ದೂರ ಸರಿದ ಧರ್ಮಶ್ರೀ

ದೂರ ಸರಿದ ಧರ್ಮಶ್ರೀ

Covid 19 ಲಾಕ್ ಡೌನ್ ಸಮಯದಲ್ಲಿ ಹಳೆಯ ಸಿನಿಮಾಗಳನ್ನು ಅದ್ರಲ್ಲೂ ಕಾದಂಬರಿ ಆಧಾರಿತ ಸಿನೆಮಾಗಳನ್ನು ನೋಡುತ್ತಿದ್ದೆ. ಆಗ “ನಾಯಿ ನೆರಳು” ಸಿನಿಮಾ ಸಿಕ್ತು, ಅಲ್ಲಿಂದ ಭೈರಪ್ಪನವರು ಪರಿಚಿತರಾದರು. ಸಿನಿಮಾ ನೋಡಿದ ಒಂದು ವಾರ ಯಾರೊಡನು ಮಾತಾಗಲಾಗದ ತಲೆಮಾರುಗಳ ದುಃಖ. ಭೈರಪ್ಪನವರ ಹೆಸರನ್ನು ಆ ವರೆಗೆ ಕೇಳಿದ ನನಗೆ ಅವರನ್ನು ನನ್ನಂಥ ಸೂಕ್ಷ್ಮ ಹೃದಯದವಳು ಓದಿ ಸೈರಸಿಕೊಳ್ಳಬಹುದಾ ಅನ್ನಿಸಿದ್ದುಂಟು.

ಹೀಗಂದುಕೊಂಡವಳೆ ಮೊದಲು ಭೈರಪ್ಪನವರ ಪುಸ್ತಕ ಅಂತಾ ಕೊಂಡಿದ್ದು ‘ಮಂದ್ರ’! ಅಲ್ಲಿಂದ ಮುಂದಕ್ಕೆ ಅವರ ಬರಹಗಳ ಓದಿನ ರುಚಿ ಹಿಡಿದು ಬಿಟ್ಟಿತ್ತು. ಹುಬ್ಬಳ್ಳಿಯಲ್ಲಿ ಬಿ.ಎಡ್ ಓದುವಾಗ ‘ಕಾಡಸಿದ್ದೇಶ್ವರ’ ಕಾಲೇಜಿನೆದುರು ಹಾದು ಹೋಗುವಾಗ ಸ್ನೇಹಿತರಿಗೆ ಭೈರಪ್ಪ’ನವರು ವೃತ್ತಿ ಜೀವನ ಆರಂಭಿಸಿದ ಸ್ಥಳವಿದು, ನಡೆದಾಡಿದ ಜಾಗದಲ್ಲಿ ಉಸಿರಾಡಿ ಧನ್ಯಳಾದೆ ನಾನು ಎಂದೆಲ್ಲಾ ಬೀಗಿದ್ದೆ. ಬಂಗಾರ ಕೊಳ್ಳಿರೆಂದು ಅಜ್ಜ ನೀಡಿದ ಹಣದಲ್ಲಿ ಸಾವಿರ ಚಿಲ್ಲರೆ ರೂಪಾಯಿಗಳನ್ನ ಕವಲು, ದಾಟು, ನೆಲೆ, ಗೃಹಭಂಗ ಕೊಂಡು ಅವರ ಆಶೀರ್ವಾದವಾಗಿಟ್ಟುಕೊಂಡಿದ್ದೇನೆ.

ಶಿರಸಿಯಲ್ಲಿ ಎಂಎಸ್ಸಿ ಓದುವಾಗ ಲೈಬ್ರರಿಯಿಂದ ಪುಸ್ತಕ ಒಯ್ದು ಓದುವ ಗೀಳಿಟ್ಟುಕೊಂಡೆ. ವಂಶವೃಕ್ಷ ಮೊದಲು ಓದಿ ಒಬ್ಬ ವ್ಯಕ್ತಿ ನಿಜಕ್ಕೂ ತನ್ನ ಮನೊ ಬಯಕೆಗಳನ್ನ ನಿಗ್ರಹಿಸಿಕೊಳ್ಳಬಲ್ಲನೆ ಅನ್ನಿಸಿತ್ತು. ಮತ್ತೆ ಮತ್ತೆ ಅದೇ ಸಿನಿಮಾವನ್ನು ನೋಡಿ ಪಾತ್ರಗಳ ಸೃಷ್ಟಿಗೆ ಬೆರಗಾಗಿದ್ದೆ. ಜೊತೆಗೆ ದೂರ ಸರಿದರು, ನಿರಾಕರಣ, ಜಲಪಾತ ಇತರ ಕಾದಂಬರಿಗಳ ಓದುತ್ತ ಅವುಗಳು ಮರುಮುದ್ರಣಗೊಂಡ ಸಂಖ್ಯೆ ಕಂಡು ಖುಷಿಯಾಗಿದ್ದೇನೆ. ಪುಸ್ತಕಗಳನ್ನ ಎಕ್ಸಾಮ್ ನಡೆಯುವ ಹಿಂದಿನ ವಾರದವರೆಗೂ ಬಿಡದೆ ಓದಿ ಇಷ್ಟೊಂದು ಪಾತ್ರಗಳು ಓದಿದವರನ್ನೆ ಇಷ್ಟು ಕಾಡುತ್ತಿವೆ ಭೈರಪ್ಪನವರಾಗಿದ್ದಕ್ಕೆ ಅವುಗಳನ್ನು ಅಕ್ಷರವಾಗಿಸಲು ಸಾಧ್ಯವಾಯಿತು ಎಂದು ಮನದುಂಬಿ ಶ್ಲಾಘಿಸಿದ್ದೇನೆ.
ಎಂಎಸ್ಸಿ ಮುಗಿದ ಕಳೆದೆರಡು ತಿಂಗಳುಗಳಲ್ಲಿ ಮತ್ತೆ ಕಾದಂಬರಿ ಓದು ಮೊದಲಾಯಿತು ಉಡುಗೊರೆಯಾಗಿ ಸಿಕ್ಕ ಯಾನ’ದಿಂದ ಈ ಮೊದಲೆ ಕೊಂಡಿದ್ದ ನೆಲೆ, ದಾಟು ಓದಿ ಅದರ ಕುರಿತಾದ ನನ್ನ ಹೊಳಹನ್ನಾ ಬರೆದು ಫೋಸ್ಟ್ ಮಾಡುತ್ತಿದ್ದೆ.

ಜೊತೆಗೆ ಭೈರಪ್ಪನವರಿಗೆ ಸಂಬಂಧಿಸಿದ ಎಲ್ಲ ವಿಡಿಯೋ, ಡಾಕ್ಯುಮೆಂಟರಿ, ಕಾದಂಬರಿ ಆಧಾರಿತ ನಾಟಕಗಳನ್ನ ಹುಡುಕಿ ಹುಚ್ಚಳಂತೆ ನೋಡುತ್ತಿದ್ದೆ. ಮೂರು ತಿಂಗಳ ಕಾಲ ‘ಭಗೀರಥ’ ಪ್ರಯತ್ನದಿಂದ ಹುಟ್ಟೂರಿಗೆ ನೀರು ಬರಿಸಿದ್ದು, ಪ್ರಶಸ್ತಿ, ಮುದ್ರಣಗಳಿಂದ ಬರುವ ಹಣವನ್ನ ದತ್ತಿಯಾಗಿಸಿದ ವ್ಯಕ್ತಿತ್ವ ‘ಧೀಮಂತ’ ಅನ್ನಿಸಿ ಅವರ ಮೇಲಿನ ಗೌರವಾಭಿಮಾನ ನೂರ್ಮಡಿಸಿತು; ಅವರೆಡೆಗಿನ ನನ್ನ ಹುಚ್ಚು ಹೆಚ್ಚಾಯಿತು. ಹೀಗೆ ಈ ಹುಚ್ಚು ಎಲ್ಲಿಗೆ ಮುಟ್ಟಿತ್ತೆಂದರೆ ಮೈಸೂರಿನ ಅವರ ಮನೆ ವಿಳಾಸ ಹುಡುಕಿ ಬರೆದಿಟ್ಟುಕೊಂಡಿದ್ದೆ, ದಸರಾ ಮುಗಿದ ಮೇಲೆ ಅವರು ಸುತ್ತಾಡಿದ.. ಶ್ವಾಸಿಸಿದ ಗಾಳಿಯನ್ನಾದರೂ ತೆಗೆದುಕೊಳ್ಳಬೇಕೆಂದು ಪಣತೊಟ್ಟಿದ್ದೆ. ನಿದ್ರಿಸಿದಾಗ ಅವರ ಪಾದಸ್ಪರ್ಶಿಸಿದ ಸುಂದರ ಕನಸು ಕಂಡಿದ್ದೆ!

ನಿನ್ನೆ ಬೆಳಿಗ್ಗೆ ಕೂಡ ಅವರ ‘ಪರ್ವ’ ಕಾದಂಬರಿ ಆಧಾರಿತ ನಾಟಕದ ಕುರಿತಾಗಿನ ‘ಪ್ರಕಾಶ ಬೆಳವಾಡಿ’ಯವರ ಫೋಡ್ಕಾಸ್ಟ್ ನೋಡಿ ಕ್ಲಾಸಿಗೆ ಹೋಗಿದ್ದೆ.
ಮಧ್ಯಾಹ್ನದ ಊಟದ ಬಿಡುವಿನವರೆಗೂ ಗೃಹಭಂಗದ ಓದಾಳುವಾಗಿದ್ದೆ.

ಸರಿಯಾಗಿ ಮೂರು ಐವತ್ತೇಳಕ್ಕೆ ವಾಟ್ಸಪ್ ಫೋಸ್ಟ್ ಒಂದನ್ನಾ ನೋಡಿದ್ದಷ್ಟೆ ನಾನು, ಕಣ್ಣಿನ ಕಟ್ಟೆ ಅದೆಷ್ಟು ತಡೆ ಹಿಡಿಯಲೆತ್ನಿಸಿದರು ಪಟ್ ಎಂದು ಜಿನುಗಿಯೇ ಬಿಟ್ಟಿತು.
ಅವರ ಸೃಷ್ಟಿಯ ವೆಂಕಟಲಕ್ಷ್ಮೀ, ಸತ್ಯನಾರಾಯಣ, ಸಚ್ಚಿದಾನಂದ, ಸತ್ಯಭಾಮಾ, ನಂಜಮ್ಮರೆ ದಿಗ್ಗನೆ ಜೀವ ತಳೆದು ಧೈರ್ಯ ಹೇಳಿದರು “ಅಯ್ಯೋ ಹುಚ್ಚಿ ಹುಟ್ಟು ಅಂದ ಮೇಲೆ ಸಾವಿರಬೇಕಲ್ವೆನೆ, ಸಾವೊಂದೆ ನೋಡು ನಿಷ್ಪಕ್ಷಪಾತಿ”. ಹೀಗೆ ಅವರ ಇಲ್ಲದಿರುವಿಕೆಯನ್ನ ಎದುರಿಸುವ ಶಕ್ತಿ ತುಂಬುವ ಪಾತ್ರಗಳನ್ನ ಸೃಜಿಸಿ ನಮ್ಮನ್ನ ಈ ಮೊದಲೆ ಅಣಿ ಮಾಡಿ ಬಿಟ್ಟಿದ್ದರು. ಅದಕ್ಕೆ ಅವರ ಪುಸ್ತಕ ಓದಿದವರ The best therapist ಆಗಿ ಬಿಡುತ್ತಿದ್ದರು. ಯಾಕೆಂದರೆ ಅವರ ಪುಸ್ತಕಗಳಲ್ಲಿ ಧೈರ್ಯ, ಗಟ್ಟಿತನ, ನಮ್ಮ ನಿಲುವಿನ ಮೇಲಿನ ಸ್ಪಷ್ಟತೆ ಅಷ್ಟು ಧಾರಾಳವಾಗಿರುತ್ತಿದ್ದವು.

ನನ್ನಂತ ಕಿರಿಯಳಿಂದ ಇಳಿ ವಯಸ್ಸಿನ ಒಂದು ತಲೆಮಾರನ್ನು ತಿದ್ದಿದ ಸಂತರು ಅವರು.
ಹಾಗಂತ ಬರೆದದ್ದೆಲ್ಲವನ್ನು ಕುರುಡಾಗಿ ನಂಬಿ ಅನ್ನಲಿಲ್ಲ, ಸ್ವತಃ ಅನ್ವೇಷಿಸಿ ಬರೆದ ಅವರು ಓದುಗರ ಮುಂದಿಟ್ಟು ಓದಿ, ಪ್ರಶ್ನಿಸಿ, ಅವಲೋಕಿಸಿ ಎಂದು ತಮ್ಮನ್ನು ಮುಕ್ತವಾಗಿ ನಮ್ಮೆದುರು ಒಡ್ಡಿಕೊಂಡರು. ತಮ್ಮ ಬದುಕನ್ನೇ ವಿಶ್ವಧರ್ಮ ಸಮ್ಮೇಳನವಾಗಿಸಿಕೊಂಡರು; ಅನಿಕೇತನವಾದರು.

ಬರೆದರು.. ಬಿಡುವಿಲ್ಲದೆ ಬರೆಯುತ್ತಾ ಹೋದರು, ಓದಿದವರಿಗೆ ಆಧ್ಯಾತ್ಮವನ್ನು ಪರಿಚಯಿಸಿದರು. ಅಂತರ್ಮುಖಿಯಾಗಿಸಿ ಆಲೋಚನೆಗೆ ಹಚ್ಚಿದರು.
ನಮ್ಮನ್ನು ಇಷ್ಟು ಕಾಲ ಗಟ್ಟಿಗೊಳಿಸಿದ ನಿಮಗೂ ವಿಶ್ರಾಂತಿ ಬೇಕಲ್ಲ, ದಣಿವಾರಿಸಿಕೊಳ್ಳಿ ಅಪ್ಪಾಜಿ. ನೀವೀಗ ಮತ್ತೊಂದು ಅಖಂಡ ಕಾದಂಬರಿಯ ಅಧ್ಯಯನದ ಧ್ಯಾನದಲ್ಲಿದ್ದೀರಿ, ಹೋಗಿ ಬನ್ನಿ.

ದೂರ ಸರಿದ ಧರ್ಮಶ್ರೀಗೆ ಆರ್ಭಟದ ಕಣ್ಣೀರು ಹಾಕೊಲ್ಲ, ಪ್ರಬುದ್ಧ ಬದಲಾವಣೆ ತರಲೆತ್ನಿಸುವ ಅಭಿಮಾನದ ಅಭಿಮಾನಿ ಮಗಳು.

ಚಂದನ
ಮುಖಪುಟ ಚಿತ್ರ ಕೃಪೆ : ಶ್ರೀ ನಂಜುಂಡಸ್ವಾಮಿ

Related post