ತೋಳ – ಪಾಠ
ಇಂದು, ನಾವೆಲ್ಲ ಒಂದು, ನಾವೆಲ್ಲ ಬಂಧು,
ಓಡಬೇಡಿ ಯಾರೂ ನನಗಿಂತ ಮುಂದು
ಮಹಾಮಂತ್ರ ಸಮತೆ, ಇರಲಿ ಮಮತೆ
ಆನೆಯತ್ತ ನೋಡಿತು ದುರದುರಗುಟ್ಟುತೆ
ಕೂಡಿ ಬಾಳಿದರೆ ತಮ್ಮ, ಅದೇ ಸ್ವರ್ಗ ಸುಖ
ನಾನು ನಿಮ್ಮ ಅಣ್ಣ, ನಾನು ನಿಮ್ಮ ಸಖ
ದುಃಖ ಬಂದರೆ ಸಹಿಸಬೇಡಿ, ಜಗಳ ಯಾಕ
ಆನೆ ಆನೆಗಳ ಕದನ, ತಮ್ಮ ಸಹನೆ ಜಪಿಸಬೇಕ
ಎಲ್ಲರಿಗೂ ಇದೆ ತಲೆ ಎತ್ತಿ ಬದುಕುವ ಹಕ್ಕು
ಎಷ್ಟೊಂದು ಓಡುತಿದೆ ಈ ಕುದುರೆಗೂ ಸೊಕ್ಕು
ಆನೆಗೂ ಅಂಕುಶವಿಟ್ಟೆನಗೆ ನೀನ್ಯಾವ ಲೆಕ್ಕು
ಛಟಾ..ರೆಂದಿತು ಚಾಟಿ, ಕೆಳಗೆ ಬೂಟಿನ ಕಿಕ್ಕು
ನಾಡಿನಾ ಕಾಡುಗಳಲಿ ಸಿಹಿನೀರ ಬಾವಿಗಳು
ನೋಡಿದಾ ತೋಳಣ್ಣನ ಬಾಯೊಳು ಧಾರೆಗಳು
ತಿಂದು ತೇಗಿ ಉಬ್ಬಿ ಹೋಗಿ ಸೊಕ್ಕಿವೆ ಒಂಟೆಗಳು
ಚಿಂತೆ ಬೇಡ ಒಂಟೆ ಮರಿ, ಆರಿಸುವೆ ದೊರೆಗಳು
ಶಾಂತಿ ಶಾಂತಿ ಶಾಂತಿ, ಬೇಡ ಸುಮ್ಮನೆ ಭ್ರಾಂತಿ
ಏಕೆ ಬೇಕು ಬಂದೂಕು, ದೂರವಾಗಲಿ ಅಶಾಂತಿ
ನವಿಲು ಗುಡ್ಡದಲಿ ಬೆಂಕಿ, ಹುಲಿಗೆ ರಕ್ತದ ವಾಂತಿ
ಮೊಸಳೆಗೆ ಕಣ್ಣೀರು, ತೋಳಣ್ಣನ ನವಕ್ರಾಂತಿ
ಆಸೆ ದುಃಖದ ಮೂಲ, ಅತಿ ಆಸೆ ಗತಿ ಗೇಡು
ನಿನ್ನ ಹಾಸಿಗೆ ಇದ್ದಷ್ಟು ನಿನ್ನ ಕಾಲು ಚಾಚು,
ಬೇರೆಯವರ ಯಾವ ಆಸ್ತಿ ನಮಗೇಕೆ ಬೇಕು,
ಈ ವಸುಧೆ ಒಂದು ನನಗೆ ಬರೆದು ಕೊಡಿ ಸಾಕು
ಬೇಡ ಬೇಡ ತೋಳ, ಮೆರೆಯಬೇಡ ಭಾಳ
ಕೀಳು ಎಣಿಸಬೇಡ, ನಾವೂ ಹುಲಿ ಸಿಂಹಗಳ
ನೋಡುತ್ತಿತ್ತು ಹಸಿರ, ಏರಿ ಹುಲಿ ಸಿಂಹಗಳ
ಬಾಗಿ ಕೈ ಮುಗಿಯಿರಿ, ಬಂದೆ ನಾ ಮಹಾತೋಳ

ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ, ಮಹಾರಾಷ್ಟ್ರ
ಮೊಬೈಲ್ 9175547259