ಶ್ರೀ. ಡಿ ವಿ. ಗುಂಡಪ್ಪನವರ ರಾಜ್ಯಾಂಗ ತತ್ವಗಳು – ಶ್ರೀವಲ್ಲಿ ಮಂಜುನಾಥ
ಶ್ರೀ. ಡಿ ವಿ. ಗುಂಡಪ್ಪನವರ ರಾಜ್ಯಾಂಗ ತತ್ವಗಳು
ಅಭಿಯಾನ – ಅಕ್ಷರ ನೈವೇದ್ಯ
ಪುಸ್ತಕ – ರಾಜ್ಯಾಂಗ ತತ್ವಗಳು
ಲೇಖಕರು – ಶ್ರೀ. ಡಿ ವಿ. ಗುಂಡಪ್ಪ (ಡಿವಿಜಿ)
ಡಿ ವಿ.ಜಿ. ಎಂದೇ ಪ್ರಸಿದ್ಧರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕನ್ನಡದ ಪ್ರಸಿದ್ಧ ಕವಿ, ಸಾಹಿತಿ, ಪತ್ರಕರ್ತ, ಚಿಂತಕ ಹಾಗೂ ದಾರ್ಶನಿಕರಾಗಿದ್ದರು. ಇವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಕನ್ನಡದ ಆಧುನಿಕ ಸರ್ವಜ್ಞ ಎಂದು ಕರೆಯಲಾಗುತ್ತದೆ.

ಡಿ.ವಿ.ಜಿ. ಅವರು ಹೆಚ್ಚಿನ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ಪತ್ರಕರ್ತರಾಗಿ, ಸಂಪಾದಕರಾಗಿ ಹಾಗೂ ಸಾಹಿತಿಗಳಾಗಿ ಸೇವೆ ಸಲ್ಲಿಸಿದರು.
ಪ್ರಮುಖ ಕೃತಿಗಳು ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಉಮರನ ಒಸಗೆ, ಜ್ಞಾಪಕ ಚಿತ್ರಶಾಲೆ, ಅಂತಃಪುರ ಗೀತೆಗಳು ಶ್ರೀಮದ್ಭಗವದ್ಗೀತಾ ತಾತ್ಪರ್ಯ ಮುಂತಾದವು.
ಪ್ರಶಸ್ತಿ ಮತ್ತು ಗೌರವಗಳು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನಮಾನ ಗಳಿಸಿದ್ದಾರೆ.

ಡಿ.ವಿ.ಜಿ. ಅವರ ಅತ್ಯಂತ ಪ್ರಸಿದ್ಧ ಕೃತಿ ಮಂಕುತಿಮ್ಮನ ಕಗ್ಗ. ಈ ಕೃತಿಯಲ್ಲಿ ಜೀವನದ ಮೌಲ್ಯಗಳು, ಮಾನವೀಯತೆ, ನೀತಿ, ಧರ್ಮ, ಪ್ರಕೃತಿ ಮತ್ತು ತತ್ವಜ್ಞಾನವನ್ನು ಸರಳವಾದ ನಾಲ್ಕು ಸಾಲಿನ ಪದ್ಯಗಳ ಮೂಲಕ ಸುಂದರವಾಗಿ ವಿವರಿಸಿದ್ದಾರೆ.
ಇವರು ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಿ ಸಾರ್ವಜನಿಕ ಜೀವನದ ಸುಧಾರಣೆಗೂ ಶ್ರಮಿಸಿದರು.
ರಾಜ್ಯಾಂಗ ತತ್ವಗಳು ಎಂಬ ಕೃತಿಯು ರಾಜ್ಯಶಾಸ್ತ್ರ ಮತ್ತು ಸಂವಿಧಾನದ ಮೂಲಭೂತ ತತ್ವಗಳನ್ನು ವಿವರಿಸುವ ಒಂದು ಮಹತ್ವದ ಕೃತಿಯಾಗಿದೆ. ಸಾಮಾನ್ಯ ಜನರಿಗೂ ರಾಜ್ಯಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ಆಡಳಿತದ ತತ್ವಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸುವ ಸಲುವಾಗಿ ಈ ಪುಸ್ತಕವನ್ನು ಡಿವಿಜಿ ಅವರು ರಚಿಸಿದ್ದಾರೆ.
ಕೃತಿಯು ಯಜುರ್ವೇದದ ತೈತ್ತಿರೀಯ ಬ್ರಾಹ್ಮಣದ ಪ್ರಾರ್ಥನೆಯೊಡನೆ ಆರಂಭವಾಗುತ್ತದೆ. ಡಿವಿಜಿ ಅವರು ಇದನ್ನು “ಋಷಿಗಳ ರಾಷ್ಟ್ರೀಯ ಗೀತೆ” ಎಂದು ಕರೆದಿದ್ದಾರೆ.
ಈ ಪ್ರಾರ್ಥನೆಯು ಕೇವಲ ಆಧ್ಯಾತ್ಮಿಕ ಮಂತ್ರವಲ್ಲ. ಬದಲಾಗಿ ಒಂದು ಆದರ್ಶ ರಾಜ್ಯಕ್ಕೆ ಬೇಕಾದ ಬುದ್ಧಿಶಕ್ತಿ, ರಕ್ಷಣಾ ಬಲ, ಆರ್ಥಿಕ ಸಮೃದ್ಧಿ, ಸ್ತ್ರೀ ಶಕ್ತಿ, ಯುವಶಕ್ತಿ ಮತ್ತು ಪ್ರಕೃತಿಯ ಸಮತೋಲನವನ್ನು ಒಟ್ಟಾಗಿ ಬಯಸುವ ಅತ್ಯುತ್ತಮ ಸಂವಿಧಾನಾತ್ಮಕ ಆಶಯವಾಗಿದೆ ಎಂದು ಇಲ್ಲಿ ತಿಳಿಸಿದ್ದಾರೆ.

ರಾಜ್ಯ ಎಂದರೇನು, ಅದರ ಉಗಮ ಹೇಗಾಯಿತು ಅದರ ಮುಖ್ಯ ಉದ್ದೇಶ; ಜನರ ಅಭಿವೃದ್ಧಿ, ನೆಮ್ಮದಿ ಪ್ರಗತಿ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ ಮತ್ತು ಸರ್ಕಾರದ ವಿವಿಧ ಪ್ರಕಾರಗಳು ಯಾವುವು ಎಂಬುದನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ಸಿಗೆ ನಾಗರಿಕರ ಜವಾಬ್ದಾರಿ ಏನು, ನೈತಿಕತೆ ಮತ್ತು ಪ್ರಜ್ಞಾವಂತಿಕೆ ಎಷ್ಟು ಮುಖ್ಯ ಎಂಬುದನ್ನೂ ಡಿವಿಜಿಯವರು ಇಲ್ಲಿ ಹೇಳಿದ್ದಾರೆ.
ದೇಶ ಅಥವಾ ರಾಷ್ಟ್ರವನ್ನು ಕೇವಲ ಭೂಪ್ರದೇಶವಾಗಿ ನೋಡದೆ, ಅದೊಂದು ನಿರಂತರವಾಗಿ ನಡೆಯುವ ಯಜ್ಞದಂತೆ ಚೈತನ್ಯಶೀಲವಾಗಿರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಆಡಳಿತವು ನ್ಯಾಯ, ಧರ್ಮ. ದಕ್ಷತೆ ಮತ್ತು ಪ್ರಾಮಾಣಿಕವಾಗಿರಬೇಕು ಎಂಬ ಅವರ ಆಶಯವನ್ನು ಇಲ್ಲಿ ಕಾಣಬಹುದು.
ಸಂವಿಧಾನದ ಮಹತ್ವವೇನು, ಆಡಳಿತದ ಜವಾಬ್ದಾರಿಗಳನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಸ್ವತಂತ್ರ ಅಂಗಗಳ ನಡುವೆ ಹಂಚಿಕೆ ಮಾಡುವುದೇ ಸಂವಿಧಾನಾತ್ಮಕ ತತ್ವವಾಗಿದೆ ಎಂಬ ಬಗ್ಗೆಯೂ, ಅಧಿಕಾರವು ಮನುಷ್ಯನನ್ನು ಭ್ರಷ್ಟಗೊಳಿಸುವ ಸಾಧ್ಯತೆ ಇರುವುದರಿಂದ ಈ ಮೂರು ಅಂಗಗಳು ತಮ್ಮ ಮಿತಿಯನ್ನು ಅರಿತು ನೈತಿಕತೆಯಿಂದ ಕೆಲಸ ಮಾಡಿದಾಗ ಮಾತ್ರ ಪ್ರಜೆಗಳ ಸ್ವಾತಂತ್ರ್ಯ ಸುರಕ್ಷಿತವಾಗಿರುತ್ತದೆ ಎಂಬುದನ್ನು ಇಲ್ಲಿ ಪ್ರತಿಪಾದಿಸಿದ್ದಾರೆ. ಶಾಸಕಾಂಗವನ್ನು ಕೇವಲ ಕಾನೂನು ಮಾಡುವ ಸಭೆಯಾಗಿ ನೋಡದೆ, ಸಾರ್ವಜನಿಕ ಹಿತಾಸಕ್ತಿಯ ಕಾವಲುಗಾರನಾಗಿರಬೇಕು ಎಂದು ವಿಶ್ಲೇಷಿಸಿದ್ದಾರೆ.
ಭಾರತೀಯ ಚಿಂತನೆ ಮತ್ತು ಪಾಶ್ಚಾತ್ಯ ತತ್ವಗಳ ಸಮನ್ವಯವನ್ನು ನಾವಿಲ್ಲಿ ಕಾಣಬಹುದು. ಪಾಶ್ಚಾತ್ಯ ರಾಜ್ಯಶಾಸ್ತ್ರದ ತತ್ವಗಳ ಜೊತೆಗೆ ಭಾರತೀಯ ಪ್ರಾಚೀನ ಗ್ರಂಥಗಳಾದ ವೇದಗಳು, ಮಹಾಭಾರತ ಮತ್ತು ಅರ್ಥಶಾಸ್ತ್ರದ ರಾಜಧರ್ಮದ ವಿಚಾರಗಳು ಹೇಗೆ ಒಂದಕ್ಕೊಂದು ಅವಲಂಬಿತವಾಗಿದೆ ಎಂಬುದೂ ಇಲ್ಲಿ ತಿಳಿಯುತ್ತದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು. ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂಬುದನ್ನು ನಾವು ಇಲ್ಲಿ ಕಾಣಬಹುದು. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಜನರು ಶಿಕ್ಷಿತರಾಗಿರಬೇಕು ಮತ್ತು ಅವರಿಗೆ ರಾಜಕೀಯದ ಅರಿವಿರಬೇಕು ಎಂಬುದನ್ನು ಇಲ್ಲಿ ಕಾಣಬಹುದು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಅಗತ್ಯ. ಪ್ರಜಾಪ್ರಭುತ್ವವನ್ನು ಉಳಿಸಲು ಕಾಲಕಾಲಕ್ಕೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸುವುದು ಕಡ್ಡಾಯವಾಗಿದೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಹಾಗೆಯೇ ನಮ್ಮನ್ನಾಳುವವರು ದೂರದೃಷ್ಟಿ ಉಳ್ಳವರೂ, ಜವಾಬ್ದಾರಿ ಇರುವವರೂ ಮತ್ತು ನಿಸ್ವಾರ್ಥಿಗಳೂ ಆಗಿರಬೇಕೆನ್ನುವುದು ಅವರ ಅಭಿಪ್ರಾಯವಾಗಿತ್ತು.
ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯದ ಆಚರಣೆಗೆ ವ್ಯಕ್ತಿಯ ಪಾತ್ರ ಮತ್ತು ಜವಾಬ್ದಾರಿ ಅತ್ಯಂತ ಮುಖ್ಯ, ಕೇವಲ ಹಕ್ಕುಗಳನ್ನು ಕೇಳುವ ಮೊದಲು ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಯಮ, ಆತ್ಮಾವಲೋಕನ ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಂಡು ಜವಾಬ್ದಾರಿಯುತವಾಗಿರಬೇಕು ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೂ ಪಾಲ್ಗೊಳ್ಳಬೇಕು ಮತ್ತು ಅವರ ಅಭಿಪ್ರಾಯಕ್ಕೆ ಬೆಲೆಯಿರಬೇಕೆಂದು ತಿಳಿಸಿದ್ದಾರೆ
ಅಧಿಕಾರವು ಜನರ ಸೇವೆಗಾಗಿ ಬಳಕೆಯಾಗಬೇಕೇ ಹೊರತು ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಎಂಬ ಕಿವಿಮಾತಿನೊಡನೆ, ಪಕ್ಷದ ಹಿತಕ್ಕಿಂತಾ ದೇಶದ ಮತ್ತು ಜನರ ಹಿತ ಮುಖ್ಯ ಎಂದು ರಾಜಕಾರಣಿಗಳಿಗೆ ಹಿತವಚನವನ್ನೂ ಇಲ್ಲಿ ಹೇಳಿದ್ದಾರೆ.
ಆಂತರಿಕ ಶಿಸ್ತು ಎಷ್ಟು ಮುಖ್ಯ ಎಂಬುದನ್ನು ವಿವರಿಸುತ್ತಾ, ಕೇವಲ ಬಾಹ್ಯ ಕಾನೂನುಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಆತ್ಮಸಾಕ್ಷಿಯನ್ನು ಬಲಪಡಿಸಿಕೊಳ್ಳಬೇಕು ಎಂಬುದು ಡಿವಿಜಿ ಅವರ ರಾಜಕೀಯ ತತ್ವಶಾಸ್ತ್ರದ ಸಾರವಾಗಿದೆ.
ಸಂವಿಧಾನವು ನೀಡುವ ಸ್ವಾತಂತ್ರ್ಯವು ಎಂದಿಗೂ ಸ್ವೇಚ್ಛಾಚಾರವಾಗಬಾರದು. ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ಅರಿತು ನಡೆಯಬೇಕು, ಆಗ ಮಾತ್ರ ಸಂವಿಧಾನದ ಮೂಲ ತತ್ವಗಳು ಸಾರ್ಥಕವಾಗುತ್ತವೆ ಎಂಬುದು ಡಿವಿಜಿ ಅವರ ಅಭಿಪ್ರಾಯವಾಗಿದೆ.
ಹೀಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಕನ್ನಡದಲ್ಲಿ ಬರೆದಿರುವ ಈ ಪುಸ್ತಕವು ವಿದ್ಯಾರ್ಥಿಗಳಿಗೂ, ರಾಜಕೀಯ ಆಸಕ್ತರಿಗೂ ಮತ್ತು ಪ್ರತಿಯೊಬ್ಬರಿಗೂ ಉಪಯುಕ್ತ ಪುಸ್ತಕವಾಗಿದೆ.

ಶ್ರೀವಲ್ಲಿ ಮಂಜುನಾಥ