ಇಡೀ ಜಗತ್ತಿನಲ್ಲೇ ನಮ್ಮ ಭಾರತ ದೇಶವು ಸಂಸ್ಕೃತಿಗೆ ಹೆಸರುವಾಸಿಯಾದದ್ದು. ನಮ್ಮ ಭಾರತದಲ್ಲಿ ಆಚರಿಸುವಸ್ಟು ಹಬ್ಬಗಳು ಇನ್ನೆಲ್ಲೂ ಆಚರಿಸಲ್ಪಡುವುದಿಲ್ಲ. ತಲೆಮಾರುಗಳಿಂದ ಸಂಪ್ರದಾಯಗಳು ನಮ್ಮ ಹಬ್ಬಗಳನ್ನು ಮೆರಗು ತರಿಸುತ್ತ ಬಂದಿವೆ. ಹಬ್ಬಗಳು ಎಂದರೆ ಎಲ್ಲೆಡೆ ಸಂಭ್ರಮ, ತೋರಣ, ಹೊಸ ಉಡುಗೆಗಳು, ಪೂಜೆ, ಜಾತ್ರೆ, ಅಬ್ಬಾ ಆಚರಣೆಗೆ ಮಿತಿಯೇ ಇಲ್ಲ. ನಮ್ಮ ಸಂಸ್ಕೃತಿಯ ನಾಡಿನ ಎಲ್ಲೆಡೆ ಆಚರಿಸುವ ದಸರಾ ಹಬ್ಬಗಳಲ್ಲಿ ಇನ್ನಷ್ಟು ವಿಜೃಂಬಿಸುವುದು. ನಮ್ಮ ಕರ್ನಾಟಕದಲ್ಲಿ ಆಚರಿಸುವ ದಸರಾ ಹಬ್ಬದ ಆಚರಣೆ ಎಲರಿಗೂ ತಿಳಿದುದ್ದೆ. ದೇಶದ ಪ್ರಮುಖ ನಗರಗಳಲ್ಲಿನ ದಸರಾ ಆಚರಣೆಯ ಬಗ್ಗೆಯೂ ತಿಳಿದುಕೊಳ್ಳೋಣ.
ಕರ್ನಾಟಕ: ಮೈಸೂರು ದಸರಾ ಎಂದೇ ಹೆಸರಾಗಿರುವ ಈ ಹಬ್ಬವನ್ನು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು. ಸಾಂಸ್ಕೃತಿಕ ನಗರಿ ಮೈಸೂರು “ಮಹಿಷೂರು” (ಮಹಿಷನ ಊರು) ಎಂಬುದರ ರೂಪಾಂತರವಾಗಿದೆ.
ಮಾರ್ಕಂಡೇಯ ಪುರಾಣದ ಪ್ರಕಾರ ಮಹಿಸಾಸುರ ಎಂಬ ಅಸುರ ರಾಜನು ತನ್ನ ತಪಸ್ಸಿನಿಂದ ಬ್ರಹ್ಮ ದೇವರನ್ನು ಮೆಚ್ಚಿಸಿ ವರ ಪಡೆದು ಲೋಕಕ್ಕೆ ಕಂಟಕನಾಗಿದ್ದಾಗ ಸಪ್ತಮಾತೃಕೆಯರಲ್ಲಿ ಒಬ್ಬಳಾದ ಚಾಮುಂಡಿ ದೇವಿಯು ಶಿವ, ವಿಷ್ಣು ಮುಂತಾದ ದೇವರುಗಳ ಶಕ್ತಿಗಳಿಂದ ಸಮ್ಮಿತಳಾಗಿ ಅಸುರ ಸೇನೆಯ ಮೇಲೆ ನೆಡೆದ ಹತ್ತು ದಿನಗಳ ಯುದ್ಧದಲ್ಲಿ ಮಹಿಷಾಸುರನನ್ನು ಮರ್ಧಿಸಿದಳು. ಇದರಿಂದ ದಸರಾ ಹಬ್ಬದ ಹತ್ತನೇ ಹಾಗು ಅಂತಿಮ ದಿನವನ್ನು ವಿಜಯೋತ್ಸವದ ಅಂಗವಾಗಿ “ವಿಜಯದಶಮಿ” ಎಂದು ಹಾಗು ಮೊದಲಿನ ಒಂಬತ್ತು ದಿನಗಳನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ.
ವಿಜಯನಗರದ ಅರಸರು ಆಚರಿಸುತ್ತಿದ್ದ ವಿಜಯದಶಮಿ ಹಬ್ಬದ ಆಚರಣೆಯ ರೂಪವನ್ನೇ ಮೈಸೂರು ಅರಸರು ಆಗಿನ ಕಾಲದಲ್ಲಿ ಅಳವಡಿಸಿಕೊಂಡರು ಎಂಬ ಮಾತಿದೆ. ವಿಜಯದಶಮಿ ಹಬ್ಬದಂದು ನೆಡೆಯುವ ಜಂಬೂ ಸವಾರಿಯನ್ನು ನೋಡಲು ದೇಶ ವಿದೇಶಗಳಿಂದ ಜನರು ಈಗಲೂ ಬರುತ್ತಿರುವುದು ಆಚರಣೆಯ ವಿಜೃಂಭಣೆಗೆ ಸಾಕ್ಷಿ. ಈ ಹತ್ತು ದಿನಗಳ ಮೈಸೂರಿನ ಸೊಬಗು ಸಿರಿಯನ್ನು ಹೊಗಳಲು ಪದಗಳೇ ಸಾಲದು. ಕರ್ನಾಟಕದಲ್ಲಿನ ಇತರೆ ಭಾಗಗಳಾದ ಮಡಿಕೇರಿ ಹಾಗು ಮಂಗಳೂರಿನಲ್ಲಿಯೂ ಸಹ ದಸರಾ ಹಬ್ಬವನ್ನು ತಮ್ಮದೇ ಸಂಪ್ರದಾಯದಲ್ಲಿ ಆಚರಿಸುತ್ತಾರಾದರು ಇಡೀ ಭಾರತದಲ್ಲಿ ದಸರಾ ಎಂದರೆ ಅದು ಮೈಸೂರು ದಸರಾ ಎಂದೇ ಖ್ಯಾತಿಯಾಗಿದೆ.
ಕೇರಳ: “ಪೂಜಾ ವಯಪ್ಪು” ಎಂದು ಕರೆಯಲ್ಪಟ್ಟು ನವರಾತ್ರಿಯ ಅಷ್ಟಮಿ, ನವಮಿ ಮತ್ತು ದಶಮಿಯ ಕೊನೆಯ ಮೂರು ದಿನಗಳು ಮಾತ್ರ ಇಲ್ಲಿ ಆಚರಿಸಲಾಗುತ್ತದೆ. ದೇವಿ ಸರಸ್ವತಿಯನ್ನು ಪೂಜಿಸುವ ಮೂಲಕ ದಸರಾ ಹಬ್ಬವನ್ನು ಆಚರಿಸುತ್ತಾರೆ. ವಿದ್ಯೆಗೆ ಪ್ರತೀಕವಾದ ದೇವಿಯ ಮುಂದೆ ಪುಸ್ತಕಗಳನ್ನು ಇರಿಸಿ ಪೂಜಿಸಿ ದೇವಿಗೆ ಪ್ರಿಯವಾದ ಅವಲಕ್ಕಿ ಬೆಲ್ಲದಿಂದ ಪ್ರಸಾದವನ್ನು ಹಂಚುತ್ತಾರೆ. ಪುಟ್ಟ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರ ತಿದ್ದುವ ಸಂಪ್ರದಾಯವನ್ನು ತಪ್ಪದೆ ಮಾಡುತ್ತಾರೆ.
ತಮಿಳುನಾಡು: ಹಬ್ಬವು ಗೋಲು ಎಂದು ಹಾಗು ಬೊಂಬೆಗಳ ಹಬ್ಬವೆಂದೇ ಆಚರಿಸುತ್ತಾರೆ. ಮಹತ್ವಪೂರ್ಣ ನವರಾತ್ರಿಯನ್ನು ಪುಟ್ಟ ಪುಟ್ಟ ದೇವರುಗಳ ಬೊಂಬೆಗಳನ್ನು ಕೂರಿಸಿ ಅವುಗಳನ್ನು ಅಲಂಕರಿಸಿ ಪ್ರತಿನಿತ್ಯ ಪೂಜಿಸಿ ಸಂಭ್ರಮಿಸಲಾಗುತ್ತದೆ. ಕುಲಸೇಕರಪಟ್ಟಿಣಂ ಎಂಬ ಊರಿನ ಮುತ್ತಾರಮ್ಮನ ದೇವಸ್ಥಾನದಲ್ಲಿ ಭಕ್ತರು ವಿಭಿನ್ನ ರೀತಿಯಲ್ಲಿ ಬಗೆ ಬಗೆಯ ವೇಷ ಧರಿಸಿ ಹಬ್ಬವನ್ನು ಆಚರಿಸುತ್ತಾರೆ.
ಆಂಧ್ರಪ್ರದೇಶ್: ದೇವಿಯನ್ನು ಬತುಕಾಮ್ಮ ಎಂದು ಕರೆಯುವ ಇಲ್ಲಿನ ಜನರು “ಬತುಕಾಮ್ಮ ಪಾಂಡುಗ” ಎಂದು ಆಚರಿಸುತ್ತಾರೆ. ತಾಯಿ ದುರ್ಗಾದೇವಿ ಗೆ ಆಹ್ವಾನ ಕೊಟ್ಟು ಮನೆ ಮನೆಗಳಲ್ಲಿ ಹೂವಿನಿಂದ ದೇವಿಯನ್ನು ತಯಾರಿಸಿ ಪೂಜಿಸುತ್ತಾರೆ. ಸಂಜೆಗಳಲ್ಲಿ ವಿವಿಧ ರೀತಿಯಲ್ಲಿ ನೃತ್ಯ ಮಾಡಿ ದೇವಿಯನ್ನು ಆರಾಧಿಸುತ್ತಾರೆ. ನಂತರ ವಿಜಯದಶಮಿಯಂದು ಹೂವಿನಿಂದ ತಯಾರಿಸಿದ ದೇವಿಯನ್ನು ನೀರಿನಲ್ಲಿ ತೇಲಿಬಿಡುತ್ತಾರೆ.
ಪಂಜಾಬ್: ಬೃಹತ್ ರಾವಣನ ಪ್ರತಿಮೆಯನ್ನು ಮಾಡಿ ಅದನ್ನು ದಹಿಸುವುದರ ಮೂಲಕ ಪಂಜಾಬಿಗಳು ವಿಜಯದಶಮಿ ಹಬ್ಬವನ್ನು ಆಚರಿಸುತ್ತಾರೆ. ಮೊದಲ ಏಳು ದಿವಸಗಳು ಉಪವಾಸವಿದ್ದು ಪ್ರತಿ ರಾತ್ರಿ ದೇವಿ ಭಜನೆಗಳನ್ನು ಮಾಡುತ್ತಾ ಅಷ್ಟಮಿ ದಿವಸದಂದು ಉಪವಾಸವನ್ನು ತ್ಯಜಿಸಿ ದಿನಂಪ್ರತಿ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರುಗಳಿಗೆ ಸಿಹಿ ತಿಂಡಿ, ದುಡ್ಡು ಕೆಲವೊಮ್ಮೆ ಒಡವೆಗಳನ್ನು ಕೊಡುತ್ತ ಗೌರವಿಸುತ್ತಾರೆ.
ಗುಜರಾತ್: ನವರಾತ್ರಿಯನ್ನು ಇಲ್ಲಿನ ಜನರು ಅತ್ಯಂತ ಅದ್ದೂರಿಯಿಂದ ರಂಗಾಗಿ ಆಚರಿಸುತ್ತಾರೆ. ಸಂಜೆ ವೇಳೆ ದೇವಿಯನ್ನು ಆರತಿಗಳಿಂದ ಬೆಳಗಿ ರಂಗು ರಂಗಿನ ಘಾಗ್ರಾ ಹಾಗು ಗರ್ಬಾ ದಿರಿಸನ್ನು ತೊಟ್ಟು ದಾಂಡಿಯಾ ಕೋಲು ಹಾಗು ಡೋಲು ಸದ್ದಿನೊಂದಿಗೆ ಸಾಂಪ್ರದಾಯಿಕ ಗರ್ಬಾ ನೃತ್ಯ ಮಾಡುತ್ತಾ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ.
ಹಿಮಾಚಲ ಪ್ರದೇಶ: ಇಲ್ಲಿನ ಕುಲು ಪ್ರಾಂತ್ಯದಲ್ಲಿ ದಸರಾ ಸಂಭ್ರಮ ಕಂಗೊಳಿಸುತ್ತದೆ. ಇಲ್ಲಿನ ಧಾಲ್ ಫು ಮೈದಾನವು ಎಲ್ಲರ ಗಮನ ಸೆಳೆಯುತ್ತದೆ ಏಕೆಂದರೆ ದಸರಾ ಆಚರಣೆಗೆ ಈ ಮೈದಾನವು ಕೇಂದ್ರೀಕೃತವಾಗಿರುತ್ತದೆ. ಕುಲು ಪ್ರಾಂತ್ಯದಲ್ಲಿ ರಘುನಾಥ ಸ್ವಾಮಿಯನ್ನು ಪೂಜಿಸಿ ಅಲ್ಲಿಯ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ, ತೇರನ್ನು ಕುಲು ಪ್ರಾಂತ್ಯದ ಮುಖ್ಯ ರಸ್ತೆಗಳಲ್ಲಿ ಎಳೆದು ಪೂಜಿಸಿ ಸಂಭ್ರಮಿಸುತ್ತಾರೆ.
ದೆಹಲಿ: ಇಲ್ಲಿ ರಾವಣನ ಸಂಹಾರದ ವಿಜಯೋತ್ಸವದ ನೆನಪಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಶ್ರೀ ರಾಮನು ಲಂಕೆಗೆ ತೆರಳಿ ಅಲ್ಲಿ ನೆಲೆಸಿದ್ದ ರಾವಣನನ್ನು ಸಂಹರಿಸಿ ಸೀತಾಮಾತೆಯನ್ನು ರಕ್ಷಿಸಿದ ಸಂಕೇತವಾಗಿ ದೆಹಲಿಯ ಬೀದಿ ಬೀದಿಗಳಲ್ಲಿ ರಾವಣನ ಪ್ರತಿಮೆಗಳನ್ನು ನಿಲ್ಲಿಸಿ ಉಪವಾಸವಿದ್ದು ವಿಜಯದಶಮಿಯಂದು ಸುಡುವ ಮೂಲಕ ಆಚರಿಸುತ್ತಾರೆ.
ಉತ್ತರ ಪ್ರದೇಶ್: ಪ್ರಾಚೀನ ನಗರ ವಾರಣಾಸಿಯಲ್ಲಿ ರಾಮ ಲೀಲೆಗೆ ಸಂಕೇತವಾಗಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ರಾಮನಗರ ಕೋಟೆಯನ್ನು ನವರಾತ್ರಿಗಳಲ್ಲಿ ಅಲಂಕರಿಸಿ ಕೋಟೆಯ ಸುತ್ತಲೂ ದಸರಾ ಆಚರಣೆಗೆ ಸಂಕೇತವಾದ ಲಂಕೆ, ಅಯೋಧ್ಯ, ಹಾಗು ಅಶೋಕ ವಾಟಿಕಾದ ಫಲಕಗಳನ್ನು ಇಟ್ಟು ಸಂಭ್ರಮದಿಂದ ಆಚರಿಸುತ್ತಾರೆ.
ಮಹಾರಾಷ್ಟ್ರ: ಇಲ್ಲಿನ ಜನರು ವಿಜಯದಶಮಿಯಂದು ಬನ್ನಿ ಮರದ ಎಲೆಗಳನ್ನು ನೀಡಿ ಒಬರಿಗೊಬ್ಬರು ಹರಸಿಕೊಂಡು ಗೆಳೆಯರಿಗೆ ಹಾಗು ಸಂಬಂಧಿಕರಿಗೆ ಸಿಹಿಯನ್ನು ಹಂಚುತ್ತಾ ಚಳಿಗಾಲವನ್ನು ಸ್ವಾಗತಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ.
ಪಶ್ಚಿಮ ಬಂಗಾಳ : ದಸರಾ ಹಬ್ಬವನ್ನು ನಮ್ಮ ಮೈಸೂರು ಸೀಮೆ ಬಿಟ್ಟರೆ ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಬ್ಬರೂ ಭಕ್ತಿಯಿಂದ ಆಚರಿಸುತ್ತಾರೆ ಏಕೆಂದರೆ ಇಲ್ಲಿನ ಪ್ರಮುಖ ದೇವತೆ ಕಾಳಿ ಮಾತೆಯಾಗಿದ್ದು ಈ ಹಬ್ಬಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆ ಇದೆ. ಎಲ್ಲಾ ನಗರಗಳನ್ನು ವಿಭಿನ್ನವಾಗಿ ಅಲಂಕರಿಸಿ ದುರ್ಗಾ ದೇವಿಯ ಮೂರ್ತಿಯನ್ನು ಸಾರ್ವಜನಿಕವಾಗಿ ಕೂರಿಸಿ ಹಾಡು ಭಜನೆ ಹಾಗು ಕಥೆಯ ಮೂಲಕ ಪೂಜಿಸಿ ನಂತರ ಗಣೇಶನ ವಿಸರ್ಜನೆಯಂತೆ ದೇವಿಯ ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ಬಿಡುತ್ತಾರೆ. ಇಲ್ಲಿನ ಸಾರ್ವಜನಿಕ ದೇವಿಯ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಹೀಗೆ ಭಾರತಾದ್ಯಂತ ದಸರಾ ಹಬ್ಬವನ್ನು ನವರಾತ್ರಿ, ಅಷ್ಟಮಿ, ನವಮಿ, ಗರ್ಬಾ, ಶುಕ್ಲ ಪಕ್ಷ, ದಶೈನ್, ಇನ್ನು ಮುಂತಾದ ಹೆಸರುಗಳಿಂದ ಆಚರಿಸಿ ನಮ್ಮ ಭಾರತೀಯರು ಭಾರತದ ಸಂಸ್ಕೃತಿಯನ್ನು ಪ್ರತಿನಿದಿಸುತ್ತ ಬಂದಿದ್ದಾರೆ. ಬನ್ನಿ ಎಲ್ಲರು ಸೇರಿ ನವರಾತ್ರಿಗಳನ್ನು ದೇವಿಯನ್ನು ಪೂಜಿಸುತ್ತ, ಭಜಿಸುತ್ತ ಆಚರಿಸೋಣ.
ಶಿಲ್ಪ
1 Comment
ಅರ್ಥಪೂರ್ಣವಾದ ಲೇಖನ ನಮ್ಮ ಬೇರೆ ಬೇರೆ ರಾಜ್ಯಗಳಲ್ಲಿ ಆಚರಿಸುವ ರೀತಿ ನೀತಿಯನ್ನು ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು