ಆಪಾದನೆ
ನನ್ನ ರೆಪ್ಪೆಯಲುಗುವ ಮುನ್ನ
ನೀ ಹೋಗಿ ಬಿಡು ಬೇಗ
ಮತ್ತೆಂದೂ ತಿರುಗಿ ನೋಡದೆ
ತುಂಬಿದ ಕಣ್ ಕೊಳವನ್ನು
ಹಿಂಗಿಸಿ ಬಿಡುವೆನು
ತಿರುಗಿಯೂ ನೋಡದೆ
ಹೋಗುತಿರುವ ನಿನ್ನ ನೆನೆನೆನೆದು
ನೀ ತಿರುಗಿ ನೋಡಿದೆಯಾದರೇ
ಕೊಚ್ಚಿಹೋಗಿ ಬಿಡಬಹುದು
ಗುರಿಯೆಡೆಗಿನ ಕನಸುಗಳು
ಕಣ್ಣ ಜಲಪಾತದಲಿ
ಬೇಡ ನನಗೆ ಆಪಾದನೆ
ರೆಪ್ಪೆಯಲಿ ಬಂಧಿಸಿಡುವೆನು
ನನ್ನೆಲ್ಲ ಸ್ವಪ್ನಗಳ
ಏರಿಸಲಾರೆ ಬೇಡದ
ಹೊರೆಯ ನಿನ್ನ ಹೆಗಲಿಗೆ
ಪ್ರೀತಿಯಲಿ ಬಿದ್ದವರನ್ನು
ಕಂಡಿದ್ದೇವೆ ಸಾವಿರ ಸಾವಿರ
ಕಂಡದ್ದನ್ನು ಅರಗಿಸಿಕೊಂಡು
ಕಲಿತಿದ್ದೇನೆ ಪಾಠ ನಾನೂ
ನಿನ್ನ ಪ್ರೇಮದಲೇ
ಅದರ ತಾಪದಲೇ
ಉರಿದುರಿದು ಕಮರಿದರೂ
ಮತ್ತೆದ್ದು ಬರುವೆನು ನಾನು
ನಿನ್ನ ಯಶವ ಕಣ್
ತುಂಬಿಕೊಳ್ಳಲೆಂದು
ನನ್ನ ಕುಡಿನೋಟದೊಳಗೆ
ಸಿಕ್ಕಿ ನರಳಬೇಡ ನೀನು
ಗುರಿಯೆಡೆಗಿನ ದಾರಿಯ
ತಪ್ಪಿಸುವ ತಿರುವು ನಾನಾಗಲಾರೆ
ಬೇಡ ನನಗಾವ ಆಪಾದನೆ…

ಸೌಜನ್ಯ ದತ್ತರಾಜ