ನಮ್ಮಲ್ಲಿ ಮದುವೆಗಳಲ್ಲಿ ಮೊದಲು ಜೀರಿಗೆ ಬೆಲ್ಲ ಹಾಕಿದೋರ ಮಾತನ್ನು ವಧು/ವರ ಜೀವನ ಪರ್ಯಂತ ಕೇಳುವಂತಾಗುತ್ತದೆ ಎಂಬುದು ಒಂದು ಹಾಸ್ಯಪೂರ್ಣವಾದ ನಂಬಿಕೆ! ಆಮೇಲೆ ಗಂಡು ಹೆಣ್ಣಿಗೆ ಅಡ್ಡಬೀಳುವುದು ಇದ್ದೇ ಇದೆ ಎಂಬು ಮಾತೂ ಬಂದು ಹೋಗುತ್ತದೆ, ವಾಸ್ತವವೇನೇ ಇದ್ದರೂ! ಇರಲಿ, ಇವೆಲ್ಲವೂ ಹಾಸ್ಯಕ್ಕೆ ಹೇಳುವುದು. ಎಷ್ಟೇ ಅದರೂ ಗಂಡಿನ ಬಾಳು!
ನಮ್ಮ ಬಹು ಸುಂದರ ಹಕ್ಕಿಗಳಲ್ಲಿ ಒಂದಾದ ನೀಲಕಂಠ ಹಕ್ಕಿ ಸಂಗಾತಿಯನ್ನು ಪಡೆಯಲೋಸುಗ ಹೆಣ್ಣಿನ ಮುಂದೆ ಲಾಗ ಹಾಕುತ್ತದೆ! ವಿಶಿಷ್ಟ ಬಗೆಯ ಹಾರುವ ಸರ್ಕಸ್ಸನ್ನು ಗಾಳಿಯಲ್ಲಿ ಹೆಣ್ಣಿನ ಮುಂದೆ ಮಾಡುತ್ತದೆ,. ಅದಕ್ಕೆ ಈ ಹಕ್ಕಿಯನ್ನು ಉರುಳಿಗ ಎಂದೂ ಕರೆಯುತ್ತಾರೆ. ಅದ್ಭುತ ಸೌಂದರ್ಯದ ಈ ಹಕ್ಕಿ ನಮ್ಮ ದೇಶದಲ್ಲಿ ಮೂರು ರಾಜ್ಯಗಳ ರಾಜ್ಯದ (ಕರ್ನಾಟಕದ) ಪಕ್ಷಿಯಾಗಿದೆ. ಆ ರಾಜ್ಯಗಳೆಂದರೆ ನಮ್ಮ ಕರ್ನಾಟಕ, ಸರಿಸುಮಾರು ನೆರೆ ರಾಜ್ಯವೇ ಆದ ತೆಲಂಗಾಣ ಮತ್ತು ದೂರದ ಒಡಿಶ್ಶಾ. ಇಂಗ್ಲಿಷಿನಲ್ಲಿ ಇದನ್ನು ಇಂಡಿಯನ್ ರೋಲರ್ (Indian Roller Coracias Benghalensis) ಮತ್ತು ಬ್ಲೂ ಜೇ (Blue Jay) ಎಂಬ ಹೆಸರುಗಳು ಇವೆ.
ಪ್ರಧಾನವಾಗಿ ನೀಲಿ ಬಣ್ಣವನ್ನು ಹೊಂದಿರುವ ಈ ಪಕ್ಷಿ ನಮ್ಮ ರೈತ ಮಿತ್ರ. ಅದೆಷ್ಟು ಬಗೆಯ ಕ್ರಿಮಿ ಕೀಟಗಳನ್ನು ತಿನ್ನುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ನಮ್ಮ ತೊಟ, ಹೊಲಗದ್ದೆಗಳ ಸುತ್ತ ಇವು ಇದ್ದಲ್ಲಿ ಅದೆಷ್ಟೋ ಪ್ರಯೋಜನಕಾರಿಯಾಗಬಲ್ಲದ್ದು ಇದು. ಆದರೆ, ಬೆಂಗಳೂರು ಮೈಸೂರು ಹೆದ್ದಾರಿಗಾಗಿ ಕಡಿಯಲಾದ ಸಾವಿರಾರು ಮರಗಳಿಂದಾಗಿ ಇವುಗಳ ಸಂಖ್ಯೆಯ ಮೇಲೆ ಬಹುದೊಡ್ಡ ದುಷ್ಪರಿಣಾಮ ಉಂಟಾಯಿತು.
ಇವು ಮಿಡತೆ, ದುಂಬಿ, ಚಿಮ್ಮಂಡೆಗಳು, ರೆಕ್ಕೆಯ ಇರುವೆ, ಗೆದ್ದಲು ಹುಳು ಹೀಗೆ ಅದೆಷ್ಟು ಬಗೆಯ ಕೀಟಗಳನ್ನು ತಿನ್ನುತ್ತದೆಯೆಂದರೆ ರೈತರು ಸಂತುಷ್ಟರಾಗ ಬೇಕು! ಅಂತಹ ರೈತ ಮಿತ್ರ ಇದು. ಜೊತೆಗೆ ಕಪ್ಪೆ, ಹಲ್ಲಿ, ಪುಟ್ಟ ಇಲಿ, ಇಂತಹವನ್ನೂ, ಕೆಲವೊಮ್ಮೆ ಸಣ್ಣಗಾತ್ರದ ಹಾವನ್ನು ಸಹ ತಿನ್ನುತ್ತದೆ. ನಯವಾಗಿ ಮೀನು ಹಿಡಿಯುವ ಕಲೆಯೂ ಇದಕ್ಕೆ ಸಿದ್ಧಿಸಿದೆ. ಇಂತಹ ರೈತ ಉಪಕಾರಿಯಾದ ಜೀವಿಗೆ ಕರ್ನಾಟಕವೂ ಸೇರಿದಂತೆ ಮೂರು ರಾಜ್ಯಗಳ ರಾಜ್ಯಪಕ್ಷಿ ಪಟ್ಟ ಸಿಕ್ಕಿರುವುದು ಸಂತೋಷದ ವಿಷಯವೇ.
ಇಷ್ಟು ಮಾತ್ರವಲ್ಲ ನಮ್ಮ ದೇಶದ ಅನೇಕ ಭಾಗಗಳಲ್ಲಿ ಇದನ್ನು ವಿಷ್ಣುವಿನ ರೂಪ ಎಂದು ಆರಾಧಿಸಲಾಗುತ್ತದೆ. ಇದನ್ನು ಕಂಡರೆ ಮಂತ್ರಗಳನ್ನು ಪಠಿಸುತ್ತಾರೆ. ಸಾವಿನ ಮೊದಲು ಇದು ಕಂಡರೆ ಮರಣಕಾಲದಲ್ಲಿ ವಿಷ್ಣುವಿನ ದರ್ಶನವಾಯಿತೆಂದುಕೊಳ್ಳುತ್ತಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಇದಕ್ಕೆ ಪೂಜೆ ಸಲ್ಲುತ್ತದೆ. ಹೀಗೆ ಇದು ನಮ್ಮ ಸಂಸ್ಕೃತಿಯಲ್ಲೂ ಹಾಸುಕೊಕ್ಕಾಗಿದೆ.
ಸಾಮಾನ್ಯವಾಗಿ ಮುಳ್ಳುಕಂಟಿ, ಕುರುಚಲು ಕಾಡು, ಗುಡ್ಡಬಂಡೆಗಳಿರುವಡೆ ಹಾಗೂ ಉದ್ಯಾನವನಗಳಲ್ಲಿಯೂ ಕಂಡುಬರುತ್ತವೆ. ಹಳೆಯ ನಿರುಪಯುಕ್ತವೆನಿಸುವ ಲಡ್ಡು ಹಿಡಿದ ಮರ, ಹಳೆಯ ಪಾಳುಬಿದ್ದ ಕಟ್ಟಡಗಳ ರಂದ್ರಗಳಲ್ಲಿ, ಇಲ್ಲವೆ ಮರದ ರಂದ್ರದಲ್ಲಿ ಮೊಟ್ಟಯಿಟ್ಟು ಮರಿಮಾಡುತ್ತವೆ. ಹತ್ತಿ ಮತ್ತಿತರ ಮೆತ್ತನೆಯ ವಸ್ತುಗಳನ್ನು ಗೂಡಿನಲ್ಲಿ ಸೇರಿಸಿ ಮೆತ್ತನೆಯ ವಲಯವನ್ನು ಸೃಷ್ಟಿ ಮಾಡಿಕೊಳ್ಳುತ್ತದೆ.
ಕೂಗು ತುಸು ಕರ್ಕಶವೆನಿಸುತ್ತದೆ. ಹಾರುವಾಗಲೂ ಬಹಳ ಸುಂದರವಾಗಿ ಕಾಣುವ ಈ ಪಕ್ಷಿಯ ಜೊತೆಗೆ ಯೂರೋಪಿಯನ್ ನೀಲಕಂಠ ನಮ್ಮಲ್ಲಿಗೆ ವಲಸೆ ಬರುತ್ತದೆ. ದಕ್ಷಿಣ ಏಷ್ಯಾದಲ್ಲಿ ಮೂರು ಬಗೆಯವು ಕಂಡುಬಂದರೆ, ಜಗತ್ತಿನಾದ್ಯಂತ ಸುಮಾರು 12 ಬಗೆಯ ನೀಲಕಂಠ ಪಕ್ಷಿಗಳಿವೆ.
ನಿಮಗೆ ಕಂಡರೆ ರೈತ ಮಿತ್ರ ಎಂಬುದನ್ನು ಯೋಚಿಸಿ ಹಾಗೂ ನಮಗೆ ಬರೆದು ತಿಳಿಸಿ.
ಲೇಖನ : ಕಲ್ಗುಂಡಿ ನವೀನ್
ಚಿತ್ರಗಳು : ಶ್ರೀ ಜಿ ಎಸ್ ಶ್ರೀನಾಥ