ಸಪ್ಟೆಂಬರ್ 18 ಇವತ್ತು. ಕಲಾಭಿಮಾನಿ ಕನ್ನಡಿಗರ ಪಾಲಿಗೆ ಇಂದಿನ ದಿನ ಒಂದು ವಿಶೇಷ ದಿನವೆಂದೇ ಹೇಳಬಹುದು. ಮರೆಯದ ಮಾಣಿಕ್ಯ ʼಸಾಹಸ ಸಿಂಹʼ ವಿಷ್ಣುವರ್ಧನ್ ರವರ 71 ನೇ ಜನ್ಮದಿನೋತ್ಸವ ಸಂಭ್ರಮ ಅಭಿಮಾನಿಗಳಿಗೆ. ವಿಷ್ಣುವರ್ದನ್ ರವರು ಇಂದು ನಮ್ಮ ಜೊತೆಗಿಲ್ಲದಿದ್ದರೂ. ಮನಸ್ಸಲ್ಲಿ ಮಾತ್ರ ಅಜರಾಮರ, ಸರ್ವಕಾಲಿಕ ನೆನಪಾಗಿ ಉಳಿದಿದ್ದಾರೆ. ಅವರ ಬಗ್ಗೆ ಹೇಳುವಂತದ್ದು ಎಲ್ಲವೂ ಕನ್ನಡಿಗರಿಗೆ ಹೆಚ್ಚಾಗಿ ಗೊತ್ತಿರುವಂತದ್ದೆ. ಹೊಸದಾಗಿ ಏನಿಲ್ಲವಾದರು, ಈ ಸಮಯದಲ್ಲಿ ಅವರ ನೆನಪಿನಲ್ಲಿ ಅವರ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದು ಖುಶಿಯ ವಿಚಾರ.
ವಿಷ್ಣುವರ್ಧನ್ ರವರ ಮೂಲ ನಾಮ “ಸಂಪತ್ ಕುಮಾರ್”. ಸಪ್ಟೆಂಬರ್ 18, 1950 ರಂದು ಮೈಸೂರಿನ ಚಾಮುಂಡಿಪುರಂ ನಲ್ಲಿ ತಂದೆ-ತಾಯಿಗೆ 5 ನೇ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿನ “ಗೋಪಾಲಸ್ವಾಮಿ ಶಾಲೆ” ಯಲ್ಲಿ ಮುಗಿಸಿದರು. ನಂತರ ಬಿ.ಎಸ್ಸಿ ಪದವಿಗಾಗಿ ಬೆಂಗಳೂರಿನ “ನ್ಯಾಷನಲ್ ಕಾಲೇಜ್”, ಬಸವನಗುಡಿ ಗೆ ಬಂದರು. ವಿಷ್ಣುವರ್ಧನ್ ರವರು ಕಾಲೇಜ್ ದಿನಗಳಲ್ಲಿ ಡ್ರಾಮಾದಲ್ಲಿ ಹೆಣ್ಣು ಪಾತ್ರಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದರಂತೆ. ತಮ್ಮ ಭಾವನಾತ್ಮಕ ಪಾತ್ರಕ್ಕೆ ಜೀವ ತುಂಬುವ ಮೂಲಕ ಅನೇಕರ ಕೈಯಲ್ಲಿ ಮೆಚ್ಚುಗೆ ಪಡೆದಿದ್ದರು. ವಿಷ್ಣುವರ್ದನ್ ರವರಿಗೆ ಕಲೆಯೆಂಬುದು ಜನ್ಮತಃ ಬಂದಿದ್ದು ಅಂತಾನೆ ಹೇಳಬಹುದು. ಅವರ ತಂದೆ ಹೆಚ್. ಎಲ್ ನಾರಾಯಣರಾವ್ ಸಹ ಅಂದಿನ ಕಾಲದ ಹೆಸರಾಂತ ಚಿತ್ರಕಥೆಗಾರರು, ಹಾಗೂ ಕಲಾವಿದರು, ಸಂಗೀತ ಸಂಯೋಜಕರು ಆಗಿದ್ದರು. ಅವರ ಅಕ್ಕ ಸಹ ʼಕಥಕ್ʼ ನೃತ್ಯ ಕಲಾವಿದೆಯಾಗಿದ್ದರು. ಅಣ್ಣ ಕೂಡ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದರು. ಡ್ರಾಮಾದಲ್ಲಿ ಅವರ ಅಭಿನಯ ಶೈಲಿಯನ್ನು ಕಂಡಂತಹ ಗಿರೀಶ್ ಕಾರ್ನಾಡ್ ರವರು 1972ರಲ್ಲಿ ಅವರನ್ನು ಎಸ್ ಎಲ್ ಬೈರಪ್ಪನವರ ಕಾದಂಬರಿಯಾದ ʼವಂಶವೃಕ್ಷʼ ದಲ್ಲಿ ಕುಮಾರ್ ಎಂಬ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆಗೆ ತಂದರು.
ಇದಕ್ಕೂ ಮೊದಲು ಅಂದರೆ 1955 ರಲ್ಲಿ ತಮ್ಮ ತಂದೆ ನಾರಾಯಣರಾವ್ ರವರು ಚಿತ್ರಕಥೆಗಾರರಾಗಿದ್ದ ಸಮಯದಲ್ಲಿ ವಿಷ್ಣುವರ್ಧನ್ ರವರು ತಮ್ಮ 5 ನೇ ವಯಸ್ಸಿನಲ್ಲಿಯೇ ಬಾಲ ಕಲಾವಿದರಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಶಂಕರ್ ಸಿಂಗ್ ರವರ ʼಶಿವಶರಣ ನಂಬೆಯಕ್ಕʼ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದರು. ಈ ಚಿತ್ರ 28 ದಿನಗಳಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ನಂತರ 1956ರಲ್ಲಿ ʼಕೋಕಿಲ ವಾಣಿʼ ಎಂಬ ಚಿತ್ರದಲ್ಲೂ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಆಮೇಲೆ ಮತ್ತೆ ವಿಷ್ಣುವರ್ಧನ್ ರವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ಗಿರೀಶ್ ಕಾರ್ನಾಡರವರ ʼವಂಶವೃಕ್ಷʼ ಚಿತ್ರದಲ್ಲಿ. ಅದಾದ ನಂತರ ನಾಯಕರಾಗಿ ಮೊದಲು ನಟಿಸಿದ್ದು ಎನ್.ವೀರಸ್ವಾಮಿ ನಿರ್ಮಾಣದ, ʼಚಿತ್ರ ಬ್ರಹ್ಮʼ ಪುಟ್ಟಣ್ಣ ಕಣಗಾಲ್ ನಿರ್ದೆಶನದ ʼನಾಗರಹಾವುʼ ಚಿತ್ರದಲ್ಲಿ. ರಾಮಾಚಾರಿ ಎಂಬ ಆ್ಯಂಗ್ರಿ ಯಂಗ್ ಮೆನ್ ಪಾತ್ರದಲ್ಲಿ. ಆ ಚಿತ್ರದಿಂದಲೆ ಸಂಪತ್ ಕುಮಾರ್ ಎಂದಿದ್ದ ಅವರ ಹೆಸರನ್ನು ಪುಟ್ಟಣ್ಣ ಕಣಗಾಲ್ ರವರು ʼವಿಷ್ಣುವರ್ಧನ್ʼ ಎಂದು ಮರು ನಾಮಕರಣ ಮಾಡಿದರು. ನಾಗರಹಾವು ಚಿತ್ರ ಅಂದಿನ ಕಾಲದಲ್ಲೆ ʼಸಾಗರ್ʼ ಚಿತ್ರಮಂದಿರವನ್ನೂ ಸೇರಿ, ಹಲವಾರು ಥೇಟರ್ ಗಳಲ್ಲಿ ಸತತ 25 ವಾರಗಳ ಪ್ರದರ್ಶನ ಕಂಡ ಮೊದಲ ಕನ್ನಡ ಚಿತ್ರವೆಂಬ ಖ್ಯಾತಿಗೂ ಪಾತ್ರವಾಯಿತು. ʼನಾಗರಹಾವುʼ ಚಿತ್ರದ ಮೂಲಕ ಕನ್ನಡಕ್ಕೆ ಡಾ. ರಾಜ್ ಕುಮಾರ್ರವರ ನಂತರ ಮತ್ತೊಬ್ಬ ಉದಯೋನ್ಮಕ ನಟನ ಉದಯವಾಯಿತು.
ನಾಗರಹಾವು ಚಿತ್ರದ ನಂತರ ವಿಷ್ಣುವರ್ಧನ್ ರವರಿಗೆ ಅವಕಾಶಗಳು ಹುಡುಕಿ ಬಂದವು. 1973ರಲ್ಲಿ ಡಾ.ರಾಜ್ ಕುಮಾರ್ ರವರ 150ನೇ ಚಿತ್ರ ʼಗಂಧದಗುಡಿʼಯಲ್ಲಿ ಖಳನಾಯಕನಾಗಿ ಸಹ ಅಭಿನಯಿಸಿದರು. ನೋವಿನ ವಿಷಯವೇನೆಂದರೆ, ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಇಬ್ಬರು ಒಟ್ಟಿಗೆ ನಟಿಸಿದ ಮೊದಲ ಮತ್ತು ಕೊನೆಯ ಚಿತ್ರ ಅದೊಂದೆ ಎಂಬುದು. ಆ ಚಿತ್ರದ ನಂತರ ಕೆಲವು ವಿವಾದಗಳಿಂದ ವಿಷ್ಣುವರ್ಧನ್ ರವರು ಅಭಿಮಾನಿಗಳನ್ನು ಬಿಟ್ಟು ಚೆನೈಗೆ ಹೋಗಿ ನೆಲೆಸಬೇಕಾಗಿ ಬಂತು. ಅಲ್ಲಿಂದಲೇ ಬೆಂಗಳೂರಿಗೆ ಶೂಟಿಂಗ್ಗೆ ಬಂದು ಹೋಗುತ್ತಿದ್ದರಂತೆ. ಆ ವಿವಾದ ನಡೆಯದಿದ್ದರೆ, ಅಣ್ಣಾವು ಮತ್ತು ವಿಷ್ಣುವರ್ಧನ್ ರವರನ್ನು ಜೋಡಿಯಾಗಿ ತೆರೆಯ ಮೇಲೆ ನೋಡಲು ತುಂಬಾ ಜನ ನಿರ್ದೆಶಕರು, ನಿರ್ಮಾಪಕರು, ಅಭಿಮಾನಿಗಳು ತಯಾರಿದ್ದರು. ಆದರೆ, ಆ ಭಾಗ್ಯ ಕೊನೆಗೂ ಅಭಿಮಾನಿಗಳ ಪಾಲಿಗೆ ಬಂದದೊಗಲಿಲ್ಲ. ಅದರ ನಂತರ ಚೆನೈಯಿಂದ ಬಂದು ಬಹಳಷ್ಟು ಚಿತ್ರಗಳನ್ನು ಮಾಡಿದರು. ಸಾಹಸ ಸಿಂಹ, ಮುಯ್ಯಿಗೆ ಮುಯ್ಯಿ, ಸಿಂಹ ಜೋಡಿ, ವಿಜಯ್ ವಿಕ್ರಮ್, ಹೊಂಬಿಸಲು ಚಿತ್ರಗಳು ಶತದಿನೋತ್ಸವ ಆಚರಿಸುವ ಮೂಲಕ ವಿಷ್ಣುವರ್ಧನ್ ರವರಿಗೆ ಮತ್ತಷ್ಟು ಯಶಸ್ಸು ತಂದುಕೊಟ್ಟವು. ವಿಷ್ಣುವರ್ಧನ್ ರವರು ಅಂದಿನ ಕಾಲದ ಫೇಮಸ್ ʼಮಾರ್ಷಲ್ ಆರ್ಟಿಸ್ಟ್ʼ ಕೂಡ ಆಗಿದ್ದರು.
ಅವರ ನೈಜ ಸಾಹಸ ದೃಶ್ಯಗಳನ್ನು ಕಣ್ಣಾರೆ ಕಂಡಂತಹ ಅಭಿಮಾನಿಗಳು, 1979ರಲ್ಲಿ ಅವರಿಗೆ ʼಸಾಹಸಸಿಂಹʼ ಎಂಬ ಬಿರುದನ್ನು ಕೊಟ್ಟರು. ಅಂದಿನಿಂದ ಅವರು ತಮ್ಮ ಚಿತ್ರಗಳಲ್ಲಿ ಅಭಿಮಾನಿಗಳಿಗೋಸ್ಕರ ಸಾಹಸ ಸನ್ನಿವೇಶಗಳಲ್ಲಿ ಹೆಚ್ಚಾಗಿ ಡ್ಯೂಪ್ ಬಳಸದೇ ಫೈಟ್ ಮಾಡುತ್ತಿದ್ದರಂತೆ. ಹೀಗಿರುವಾಗ ಒಮ್ಮೆ 1984ರಲ್ಲಿ ಎಸ್.ವಿ ರಾಜೇಂದ್ರ ಸಿಂಗ್ ಬಾಬು ರವರು ವಿಷ್ಣುವರ್ಧನರವರ ಪರಮ ಮಿತ್ರರಾಗಿದ್ದರಿಂದ ಅವರನ್ನು ಆ್ಯಕ್ಷನ್ ಮೂವಿ ಬಿಟ್ಟು ಒಂದು ಲವರ್ ಬಾಯ್ ಆಗಿ ಅಭಿಮಾನಿಗಳ ಮುಂದೆ ತರಬೇಕೆಂದು ನಿರ್ಧರಿಸುತ್ತಾರೆ. ಆಗ ಅವರಿಬ್ಬರ ಜೋಡಿಯಲ್ಲಿ ಬಂದಂತಹ ಎವರ್ಗ್ರೀನ್ ಚಿತ್ರವೆ ʼಬಂಧನʼ. ಅಂದಿನ ಕಾಲದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಬರೋಬ್ಬರಿ 52 ವಾರಗಳ ಪ್ರದರ್ಶನದ ಮೂಲಕ ಎಲ್ಲರ ಮನಸ್ಸಿನಲ್ಲಿ ವಿಷ್ಣು ಬಂಧನವಾದರು. ಇಂದಿಗೂ ಸಹ ಕನ್ನಡಿಗರು ಆ ಚಿತ್ರವನ್ನು ಮರೆತಿಲ್ಲಾ, ಮರೆಯುವಂತೆಯು ಇಲ್ಲಾ. ವಿಷ್ಣುವರ್ಧನ್ ರವರು ಸಾಫ್ಟ್ ಪಾತ್ರಕ್ಕೂ ಸೈ ಎಂಬುದನ್ನು ನಿರೂಪಿಸಿದಂತಹ ಚಿತ್ರವಾಯಿತು. ಅಲ್ಲಿಯವರೆಗೂ ಚೆನ್ನೈ ನಿಂದ ಬರುತ್ತಿದ್ದ ಅವರು, ಬಂಧನ ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳ ಪ್ರೀತಿ,ವಿಶ್ವಾಸವನ್ನು ಕಂಡು ಏನೇ ಆದರು ಸರಿ ತನ್ನ ಅಭಿಮಾನಿಗಳಿಗೋಸ್ಕರ ತಾನು ಇನ್ನುಮುಂದೆ ಕರ್ನಾಟಕದಲ್ಲೆ ಇರುತ್ತೇನೆ ಎಂದು ನಿರ್ಧಾರ ಮಾಡಿದರು. ಅಂದಿನಿಂದ ಜೀವನ ಚಕ್ರದಂತಿದ್ದ ಅವರ ಬದುಕು ಜೀವನ ಜ್ಯೋತಿಯಾಗುತ್ತದೆ.
ಒಂದರ ಮೇಲೊಂದರಂತೆ ಸೂಪರ್ ಹಿಟ್ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದು ʼಮರೆಯದ ಮಾಣಿಕ್ಯʼನಾಗುತ್ತಾರೆ. ಅಭಿಮಾನಿಗಳ ಪಾಲಿಗೆ ʼಅಭಿನವ ಭಾರ್ಗವʼನಂತಾಗುತ್ತಾರೆ. ನಿರ್ದೆಶಕ, ನಿರ್ಮಾಪಕರಿಗೆ ʼಬಂಗಾರದ ಜಿಂಕೆʼಯ ನಟನಾಗುತ್ತಾರೆ. ತಮ್ಮದೆ ಆದ ಅಭಿಮಾನ ಬಳಗವನ್ನು ಗಳಿಸುತ್ತಾರೆ. ಪರಭಾಷೆಗಳಲ್ಲಿಯು ನಟಿಸಿ “ಪಂಚಭಾಷಾ” ತಾರೆಯೆಂದೆನಿಸಿಕೊಳ್ಳುತ್ತಾರೆ. ಅಂದಿನ ರೆಬೆಲ್ ಸ್ಟಾರ್ ಅಂಬರೀಶ್, ಶಂಕರನಾಗ್,ಅನಂತನಾಗ್, ಟೈಗರ್ ಪ್ರಭಾಕರ್, ದೇವರಾಜ್, ಕೆ.ಎಸ್ ಅಶ್ವತ್, ಬಾಲಣ್ಣನವರಂತಹ ಕಲಾವಿದರಿಂದ ಹಿಡಿದು, ಇಂದಿನ ದರ್ಶನ್, ಸುದೀಪರಂತಹ ನಟರೊಂದಿಗೂ ತಮ್ಮ ಅಮೋಘ ಅಭಿನಯವನ್ನು ಮಾಡಿದ್ದಾರೆ. ಅಂಬರೀಶ್ ಮತ್ತು ವಿಷ್ಣುವರ್ಧನ್ ರವರ ಸ್ನೇಹವಂತೂ ಇಡೀ ಕರ್ನಾಟಕಕ್ಕೆ ದಿಗ್ಗಜರ ಜೋಡಿಯೆಂದೇ ಹೆಸರಾಗಿದೆ. ಕಳ್ಳ ಕುಳ್ಳ ಚಿತ್ರದ ಮೂಲಕ ನಟ,ನಿರ್ಮಾಪಕ ದ್ವಾರಕೀಶ್ ರವರೊಂದಿಗೂ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಇವರಿಬ್ಬರ ಜೋಡಿ ಕಿಲಾಡಿ ಜೋಡಿಯೆಂದೇ ಒಂದು ಕಾಲದಲ್ಲಿ ಮೋಡಿ ಮಾಡಿತ್ತು. ಸಿಂಗಾಪೂರಿನಲ್ಲಿ ರಾಜಾ ಕುಳ್ಳ, (ಹೊರದೇಶದಲ್ಲಿ ಚಿತ್ರೀಕರಿಸಲ್ಪಟ್ಟ ಮೊದಲ ಕನ್ನಡ ಚಿತ್ರ) ಕಿಟ್ಟುಪುಟ್ಟು, ಪ್ರಚಂಡ ಕುಳ್ಳ, ಕಿಲಾಡಿಗಳು, ರಾಯರು ಬಂದರು ಮಾವನ ಮನೆಗೆ ಚಿತ್ರಗಳಂತಹ ಅದ್ಭುತ ಚಿತ್ರಗಳನ್ನು ಈ ಜೋಡಿ ಕೊಟ್ಟಿದೆ. ಸ್ವಲ್ಪ ಸಮಯ ದ್ವಾರಕೀಶ್ ಮತ್ತು ವಿಷ್ಣುದಾದರ ನಡುವೆ ವೈಯಕ್ತಿಕ ಕಾರಣಾಂತರಗಳು ಬಂದು ಈ ಜೋಡಿ ಬೇರೆಯಾದರೂ, ಮತ್ತೊಮ್ಮೆ ʼಆಪ್ತಮಿತ್ರʼ ಚಿತ್ರದ ಮೂಲಕ ಒಂದಾಗಿ ದಾಖಲೆಯ ಚಿತ್ರವನ್ನು ಮಾಡಿದರು.
ಈ ಸಂದರ್ಭದಲ್ಲಿ ತುಂಬಾ ಜನಕ್ಕೆ ಗೊತ್ತಿಲ್ಲದ ಇನ್ನೊಂದು ಮುಖ್ಯವಾದ ವಿಷಯವನ್ನು ಹೇಳಲೆಬೇಕು. ನಮ್ಮ ಕನ್ನಡದ ನಿರ್ದೆಶಕ ರತ್ನ ಹೆಚ್.ಆರ್ ಭಾರ್ಗವ ಮತ್ತು ವಿಷ್ಣುದಾದರ ಸ್ನೇಹ. ಅವರಿಬ್ಬರ ಕಾಂಬಿನೇಶನ್ ಸಿನೆಮಾಗಳು ಯಾರು ಮರೆಯೋಕೆ ಸಾಧ್ಯವಿಲ್ಲಾ. ʼಅಸಾಧ್ಯ ಅಳಿಯʼ ಚಿತ್ರದ ಮೂಲಕ ಪ್ರಾರಂಭವಾದ ಇವರಿಬ್ಬರ ಜೋಡಿ ʼಜನನಿ ಜನ್ಮ ಭೂಮಿʼ ಚಿತ್ರದವರೆಗೂ ಕೊಟ್ಟಿರುವ ಚಿತ್ರಗಳೆಲ್ಲಾ ಸೂಪರ್ ಹಿಟ್ ಚಿತ್ರಗಳೇ. ಇಂದಿಗೂ ವಿಷ್ಣುದಾದರನ್ನು ಕನ್ನಡಿಗರು ನೆನಪಿಸಿ ಗುರುತಿಸುವ ಚಿತ್ರಗಳೆಲ್ಲಾ ಹೆಚ್ಚಿನವು ಭಾರ್ಗವರವರು ನಿರ್ದೆಶನದ ಚಿತ್ರಗಳೇ ಆಗಿವೆ. ಜನನಾಯಕ, ಬಂಗಾರದ ಕಳಶ, ನಮ್ಮೂರ ರಾಜ, ಕರ್ಣ, ಕರುಣಾಮಯಿ, ಜಗದೇಕ ವೀರ, ರಾಜಾಧಿರಾಜ, ಗಂಡುಗಲಿ ರಾಮ, ಶಿವಶಂಕರ್ ಚಿತ್ರಗಳು. ಭಾರ್ಗವರವರು ನಿರ್ದೆಶಿಸಿರುವ 50 ಚಿತ್ರಗಳಲ್ಲಿ ಅತಿಹೆಚ್ಚು ಅಂದರೆ 23 ಚಿತ್ರಗಳಲ್ಲಿ ವಿಷ್ಣುದಾದರೆ ನಾಯಕರಾಗಿದ್ದರು. ಭಾರ್ಗವರವರು ಚಿತ್ರಕಥೆಯಲ್ಲಿ, ಟೈಟಲ್ ಆಯ್ಕೆಯಲ್ಲಿ ಎಷ್ಟೊಂದು ಚಾಣಕ್ಯ ನಿರ್ದೆಶಕರಾಗಿದ್ದರೆಂದರೆ ವಿಷ್ಣುವರ್ಧನರವರು ಭಾರ್ಗವರವರ ಚಿತ್ರಗಳೆಂದರೆ ಕಥೆ ಕೇಳುವ ಮೊದಲೆ ಡೇಟ್ ಕೊಟ್ಟುಬಿಡುತ್ತಿದ್ದರಂತೆ. ಅವರ ಸ್ನೇಹ ಕೂಡ ಅಷ್ಟೊಂದು ವಿಶ್ವಾಸವಾಗಿತ್ತು. ಒಮ್ಮೆ 1988ರಲ್ಲಿ ದೇವ ಚಿತ್ರದ ಶತಮಾನೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳು ವಿಷ್ಣುದಾದರಿಗೆ ʼಅಭಿನವ ಭಾರ್ಗವʼ ಎಂಬ ಬಿರುದನ್ನು ಕೊಟ್ಟಾಗ ಭಾರ್ಗವರವರು ಹೇಳಿದ್ದರಂತೆ. ನಮ್ಮಿಬ್ಬರ ಸ್ನೇಹ ಏನೆಂಬುದು ಕನ್ನಡಿಗರಿಗೂ ಗೊತ್ತು. ನಾನು ಇರುವರೆಗೂ ನಿನ್ನ ಹೆಸರಿನ ಜೊತೆ ಇರುತ್ತೇನೆ. ನಿನ್ನ ಹೆಸರು ಇರುವವರೆಗೂ ನಾನು ಕನ್ನಡಿಗರ ಮನಸ್ಸಿನಲ್ಲಿರುತ್ತೇನೆ ಎಂದಿದ್ದರಂತೆ. ಇಂದು ವಿಷ್ಣುದಾದ ನಮ್ಮೊಂದಿಗಿಲ್ಲವಾದರೂ ಅವರನ್ನು ಮತ್ತೆ-ಮತ್ತೆ ನೆನಪಿಸುವಂತಹ ಚಿತ್ರಗಳನ್ನು ಕೊಟ್ಟಂತಹ ನೆಚ್ಚಿನ ನಿರ್ದೆಶಕರು ಭಾರ್ಗವ ನಮ್ಮೊಂದಿಗಿದಾರೆ. ಸದ್ಯಕ್ಕೆ ಚಿತ್ರರಂಗದಿಂದ ಸ್ವಲ್ಪ ದೂರ ಇದಾರೆ ಅಷ್ಟೆ. ವಿಷ್ಣುದಾದ ಇಂದು ಇದ್ದಿದರೆ. ಈ ಜೋಡಿ, ಕನ್ನಡಿಗರು ಮರೆಯದಂತಹ ಇನ್ನಷ್ಟು ಅದ್ಭುತ ಚಿತ್ರಗಳನ್ನು ನೀಡುತ್ತಿದ್ದರು ನಿಜ.
ಇನ್ನೂ ನಾಯಕಿಯರ ಪಟ್ಟಿಯಲ್ಲೂ ವಿಷ್ಣುವರ್ಧನ್ ರವರ ಜೊತೆ ನಟಿಸಿದವರು ತುಂಬಾ ಜನ ಇದಾರೆ. ಲಕ್ಷ್ಮೀ, ಮಂಜುಳಾ, ಭಾರತಿ, ಸುಹಾಸಿನಿ, ಮಾಧವಿ, ಆರತಿ, ಭವ್ಯ ಇವರ ತಾರಾಜೋಡಿಗಳು ಸೂಪರ್ ಹಿಟ್ ಆಗಿದೆ. ಸುಹಾಸಿನಿ-ವಿಷ್ಣುವರ್ಧನ್, ಮಾಧವಿ ಜೋಡಿಗಳು ಅಪೂರ್ವ ಜೋಡಿಯೆಂದೇ ಫೇಮಸ್ ಆಗಿದ್ದವು. “ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಮತ್ತೆ ಹಾಡಿತು ಕೋಗಿಲೆ” ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದಂತಹ ರೂಪಿಣಿ ಯವರ ಜೊತೆ ಸತತ 6 ಹಿಟ್ ಚಿತ್ರಗಳನ್ನು ಈ ಜೋಡಿ ಕೊಟ್ಟಿದೆ. “ಯಮ-ಕಿಂಕರ, ಹಲೋ ಡ್ಯಾಡಿ, ಕುಂತೀಪುತ್ರ, ಮೋಜುಗಾರ ಸೊಗಸುಗಾರ” ಚಿತ್ರಗಳ ಮೂಲಕ ಕನ್ನಡಕ್ಕೆ ಪರಿಚಯವಾದ ಸೋನಾಕ್ಷಿಯವರು ಮಾಡಿರುವ 4 ಚಿತ್ರಗಳು ವಿಷ್ಣುವರ್ಧನವರೊಂದಿಗೆ ಎನ್ನುವುದು ವಿಶೇಷ. ಹೆಂಗಳೆಯರಿಗೆ ವಿಷ್ಣುವರ್ಧನ್ ʼಚಿನ್ನದಂಥ ಮಗ, ಮಹಾಪುರುಷʼ ಎಂದೆ ಹೇಳಬಹುದು. ಹೆಣ್ಣಿನ ಬಗೆಗಿನ ಅವರ ಗೌರವ ಚಿತ್ರಗಳು ಇಂದಿಗೂ ಎಷ್ಟೊ ಜನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದೆ. ʼಹಾಲುಂಡ ತವರು, ಜೀವನದಿ, ದೀರ್ಘಸುಮಂಗಲಿ, ಹೃದಯವಂತ, ವರ್ಷʼ ಚಿತ್ರಗಳನ್ನು ನೋಡಿದಾಗ ನಮಗೆ ಗೊತ್ತಾಗುತ್ತದೆ.
ವಿಷ್ಣುವರ್ಧನ್ ರವರು ನಾಯಕ ನಟ ಅನ್ನೋದಷ್ಟೆ ಹಲವರಿಗೆ ಗೊತ್ತಿರುವ ವಿಷಯ. ಆದರೆ, ಅವರೊಬ್ಬ ಗಾಯಕರು, ಚಿತ್ರಕಥೆಗಾರರು ಸಹ ಆಗಿದ್ದರು ಎನ್ನುವುದು ಕೆಲವರಿಗಷ್ಟೆ ಗೊತ್ತು. ʼಗಣೇಶ ಐ ಲವ್ ಯೂ, ಲಯನ್ ಜಗಪತಿರಾವ್ʼ ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಜಿಮ್ಮಿಗಲ್ಲು, ಖೈದಿ, ಕಿಲಾಡಿಕಿಟ್ಟು, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಚಿತ್ರಗಳಲ್ಲಿ ಹಿನ್ನಲೆ ಗಾಯನವನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ವಿಷ್ಣುಸರ್ ಬಹುಮುಖ ಪ್ರತಿಭಾನ್ವಿತ ಕಲಾವಿದರು. ಅವರ ಚಿತ್ರಗಳಾದಂತಹ ʼಕಥಾನಾಯಕ, ಕರ್ನಾಟಕ ಸುಪುತ್ರ, ಕೋಟಿಗೊಬ್ಬ, ಸಾಮ್ರಾಟ್, ಯಜಮಾನ, ಕದಂಬʼ ಹೀಗೆ ಇವುಗಳು ಬರಿ ಅವರ ಚಿತ್ರಗಳ ಹೆಸರಾಗಿರಲಿಲ್ಲ. ಅವರಲ್ಲಿನ ವ್ಯಕ್ತಿತ್ವವಾಗಿದ್ದವು.
ವಿಷ್ಣುವರ್ಧನ್ ರವರ ಇನ್ನೊಂದು ವಿಶೇಷವೆಂದರೆ ಅವರ ಕೈಯಲ್ಲಿರುವ ಕಡಗ. ಒಮ್ಮೆ ಅವರಿಗೆ ಸಿಖ್ ಗುರುಗಳು ಕಾಣಿಕೆಯಾಗಿ ಕೊಟ್ಟಂತಹ ಆ ಕಡಗವನ್ನು ತಮ್ಮ ಎಲ್ಲಾ ಚಿತ್ರಗಳಲ್ಲು ಹಾಕಿಕೊಂಡೆ ಇರುತ್ತಿದ್ದರು. ಆ ಕಡಗ ಎಷ್ಟೊ ಜನಕ್ಕೆ ಟ್ರೆಂಡ್ ಕೂಡ ಆಗಿತ್ತು. ಒಂದು ಕಾಲದಲ್ಲಿ ವಿಷ್ಣುದಾದರ ಅಭಿಮಾನಿಗಳು ಎಂದರೆ ಎಲ್ಲರ ಕೈಯಲ್ಲೂ ಕಡಗವಿರುತ್ತಿತ್ತು. ಕಡಗಕ್ಕೆ ಕರ್ನಾಟಕದಲ್ಲಿ ಟ್ರೆಂಡ್ ಸೃಷ್ಟಿಯಾಗಿದ್ದೆ ವಿಷ್ಣುದಾದರಿಂದ ಎನ್ನಬಹುದು. ತಮ್ಮ ಕೊನೆಯ ದಿನಗಳವರೆಗೂ ಆ ಕಡಗ ವಿಷ್ಣುದಾದರ ಕೈಯಲ್ಲೆ ಇತ್ತು. ಇಗಲೂ ಅದನ್ನು ಭಾರತಿ ವಿಷ್ಣುವರ್ಧನ್ ರವರು ಅವರ ನೆನಪಿನೊಂದಿಗೆ ಜೋಪಾನವಾಗಿ ಇಟ್ಟಿದ್ದಾರಂತೆ.
ವಿಷ್ಣುವರ್ಧನ್ ರವರು ಕ್ರೀಡೆಯಲ್ಲೂ ಕಲಾವಿದರಾಗಿದ್ದರು. ಕ್ರಿಕೆಟ್ ಅವರ ಮೆಚ್ಚಿನ ಆಟವಾಗಿತಂತೆ. ಒಮ್ಮೆ ಸಂದರ್ಶನವೊಂದರಲ್ಲಿ ನಿರ್ದೇಶಕ ಭಾರ್ಗವರವರು ಹೇಳುತ್ತಿದ್ದರು. ಶೂಟಿಂಗ್ ಸಮಯದಲ್ಲಿ ಬ್ರೇಕ್ ಕೊಟ್ಟಾಗೆಲ್ಲಾ ʼಕಂಠೀರವ ಸ್ಟೂಡಿಯೋʼದಲ್ಲಿರುವ ಪ್ಲೇ ಗ್ರೌಂಡಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡಲು ಹೋಗುತ್ತಿದ್ದರಂತೆ. 2005ರಲ್ಲಿ ಹೆಸರಾಂತ ಕ್ರಿಕೆಟ್ ಆಟಗಾರ ಸೈಯ್ಯದ್ ಕೀರ್ಮಾನಿ ಅವರೊಂದಿಗೆ ಕ್ರಿಕೆಟ್ ಅಸೋಸಿಯೇಶನ್ಲ್ಲಿ ಕೂಡ ಭಾಗವಹಿಸಿದ್ದರು. ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ʼಫಿಲ್ಮ್ ಪ್ರೀಮಿಯರ್ ಲೀಗ್ʼಗಳಲ್ಲೂ ಸಹ ಸಕ್ರೀಯರಾಗಿದ್ದರು. ದರ್ಶನ್, ಸುದೀಪ್, ಶೋಭರಾಜ್, ಶಿವರಾಮ್ ರಂತಹ ಬಹಳಷ್ಟು ಕಲಾವಿದರು ವಿಷ್ಣುಸಾರ್ರೊಂದಿಗೆ ಜೊತೆಯಾಗಿದ್ದರು. ವಿಷ್ಣುದಾದರವರು ಶಂಕ್ರಣ್ಣರವರು ನಿರ್ದೆಶನದ ʼಮಾಲ್ಗುಡಿ ಡೇಸ್ʼ ಎಂಬ ಸೀರಿಯಲ್ನಲ್ಲೂ ಸಹ ಒಂದು ಪಾತ್ರವನ್ನು ಮಾಡಿದ್ದಾರೆ. ಮತ್ತೊಂದು ವಿಶೇಷವೆಂದರೆ, ನಿರ್ದೆಶಕ ಎಸ್.ನಾರಾಯಣ್ ರವರ ಸೂರ್ಯವಂಶ, ಜಮೀನ್ದಾರ್ರು ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ದ್ವಿಪಾತ್ರ ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದಾರೆ. ಅಷ್ಟೆ ಅಲ್ಲದೆ ಕನ್ನಡದಲ್ಲಿ ಅತೀ ಹೆಚ್ಚು ದ್ವಿಪಾತ್ರ ಮಾಡಿದಂತಹ ನಟ ಕೂಡ ವಿಷ್ಣುದಾದರವರೆ. 24 ಚಿತ್ರಗಳಲ್ಲಿ ದ್ವಿಪಾತ್ರ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಒಂದೆ ಚಿತ್ರದಲ್ಲಿ ಎರಡೆರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಮೋಘ ಅಭಿನಯಕ್ಕೆ ಎಷ್ಟೊ ಚಿತ್ರಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ವಿಷ್ಣುದಾದರು ಇಂದು ನಮ್ಮೊಂದಿಗಿದಿದ್ದರೆ 71ನೇ ಜನ್ಮದಿನದ ಸಂಭ್ರಮದಲ್ಲಿರುತ್ತಿದ್ದರು.
ಡಿಸೆಂಬರ್ 30, 2009ರಲ್ಲಿ ತಮ್ಮ 59ನೇ ವಯಸ್ಸಿನಲ್ಲಿಯೆ ಅಪಾರ ಅಭಿಮಾನಿಗಳನ್ನು ಬಿಟ್ಟು ಮರೆಯಾಗಿ ʼಮರೆಯದ ಮಾಣಿಕ್ಯʼವಾದರು. ಅವರು ನಮ್ಮೊಂದಿಗಿಲ್ಲಾ ಎಂದು ಹೇಳಲು ಇಂದಿಗೂ ಸಾಧ್ಯವಾಗುತ್ತಿಲ್ಲಾ. ಅವರ ಚಿತ್ರಗಳನ್ನು ನೋಡುತ್ತಿದ್ದರೆ, ದೂರವಾಗಿದ್ದಾರೆ ಅಂತಾ ಅನಿಸುವುದೇ ಇಲ್ಲಾ. ಅಷ್ಟೊಂದು ಭಾವನಾತ್ಮಕವಾಗಿ ಹತ್ತಿರವಾಗಿ ಕಾಣಿಸುತ್ತಾರೆ. ಆದರು, ದೈಹಿಕವಾಗಿ ಜೊತೆಗಿಲ್ಲಾ ಎನ್ನುವುದೇ ನೋವಿನ ಸಂಗತಿ. ಸೂರ್ಯವಂಶ, ಯಜಮಾನದಂತಹ ಅವರ ಚಿತ್ರಗಳು ಇಂದು ಟಿ.ವಿಯಲ್ಲಿ ಬರುತ್ತಿದ್ದರೆ, ಚಾನಲ್ ಬದಲಾಯಿಸದೆ ನೋಡುವ ಎಷ್ಟೊ ಅಭಿಮಾನಿಗಳಿದ್ದಾರೆ. ಅದರಲ್ಲಿ ನಾನು ಒಬ್ಬ. ಇಂದು ಅವರ ಅಳಿಯ ಅನಿರುಧ್ ಕೂಡ ನಾಯಕ ನಟರಾಗಿ ಕಿರುತೆರೆಯಲ್ಲಿ ಹೆಸರಾಗಿದ್ದಾರೆ. ಅವರನ್ನು ಕಂಡಾಗಲೆಲ್ಲಾ ವಿಷ್ಣುದಾದರೆ ನೆನಪಿಗೆ ಬರುತ್ತಾರೆ.
ಅಭಿಮಾನಿಗಳಿಗೆ ಸಮಾಧಾನವಾಗದ ನೋವಿನ ವಿಷಯವೆಂದರೆ ವಿಷ್ಣುದಾದರ ಸಮಾಧಿ ವಿಚಾರ. ವಿಷ್ಣುದಾದ ಮತ್ತು ಬಾಲಣ್ಣನವರ ಬಾಂಧವ್ಯಕ್ಕೆ ಸಾಕ್ಷಿಯಾಗಿ ಬಾಲಣ್ಣನವರ ಕನಸಿನ ಕೂಸಾದ ಅಭಿಮಾನ್ ಸ್ಟೂಡಿಯೋದಲ್ಲಿಯೆ ವಿಷ್ಣುದಾದ ರವರನ್ನು ಸಮಾಧಿ ಮಾಡಲಾಗಿದೆ. ಅಂದು ಬಾಲಣ್ಣನವರು ಅಭಿಮಾನ್ ಸ್ಟೂಡಿಯೋವನ್ನು ಪ್ರಾರಂಭಿಸುವಾಗ ಅದರ ಶುಭಮೂಹೂರ್ತ ಪೂಜಾ ಕಾರ್ಯಕ್ರಮವನ್ನು ನೇರವೆರಿಸಿದವರು ವಿಷ್ಣುವರ್ಧನ್ ರವರೆ ಎನ್ನುವುದು ವಿಪರ್ಯಾಸ. ಆದರೆ ಇಂದು ಆ ಸ್ಟೂಡಿಯೋ ಕಾರಣಾಂತರಗಳಿಂದ ಚಿತ್ರೀಕರಣವಿಲ್ಲದೆ ಅನಾಥವಾಗಿದೆ, ಕನ್ನಡದ ಮೇರುನಟ ವಿಷ್ಣುವರ್ಧನ್ ದಿವಂಗತರಾಗಿ ಒಂಬತ್ತು ವರ್ಷಗಳ ನಂತರವೂ ವಿಷ್ಣು ಪುಣ್ಯಭೂಮಿ ವಿವಾದಾಸ್ಪದವಾಗಿಯೇ ಉಳಿದುಕೊಂಡಿದೆ. ವಿಷ್ಣುವರ್ಧನ್ ಕಾಲಾನಂತರ ಐದು ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ವಿಷ್ಣುವರ್ಧನ್ ಅವರನ್ನು ಮಣ್ಣುಮಾಡಿದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳವನ್ನು ವಿಷ್ಣುವರ್ಧನ್ ಪುಣ್ಯಭೂಮಿ ಎಂದು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರ ಬಗ್ಗೆ ಎಷ್ಟೊ ಸರ್ಕಾರಗಳು, ರಾಜಕಾರಣಿಗಳು, ಎಷ್ಟೊ ಸೆಲೆಬ್ರಿಟಿಗಳು ಬಂದರು ನಾಟಕೀಯವಾಗಿ ಮಾತನಾಡುತ್ತಾರೆ ಹೋಗುತ್ತಾರೆ. ಆದರೆ ವಿಷ್ಣುದಾದರ ಅಭಿಮಾನಿಗಳು ಮಾತ್ರ 12 ವರ್ಷದಿಂದ ಸ್ಮಾರಕ ನಿರ್ಮಾಣಕ್ಕಾಗಿ ಸರಕಾರದ ಮೇಲೆ ಒತ್ತಡ ತರುತ್ತಲೇ ಇದ್ದಾರೆ. ಅಭಿಮಾನಿಗಳ ಮಾತಿಗೆ ಬೆಲೆಯೆ ಇಲ್ಲದಂತಾಗಿದೆ. ಇಂದು ಆ ಸ್ಟೂಡಿಯೋ ಮೊದಲಿನಂತಾಗಿದ್ದರೆ. ಎಷ್ಟೊಂದು ಚಿತ್ರೀಕರಣಗಳು, ರಿಯಾಲಿಟೀ ಶೋಗಳು ಅಲ್ಲಿ ನಡೆಯುತ್ತಿದ್ದವು. ಆದರೆ, ಅದರ ಬಗ್ಗೆ ಅಭಿಮಾನಿಗಳನ್ನು ಬಿಟ್ಟರೆ ಮತ್ತೆ ಯಾರು ತಲೆ ಕೆಡಿಸಿಕೊಳ್ಳದೆ ಸರಾಗವಾಗಿದ್ದಾರೆ. ಕನ್ನಡಕ್ಕೆ ಕಲೆಯ ಮೂಲಕ ತನ್ನದೆ ಆದ ಕೊಡುಗೆ ಕೊಟ್ಟಂತಹ ಕಲಾವಿದನಿಗೆ ಇದು ಯಾವ ನ್ಯಾಯ……? ಇನ್ನಾದರೂ ಆ ವಿವಾದ ವಿದಾಯವಾಗಲಿ, ಅಭಿಮಾನ್ ಸ್ಟೂಡಿಯೋ ಅಭಿಮಾನಿಗಳ ಪ್ರತೀಕವಾಗಿ ಮೊದಲಿನಂತಾಗಲಿ. ಬಾಲಣ್ಣನವರ ಕನಸು, ಅಭಿಮಾನಿಗಳ ಮನಸು ಎರಡು ಈಡೇರುವಂತಾಗಲಿ. ಇದೇ ಇಂದು ನಮ್ಮ “ಸಾಹಿತ್ಯ ಮೈತ್ರಿ” ಬಳಗದ ಸವಿನೆನಪಿನ ಆಶಯವಾಗಿದೆ.
ಲೇಖನ್ ನಾಗರಾಜ್
ಹರಡಸೆ, ಹೊನ್ನಾವರ