ಒಂಟಿಮನೆ-4

ಇಲ್ಲಿಯವರೆಗೆ

ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸಿ ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮ ಕಥೆಯನ್ನು ಹೇಳತೊಡಗುತ್ತದೆ. ದಂಪತಿಗಳು ಕಥೆಯ ಪಾತ್ರಗಳಾಗಿ ನೋಡುತ್ತಿರುವಂತೆ ಒಬ್ಬ ಮಾಂತ್ರಿಕನ ಎದುರು ಒಂದು ಹೆಣ್ಣು ಆತ್ಮ ಗೋಚರಿಸಿ ಆತನು ಕೈಯಿಂದ ಹರಿದ ರಕ್ತದ ಕಣಗಳಿಗೆ ಹಪಹಪಿಸುತ್ತಿರುವಾಗಲೇ ಮಾಂತ್ರಿಕನ ಆಜ್ಞೆಯಂತೆ ಸಹಚರರು ಆ ಹೆಣ್ಣಿನ ರೂಪದಲ್ಲಿರುವ ಆತ್ಮವನ್ನು ಹಿಡಿದು ಕಟ್ಟಿಹಾಕಿ ಸಮಾಧಿಯ ಒಳಗೆ ಎಸೆಯಲು ಸೂಚಿಸಿತ್ತಾನೆ. ಮುಂದೆ….

ಮಾಂತ್ರಿಕನ ಮಾತು ಕೇಳುತ್ತಿದ್ದಂತೆ ಆಕೆಯನ್ನು ಹಿಡಿಯಲು ಸಹಚರರು ಒಂದು ಕಡೆಯಿಂದ ಧಾವಿಸಿದರು, ತನ್ನ ಗಂಡನೊಡನೆ ಅಲ್ಲಿಂದ ತಪ್ಪಿಸಿಕೊಳ್ಳದ ಹೊರತು ಆಕೆಗೆ ಬೇರೆ ದಾರಿ ತೋಚದಂತಾಗಿ, ಸಮಾಧಿಯ ಕಡೆಯಿಂದ ಅಗ್ನಿ ವೃತ್ತದ ಬೆಂಕಿಯ ಮಧ್ಯದಲ್ಲಿ ಸಿಲುಕ್ಕಿದ್ದ ತನ್ನ ಗಂಡನೆಡೆಗೆ ಓಡಿ, ಬೆಂಕಿಯ ಮೇಲೆ ಅವನಿದ್ದ ಕಡೆಗೆ ಓಡಲಾಗದೆ ಸೀದಾ ತನ್ನ ಪತಿಯಿದ್ದ ವೃತ್ತದ ಭಾಗಕ್ಕೆ ಜಿಗಿದು, ತನ್ನ ಪತಿಯ ಜೊತೆ ವೃತ್ತದ ಮಧ್ಯ ಭಾಗದಿಂದ ಹೊರಗೆ ಜಿಗಿದು ಪ್ರಾಣ ರಕ್ಷಣೆಗೆಂದು ಅಲ್ಲಿಂದ ಓಡಿದರು. ಅದನ್ನು ನೋಡುತ್ತಿದ್ದಂತೆ ಮಾಂತ್ರಿಕನ ಸಹಚರರು ಅವರನ್ನು ಹಿಡಿಯಲು ಬೆನ್ನಟ್ಟಿದರು. ಇದನ್ನು ನೋಡುತ್ತಿದ್ದ ಮಾಂತ್ರಿಕ ತನ್ನಲ್ಲಿದ್ದ ತಲೆ ಬುರುಡೆಗೆ ರಕ್ತವನ್ನು ಸುರಿಸಿ, ತನ್ನ ಸಹಾಯಕ್ಕಾಗಿ ಕೆಲ ಪೈಶಾಚಿಕ ಆತ್ಮಗಳ ಆಮಂತ್ರಣವನ್ನಿತ್ತನು. ಅದರಲ್ಲಿ ಕೆಲ ಆತ್ಮಗಳಿಗೆ ದಂಪತಿಗಳನ್ನು ಹಿಡಿಯಲು ಸಹಚರರ ಸಹಾಯಕ್ಕೆಂದು ಕಳುಹಿಸಿದ, ಇನ್ನೂ ಕೆಲವನ್ನು ತನ್ನ ಪ್ರೇಯಸಿಗಾಗಿ ರಕ್ಕಸ ಹೋಮದ ಸಹಾಯಕ್ಕೆಂದು ಅಲ್ಲಿಯೇ ಇರಿಸಿದ. ಮಾಂತ್ರಿಕನ ಪ್ರೇಯಸಿಯ ಆತ್ಮ ಈ ಎಲ್ಲವನ್ನೂ ನೋಡುತ್ತಾ ದೈಹಿಕ ದೇಹದ ಪ್ರವೇಶಿಸಲು ಕಾಯುತ್ತಾ ತನ್ನ ಸಮಾಧಿಯ ಸುತ್ತ ಸುತ್ತುತ್ತಿತ್ತು. ಮಾಂತ್ರಿಕ ಆ ಆತ್ಮಗಳ ಸಹಾಯದಿಂದ ಸಮಾಧಿಯ ಪಕ್ಕದಲ್ಲೆ ಅಗ್ನಿಕುಂಡ ನಿರ್ಮಿಸಿ ಪೂಜೆ ಆರಂಭಿಸಿದ. ಹೋಮಕ್ಕೆಂದು ತನೆಗೆ ತಿಳಿದ ಮಂತ್ರಗಳನ್ನು ಹೇಳುತ್ತಾ ಆ ಆತ್ಮದ ಶಕ್ತಿಯನ್ನು ಬೇರೆ ಯಾವ ಕಡೆಯೂ ಹರಿಬಿಡದಂತೆ ಆ ಸಮಾಧಿಯೊಳಗೆ ಕ್ರೋಢೀಕರಿಸಿದ. ಇತ್ತ ಕಡೆ ದಂಪತಿಗಳನ್ನು ಹುಡುಕಲು ಹೊರಟಿದ್ದ ಸಹಚರರ ಜೊತೆ ಸಾಗಿದ್ದ ಕೆಲ ಆತ್ಮಗಳು ಅವರನ್ನೇ ಹುಡುಕುತ್ತಾ ಹೊರಟಿದ್ದಾಯಿತು ಕತ್ತಲಿದ್ದ ಕಾರಣ ಏನು ಕಾಣುತ್ತಿರಲಿಲ್ಲ.

ಅವರಿಂದ ತಪ್ಪಿಸಿಕೊಂಡ ದಂಪತಿಗಳು ತಲೆಮರೆಸಿಕೊಳ್ಳುವ ಸಲುವಾಗಿ ಅದೇ ಕತ್ತಲಲ್ಲಿ ನೆಲೆ ಅರಸಿ ಓಡುತ್ತಿದ್ದಾರೆ. ಹೋಗುಹೋಗುತ್ತಿದ್ದಂತೆ ಕತ್ತಲೆಯ ಮಬ್ಬಿನಲ್ಲಿ ಕವಲೊಡೆದ ದಾರಿಗಳು ಕಂಡು ಅದೇ ದಿಕ್ಕಿನಲ್ಲಿ ಓಡುತ್ತಿದ್ದಾಗ ಹೆಂಡತಿಯ ಕಾಲಿಗೆ ಮುರಿದು ಬಿದ್ದ ಮರದ ಕಾಂಡವೊಂದು ತಗುಲಿ ದೊಪ್ಪನೆ ಬಿದ್ದು ಕವಲುದಾರಿಯ ಇಳಿಜಾರಿನ ಕಡೆ ಸುರುಳಿಯಂತೆ ಸುತ್ತುತ್ತಾ ಉರುಳ ತೊಡಗಿದ ಅವಳನ್ನು ಅವಳ ಪತಿ ಹಿಡಿಯಲು ಪ್ರಯತ್ನಿಸಿ ಕೊನೆಗೆ ಆಕೆಯ ಕಾಲನ್ನು ಹಿಡಿದು ಪಕ್ಕಕ್ಕೆ ಜೋರಾಗಿ ಎಳೆಯುತ್ತಿದ್ದಂತೇ ಆಕೆಯ ದೇಹ ಮಗುಚಾಗಿ ಆಕೆಯ ಹಣೆ ಅಲ್ಲಿಯೇ ಇದ್ದ ಒಂದು ಬಂಡೆಗೆ ತಗುಲಿತು. ಆಕೆ ಜೋರಾಗಿ ಕಿರುಚಿ ಪಕ್ಕಕ್ಕೆ ಬಿದ್ದ ಆಕೆಯ ಹಣೆ ಗಾಯವಾಗಿ ರಕ್ತ ಬರಲಾರಂಭಿಸಿತು. ಆಕೆ ಕಿರುಚಿದ ಈ ಶಬ್ದ ಗಾಳಿಯಲ್ಲಿ ತೇಲಿ ಸಹಚರರ ಕಿವಿಯಲ್ಲಿ ನಾದ ಹಾಡಿತ್ತು. ಇಷ್ಟೇ ಸಾಕು ಎಂಬಂತೆ ಆ ಗುಂಪು ಶಬ್ದ ಬಂದ ಜಾಡನ್ನೆ ಹುಡುಕುತ್ತಾ ಹೊರಟರು. ಆ ಆತ್ಮಗಳು ಸಹ ರಕ್ತದ ವಾಸನೆ ಹಿಡಿದು ಅತ್ತಕಡೆಯೆ ಹೊರಟವು. ಪತಿಯು ಬಿದ್ದ ಹೆಂಡತಿಯ ಹಣೆಗೆ ಆಕೆಯ ಸೀರೆಯನ್ನೇ ಹರಿದು ಕಟ್ಟಿದನು. ಮಾಂತ್ರಿಕನ ಆತ್ಮಗಳು ರಕ್ತದ ಜಾಡನ್ನು ಹಿಡಿದು ಅವರ ಬಳಿ ತಲುಪಿ ಆಕೆಯನ್ನು ಮೇಲೇಳಿಸುತ್ತಿದ್ದಂತೆ ಆತ್ಮಗಳು ನೆಲದ ಮೇಲೆ ಬಿದ್ದ ಆಕೆಯ ರಕ್ತವನ್ನು ಹೀರುತ್ತಾ ಆಕೆಯ ಬಂಧನಕ್ಕೆ ಅವಳ ಸುತ್ತಾ ಸುತ್ತುತ್ತಿದ್ದವು.

ಅದೇ ಸಮಯಕ್ಕೆ ಅಲ್ಲಿಗೆ ಬಂದ ಸಹಚರರು ಆತ್ಮಗಳ ಕಾರ್ಯಕ್ಕೆ ಚುತಿಗೊಡದೆ ಅವುಗಳ ಮುಂದೆಯೇ ತಲೆತಗ್ಗಿಸಿ ಕೂರುತ್ತ ಮಂತ್ರ ಪಠನದ ಪ್ರಾರ್ಥನೆ ಶುರು ಮಾಡಿದರು. ಕೆಲ ಆತ್ಮಗಳು ಆಕೆಯ ಕಾಲುಗಳನ್ನು ಜೋಡಿಸಿ ಹಿಡಿದರೆ ಇನ್ನು ಕೆಲ ಆತ್ಮಗಳು ಆಕೆಯ ಕೈಗಳನ್ನು ಹಿಡಿಯುತ್ತಾ ಮೇಲಕ್ಕೆತ್ತಬೇಕು ಎನುವಷ್ಟರಲ್ಲೆ ಆಕೆಯ ಪತಿ ಆಕೆಯನ್ನು ಹಿಡಿದು ತನ್ನೆಡೆಗೆ ಎಳೆಯಲು ಪ್ರಯತ್ನಿಸಿದ ಆತ್ಮಗಳ ಬಂಧನದಲ್ಲಿರುವ ಆಕೆಗೆ ತೋರಿಕೊಳ್ಳಲಾಗದ ಭಯ. ಈ ಆತ್ಮಗಳ ಹಿಡಿತದಿಂದ ತನ್ನ ಹೆಂಡತಿಯನ್ನು ತಪ್ಪಿಸುತ್ತಿದ್ದ ಆತನ ಕೈಗೆ ಆತ್ಮವು ಬಾಯಿ ಹಾಕಿ ಮೊನಚಾದ ಹಲ್ಲುಗಳಿಂದ ಕಚ್ಚ ತೊಡಗಿತು.ರಕ್ತ ಸೋರುತ್ತಿದ್ದಂತೆ ಅದೇ ರಕ್ತವನ್ನು ತನ್ನ ನಾಲಿಗೆಯಿಂದ ಅದರ ರುಚಿಯನ್ನು ಸವಿಯಿತು. ಆತನಿಗೆ ಏನು ಮಾಡುವುದು ಎನ್ನುತ್ತಿರುವಾಗಲೆ ದೂರದಿಂದ ಇದನ್ನೆಲ್ಲಾ ಗಮನಿಸುತ್ತಿದ್ದ ತನ್ನ ಗೋರಿಯ ಮೇಲೆ ಕುಳಿತು ಸಿಗರೇಟ್ ಸವಿಯುತ್ತಿದ್ದ ಗಂಡು ಆತ್ಮ ಅಯ್ಯೋ ಎನಿಸಿ ಈತನ ಸಹಾಯಕ್ಕೆ ಧಾವಿಸಿ ಅವನ ದೇಹ ಪ್ರವೇಶಿಸಿತು. ಹೀಗೆ ಆತ್ಮ ಪ್ರವೇಶದಿಂದ ಶಕ್ತಿ ಪಡೆದ ಅವನು ರಕ್ತ ಸವಿಯುತ್ತಿದ್ದ ಆ ಆತ್ಮವನ್ನು ಅದರ ಕೂದಲನ್ನು ಹಿಡಿದು ಅದರ ಕತ್ತನ್ನು ತಿರುಗಿಸಿ ಜೋರಾಗಿ ತಳ್ಳಿದನು, ಆ ರಭಸಕ್ಕೆ ಆ ಆತ್ಮವು ಆತನ ಹೆಂಡತಿಯ ಮೊಣಕಾಲಿನ ಭಾಗಕ್ಕೆ ತಾಗಿದ ರಭಸಕ್ಕೆ ಉಳಿದ ಆತ್ಮಗಳು ಸಹ ಆಕೆಯನ್ನು ಕೈಬಿಡುತ್ತಿದ್ದಂತೆ ಆಕೆ ಮತ್ತೆ ನೆಲಕ್ಕೆ ಬಿದ್ದಳು. ಎಲ್ಲಾ ಆತ್ಮಗಳು ಒಟ್ಟಾಗಿ ಅವನ ಮೇಲೆ ಶಕ್ತಿ ಪ್ರದರ್ಶನ ಮಾಡಿ ತಡೆಯುವಂತೆ ಆತನ ಮೇಲೆರಗಿದವು, ತನ್ನೆಲ್ಲಾ ಶಕ್ತಿಯನ್ನು ಬಳಸಿ ಅವನೊಳಿದ್ದ ಆತ್ಮ ಅವುಗಳನ್ನು ತಡೆಹಿಡಿದನು.ಇದನ್ನೆಲ್ಲ ನೋಡುತ್ತಿದ್ದ ಆತನ ಹೆಂಡತಿ ತನ್ನ ಪತಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂತೆಂದು ಆಶ್ಚರ್ಯ ಚಕಿತಳಾಗಿ ಕಣ್ಮಿಟುಕಿಸದೆ ಹಾಗೆಯೇ ನೋಡುತ್ತಾ ನಿಂತಿದ್ದಳು.

ಹೀಗೆ ಅವನನ್ನು ತಡೆಯಲು ಸಾಧ್ಯವಾಗದಿದ್ದಾಗ ಎಲ್ಲಾ ಆತ್ಮಗಳು ಸೇರಿ ಉರಿ ಬೆಂಕಿ ಕೆಂಗಣ್ಣಿನ, ಉದ್ದ ಉಗುರಿನ ಕೈಯುಳ್ಳ, ಪಾಚಿಗಟ್ಟಿದ ಅಗಲ ಪಾದದ ರಾಕ್ಷಸ ಆಕಾರವನ್ನು ತಳೆದು ಅವನ ಪತಿಯನ್ನು ಕೊಲ್ಲಲು ಮೇಲೆರಗಿದವು. ಆ ಆಕಾರವು ಅವನ ಎರಡೂ ಕೈಗಳನ್ನು ಹಿಡಿಯುತ್ತ ಜೋರಾಗಿ ತಿರುಚಿ ನಂತರ ಆ ಕೈಗಳಿಂದಲೇ ಅವನ ದೇಹವನ್ನು ಮೇಲೆತ್ತಿ ಧೋಪ್ ಎಂದು ಬಿಸಾಡಿತು, ಬಿದ್ದ ಅವನ ಬೆನ್ನಿನ ಭಾಗಕ್ಕೆ ಸ್ವಲ್ಪ ಪೆಟ್ಟೆನಿಸಿದರೂ ತಲೆಕೊಡದೆ ಎದ್ದು ಅದರ ಕಾಲನ್ನು ಹಿಡಿದು ದರದರನೆ ಎಳೆಯತ್ತ ಬಟ್ಟೆ ಒಗೆಯುವಾಗ ವಸ್ತ್ರವನ್ನು ಒಗೆಯುವಂತೆ ಅದರ ದೇಹವನ್ನು ಎಡ ಭಾಗಕ್ಕೆ ಒಂದು ಬಾರಿ ಬಲ ಭಾಗಕ್ಕೆ ಒಂದು ಬಾರಿ ದೊಪ್ ದೊಪ್ ಎಂದು ಎಸೆಯುತ್ತ ನೆಲದಿಂದ ಎತ್ತಿ ಗಾಳಿಯಲ್ಲಿ ಗರಗರನೆ ತಿರುಗಿಸಿ ಜೋರಾಗಿ ಎಸೆದನು. ಅವನು ಎಸೆದ ಭರಕ್ಕೆ ಆ ರಾಕ್ಷಸನು ತಲೆ ಬಾಗಿ ಕೂತಿದ್ದ ಸಹಚರರ ಮೇಲೆ ಬಿದ್ದು ಉರುಳಿದರೆ ಸಹಚರರೆಲ್ಲಾ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಉರುಳಿದರು. ಅಲ್ಲಿಯವರೆಗೆ ಮಂತ್ರ ಪಠಿಸಿ ಪ್ರಾರ್ಥನೆಗೆ ತಲೆ ಬಾಗಿ ಕೂತಿದ್ದ ಅವರಿಗೆ ಅಲ್ಲಿ ಏನು ನಡೆದಿತ್ತು ಎಂದು ತಿಳಿಯಲೇ ಇಲ್ಲ. ಆ ಪತಿಯ ದೇಹದಲ್ಲಿ ಆತ್ಮದ ಇರುವಿಕೆ ಗ್ರಹಿಸಿದ ಅದರಲ್ಲಿದ್ದ ಒಬ್ಬ ಸಹಚರ ತನ್ನಲ್ಲಿದ್ದ ಗಾಜಿನ ಸೀಸೆಯನ್ನು ತೆರೆದು ಅವನಲ್ಲಿದ್ದ ಆತ್ಮವನ್ನು ಅದರೊಳಗೆ ಸೇರಲು ಮಂತ್ರ ಪಠಿಸುತ್ತಾ ಕಣ್ಮುಚ್ಚಿ ನಿಂತನು. ಆ ಗಾಜಿನ ಸೀಸೆಯ ಒಳಗಿಂದ ಜೋರಾಗಿ ತನ್ನನ್ನು ಎಳೆದಂತಾಗಿತ್ತು ಆ ಪತಿಯ ಸಹಾಯಕ್ಕೆಂದು ಬಂದಿದ್ದ ಅವನ ದೇಹದಲ್ಲಿದ್ದ ಆ ಗಂಡಿನ ಆತ್ಮಕ್ಕೆ. ಎಳೆತ ಜೋರಾಗಿ ಆ ಸೀಸೆಯೊಳಗೆ ಅವನ ಆತ್ಮವು ಸೇರಿಕೊಳ್ಳುತ್ತಿದ್ದಂತೆ ಸಹಚರ ಆ ಸೀಸೆಯನ್ನು ಅದರ ಮುಚ್ಚುಳದಿಂದ ಮುಚ್ಚಿದನು. ಆ ಆತ್ಮ ಅವನ ದೇಹದಿಂದ ನಿರ್ಗಮಿಸುತ್ತಿದ್ದಂತೆ ಪ್ರಜ್ಞಾಹೀನನಾಗಿ ನೆಲಕ್ಕುರುಳಿದ. ಅದನ್ನು ನೋಡುತ್ತಾ ಅವನ ಹೆಂಡತಿ ಅವನೆಡೆ ಧಾವಿಸಿ ಕುಳಿತು ಕೊಳ್ಳುತ್ತಿದ್ದಂತೆ ಆತ್ಮಗಳು ಅವನನ್ನು ಬಂಧಿಸಿ ಗಾಳಿಯಲ್ಲಿ ಎತ್ತಿ ಮಾಂತ್ರಿಕನಿದ್ದೆಡೆಗೆ ಸಾಗಿದವು ಸಹಚರರು ಅವನ ಪತ್ನಿಯನ್ನು ಬಂಧಿಸಿ ಅದರ ಜೊತೆಯಲ್ಲೇ ಕರೆದೊಯ್ದರು.ಅವರ ಜೊತೆ ಪತಿಯ ಸಹಾಯಕ್ಕೆಂದು ಬಂದಿದ್ದ ಆ ಗಂಡಿನ ಆತ್ಮವೂ ಸಹ ಸೀಸೆಯಲ್ಲಿ ಬಂಧಿಯಾಗಿ ಅವರೊಡನೆ ನಡೆದಿತ್ತು.

ಮಾಂತ್ರಿಕನಿದ್ದ ಜಾಗ ಸಮೀಪಿಸುತ್ತಿದ್ದಂತೆ ಆಕೆ ಬಿಕ್ಕಿ ಬಿಕ್ಕಿ ಅಳ ತೊಡಗಿದಳು, ಆಕೆಯ ಅಳುವನ್ನು ಗಮನಿಸಿದ ಮಾಂತ್ರಿಕನ ಪ್ರಿಯತಮೆಯ ಆತ್ಮಕ್ಕೆ ಖುಷಿಯೋ ಖುಷಿ .. ಆತ್ಮ ಸೇರಿದ್ದ ಸೀಸೆಯನ್ನ ಮಾಂತ್ರಿಕನ ಕಾಲಿನ ಪಕ್ಕದ ಮುಂದೆ ಒಂದೆಡೆ ಇರಿಸಿ, ಮೂರ್ಚೆ ಹೋಗಿದ್ದ ಆಕೆಯ ಪತಿಯನ್ನು ಪಕ್ಕಕ್ಕೆ ಮಲಗಿಸಿ ಆಕೆಯನ್ನು ಪೂಜಾ ಕುಂಡದ ಮುಂದೆ ಕೂರಿಸಿ ಅವಳ ಮೇಲೆ ರಕ್ತ, ಕುಂಕುಮ, ಅರಿಶಿನವನ್ನು ಚೆಲ್ಲಿದರು. ಆ ಸನ್ನಿವೇಶದಲ್ಲಿ ಆಕೆ ಪೂಜೆಗೆ ಬಲಿ ಕೊಡುವ ಕುರಿಯಂತೆ ಕಾಣುತ್ತಿದ್ದಳು.

ಮುಂದುವರೆಯುವುದು…

Related post

Leave a Reply

Your email address will not be published. Required fields are marked *