ಸ್ವರ್ಗದ ಹಕ್ಕಿ! ಎಂಬ ಹೆಸರೇ ಚಕಿತಗೊಳಿಸುತ್ತದೆ. ಅದನ್ನು ನೋಡಿದ ಕೂಡಲೆ ಯಾಕೆ ಅದನ್ನು ಸ್ವರ್ಗದ ಹಕ್ಕಿ ಎನ್ನುತ್ತಾರೆ ಎಂಬುದು ಅರ್ಥವಾಗಿ ಹೋಗುತ್ತದೆ. ಬಿಳಿ ಅಥವಾ ಕಂದು ದೇಹದ ಪುಟ್ಟ ಹಕ್ಕಿಗಳು. ಗಂಡು ಹಕ್ಕಿಗೋ ಬಾಲ ದೇಹದ ಸರಿಸುಮಾರು ಹತ್ತರಷ್ಟು ಉದ್ದವಿರುತ್ತದೆ. ಇದೇ ಆ ಹಕ್ಕಿಗೆ ಒಂದು ಅಪೂರ್ವ ಸೌಂದರ್ಯವನ್ನು ತಂದುಕೊಡುತ್ತದೆ.
ಇಂಗ್ಲಿಷಿನಲ್ಲಿ ಈ ಹಕ್ಕಿಯನ್ನು ಇಂಡಿಯನ್ ಪ್ಯಾರಡೈಸ್ ಪ್ಲೈ ಕ್ಯಾಚರ್ (Indian Paradise-Flycatcher Terpsiphone paradisi) ಎನ್ನುತ್ತಾರೆ. ಅಂದಹಾಗೆ, ಈ ಪ್ಲೈಕ್ಯಾಚರ್ ಎಂಬ ಪದಪುಂಜ ಮುಖ್ಯ. ಇಲ್ಲಿ ಪ್ಲೈ ಎಂದರೆ ನೊಣ ಮಾತ್ರವಲ್ಲ, ಆದರೆ ಎರಡು ರೆಕ್ಕೆಯ ಹುಳುಗಳು ಎಂಬ ವಿಶೇಷವಾದ ಅರ್ಥವಿದೆ. ಇದು ಎಲ್ಲ ಪ್ಲೈಕ್ಯಾಚರ್ಗಳಿಗೂ ಅನ್ವಯಿಸುತ್ತದೆ.
ಗಂಡುಹಕ್ಕಿಯ ಬಾಲ ಎಂದರೆ ನಿಜದಲ್ಲಿ ಬಾಲದ ಮಧ್ಯದ ಎರಡು ಗರಿಗಳು ಉದ್ದವಾಗಿ ಬೆಳೆಯುತ್ತದೆ. ಇದು ಏಕೆ ಹೀಗೆ? ಇದರಿಂದ ಹಕ್ಕಿಗೆ ಏನು ಪ್ರಯೋಜನ ಎಂಬುದರ ಕುರಿತು ಸ್ಪಷ್ಟತೆಯಿಲ್ಲ. ಹೆಣ್ಣುಹಕ್ಕಿಗಳ ಮೇಲ್ಭಾಗ ಕೆಂಗಂದು ಬಣ್ಣದ್ದಾಗಿದ್ದು ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ, ತಲೆ ಕಪ್ಪು. ಗಂಡಿನಲ್ಲಿಯೂ ಹೀಗೆ ಇದ್ದರೂ ವಿಸ್ಮಯಕಾರಿ ವ್ಯತ್ಯಾಸಗಳಿವೆ. ಗಂಡಿನ ಬಾಲ ಸರಿಸುಮಾರು ಹನ್ನೆರೆಡು ಇಂಚಿನಷ್ಟು ಉದ್ದವಾಗಿರುತ್ತೆ. ಎರಡನೇ ಅಥವಾ ಮೂರನೇ ವರ್ಷ ಬಾಲ ಉದ್ದವಾಗುತ್ತದೆ. ಹೆಣ್ಣುಹಕ್ಕಿಯ ಬಾಲ ಜೀವನಪರ್ಯಂತ ಅಷ್ಟೇ ಇರುತ್ತದೆ. ಗಂಡುಗಳಲ್ಲಿ ಕೆಲವುಗಳ ಬಾಲ ಕೆಂಗಂದು ಬಣ್ಣದ್ದಾಗಿದ್ದರೆ ಮತ್ತೆ ಕೆಲವದ್ದು ಅಪ್ಪಟ ಬಿಳಿಯಾಗಿರುತ್ತದೆ. ಇವುಗಳ ಮಧ್ಯಂತರ ಅಂದರೆ ತುಸು ಕೆಂಗಂದು ಹೆಚ್ಚು ಬಿಳಿ ಇಂತಹ ವರ್ಣವಿನ್ಯಾಸವಿರುವ ಹಕ್ಕಿಗಳೂ ಇರುತ್ತವೆ. ಕೆಂಗಂದು ಬಣ್ಣದ ಗಂಡು ಹಕ್ಕಿ ಕ್ರಮೇಣ ಬಿಳಿ ಬಾಲದ ಹಕ್ಕಿಯಾಗುವುದೂ ಉಂಟು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ, ಈ ಕುರಿತಾಗಿ ಇದಮಿತ್ಥಂ ಎಂದು ಏನೂ ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ ಮಧ್ಯಂತರ ಸ್ಥಿತಿಯ ಹಕ್ಕಿಗಳು ಸಾಕಷ್ಟು ದಾಖಲಾಗಿವೆ.
ಕೀಟಾಹಾರಿ ಹಕ್ಕಿಗಳಾದ ಇವು ಗಾಳಿಯಲ್ಲಿ ಹಾಗೂ ನೆಲದ ಮೇಲೆ ಪೊದೆಗಳ ನಡುವೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೀಟಗಳ ನಿಯಂತ್ರಣದಲ್ಲಿ ಇವುಗಳ ಪಾತ್ರವಿದೆ. ಅಷ್ಟುದ್ದದ ಬಾಲವಿದ್ದರೂ ಎಷ್ಟು ವೇಗವಾಗಿ ಪೊದಗಳ ನಡುವೆ ಹಾರಾಡುವ ವೇಗವೇನೂ ಕಡಿಮೆಯಿರುವುದಿಲ್ಲ. ಉದ್ದಬಾಲದಿಂದ ಸುಲಭವಾಗಿ ಕಾಣಿಸಿಬಿಡುತ್ತದೆ ಎಂಬುದೂ ಸುಳ್ಳು!
ಇನ್ನೊಂದು ವಿಶೇಷವೆಂದರೆ ಬೆಳ್ಗಣ್ಣಹಕ್ಕಿಗಳು ಈ ಸ್ವರ್ಗದ ಹಕ್ಕಿಯ ಮರಿಗಳಿಗೆ ಗುಟುಕು ಕೊಡುವುದು ಕಂಡುಬಂದಿದೆ! ಪಕ್ಷಿಗಳಲ್ಲಿ ಇದೊಂದು ವಿಶೇಷ, ಅಪರೂಪವಾದ ನಡವಳಿಕೆ.
ಇಂತಹ ಸ್ವರ್ಗದ ಹಕ್ಕಿಯನ್ನು ಕಂಡರೆ ನಮಗೆ ಬರೆದು ತಿಳಿಸಿ.
ಕಲ್ಗುಂಡಿ ನವೀನ್
ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ, ವಿಜಯೇಂದ್ರ ಹಾಗು ಸುಮಂತ್ ಹಜ್ರ