ಕಾಡು ಕುರಿ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಇದಕ್ಕೆ ಬೊಗಳುವ ಜಿಂಕೆ ಎಂದೂ ಕರೆಯುತ್ತಾರೆ. ಆಂಗ್ಲದಲ್ಲಿ Barking deer ಅಥವಾ Muntjac ಎಂದು ಹೆಸರು, ನಮ್ಮ ಆಡು ಭಾಷೆಯಲ್ಲಿ ಕಾಡು ಕುರಿ ಎನ್ನುತ್ತೇವೆ ಆದರೆ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಆದ್ದರಿಂದ ನಾನು ಮುಂದೆ ಬರೆಯುವಾಗ ಜಿಂಕೆ ಎಂಬ ಪದವನ್ನೇ ಬಳಸುತ್ತೇನೆ.
ಇವು ಗೊರಸುಳ್ಳ ಪ್ರಾಣಿಗಳ ಸರ್ವಿಡೀ (Cervidae) ಕುಟುಂಬಕ್ಕೆ ಸೇರಿವೆ, ಎತ್ತರ 50-80 ಸೆಂ.ಮೀ, ತೂಕ 20-25 KG, ಗಂಡಿಗಿಂತ ಹೆಣ್ಣು ಚಿಕ್ಕದು, ಸ್ವಲ್ಪ ಕಪ್ಪು ಮಿಶ್ರಿತ ಕೆಂಪು , ಶರೀರದ ಕೆಳಗೆ ಬಣ್ಣ ತಿಳಿಯಾಗಿ ಬೆನ್ನ ಮೇಲೆ ಕಪ್ಪಾಗಿದೆ. ತೊಡೆ ಹಿಂಭಾಗ, ಬಾಲದ ಬುಡ, ಗದ್ದ ಬಿಳಿ ಬಣ್ಣದಿಂದ ಕೂಡಿದೆ , ಇವುಗಳಲ್ಲಿ ಬಿಳಿ ಬಣ್ಣದ ಕೆಂಪು ಕಣ್ಣಿನ ಆಲ್ಬಿನೋ ಜಿಂಕೆಗಳಿವೆ ಆದರೆ ಇವು ಅಪರೂಪ, ನಮ್ಮ ಕಾಡಲ್ಲಿ ಒಮ್ಮೆ ಆಲ್ಬಿನೋ ಬೊಗಳುವ ಜಿಂಕೆ ನೋಡಿದ್ದೆ, ಆದರೆ ದಾಖಲಿಸಲು ಸಾಧ್ಯವಾಗಲ್ಲಿಲ್ಲ . ಇವುಗಳ ಕೊಂಬುಗಳು ಒಂದೊಂದು ಕವಲು ಒಡೆಯುತ್ತವೆ, ಹೆಣ್ಣಿಗೆ ಕೊಂಬುಗಳಿಲ್ಲ,ಕಾಲಕಾಲಕ್ಕೆ ಕೊಂಬುಗಳು ಬಿದ್ದು ಹುಟ್ಟುತ್ತವೆ, ಅನೇಕ ಸಲ ಪ್ರತಿ ಕಾಲಿನ ಕೊಳಚಿನ ಮುಂದೆ ಬಿಳಿ ಕಲೆ ಇದೆ, ಮೇಲಿನ ದವಡೆಯಲ್ಲಿನ ಕೋರೆಲ್ಲುಗಳು ಕೋರೆಗಳಾಗಿ ಬೆಳೆದಿವೆ, ಗಂಡಿನ ಕೋರೆಗಳು ಚನ್ನಾಗಿ ಅಭಿವೃದ್ದಿ ಹೊಂದಿವೆ, ಇವು ಆತ್ಮರಕ್ಷಣೆಯ ಸಾಧನಗಳು, ಇವುಗಳಿಗೆ ಉದ್ದ ನಾಲಿಗೆ ಇದೆ, ಇದರಿಂದ ಇದರಿಂದ ಇದಕ್ಕೆ ಮುಖವನ್ನೆಲ್ಲ ನೆಕ್ಕುವ ಅಭ್ಯಾಸ ಇದೆ, ಕಿವಿ ಮತ್ತು ಮೂಗು ತೀಕ್ಷ್ಣ, ಅಪಾಯ ಕಂಡು ಬಂದರೆ ನಾಯಿಯಂತೆ ಬೊಗಳುತ್ತವೆ, ಹಾಗಾಗಿ ಬೊಗಳುವ ಜಿಂಕೆ ಎಂದು ಕರೆಯುತ್ತಾರೆ ಇವುಗಳ ಕೂಗು ದೂರದವರೆಗೂ ಕೇಳುತ್ತದೆ, ಕೆಲವು ಸಲ ಅರ್ಧಗಂಟೆಗೂ ಹೆಚ್ಚು ಕಾಲ ಬೊಗಳುತ್ತವೆ, ಈ ಜಿಂಕೆಗೆ ಪಿತ್ತಕೋಶ (Gallbladder) ಇಲ್ಲ.
ಒಂಟಿಯಾಗಿ ಅಥವಾ ಜೊತೆಯಲ್ಲಿ ಉಳಿಯುತ್ತವೆ, ಇವು ಹಗಲಿನ ಪ್ರಾಣಿಗಳು ಮುಸ್ಸಂಜೆ ಹಾಗೂ ಬೆಳಿಗ್ಗೆ ಸಮಯ ಕ್ರಿಯಾಶೀಲವಾಗಿರುತ್ತವೆ, ಇದು ನಡೆಯುವಾಗ ಗಿಲಕಿ ಸಪ್ಪಳ ಬರುವುದುಂಟು.ಭಯವಾದಾಗ ಒಂದೆರಡು ಸಲ ಕೂಗಿ ತನ್ನ ಹಿಂದಿನ ಕಾಲಿನ ಕೊಳಚುಗಳನ್ನು ಕುಟ್ಟಿ ಕಟ್ ಕಟ್ ಶಬ್ದ ಮಾಡುತ್ತದೆ. ಇದರ ಹಿಕ್ಕೆಗಳು ಜಿಂಕೆಗಳ ಹಿಕ್ಕೆಗಿಂತ ಸಣ್ಣದಾಗಿರುತ್ತವೆ. ಹುಲ್ಲುಸೊಪ್ಪು ಮೇಯುತ್ತವೆ, ತಾರೆ ಕಾಯಿ, ಕಾಡು ಅಮಟೆ, ನೆಲ್ಲಿಕಾಯಿ, ಕಾರೆ ಕಾಯಿ ತಿನ್ನುತ್ತವೆ, ರಾತ್ರಿ ಒಂದೆಡೆ ಮಲಗಿ ತಿಂದ ಕಾಯಿಗಳನ್ನೆಲ್ಲ ಮೆಲಕಾಡಿ ಬೀಜಗಳನ್ನು ಹೊರಹಾಕಿ ಸಣ್ಣಗುಡ್ಡೆಯನ್ನೇ ನಿರ್ಮಿಸಿರುತ್ತವೆ. ಬಿದಿರು ಗಿಡಗಂಟಿಗಳು ತುಂಬಿದ ದಟ್ಟ ಕಾಡು, ಎಲೆಯುದುರುವ ಕಾಡಲ್ಲೂ ಕಾಣುತ್ತವೆ. ಇವು ಒಂದು ಕಿಲೋ ಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲೇ ಯಾವಾಗಲೂ ಕಾಣುವುದನ್ನು ಗಮನಿಸಿದರೆ ಬಹುಶಃ ಒಂದೇ ಕಡೆ ಉಳಿಯುತ್ತವೆ.
ಮರಿಗಳನ್ನು ವರ್ಷದ ಯಾವುದೇ ಕಾಲದಲ್ಲಿ ನೋಡಬಹುದು, ಹೆಣ್ಣಿಗಾಗಿ ಗಂಡುಗಳು ಕೆಲವು ಸಲ ಹೋರಾಡುವುದನ್ನು ನೋಡಬಹುದು, ಒಂದು ಸೂಲದಲ್ಲಿ ಒಂದುದ ಅಥವಾ ಎರಡು ಮರಿ ಹಾಕುತ್ತವೆ, ಹುಟ್ಟಿದಾಗ ಮರಿಗಳ ಮೈಮೇಲೆ ಚುಕ್ಕೆಗಳು ಕಾಣುತ್ತವೆ ದೊಡ್ಡದಾಗಿ ಬೆಳೆದಂತೆ ಚುಕ್ಕೆಗಳು ಮಾಸುತ್ತವೆ,ಗರ್ಭಾವಧಿ ಸುಮಾರು 200-210 ದಿನಗಳು.
ಭಾರತದ ಹಲವು ಭಾಗಗಳಲ್ಲಿ ಕಂಡುಬರುತ್ತವೆ, ಶೀಲಂಕಾ,ಬರ್ಮ, ಜಾವಾ, ಸುಮತ್ರ, ಬೋರ್ನಿಯೋದಲ್ಲೆಲ್ಲಾ ಕಾಣುತ್ತವೆ, ಇವುಗಳಲ್ಲಿ ಒಳ ಪ್ರಬೇಧಗಳು ಸಹ ಇವೆ.
ಇವುಗಳ ಪ್ರಮುಖ ಶತ್ರು ಮನುಷ್ಯ, ರಾತ್ರಿ ಶಿಕಾರಿಯಲ್ಲಿ ಕೊಲ್ಲುವುದಲ್ಲದೆ, ಮರಗಳು ಹಣ್ಣು ಬಿಡುವ ಸಮಯದಲ್ಲಿ ಅಟ್ಟಣಿಗೆ ಹಾಕಿ ಇವುಗಳನ್ನು ಬೇಟೆಯಾಡುತ್ತಾರೆ.
ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಷನ್ ಟ್ರಸ್ಟ್