ಕೊಬಾಲ್ಟ್ ಭಾವ ಬಣ್ಣ ಧಾರೆ

ಕೊಬಾಲ್ಟ್ ಭಾವ ಬಣ್ಣ ಧಾರೆ

ಸ್ವರ, ತಾಳ, ಬಣ್ಣ ಮೇಳೈಸಿದ ಅಪೂರ್ವ ತ್ರಿವೇಣಿ ಸಂಗಮ “ಭಾವ ಬಣ್ಣ ಧಾರೆ” ಕಾರ್ಯಕ್ರಮ. ಸ್ವರ ತಾಳ ಬಣ್ಣದೊಂದಿಗೆ ಕೇಳುಗರ ಮನಸ್ಸಿಗೆ, ಹೃದಯಕ್ಕೆ, ಕಣ್ಣಿಗೆ ಹಬ್ಬವುಂಟಾಗಿ ಅಲ್ಲೊಂದು ಭಾವ ಲೋಕವೇ ಸೃಷ್ಟಿಯಾಗುತ್ತು. ಹಾಡಿನಲ್ಲಿ ಭಾವ ಹುಟ್ಟಿ ಬಣ್ಣದ ಮೂಲಕ ಧಾರೆಯಾಗಿ ಒಂದು ದೃಶ್ಯವಾಗಿ ಕಲಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜರಾಜೇಶ್ವರಿ ನಗರದ ಕೊಬಾಲ್ಟ್ ಫೋರಂ ಆಫ್ ಆರ್ಟ್ ಮತ್ತು ಮ್ಯೂಸಿಕ್ ಸಂಸ್ಥೆಯಿಂದ ಭಾನುವಾರ 11-01-2026 ರಂದು ಭಾವ ಬಣ್ಣ ಧಾರೆ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದು ಶ್ರೋತೃಗಳಿಗೆ ಮುದ ನೀಡಿತು.

ಶ್ರೀಯುತ ರಾಜೇಶ್ ರಾವ್ ಅವರ ಸುಶ್ರಾವ್ಯ ಕಂಠಸಿರಿಯಲ್ಲಿ ಭಾವಗೀತೆ, ಭಕ್ತಿಗೀತೆಗಳು ಸುಮಧುರವಾಗಿ ಮೂಡಿ ಬಂದು ಕೇಳುಗರ ಮನತಣಿಸಿತು. ಅದಕ್ಕೆ ಸರಿಯಾಗಿ ಕೃಷ್ಣ ನೀ ಬೇಗನೆ ಬಾರೋ, ಮತ್ತು ಸೋಜುಗಾದ ಸೂಜು ಮಲ್ಲಿಗೆ ಹಾಡಿಗೆ ಕಲಾವಿದ ಗಣಪತಿ ಹೆಗಡೆ ಅವರು ಚಿತ್ರ ಬಿಡಿಸುವುದರ ಮೂಲಕ ಭಾವಬಣ್ಣ ಸಮ್ಮಿಲನಗೊಂಡಿತು.

ಕಲಾಭಿಮಾನಿಗಳು ಭಾವ ಬಣ್ಣದಲ್ಲಿ ಮಿಂದೆದ್ದರು. ಅಲ್ಲೊಂದು ದೃಶ್ಯ ಕಾವ್ಯ ಎಲ್ಲರನ್ನೂ ಮೋಡಿ ಮಾಡಿತ್ತು.
ಭಾವ ಸ್ಪಂದನ ತಂಡದವರಿಂದ ಸಮೂಹ ಗಾಯನ ಎಲ್ಲರ ಮನಸೂರೆಗೊಂಡಿತು. ಸುರಲೋಕವೇ ಧರೆಗಿಳಿದಂತೆ ನವಸಂವಸಂವತ್ಸರಕ್ಕೆ ಕಾಲಿಟ್ಟಂತೆ ಒಂದು ಸುಂದರ ಸಂಜೆಯಲ್ಲಿ ದೃಶ್ಯ ಕಾವ್ಯ ಲೋಕವೇ ಸೃಷ್ಟಿಯಾಗಿತ್ತು.

ಕೊಳಲಿನಲ್ಲಿ ಚಿರಂತನ ಅವರು ಮತ್ತು ತಬಲಾದಲ್ಲಿ ಶ್ರೀ ನಾಗರಾಜ ಹೆಗಡೆ ಅವರು ಸಮರ್ಥವಾಗಿ ಸಾಥ್ ನೀಡಿದರು. ಸಂಗೀತ ಕಲಾವಿದೆ ಡಾ.ಪದ್ಮಿನಿ ಓಕ್ ಮತ್ತು ಶ್ರೀಮತಿ ವೀಣಾ ಮೋಹನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ವಿನೋದ ನರಹರಿ ಅವರು ಕಾರ್ಯಕ್ರಮ ನಿರೂಪಿಸಿದರು. ಕೊಬಾಲ್ಟ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗಣಪತಿ ಹೆಗಡೆ ಎಲ್ಲರಿಗೂ ಗೌರವ ಸಮರ್ಪಿಸಿದರು. ಕೊನೆಯಲ್ಲಿ ವಂದೆಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಿದ್ದು ಅಲ್ಲೊಂದು ಸಮರ್ಪಣಾ ಭಾವ ಆವರಿಸಿತ್ತು.

ಸಾಹಿತ್ಯಮೈತ್ರಿ

Related post