‘ಹೆಣ್ಣು’ ಎಲ್ಲರ ಮನೆಯ ಕಣ್ಣು. ಹೆಣ್ಣೆಂದರೆ, ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಬದುಕುವ ಜೀವ. ಒಂದು ಸೃಷ್ಟಿಗೆ ಕಾರಣ ಹೆಣ್ಣು. ಹೆಣ್ಣು ಒಂದು ಅದ್ಭುತ. ಪ್ರತಿಯೊಬ್ಬ ಗಂಡಿನ ಜೀವನದಲ್ಲಿ ತಾಯಿಯಾಗಿ, ಅಕ್ಕ-ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಪಾತ್ರವಹಿಸುತ್ತಿದ್ದಾಳೆ. ಅವಳ ಶಕ್ತಿಯ ಬಗ್ಗೆ ಅವಳಿಗೆ ತಿಳಿಯಬೇಕಾಗಿದೆ. ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಹೆಣ್ಣು ತನ್ನ ಸ್ಥಾನವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಎಲ್ಲಾ ಕಾರ್ಯಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಲಗ್ಗೆ ಇಟ್ಟಿದ್ದಾರೆ. ತನ್ನ ಸಂಸಾರದ ಭಾರವನ್ನು ಹೊತ್ತಿರುವ ಹೆಣ್ಣು ತನ್ನ ಕಾರ್ಯಕ್ಷೇತ್ರದಲ್ಲೂ ಯಾರಿಗೂ ಕಮ್ಮಿಯಿಲ್ಲದಂತೆ ದುಡಿಯುತ್ತಿದ್ದಾಳೆ. ಆದರೆ ಇಂದಿಗೂ ಹೆಣ್ಣಿನ ಭ್ರೂಣ ಹತ್ಯೆ ನಿಂತಿಲ್ಲ ಇದು ಖೇದನೀಯ ಸಂಗತಿ.
ಮನೆಯಲ್ಲಿ ಮಕ್ಕಳಿಗೆ ಗುರುವಾಗಿರುತ್ತಾಳೆ. ಗಂಡನಿಗೆ ಅಥವಾ ಸಂಸಾರಕ್ಕೆ ಅರ್ಥಿಕ ತಜ್ಞೆಯಾಗಿಯಾಗಿರುತ್ತಾಳೆ. ಮನೆಯಲ್ಲಿ ಬಜೆಟ್ ಮಂಡನೆಯೂ ಅವಳದೆ. ಬ್ಯಾಲೆನ್ಸ್ ಶೀಟ್ ತಯಾರಿನೂ ಅವಳದೇ. ಸಂಸಾರದ ಏರುಪೇರುಗಳನ್ನು ಸಮಚಿತ್ತತೆಯಿಂದ ನಡೆಸುವ ಹೊಣೆಗಾರಿಕೆ ಅವಳದೆ. ಸಂಸಾರದ ಹೊಣೆಗಾರಿಕೆ ಸುಲಭದ ಮಾತಲ್ಲ. ಇವತ್ತು ಎಷ್ಟೋ ಸಂಸಾರಗಳು ನಿಶ್ಚಿಂತೆಯಿಂದ ಇದೆ ಎಂದಾದರೆ ಅದಕ್ಕೆ ಮೂಲ ಕಾರಣ ಆ ಮನೆಯ ಹೆಣ್ಣುಮಗಳು.
ವೇದಗಳ ಅದಿದೇವತೆಯೇ ಹೆಣ್ಣಾಗಿದ್ದರೂ ಸಹ ಹಿಂದಿನ ಕಾಲದಿಂದಲೂ ಹೆಣ್ಣನ್ನು ಕಡೆಗಣಿಸುತ್ತಲೇ ಬರಲಾಗಿದೆ. ಯಾವ ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿ ಅವರನ್ನು ಬೆಂಬಲಿಸಿದ್ದರೋ ಅಂತಹ ಹೆಣ್ಣುಮಕ್ಕಳು ಇಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಇದಕ್ಕೆ ಸಮಾಜದಲ್ಲಿ ಹಲವಾರು ಉದಹಾರಣೆಗಳಿವೆ.
ಹೆಣ್ಣಿಗೂ ಒಂದು ಮನಸ್ಸಿದೆ. ಆ ಪುಟ್ಟ ಮನಸ್ಸಿನಲ್ಲಿ ಹಲವಾರು ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡಿರುತ್ತಾಳೆ. ಇದನ್ನು ಅವರ ಕುಟುಂಬ ಅರಿಯಬೇಕಾಗಿದೆ. ಹೆಣ್ಣು ಮನೆಯ ಕಣ್ಣು, ಮನೆಯ ಮಾಹಾಲಕ್ಷ್ಮಿ ಎಂದೆಲ್ಲಾ ಹೆಣ್ಣಿಗೆ ಬಿರುದು ಕೊಡಲಾಗಿದೆ. ಈಗ ಯೋಚನೆ ಮಾಡಬೇಕಾಗಿರುವುದೇನೆಂದರೆ ಎಷ್ಟು ಮನೆಯಲ್ಲಿ ಇವುಗಳ ಪಾಲನೆ ಆಗುತ್ತಿದೆ ಎಂದು. ಹೆಣ್ಣಿಗೆ ಏನೆಲ್ಲಾ ಬಿರುದು ಕೊಟ್ಟು ಅವಳನ್ನು ಕ್ಷಮಾಯಾಧರಿತ್ರಿಯನ್ನಾಗಿ ಮಾಡಿದ್ದಾರೋ ಹಾಗೇನೇ ಹೆಣ್ಣನ್ನು ಒಲಿದರೆ ನಾರಿಮುನಿದರೆ ಮಾರಿ ಅನ್ನುವುದನ್ನು ಉಲ್ಲೇಖಿಸಿದ್ದಾರೆ.
ಹುಟ್ಟಿದ ಮನೆಯನ್ನು ತೊರೆದು ಹೊಸ ಜಾಗಕ್ಕೆ ಅಂದರೆ ಗಂಡನ ಮನೆಗೆ ಬಂದು ಆ ಮನೆಯನ್ನು ಬೆಳಗುವ ಮೂಲಕ ತನ್ನ ಛಾಪು ಮೂಡಿಸುತ್ತಾಳೆ.ಹೆಣ್ಣಿಗೆ ದೇವರು ಆಗಾದವಾದ ಶಕ್ತಿಯನ್ನು ನೀಡಿದ್ದಾನೆ.ಆದರೆ ಅದು ಅವಳಿಗೆ ಗೊತ್ತಿಲ್ಲದೆ ಕೆಲವೊಂದು ಕಡೆ ನಿರ್ಜೀವ ವಸ್ತುವಿನಂತೆ ಅವಳು ಬದುಕನ್ನು ನಿರ್ವಹಿಸುತ್ತಿದ್ದಾಳೆ.
ಪ್ರತೀ ಪುರುಷನ ಪ್ರಗತಿಯ ಹಿಂದೆ ಪ್ರತೀ ಹೆಣ್ಣಿನ ಕೊಡುಗೆ ಇರುತ್ತದಂತೆ.ನಿಜ, ಹೆಣ್ಣು ಯಾವತ್ತೂ ತನ್ನ ಸ್ವಾರ್ಥಕ್ಕಾಗಿ ಬದುಕುವುದಿಲ್ಲ. ಅವಳು ದುಡಿಮೆ ಮಾಡುತ್ತಿದ್ದಾಳೆ ಎಂದರೆ ಅರ್ಥ ತನ್ನ ಗಂಡನಿಗೆ ಅಥವಾ ತನ್ನ ತಂದೆಗೆ ಸಹಾಯಕವಾಗಿರಲಿ ಎನ್ನುವುದಷ್ಟೆ. ಕೆಲವೊಂದು ಕಡೆ ಹೇಳುವುದನ್ನು ಕೇಳಿದ್ದೇನೆ, ‘ಅವಳ ಗಂಡ ಧಾರಾಳಿ ಅವಳು ತುಂಬಾ ಜಿಪುಣಿ ಅಂತ’. ಇದರಲ್ಲಿ ನನಗೇನೂ ಉತ್ಪ್ರೇಕ್ಷೆ ಅನ್ನಿಸುತ್ತಿಲ್ಲ. ಯಾಕೇಂದರೆ ಅವಳು ಇಡೀ ಸಂಸಾರದ ಹೊಣೆಯನ್ನು ಹೊತ್ತಿರುತ್ತಾಳೆ. ಹಾಗಿದ್ದಾಗ ಮಾತ್ರ ಅವಳು ತನ್ನ ಸಂಸಾರವನ್ನು ಯಾವುದೇ ಸಂಕಷ್ಟಕ್ಕೆ ಸಿಲುಕಿಸದೆ ದಡ ಸೇರಿಸಬಲ್ಲಲು.
ಹೆಣ್ಣು ಎಂದರೆ ಸಾಕು ಅವಳನ್ನು ತಮಾಷೆಯ ವಸ್ತುವಾಗಿ ನೋಡಲಾಗುತ್ತದೆ. ಕೆಲವೊಬ್ಬರು ಅದನ್ನು ಮೀರಿ ಅವಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ಹೇಳುತ್ತಾರೆ. ಅವರಲ್ಲಿ ನನ್ನದೊಂದು ಚಿಕ್ಕ ಪ್ರಶ್ನೆ, ಅವಳನ್ನು ಅರ್ಥ ಮಾಡಿಕೊಳ್ಳಲು ನೀವೆಷ್ಟು ಪ್ರಯತ್ನ ಪಟ್ಟಿದ್ದೀರಾ? ನಿಮ್ಮ ಅಂತರಂಗವನ್ನು ಮುಟ್ಟಿ ಉತ್ತರ ಬರಲಿ.
ಸಮಾಜದಲ್ಲಿ ಆಗುವಂತಹ ಕೆಲ ಘಟನೆಗಳಲ್ಲಿ ಹೆಣ್ಣಿನ ತಪ್ಪಿರಬಹುದು. ಹಾಗಂತ ಇಡೀ ಹೆಣ್ಣು ಕುಲ ತಪ್ಪಲ್ಲ. ಹೆಣ್ಣು ಮಕ್ಕಳ ಜನನವಾಗುವುದು ಕೇವಲ ಅದೃಷ್ಟವಂತ ತಂದೆತಾಯಿಗಳಿಗೆ ಮಾತ್ರವಂತೆ. ಹೆಣ್ಣು ತಪ್ಪು ದಾರಿ ಹಿಡಿದಳೆಂದರೆ ಅದಕ್ಕೆ ಅದರದೇ ಆದ ಕಾರಣವಿರಬಹುದು. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ”, ಅಂದರೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರಂತೆ .ಅದೇನೇ ಇರಲಿ ಹೆಣ್ಣನ್ನು ಒಬ್ಬ ತಾಯಿಯಾಗಿ ಅಕ್ಕ ತಂಗಿಯಾಗಿ, ಒಳ್ಳೆಯ ಸ್ನೇಹಿತೆಯಾಗಿ ಪ್ರೀತಿಸೋಣ. ಅವಳಿಗಾಗಿ ನಮ್ಮ ಸ್ವಲ್ಪ ಸಮಯವನ್ನು ಕೊಡೋಣ.
ಹೆಣ್ಣೇ, ನೀ ದುರ್ಬಲಳಲ್ಲ….ನೀನು ಅಸಾಮಾನ್ಯ…. ಪ್ರೀತಿಗಾಗಿ ಬದುಕುತ್ತಿರುವ ಜೀವ, ನೀನೊಂದು ಮೌನ…ನಿನ್ನೊಂದಿಗಿನ ಶಕ್ತಿಯನ್ನು ತಿಳಿದುಕೋ, ನಿನ್ನ ಕುಟುಂಬದ ಪ್ರೀತಿ, ಈ ಸಮಾಜದ ಬೆಂಬಲ ಎಲ್ಲವೂ ನಿನ್ನೊಂದಿಗಿದೆ… ಮುನ್ನಡೆ.
ಸೌಮ್ಯ ನಾರಾಯಣ್
ಚಿತ್ರ ಕೃಪೆ : ಲಕ್ಷ್ಮಿ ರಾಜಗೋಪಾಲ್ ಮತ್ತು ಪಿನ್ ಇಂಟೆರೆಸ್ಟ್