ಶಾಕುಂತಲೆಯ ಪ್ರಲಾಪ

ಶಾಕುಂತಲೆಯ ಪ್ರಲಾಪ

ಆಶ್ರಮದಲಿಹ ಮುದ್ದು ಶಾಕುಂತಲೆಗೆ
ವಿರಹದುರಿಯು ಸತತ ಕಾಡಿದೆ!
ದುಷ್ಯಂತನ ಪ್ರೇಮದ ಸವಿನೆನಪಿಗೆ..
ಅವಳ ಮನವದು ನಿತ್ಯ ಕಂಬನಿಗರೆದಿದೆ!!

ಕಣ್ವರ ಪುತ್ರಿಯ ಮನಕೆ ಸಂಕಟವಿಂದು
ಇನಿಯನ ಅಗಲಲಾರದ ನೆನಕೆಗೆ!
ಬೆರಳಿಗುಂಗುರವ ತೊಡಿಸಿ ತನ್ನ ಮರೆತಿಹನಿಂದು..
ವರುಷಗಳು ಸರಿದಿವೆ ಅವನ ಬರುವಿಕೆಗೆ!!

ಗೆಳತಿಯರ ಬಳಿ ಅರುಹಿಹಳಿಂದು
ತನ್ನೊಲವಿನ ಗೆಳೆಯನ ಪ್ರೇಮದ ಸತ್ಯ!
ಗಾಂಧರ್ವ ವಿವಾಹದಿ ತನುಮನ ಬೆರೆತಿರಲು…
ತೊರೆದಿಹನು ತನ್ನನೆಂಬ ಅರಗಲಾರದ ಮಿಥ್ಯ!!

ತಮ್ಮ ಸವಿಘಳಿಗೆಯ ನೆನೆದು ಮನದಿ
ಒಲವಿನೋಲೆಯ ತನ್ನಿನಿಯನಿಗೆ ಬರೆಸಿಹಳು!
ಮತ್ತೆ ತನ್ನತ್ತ ಅವ ಬರುವನೆಂಬ ವಿಶ್ವಾಸದಿ..
ತನ್ನ ಹಣೆಬರಹವ ತಾನೆ ತಿದ್ದಿಹಳು!!

ಸುಮನಾ ರಮಾನಂದ
ಕೊಯಮ್ಮತ್ತೂರು

Related post