ಶ್ರೀ ಗೌರಿ -ಮುಖಕಮಲ-ದಿನಕರನೆ ಗಣಪತಿಯೆ
ಶ್ರೀ ಗಜಾನನ ಆಖು ವಾಹನನೆ ಶರಣು|
ಶ್ರೀ ಗುರುಕೃಪಾದೃಷ್ಟಿ ಎನ್ನ ಮೇಲಿರುವಂತೆ |
ಆಗುಮಾಡಿಸೊ ಬೆನಕ ಶರಣು ಶರಣು- || ಪ್ರತ್ಯಗಾತ್ಮ ||
ಅಮ್ಮ ಶಾರದೆ ವರದೆ ಶೃಂಗಗಿರಿ ಪುರವಾಸಿ
ಬೊಮ್ಮನರಸಿಯೆ ಸಕಲ ವಿಬುಧ-ಜನ-ವಂದ್ಯೆ
ನಮ್ಮ ಗುರುಕಾರ್ಯಕ್ಕೆ ಅಭಯ ಹಸ್ತವ ನೀಡು
ದಮ್ಮಯ್ಯ ಶರಣೆಂದೆ ಶ್ರೀ ಪಾದಕೆ- || ಪ್ರತ್ಯಗಾತ್ಮ||
ಪೊಡವಿಯೊಳಗಾವುದಿದೆ ನಿನಗಸಾಧ್ಯವು ಹನುಮ
ಹಿಡಿದ ಕೆಲಸವ ಬಿಡದೆ ಸಾಧಿಸುವೆ ನೀನು
ದೃಢ ಭಕ್ತ ಶ್ರೀರಾಮದೂತ ಕರುಣಾಸಿಂಧು
ಬಿಡದೆನ್ನ ಕಾರ್ಯವನು ಪೂರ್ಣಗೊಳಿಸು- || ಪ್ರತ್ಯಗಾತ್ಮ||
ಅಂಜನಾ ಗರ್ಭದಲಿ ಜನಿಸಿದ ಮಹಾಮಹಿಮ
ಸುಗ್ರೀವ ಸಚಿವರಲಿ ಉತ್ತಮೋತ್ತಮನೆ
ರಾಮಪ್ರಿಯ ನಿನಗಿದೊ ತಲೆಬಾಗಿ ವಂದಿಸುವೆ
ಹನುಮಂತ ಸಲಹೆನ್ನ ನೀನು ಸತತ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ