದೇ ಎನಿಸಿಕೊಂಡಿದ್ದ ಚರಂತಯ್ಯ ಇದೀಗ ದುಂಡವ್ವನ ಜೊತೆ ಇರತೊಡಗಿ, ಅಷ್ಟು ವರ್ಷಗಳ ನಷ್ಟ ತುಂಬಿಕೊಳ್ಳುತ್ತಿದ್ದನೆಂಬಲ್ಲಿಗೆ ಕಥೆ ಸಮಾಪ್ತಿಯಾಗುತ್ತದೆ. ಕೆ.ಎನ್.ಶ್ರೀವಳ್ಳಿ ಮಂಜುನಾಥ್ ಅವರ ’ಹೊಂಗಿರಣ’ ಕಥೆಯಲ್ಲಿ ಮದುವೆಯಾಗುವ ಹುಡುಗನ ಕುರಿತು ಚೆನ್ನಾಗಿ ತಿಳಿದುಕೊಳ್ಳದ ಹೊರತು ಮುಂದುವರೆಯುವ ಹಾಗಿಲ್ಲ ಎಂದುಕೊಂಡು ಏನೊಂದೂ ನಿರ್ಧಾರಕ್ಕೇ ಬರದೆ ಅದರಲ್ಲೇ ಮುಳುಗಿಹೋಗುವ ಮಗಳು ವಸುವಿಗೆ ಆಕೆಯ ತಾಯಿ, ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಇಡೀ ಜನ್ಮವೇ ಸಾಲದೆಂದು ತಿಳಿ ಹೇಳುತ್ತಾಳೆ. ತಾಯಿಯ ಮಾತುಗಳಿಂದ ಪ್ರಭಾವಿತಳಾದ ಅವಳ ಮುಖದಲ್ಲಿ ಹೊಂಗಿರಣ ಮೂಡುವುದೇ ಕಥೆಯ ಸಾರಾಂಶ. ಶಶಿಧರ ಪಾಟೀಲ್ ಅವರ ’ಮಕ್ಕಳ ಕಳ್ಳಿ ಬಂದಳು’ ಕಥೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ದಿಯಾ ಎಂಬ ಪುಟ್ಟ ಬಾಲಕಿ ಶಾಲೆಯಿಂದ ಮನೆಗೆ ಬಂದು ತಾಯಿ ಮನೆಯಲಿಲ್ಲದ್ದು ಕಂಡುಕೊಂಡು ಕೋಪಗೊಳ್ಳುತ್ತಾಳೆ. ಯಾವುದೋ ಹೆಂಗಸು ಜೋಳಿಗೆಯಲ್ಲಿ ಮಗುವನ್ನು ಹೊತ್ತುಕೊಂಡು ಬಾಗಿಲ ಬಳಿ ಬಂದಾಗ, ದಿಯಾಳಿಗೆ ಅವಳು ಮಕ್ಕಳ ಕಳ್ಳಿ ಇರಬಹುದೆಂದು ಭಯವಾಗುತ್ತದೆ. ಕಡೆಗೆ ತಾಯಿ ಬಂದ ಮೇಲೆ ಆ ಹೆಂಗಸಿಗೆ ಬೇಕಾಗಿರುವುದು ಕುಡಿಯಲು ನೀರೆಂದು ತಿಳಿದು ಕೊಟ್ಟುಕಳಿಸಲಾಗುತ್ತದೆ. ಪುಟ್ಟ ಬಾಲಕಿಯ ಕೋಪ, ಚಡಪಡಿಕೆ, ಭಯ, ಆತಂಕಗಳು ಕಥೆಯಲ್ಲಿ ಚೆನ್ನಾಗಿ ವ್ಯಕ್ತವಾಗಿವೆ.
ಡಾ.ಮೇಘನಾ ಕೆ ಅವರ ’ಚಂದೂ’ ಕಥೆಯು ಇಪ್ಪತ್ತೊಂಭತ್ತು ವರ್ಷ ವಯಸ್ಸಾದರೂ ಬೆಳವಣಿಗೆ ಕುಂಟಿತವಾದ ಚಂದೂ ಎಂಬ ಯುವತಿಯ ಸುತ್ತ ಸುತ್ತುತ್ತದೆ. ಇಷ್ಟು ವರ್ಷಗಳಾದರೂ, ತನ್ನ ಬಾಲ್ಯದ ಕ್ಲಾಸ್ ಟೀಚರನ್ನು, ಗೆಳತಿಯನ್ನು ಸದಾ ನೆನೆಯುವ, ಅವರನ್ನು ಅಕ್ಕರೆಯಿಂದ ಆಮಂತ್ರಿಸುವ ಪ್ರೀತಿಯನ್ನೂ ಸಂಬಂಧವನ್ನೂ ಉಳಿಸಿಕೊಂಡಿರುವ ಕುರಿತು ನಿರೂಪಕಿಯಾದ ಗೆಳತಿ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ. ಅವಳನ್ನು ಮತಿಹೀನಳೆನ್ನುವ ಯಾರು ಅವಳಂತೆ ಮನುಷ್ಯ ಸಂಬಂಧವನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸುತ್ತಾಳೆ. ಸಿದ್ಧಾರೂಢ ಕಟ್ಟಿಮನಿಯವರ ’ಪಾಷಾಣ ಹೃದಯ’ ಕಥೆಯಲ್ಲಿ ಹಿಂದೂ ಯುವಕ ಮುಸಲ್ಮಾನ ಯುವತಿಯನ್ನು ಪ್ರೀತಿಸಿ ಮದುವೆಯಾದ ಮೇಲೆ, ಅವನ ಆಚಾರವಿಚಾರಗಳು ಇವಳಿಗೆ ಕಿರಿಕಿರಿ ಉಂಟುಮಾಡಿದರೆ, ಇವಳ ನಡವಳಿಕೆಗಳು ಅವನಿಗೆ ಸಹ್ಯವಾಗುವುದಿಲ್ಲ. ಇಬ್ಬರೂ ಹೃದಯದಲ್ಲಿ ಪಾಷಾಣ ಇಟ್ಟುಕೊಂಡೇ ಜೀವಿಸುವ ಪರಿಸ್ಥಿತಿಯನ್ನು ತಲುಪುವ ಚಿತ್ರಣವನ್ನು ಇಲ್ಲಿ ಕಾಣಬಹುದು. ರೇಶ್ಮಾ ಗುಳೇದಗುಡ್ಡಾಕರ್ ಅವರ ’ಧರೆ ಹತ್ತಿ ಉರಿದೊಡೆ’ ಕಥೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಮಗಳು ನೀಲುವಿಗೆ ನಿಖಾ ಮಾಡಬೇಕೆಂದು ತಾಯಿ ಅವಸರಿಸಿದರೆ, ತಂದೆ ಮಗಳಿಗೆ ಬರುವ ಸಂಬಂಧಗಳನ್ನೆಲ್ಲಾ ತಪ್ಪಿಸುತ್ತಿರುತ್ತಾನೆ. ಮಗನನ್ನು ಇದಾಗಲೇ ಕಳೆದುಕೊಂಡಿರುವ ತಾವು, ವಯಸ್ಸಾದ ಕಾಲದಲ್ಲಿ ಆಸರೆಯಾಗಬಲ್ಲ ಮಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಾಗೆ ಮಾಡುತ್ತಿರುವುದಾಗ ತಂದೆ ತಾಯಿಗೆ ಹೇಳುವುದನ್ನು ನೀಲು ಕೇಳಿಸಿಕೊಂಡು ಆಘಾತಕ್ಕೆ ಒಳಗಾಗುತ್ತಾಳೆ. ಹೆತ್ತ ಮಗಳ ಭವಿಷ್ಯಕ್ಕಿಂತ ತಂದೆ ಅವರ ಸ್ವಾರ್ಥವೇ ದೊಡ್ಡದಾಗಿಬಿಡುವುದೊಂದು ವಿಪರ್ಯಾಸ! ಕಾ.ವೆಂ.ಶ್ರೀನಿವಾಸ ಅವರ ’ಅಮೃತಫಲ’ ಕಥೆಯಲ್ಲಿ ಮುನಿಯಪ್ಪನೆಂಬ ಸಂಕಷ್ಟದಲ್ಲಿದ್ದ ರೈತ ಕೃಷಿ ಮೇಳವೊಂದರಲ್ಲಿ ಬಹುಪಯೋಗಿ ಕೃಷಿ ಯಂತ್ರವನ್ನು ನೋಡಿ, ಅದರ ಬಗ್ಗೆ ಮಾಹಿತಿ ಪಡೆದು, ಸಾಲಾಸೋಲ ಮಾಡಿ ಕೊಂಡುಕೊಂಡು, ಆಧುನಿಕ ಬೇಸಾಯ ಮಾಡಿ ಯಶಸ್ವಿಯಾಗುತ್ತಾನೆ. ಜಬೀವುಲ್ಲ ಎಂ ಅಸಾದ್ ಅವರು ಬರೆದಿರುವ ’ಹುಲಿ ಹೆಜ್ಜೆ’ ಕಥೆಯಲ್ಲಿ ಕಾಡಿಗೆ ಹೊಂದಿಕೊಂಡೇ ಇರುವ ಗಿರಿಜನರ ಹಟ್ಟಿಗೆ ಆಗಾಗ ಹುಲಿಯೊಂದು ಬರುತ್ತಲಿದ್ದು, ಹಿಂದೆ ತನ್ನ ತಮ್ಮನನ್ನು ಕೊಂದು ತನ್ನ ಕುಟುಂಬವನ್ನೇ ಹಾಳು ಮಾಡಿದಂದೆ ಈಗ ಮತ್ತೆ ಕಾಣಿಸಿಕೊಂಡಿದೆಯೆಲ್ಲಾ ಎಂದು ಚಿಂತಿಸುತ್ತಾ ತನ್ನಪ್ಪ ನುಂಕಪ್ಪನಿಗೆ ಹೇಳುತ್ತಾನೆ ರಾಚಪ್ಪ. ನುಂಕಪ್ಪ ಈ ವಿಷಯವನ್ನು ಬೀರದೇವರ ಪೂಜಾರಿಗೆ ಹೇಳಿ, ಪೂಜಾರಿಯು ಇದೇ ಸಮಯವೆಂದುಕೊಳ್ಳುತ್ತಾ ಸುಲುಗೆಗೆ ಮುಂದಾಗುತ್ತಾನೆ. ಆದರೆ ಪೂಜೆ ನಿಗದಿಯಾದ ದಿನಕ್ಕೆ ಮೊದಲು ತನ್ನ ಹಿಂದಿನ ತಲೆಮಾರಿನ ಗಾದ್ರಿ ಪಾಲನಾಯಕನಂತೆಯೇ ವೀರಾವೇಷದಿಂದ ಹುಲಿಯನ್ನು ಹೊಡೆದುಹಾಕುವ ರಾಚಪ್ಪನಿಗೆ ಪೂಜಾರಿಯೂ ಹೆದರಿ ಪಲಾಯನ ಮಾಡುತ್ತಾನೆ. ಪಂಕಜ ಕೆ ರಾಮಭಟ್ ಅವರ ’ಗಾಲಿಕುರ್ಚಿಯ ಬದುಕು’ ಕಥೆಯಲ್ಲಿ ಚಿಕ್ಕಂದಿನಲ್ಲಿ ಯಾವುದೋ ಖಾಯಿಲೆಗೆ ತುತ್ತಾಗಿ, ನಡೆದಾಡುವ ಶಕ್ತಿಯನ್ನೇ ಕಳೆದುಕೊಳ್ಳುವ ತನುಜಾಳು ಗಾಲಿಕುರ್ಚಿಯ ಆಸರೆಯಲ್ಲಿಯೇ ಇರಬೇಕಾದ ಸ್ಥಿತಿ ಒದಗಿ, ಕಡೆಗೆ ದೂರದ ದೆಹಲಿಯಲ್ಲಿ ಅಣ್ಣಂದಿರು ಅವಳಿಗೆ ಚಿಕಿತ್ಸೆ ಕೊಡಿಸಿ ಅವಳು ಮೊದಲಿನಂತಾಗುತ್ತಾಳೆ. ಆದರೆ ತನ್ನಂತಹ ಸ್ಥಿತಿ ಯಾರಿಗೂ ಬರಬಾರದೆಂದು ಆಲೋಚಿಸಿ, ಅಂತಹ ವಿಕಲಾಂಗರಿಗೆ ನೆರವಾಗುತ್ತ ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತಾಳೆ.
ಅಪರ್ಣಾ ಹೆಗಡೆ ಅವರ ’ಅಪ್ಪಚ್ಚಿ ಬಳ್ಳಿ’ ಕಥೆಯು ಚಿಕ್ಕಂದಿನಿಂದ ಪುರುಷರೊಂದಿಗಿನ ಸಂಬಂಧದಲ್ಲಿ ಕಹಿಯನ್ನೇ ಉಂಡು, ಗಂಡನ ಮನೆಯಲ್ಲೂ ನೆಮ್ಮದಿ ಕಾಣದೆ, ತಂದೆಯ ಬಲವಂತಕ್ಕೆ ಬಂದು ವೈದ್ಯರ ಮುಂದೆ ಕುಳಿದುಕೊಳ್ಳಬೇಕಾದ ಸ್ಥಿತಿಗೆ ತಲುಪಿ, ನಂತರ ಬರವಣಿಗೆಯ ಚಂಗು ಹಿಡಿದು, ಅಪ್ಪಚ್ಚಿ ಬಳ್ಳಿಯಂತೆ ಸುತ್ತಲಿನ ಜಗತ್ತಿಗೆ ಅಂಟಿಯೂ ಅಂಟದಂತೆ ಇದ್ದುಬಿಡುವ ಮೇಖಲಾಳ ಬದುಕನ್ನು ಅನಾವರಣ ಮಾಡುತ್ತದೆ. ಧನ್ಯಶ್ರೀ ಸರಳಿ ಅವರ ’ಮುಳುಗಿತೇನು ಕನಸುಗಳ ಸಾಲು?’ ಕಥೆಯಲ್ಲಿ ನದಿಗೆ ಅಣೆಕಟ್ಟು ಕಟ್ಟುವ ಪ್ರಕ್ರಿಯೆಯು ಆ ನದಿಯ ಆಸುಪಾಸು ಜೀವಿಸುತ್ತಿರುವವರ ಬದುಕನ್ನು, ಸಂಸ್ಕೃತಿಯನ್ನು, ಪರಿಸರವನ್ನೂ ಹೇಗೆ ಆಹುತಿ ತೆಗೆದುಕೊಳ್ಳುವುದೆಂದು ಚಿತ್ರಿಸಲಾಗಿದೆ. ನಿರೀಕ್ಷಿತ ಅವರ ’ಕತ್ತಲಲ್ಲಿ ಕರಗಿ ಹೋಯಿತೇ ನ್ಯಾಯ..?’ ಕಥೆಯನ್ನು ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಪುಟ್ಟ ಬಾಯಕಿಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಸುತ್ತ ಹೆಣೆಯಲಾಗಿದೆ. ಅರುಳುತ್ತಿರುವಂತಹ ಅಂತಹ ಹೂಗಳನ್ನು ಚಿವುಟಿ ಹಾಕುತ್ತಿರುವ ಪಾಪಿಗಳಿಗೆ ಕ್ರೂರವಾದ ಶಿಕ್ಷೆಯಾಗಬೇಕೆಂದು ಲೇಖಕಿ ಆಶಿಸುತ್ತಾರೆ. ಶಂಕರಾನಂದ ಹೆಬ್ಬಾಳ ಅವರ ’ಕಲ್ಲಿನ ಚೂರು’ ಕಥೆಯಲ್ಲಿ ವಿವೇಕ ಎಂಬ ಯುವಕ ಭೂಗರ್ಭ ಶಾಸ್ತ್ರ ಓದಿದ್ದರೂ, ಹಳ್ಳಿಯಲ್ಲಿ ವ್ಯವಸಾಯ ಮಾಡುವುದಾಗಿ ನಿರ್ಧರಿಸಿ, ಸಾಲ ಮಾಡಿ ಬರಡಾದ ಭೂಮಿಯನ್ನು ಹದಗೊಳಿಸುವ ಕೆಲಸಕ್ಕೆ ಕೈ ಹಾಕುತ್ತಾನೆ. ಆಗ ಸಿಗುವ ಕಲ್ಲಿನ ಚೂರು ಬಂಗಾರದ ಅದಿರಾಗಿದ್ದು, ಅಲ್ಲಿಗೆ ತಾನು ಪಟ್ಟ ಶ್ರಮ ಸಾರ್ಥಕವಾಯಿತೆಂದು ಭಾವಿಸುತ್ತಾನೆ. ಸೌಮ್ಯ ಕೊಡೂರು ಅವರ ’ಸ್ರಾವ’ ಕಥೆಯಲ್ಲಿ ತೀವ್ರವಾದ ಹೆರಿಗೆ ನೋವನ್ನು ಅನುಭವಿಸಿ ಹೆಣ್ಣುಮಗುವೊಂದಕ್ಕೆ ಜನ್ಮ ಕೊಡುವ ರಮಾಳಿಗೆ ವಿಪರೀತ ಸ್ರಾವವಾಗುತ್ತಿರುತ್ತದೆ. ಅದರ ಹಿನ್ನೆಲೆಯಲ್ಲಿ ತನ್ನ ಬದುಕನ್ನೊಮ್ಮೆ ಹಿಂದಿರುಗಿ ನೋಡಿಕೊಳ್ಳುವ ರಮಾ ತಾನು ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ, ತನಗೆ ಮೊದಲಬಾರಿ ಸ್ರಾವವಾದ ಘಟನೆ ನೆನಪಾಗಿ, ತನ್ನ ಹೆಣ್ಣುಮಗುವನ್ನು ಅಂತಹ ಆಪತ್ತುಗಳಿಂದ ರಕ್ಷಿಸಿಕೊಳ್ಳಬೇಕೆಂದು ತನಗೆ ತಾನೇ ಎಚ್ಚರಿಕೆ ನೀಡಿಕೊಳ್ಳುತ್ತಾಳೆ. ಈಗಿನ ಸಮಾಜದ ಎಲ್ಲ ತಾಯಂದಿರ ಭಯ ಆತಂಕಗಳನ್ನೂ, ಎಚ್ಚರಿಕೆಯನ್ನೂ ರಮಾಳಲ್ಲಿ ಕಾಣಬಹುದಾಗಿದೆ. ಸುಮಂಗಲ ಕೃಷ್ಣ ಕೊಪ್ಪರದ ಅವರ ’ರೈತ ಶ್ರೇಷ್ಠ ಹಬ್ಬ’ ಕಥೆಯಲ್ಲಿ ಅರುಣ ಎಂಬ ಬಾಲಕನ ರೈತ ತಂದೆತಾಯಿಗಳ ಮೂಲಕ ರೈತರ ಶ್ರೇಷ್ಠ ಹಬ್ಬವಾದ ಸಂಕ್ರಾತಿಯ ಬಗೆಗೆ ಬಹಳ ವಿವರಣಾತ್ಮಕವಾಗಿ ತಿಳಿಸಿಕೊಡಲಾಗುತ್ತದೆ. ಅಂತೆಯೇ ರೈತರ ಕಷ್ಟ, ಅನ್ನದ ಬೆಲೆ, ನಮ್ಮ ಸಂಸ್ಕೃತಿಗಳ ಕುರಿತೂ ಹೇಳಲಾಗಿದೆ. ಶಾರದಾ ವಿ ಮೂರ್ತಿಯವರ ’ಮೈಲಿಗೆ’ ಕಥೆಯಲ್ಲಿ ವಯಸ್ಸು ಹೆಚ್ಚಾಗುತ್ತಿದ್ದರೂ ತಮ್ಮನ ಮೊಮ್ಮಗಳು ನೀತಿ ಮದುವೆಗೆ ಒಪ್ಪಿಕೊಳ್ಳದೆ ಇರುವುದನ್ನು ಕಂಡು ತಳಮಳಗೊಳ್ಳುವ ಅಜ್ಜಿ ನಾಗವೇಣಮ್ಮ ತಮ್ಮ ಮದುವೆಯ ಕಥೆಯನ್ನು ಸ್ಮರಿಸಿಕೊಳ್ಳುತ್ತಾಳೆ. ಮದುವೆಯ ಮನೆಯಲ್ಲಿಯೇ ಮೈನೆರೆದ ಬಾಲಕಿಯಾಗಿದ್ದ ತಮ್ಮಿಂದ ಮೈಲಿಗೆ ಆಯಿತೆಂದೂ, ಅದು ಅಪಶಕುನವೆಂದೂ ಹೌಹಾರಿ ಗಂಡಿನ ಕಡೆಯವರು ಸಂಬಂಧ ಮುರಿದುಕೊಂಡ ಮೇಲೆ ಒಂಟಿಯಾಗಿ ಸಹೋದರರ ಮನೆಯಲ್ಲಿ ನಿಂತುಬಿಟ್ಟ ತಮ್ಮ ಬದುಕನ್ನು ಒಮ್ಮೆ ಅವಲೋಕಿಸುವಾಗ, ಇದೀಗ ಅದೇ ಕುಟುಂಬದವರಿಂದ ನೀತಿಗೆ ಸಂಬಂಧ ಬಂದಿದೆಯೆಂದೂ, ನೀತಿ ತಾನು ಅವರನ್ನೂ ಹಾಗೇ ಸತಾಯಿಸಿ, ನಿರಾಕರಿಸುವುದಾಗಿ ಹೇಳಿದಾಗ ನಾಗವೇಣಮ್ಮ ಕೂಡದು ಎನ್ನುತ್ತಾಳೆ. ನಾಗಜ್ಜಿಯ ವಿಶಾಲವಾದ ಹೃದಯಕ್ಕೆ ನೀತಿ ತಲೆದೂಗುತ್ತಾಳೆ. ಗೀತಾ ಬಿಜ್ಜರಗಿ ಅವರ ’ತಬ್ಬಲಿಗೆ ಈ ತಬ್ಬಲಿ’ ಕಥೆಯಲ್ಲಿ ತಂದೆತಾಯಿಯರನ್ನು ಕಳೆದುಕೊಂಡ ಅಣ್ಣ ತಂಗಿಯರು ಸೋದರತ್ತೆಯ ಮನೆಯಲ್ಲಿ ಪಡುವ ಪರಾಧೀನತೆಯ ಬದುಕಿನ ಚಿತ್ರಣವಿದೆ. ಕಷ್ಟಪಟ್ಟು ದುಡಿದರೂ ತುತ್ತು ಊಟ ಮಾಡಲೂ ಸಾಧ್ಯವಾಗದಂತಹ ಪರರ ಮನೆಯಲ್ಲಿ ತಬ್ಬಲಿಗೆ ತಬ್ಬಲಿ ಜೊತೆಯಾಗಿ ಉಳಿಯುತ್ತಾರೆ. ಈ ಕಥಾ ಸಂಕಲನದಲ್ಲಿ ನನ್ನದೂ ಒಂದು ಕಥೆಯನ್ನು ಸೇರಿಸಲಾಗಿದೆ. ನನ್ನ ರಚನೆಯ ’ಬಲಿದಾನ’ ಕಥೆಯಲ್ಲಿ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿಯ ತ್ಯಾಗ ಬಲಿದಾನದ ಐತಿಹಾಸಿಕ ಪ್ರಸಂಗವನ್ನು ಚಿತ್ರಿಸಲಾಗಿದೆ.
ಈ ಕಥಾ ಸಂಕಲನದಲ್ಲಿ ಪ್ರಕಟಿಸಲು ಕಥೆಗಳನ್ನು ಆಹ್ವಾನ ಮಾಡಿದಾಗ, ಸುಮಾರು ನೂರಾ ಹದಿನೈದು ಪ್ರವೇಶಗಳು ಬಂದವು. ಅವುಗಳಲ್ಲಿ ಕೆಲವು ಲೇಖನ, ಪ್ರಬಂಧ, ಪದ್ಯಗಳೂ ಇದ್ದುವು. ಉಳಿದ ತೊಂಭತ್ತೆಂಟು ಕಥೆಗಳನ್ನು ಓದಿ, ಅದರಲ್ಲಿ ಐವತ್ತೆಂಟು ಕಥೆಗಳನ್ನು ಕಥಾ ಸಂಕಲನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ಕಥಾಸಂಕಲನದಲ್ಲಿ ಪ್ರಕಟಗೊಂಡ ಕಥೆಗಳ ಕಥೆಗಾರರು ಮಾತ್ರವಲ್ಲದೆ, ಎಲ್ಲ ನೂರಾ ಹದಿನೈದು ಪ್ರವೇಶಗಳನ್ನು ಕಳಿಸಿದ ಆಸಕ್ತರಿಗೂ ನಾನು ವಂದಿಸುತ್ತೇನೆ. ಈ ಕಥಾ ಸಂಕಲನದಲ್ಲಿಯೇ ತಮ್ಮ ಮೊದಲ ಕಥೆಯು ಪ್ರಕಟವಾಗುತ್ತಿರುವವರಿಗೆ ಶೀಘ್ರವಾಗಿ ಅವರುಗಳದ್ದೇ ಆದ ಪ್ರತ್ಯೇಕ ಕಥಾ ಸಂಕಲನಗಳು ಹೊರಬರಲಿ ಎಂದು ಹಾರೈಸುತ್ತೇನೆ.
ಪ್ರತಿಗಳಿಗಾಗಿ ಸಂಪರ್ಕಿಸಿ : 9731978057

ಆಶಾ ರಘು