ಪರಾಭವ ಭಾವನಾ – 16 ಯತಿರಾಜ್ ವೀರಾಂಬುಧಿ

–ಹದಿನಾರು–

ನಾವು ಕಥೆಯಲ್ಲಿ ಈಗ ಸ್ವಲ್ಪ ಹಿಂದೆ ಹೋಗಬೇಕು.

ಅಪ್ರಮೇಯ ತೀರ್ಥಹಳ್ಳಿಯವನು. ಅವನ ತಂದೆ ಅವನನ್ನು ಕುಮಾರಾನಂದಸ್ವಾಮಿಗಳಿಗೆ ಒಪ್ಪಿಸುವೆನೆಂದ. ಹದಿನಾರನೇ ವಯಸ್ಸಿಗೆ ಸರಿಯಾಗಿ ಮೊದಲೇ ಹೇಳಿದಂತೆ ಅಪ್ರಮೇಯ ಅಥವಾ ಅಪ್ಪು ಜೋಷಿಮಠದ ಗುರುಗಳ ಆಶ್ರಮ ಸೇರಿದ.

ಗುರುಗಳು ಅವನನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದರು.

ಇವನೇನಾದರೂ ತಂದೆಯ ಬಲವಂತಕ್ಕೆ ಇಲ್ಲಿಗೆ ಬಂದನೇ ಅಥವಾ ಅವನಿಗೂ ಇಲ್ಲಿ ಇರಲು ಇಚ್ಛೆ ಇದೆಯೇ? ಇಂತಹ ಅನೇಕ ಪ್ರಶ್ನೆಗಳು ಗುರುಗಳನ್ನು ಬಾಧಿಸಿದ್ದವು. ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ.

ಏಕೆಂದರೆ ಚಿಕ್ಕವಯಸ್ಸಿನಲ್ಲೇ ಸ್ವಾಮೀಜಿಗಳಾದವರು ನಡೆಸುವ ಆಟಗಳು, ʼಲೀಲೆಗಳುʼ ಗುರುಗಳಿಗೆ ತಿಳಿಯದ್ದೇನಾಗಿರಲಿಲ್ಲ.

ಅದಕ್ಕಾಗಿಯೇ ಅವನನ್ನು ಒರೆಗೆ ಹಾಕಿ, ಅಗ್ಗಿಷ್ಟಿಕೆಗೆ ಹಾಕಿ ಅವನು ಚಿನ್ನವೋ, ಕಾಗೆಬಂಗಾರವೋ ಎಂದು ಪರೀಕ್ಷಿಸಿದ್ದರು.

ಅವನು ಅಪ್ಪಟಚಿನ್ನವೆಂದು ಸಾಬೀತು ಮಾಡಿದ್ದ.

ಅವನನ್ನು ಪಾರಮಾರ್ಥಿಕ ವಿಷಯಗಳಲ್ಲಲ್ಲದೇ ಲೌಕಿಕ ವಿಷಯಗಳಲ್ಲಿಯೂ ತರಬೇತುಗೊಳಿಸಿದ್ದರು ಕುಮಾರಾನಂದಸ್ವಾಮಿ.

ಕೇವಲ ರಾಮ, ಕೃಷ್ಣ, ನರಸಿಂಹ ಹೀಗೆ ದೇವರ ವಿಷಯಗಳಲ್ಲಿ ಮಾತ್ರ ಅವನಿಗೆ ಪಾಠ ಹೇಳದೇ ಮಹಾಭಾರತದ ಕುಟಿಲಗಳು, ರಾಮಾಯಣದ ಆದರ್ಶಗಳು, ಭಾಗವತದ ಶ್ರೀಕೃಷ್ಣನ ಲೀಲೆಗಳು, ಅವಲ್ಲದೇ ಹದಿನೆಂಟು ಪುರಾಣಗಳಲ್ಲಿಯೂ ಪರಿಣತಿ ಅಲ್ಲದಿದ್ದರೂ ಅವನ್ನು ಅರ್ಥ ಮಾಡಿಕೊಂಡು ಸ್ವಲ್ಪ ದೂರದವರೆಗೂ ಇನ್ನೊಬ್ಬರಿಗೆ ಹೇಳುವಷ್ಟು ಕಲಿತಿದ್ದ.

ಅವೂ ಸಾಲದೆಂದು ಅನೇಕ ಮ್ಯಾನೇಜ್‌ಮೆಂಟ್‌ ಪುಸ್ತಕಗಳನ್ನು ಓದಿ ಅವನ್ನು ಇನ್ನೊಬ್ಬರಿಗೆ ಹೇಳುವಷ್ಟು ಜ್ಞಾನಸಂಪಾದನೆ ಮಾಡಿದ್ದ.

ತನ್ನ ಸ್ವರಕ್ಷಣೆಗಾಗಿ ಕಳರಿ ಪಯಟ್ಟು ಇತ್ಯಾದಿ ಸಮರಕಲೆಗಳನ್ನೂ ಯಶಸ್ವಿಯಾಗಿ ಕಲಿತಿದ್ದ.

ತಾವು ಹಿಂಸೆ ಮಾಡುವುದು ಬೇಕಿಲ್ಲ. ಆದರೆ ತಮ್ಮ ಪ್ರಾಣಕ್ಕೇ ಸಂಚಕಾರ ಬಂದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎದುರಾಳಿಯನ್ನು ಬಗ್ಗುಬಡಿಯುವುದರಲ್ಲಿ ತಪ್ಪಿಲ್ಲವೆಂದು ಅರಿತಿದ್ದ.

ಕುಮಾರಾನಂದಸ್ವಾಮಿ ಗುರು ಮತ್ತು ತನ್ನ ಶಿಷ್ಯರಲ್ಲಿ ಇಬ್ಬರು ಸರಿಯಿಲ್ಲವೆಂದು ಅವನಿಗೆ ಗೊತ್ತಿದೆ. ಅವನಿಗೆ ತನ್ನ ಗುರುಗಳು ಹೇಳಿದ್ದ ಸನ್ಯಾಸಿ ಮತ್ತು ಕಟುಕ ಸಾಕಿದ್ದ ಗಿಣಿಗಳ ಕಥೆ ನೆನಪಾಯಿತು.

ಒಬ್ಬ ಮನುಷ್ಯ ಎರಡು ಗಿಣಿಗಳನ್ನು ಕೊಂಡು ತರುತ್ತಾನೆ. ಅವುಗಳಲ್ಲಿ ಒಂದು ಯಾವಾಗಲೂ ಓಂ ನಮೋ ನಾರಾಯಣಾಯ ಎಂದು ಹೇಳುತ್ತಿರುತ್ತದೆ. ಮತ್ತೊಂದು ಹೇ ಹೊಡಿ, ಕತ್ತರಿಸು, ರಕ್ತ ಬಳಿ ಎಂದು ಕೂಗುತ್ತಿರುತ್ತದೆ.

ಮೊದಲನೆಯ ಗಿಣಿ ಯಾವುದೋ ಆಶ್ರಮದಲ್ಲಿ ಬೆಳೆದಿದ್ದರೆ, ಮತ್ತೊಂದು ಒಬ್ಬ ಮಾಂಸ ಮಾರುವವನ ಅಂಗಡಿಯಲ್ಲಿ ಬೆಳೆದಿರುತ್ತದೆ.

ಕೆಲವು ದಿನಗಳ ನಂತರ ಎರಡೂ ಗಿಣಿಗಳೂ ತಮ್ಮನ್ನು ಕೊಂಡು ತಂದ ಮನುಷ್ಯನ ಮನೆಯಲ್ಲಿನ ಮಾತುಗಳನ್ನು ಆಡುತ್ತವೆ.

ಅಂದರೆ ನಮ್ಮ ಸಂಸ್ಕಾರ ಎನ್ನುವುದನ್ನು ನಾವು ಬದಲಾಯಿಸಿಕೊಳ್ಳಬಹುದು. ಅದಕ್ಕೆ ವಿಶೇಷ ಪ್ರಯತ್ನ ಬೇಕು.

ಈಗ ಈ ಮೂರು ವಿಗ್ರಹಗಳು. ಅವನ್ನು ಕದಿಯಲು ಅನೇಕ ಪ್ರಯತ್ನಗಳಾಗಿವೆ ಎಂದು ಅವನಿಗೆ ತಿಳಿದಿತ್ತು.

ಆದರೆ ಅವನು ಈ ವಿಷಯದಲ್ಲಿ ಅಸಹಾಯಕ. ಇನ್ನೊಬ್ಬರಿಗೆ ಇಷ್ಟವಿಲ್ಲದೇ ಒಪ್ಪಿಸಿ, ಅದು ಯಾವುದೋ ವಿದೇಶೀಯನ ಮನೆಯ ಶೋಕೇಸ್‌ನಲ್ಲಿ ಇಡಲ್ಪಡುವುದು ಅನ್ಯಾಯ. ಈ ಪ್ರಯತ್ನದಲ್ಲಿ ತನ್ನನ್ನೂ, ತನ್ನ ಶಿಷ್ಯರನ್ನೂ ಪ್ರಾಣಾಪಾಯಕ್ಕೆ ಗುರಿ ಮಾಡಬಹುದು ಇದನ್ನು ಕದಿಯಲಿಕ್ಕೆ ಬರುವವರು.

ಇದನ್ನು ಹೇಗೆ ನಿವಾರಿಸಿಕೊಳ್ಳುವುದು?

ಈ ಶ್ಯಾಮ್‌ ಎಲ್ಲೋ ದೈವವೇ ಕಳಿಸಿರುವಂತಿದೆ. ಒಂದಿಷ್ಟು ಕೂಡ ವಿರೋಧಿಸದೇ ಜೊತೆಯಲ್ಲಿ ಬರುವೆ ಎನ್ನುತ್ತಿದ್ದಾನೆ. ನಿಜಕ್ಕೂ ಇವನು ಡ್ರೈವರಾ? ಅಥವಾ ತನಗೆ ತಿಳಿಯದಿರುವುದು ಇನ್ನೇನಾದರೂ ಇದೆಯೇ?

ತೇ ನ ವಿನಾ ತೃಣಮಪಿ ನ ಚಲತಿ ಎಂದುಕೊಂಡ. ಹೌದು, ಆ ದೇವದೇವನಿಲ್ಲದೇ ಒಂದು ಹುಲ್ಲುಕಡ್ಡಿ ಕೂಡ ಅಲುಗಾಡುವುದಿಲ್ಲ. ಹಾಗಿರುವಾಗ ತಾನ್ಯಾರು ಆಗುತ್ತಿರುವ ಈ ಘಟನೆಗಳನ್ನು ತಡೆಯಲು?

ತನ್ನ ಮೊದಲ ರೈಲು ಪ್ರಯಾಣವನ್ನು ಕೇವಲ ತನ್ನ ಬಳಿಯಿದ್ದ ವಿಗ್ರಹಗಳ ಭದ್ರತೆಗಾಗಿ ಮಾಡಿದ್ದ.

ಆ ಪ್ರಯಾಣದಲ್ಲಿ ತನಗೆ ಮತ್ತು ತನ್ನ ಪ್ರವಚನಕ್ಕೆ ಕಂಡುಬಂದ ಅಭೂತಪೂರ್ವ ಯಶಸ್ಸು ತನ್ನನ್ನು ಈ ಪ್ರಯಾಣವನ್ನು ಮುಂದುವರೆಸೆಂದಿತ್ತು.

ಏಕೆಂದರೆ ತಾನು ಜೋಷಿಮಠದ ಆಶ್ರಮದಲ್ಲಿ ದಿನವೂ ಪ್ರವಚನ ಮಾಡುತ್ತಲೇ ಇರುತ್ತಾನೆ. ಬಹುಶಃ ಅಲ್ಲಿನ ಜನರೇ ದಿನವೂ ಬರುವರೇನೋ… ಅಥವಾ ಒಂದಿಬ್ಬರು ಹೊಸಬರು ದಿನವೂ ಬರಬಹುದು.

ಆದರೆ ತಾನಿಲ್ಲಿ ಇರುವುದು ರೈಲು ಎಂಬ ಮಿನಿಭಾರತದಲ್ಲಿ. ದೇವಸ್ಥಾನ ಎಂಬ ಆಸ್ತಿಕ ದೇಗುಲದಲ್ಲಿ.

ಪ್ರತಿಸಲವೂ ಬೇರೆ ಬೇರೆ ಜನ. ಬೇರೆ ಬೇರೆ ವಿಷಯ. ಇದಂತೂ ತನ್ನ ವಿಷಯದಲ್ಲಿ ನ ಭೂತೋ. ನ ಭವಿಷ್ಯತಿ ಆಗದೇ ಇರಲು ತಾನು ಬದುಕಿ ಉಳಿಯಬೇಕು. ಆಗ ಎಷ್ಟು ಸಲ ಬೇಕಾದರೂ ಭಾರತದರ್ಶನ ಮಾಡಬಹುದು.

ಅವನ ಆಲೋಚನೆಗಳನ್ನು ತಡೆಯುವಂತೆ ಅಲ್ಲಿಗೆ ಶ್ಯಾಮ್‌ ಬಂದಿದ್ದ.

“ಸ್ವಾಮೀಜೀ” ಎಂದು ಕರೆದು ಅವನ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ಶ್ಯಾಮ್.‌

ಏನೆಂಬಂತೆ ನೋಡಿದ ಅಪ್ಪು.

“ನೀವು ಈ ಟೂರ್‌ ಮಾಡಲೇಬೇಕಾ?” ಎಂದ. ಅವನ ದನಿಯಲ್ಲಿ ಒಂದಿಷ್ಟು ಕಳವಳವಿದ್ದಂತಿತ್ತು.

“ಏನಾದರೂ ಸಮಸ್ಯೆ ಇದೆಯಾ? ನಿಮಗೆ ವಾಪಸ್ಸು ಹೋಗಬೇಕೆಂದರೆ ಹೊರಡಿ. ನಾವು ಬಸ್ಸಿನಲ್ಲಿ ಹೋಗುತ್ತೇವೆ” ಎಂದ ಅಪ್ರಮೇಯ.

ಅಲ್ಲಿಯೇ ಹತ್ತಿರದಲ್ಲಿದ್ದ ನಾಲ್ವರು ಶಿಷ್ಯರು ಪರಸ್ಪರ ಮುಖ ನೋಡಿಕೊಂಡರು.

“ಸಮಸ್ಯೆ ಏನಿಲ್ಲ ಸ್ವಾಮೀಜೀ. ಹೊರಗಿನ ಶತ್ರುಗಳನ್ನು ಸುಲಭವಾಗಿ ಕಂಡುಕೊಳ್ಳಬಹುದು. ಆದರೆ ಒಳಗಿನ ಶತ್ರುಗಳನ್ನು ಹೇಗೆ ನಿವಾರಿಸುವುದು?” ಎಂದು ಹೇಳಿ ನಾಲ್ವರು ಶಿಷ್ಯರಲ್ಲಿ ಒಬ್ಬನತ್ತ ನೇರವಾಗಿ ನೋಡಿದ.

ಅವನು ಇದ್ದ ಜಾಗದಲ್ಲಿಯೇ ಚಡಪಡಿಸಿದ. ಈ ಮನುಷ್ಯನಿಗೆ ತನ್ನ ದುರಾಲೋಚನೆಗಳ ಬಗ್ಗೆ ತಿಳಿದುಹೋಗಿದೆಯೇ? ಎಂದುಕೊಂಡು ಬೆವರಿದ.

ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಮತ್ತೊಬ್ಬನೂ ಮನದಲ್ಲೇ ಒದ್ದಾಡಿದ.

ಸಿಕ್ಕಿಕೊಂಡರೆ… ಈಗ ಸಿಗುತ್ತಿರುವ ಪುಷ್ಕಳ ಭೋಜನವೂ ಇಲ್ಲವಾದೀತು ಎಂಬ ಯೋಚನೆ ಇಬ್ಬರ ಮನಸ್ಸನ್ನೂ ಹೊಕ್ಕಿತು.

“ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಽಪರಾಣಿ |

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||” ಎಂದ ಅಪ್ರಮೇಯ ನಗುತ್ತಾ.

ಶ್ಯಾಮ್‌ ಅಪ್ಪುವನ್ನೇ ನೋಡತೊಡಗಿದ. ತನಗೆ ಇದರ ಅರ್ಥ ಹೇಳಿ ಎಂಬ ವಿನಂತಿ ಅಪ್ರಮೇಯನಿಗೆ ಶ್ಯಾಮ್‌ನ ಮುಖದಲ್ಲಿ ಕಂಡಿರಬೇಕು.

Rearview of a snipper pointing his gun into the distance with copy space

“ಹೇಗೆ ಮನುಷ್ಯನು ಹರಿದುಹೋದ ಬಟ್ಟೆಗಳನ್ನು ಬಿಸುಟು ಹೊಸ ಬಟ್ಟೆಗಳನ್ನು ಧರಿಸುತ್ತಾನೋ ಅದರಂತೆಯೇ ಈ ದೇಹವು (ಜೀವಾತ್ಮ) ನಶಿಸಿ ಹೋದ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲಾರದವರಿಗೆ ಸಾವಿನ ಭಯ ಕಾಡುತ್ತದೆ. ಇದರ ಭಾವ ಮತ್ತು ಕ್ರಿಯೆಯನ್ನು ಅರ್ಥ ಮಾಡಿಕೊಂಡವರಿಗೆ ಅದರ ಭಯವೇ ಇರುವುದಿಲ್ಲ” ಎಂದು ನಗುತ್ತಾ ಹೇಳಿದ.

“ನನಗೆ ಸಾವಿನ ಭಯವಿಲ್ಲ ಶ್ಯಾಮ್.‌ ಸಾಯುವುದಕ್ಕೇ ಸಿದ್ಧನಾಗಿರುವಾಗ, ಸಾವೆಂದರೆ ಹೆದರಿಕೆ ಇಲ್ಲದಿರುವಾಗ ಇನ್ಯಾವುದು ನಮ್ಮನ್ನು ಬೆದರಿಸಲು ಸಾಧ್ಯ?” ಎಂದು ಪ್ರಶ್ನಿಸಿ, “ಒಂದು ಹಿಂದೀ ವಾಕ್ಯವಿದೆ. ಅದನ್ನು ನಾನು ಸದಾ ನೆನೆಯುತ್ತಿರುತ್ತೇನೆ. ವಹೀ ಹೋತಾ ಹೈ ಜೋ ಮಂಝೂರೇ ಖುದಾ ಹೋತಾ ಹೈ” ಎಂದು ಹೇಳಿ ಮತ್ತೆ ಮುಗುಳ್ನಕ್ಕು, “ದೇವರು ಏನಾಗಬೇಕೆಂದು ಮಂಜೂರು ಮಾಡುವನೋ ಅದೇ ನಡೆಯುತ್ತದೆ. ಹಾಗೆಂದು ನಾನು ಬಂಡೆಯೊಂದಕ್ಕೆ ತಲೆ ಚಚ್ಚಿಕೊಳ್ಳುತ್ತಿಲ್ಲ. ನಿಮ್ಮ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ನನ್ನನ್ನು ಸುರಕ್ಷಿತವಾಗಿ ಆಶ್ರಮಕ್ಕೆ ಬಿಡುವಿರೆಂದು. ಹೌದಲ್ಲವೇ?” ಎಂದ ಅಪ್ಪು ಶ್ಯಾಮ್‌ನನ್ನೇ ನೇರವಾಗಿ ನೋಡುತ್ತಾ.

“ಖಂಡಿತ ಸ್ವಾಮೀಜಿ” ಎಂದ ಅವನ ಸ್ವರದಲ್ಲಿದ್ದ ದೃಢತೆಯು ಒಳ್ಳೆಯ ಶಿಷ್ಯರಿಗೆ ಮುಚ್ಚಟೆಯನ್ನೂ ಕಳ್ಳ ಶಿಷ್ಯರಿಗೆ ಭಯವನ್ನೂ ತಂದಿತು.

ಶ್ಯಾಮ್‌ಗೆ ಇತ್ತೀಚೆಗೆ ಒಂದ ಸುದ್ದಿ ಸಿಕ್ಕಿತ್ತು. ಅದರಿಂದಲೇ ಅವನು ಚಿಂತಿತನಾಗಿದ್ದ.

ಅಪ್ರಮೇಯನನ್ನು ಕೊಲ್ಲಲು ಯೂರೋಪ್‌ನಿಂದ ಶಾರ್ಪ್‌ ಶೂಟರ್‌ ಒಬ್ಬ ಹೊರಟಿರುವನೆಂಬ ಸುದ್ದಿ ಅದು.

ಇದನ್ನು ಹೇಳುವುದೋ ಬೇಡವೋ ತಿಳಿಯಲಿಲ್ಲ ಶ್ಯಾಮ್‌ಗೆ.

“ಸರಿ ಸ್ವಾಮೀಜೀ. ನಿಮ್ಮ ಧೈರ್ಯವೇ ನಮಗೂ ಧೈರ್ಯ ನೀಡುತ್ತದೆ. ನಡೆಯಿರಿ ಮುಂದಿನ ಊರಿಗೆ ಹೋಗೋಣ” ಎಂದ ಶ್ಯಾಮ್.‌

ಇತ್ತ ನೀಲಂ ಮತ್ತು ಫಿಲಿಪ್‌ ಫೋರ್‌ವ್ಹೀಲ್‌ ಡ್ರೈವ್‌ ಕಾರೊಂದರಲ್ಲಿ ವೇಗವಾಗಿ ಇವರತ್ತ ಬರುತ್ತಿದ್ದರು. ಫಿಲಿಪ್‌ ಹಿಂದಿನ ಸೀಟಿನಲ್ಲಿ ನಾಗರದಂತೆ ಮಲಗಿದ್ದ ಅವನ ಉದ್ದನೆಯ ರೈಫಲ್‌, ಅದರ ಟೆಲಿಸ್ಕೋಪಿಕ್‌ ಲೆನ್ಸ್‌ ಮತ್ತು ಸೈಲೆನ್ಸರ್‌ ಅನ್ನು ಪ್ರೀತಿಯಿಂದ ನೇವರಿಸಿದ. ಕಾರೋಡಿಸುತ್ತಿದ್ದ ನೀಲಂ ಅವನ ಕೆಲಸವನ್ನು ನೋಡಿ ನಕ್ಕಳು.

“ಅಂತೂ ನಿನ್ನ ರೈಫಲ್ಲಿಗೆ ಊಟ ಹಾಕೋ ಸಮಯ ಬರ್ತಾ ಇದೆ. ಅಪ್ರಮೇಯ ಸ್ವಾಮಿ ಇದಕ್ಕೆ ಬಲಿಯಾಗಲಿದ್ದಾನೆ” ಎಂದಳು ನೀಲಂ ಗಟ್ಟಿಯಾಗಿ ನಕ್ಕು.

ಫಿಲಿಪ್‌ ಸುಮ್ಮನೆ ಅವಳನ್ನು ಮುಗುಳ್ನಗುತ್ತಾ ನೋಡಿದ.

ಈ ಕೊಲೆಗಾರ ಬರುತ್ತಿರುವ ಅರಿವಿಲ್ಲದ ಅಪ್ರಮೇಯ ಮುಂದಿನ ಊರಿಗೆ ಹೊರಟಿದ್ದ.

ಪುಣೆಯನ್ನು ನಾಲ್ಕು ಗಂಟೆಗಳ ಪ್ರಯಾಣದ ನಂತರ ತಲುಪಿ ಭಂಡಾರ್ಕರ್‌ ಇನ್ಸ್ಟಿಟ್ಯೂಟ್‌ ರಸ್ತೆಯ ಹೊಟೇಲ್‌ ಒಂದರನ್ನು ರೂಮುಗಳನ್ನು ಪಡೆದರು.

ಇಡೀ ಪ್ರಯಾಣದ ಸಮಯದಲ್ಲಿ ಅಪ್ರಮೇಯ ಮಾತಾಡಲಿಲ್ಲ. ಅವನ ಜೀವನದ ಅನೇಕ ಘಟ್ಟಗಳನ್ನು ಮೆಲುಕು ಹಾಕುತ್ತಿದ್ದ.

ತನ್ನ ಗುರುಗಳು ಇದ್ದಕ್ಕಿದ್ದಂತೆ ತನ್ನನ್ನು ಕರೆಸುವುದೆಂದರೇನು? ಅವರು ದೇವದೇವನ ಸನ್ನಿಧಿ ಸೇರುವುದೆಂದರೇನು? ಈ ವಿಗ್ರಹಗಳನ್ನು ತನಗೆ ಒಪ್ಪಿಸುವುದೆಂದರೇನು?

ತನ್ನ ಪಾಡಿಗೆ ತಾನು ದೇವರ ಪೂಜೆ ಮಾಡುತ್ತಾ, ಜನರಿಗೆ ಸಹಾಯ ಮಾಡುತ್ತಾ ಜೋಷಿಮಠದ ಸುಂದರ ಪ್ರಕೃತಿಯಲ್ಲಿ ನೆಮ್ಮದಿಯಾಗಿದ್ದವನು ತಾನು.

ಪುಣೆಯ ಲಕ್ಷ್ಮೀ ನರಸಿಂಹರ ಗುಡಿಗೆ ಹೋದರು ಶ್ಯಾಮ್‌ನೊಂದಿಗೆ ಕಾರಿನಲ್ಲಿ.

ಅಲ್ಲಿನ ಐತಿಹ್ಯವನ್ನು ಹೇಳಿದರು ಅಲ್ಲಿನ ಅರ್ಚಕರು.

ಔರಂಗಜೇಬನು ವಿಗ್ರಹವನ್ನು ಕಳವು ಮಾಡುವನೆಂಬ ಸುದ್ದಿ ಸಿಕ್ಕಿ ಮೂಲವಿಗ್ರಹವನ್ನು ಎಲ್ಲೋ ಬಚ್ಚಿಟ್ಟು ಬೇರೆ ವಿಗ್ರಹವನ್ನು ಅದರ ಜಾಗದಲ್ಲಿಟ್ಟು, ಎಲ್ಲ ಗಲಭೆಗಳೂ ಕಳೆದ ಮೇಲೆ ಮತ್ತೆ ಮೂಲವಿಗ್ರಹವನ್ನು ಸ್ಥಾಪಿಸಲಾಯಿತಂತೆ. ಮೂಲವಿಗ್ರಹ ಕಪ್ಪುಶಿಲೆಯದು. ಅದರ ಬದಲು ಸ್ಥಾಪಿಸಿದ ವಿಗ್ರಹ ಮರಳಿನದು!

ಪೇಶ್ವಾ ಕಾಲದ ಕಪ್ಪು ಬಣ್ಣದ ದೊಡ್ಡ ದೇವಸ್ಥಾನ ಅದೆಂಬ ವಿಷಯ ಅರಿತ ಅಪ್ಪು. ಇಪ್ಪತ್ತು ವರ್ಷಗಳನ್ನು ತೆಗೆದುಕೊಂಡು ಕಟ್ಟಿದ ಈ ದೇವಸ್ಥಾನದ ಮೇಲಿನ ಶಿಲ್ಪಗಳು ಬಹಳವೇ ಸುಂದರವಾಗಿದ್ದವು.

ಲಕ್ಷ್ಮೀ ನೃಸಿಂಹಸ್ವಾಮಿಯ ಭವ್ಯ ದಿವ್ಯ ಮೂರ‍್ತಿಯನ್ನು ಕಣ್ತುಂಬಾ ತುಂಬಿಕೊಂಡ.

“ನನ್ನ ಈ ಕಾರ್ಯಕ್ಕೆ ಶಕ್ತಿ ಕೊಡು ಸ್ವಾಮೀ” ಎಂದು ಭಕ್ತಿಯಿಂದ ಬೇಡಿಕೊಂಡ.

ನಂತರ ಅಲ್ಲಿನ ಹಾಲ್‌ನಲ್ಲಿ ಹೋಗಿ ಕುಳಿತು “ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ” ಎಂದು ಸ್ಪಷ್ಟವಾಗಿ ಸ್ವಲ್ಪ ಎತ್ತರದ ಧ್ವನಿಯಲ್ಲಿ ಪಠಿಸಿದ. ಅಲ್ಲಿದ್ದ ಅನೇಕ ಭಕ್ತರು ಅವನ ಬಳಿಗೆ ಬಂದರು.

ನಂತರ  “ಶ್ರೀಮತ್ ಪಯೋನಿಧಿ ನಿಕೇತನ ಚಕ್ರಪಾಣೇ
ಭೋಗೀಂದ್ರ ಭೋಗ ಮಣಿರಂಜಿತ ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ” ಎಂದೊಡನೆ ಅವನು ಕುಳಿತಿದ್ದ ಜಾಗದ ಮುಂದಿದ್ದ ಖಾಲಿ ಸ್ಥಳದಲ್ಲಿ ಜನರು ಕುಳಿತುಕೊಂಡರು.

“ಸ್ವಾಮೀ, ದಯವಿಟ್ಟು ಏನಾದರೂ ಪ್ರವಚನ ಮಾಡಿ. ನಿಮ್ಮ ವಾಣಿಯಲ್ಲಿ ಶ್ಲೋಕಗಳನ್ನು ಕೇಳುತ್ತಾ ಇರಬೇಕೆಂಬ ಇಚ್ಛೆಯಾಗುತ್ತಿದೆ” ಎಂದ ಭಕ್ತಶಿರೋಮಣಿಯೊಬ್ಬ.

“ಅದಕ್ಕೇನಂತೆ? ಇಂದು ನನ್ನನ್ನು ಮೀರಾಳ ಕೃಷ್ಣ ಆವರಿಸಿಕೊಂಡಿದ್ದಾನೆ. ಕೃಷ್ಣನ ಬಗ್ಗೆ ಹೇಳಬಹುದಾ?” ಎಂದ ಹಿಂದಿಯಲ್ಲಿ.

“ಖಂಡಿತ. ರಾಮ, ಕೃಷ್ಣ, ನರಸಿಂಹ ಮೂವರೂ ನಾರಾಯಣನ ಅವತಾರಗಳೇ ತಾನೇ?” ಎಂದಳು ಲಲನೆಯೊಬ್ಬಳು.

ತಕ್ಷಣವೇ ಅವನಿಗೆ ತನ್ನ ಗುರುಗಳು ನೀಡಿದ್ದ ಆ ಮೂರು ದೇವರುಗಳ ವಿಗ್ರಹಗಳ ನೆನಪಾಯಿತು. ಅವು ಭದ್ರವಾಗಿರುವುವೇ?

ತನ್ನ ಕೃಷ್ಣನ ಪ್ರವಚನಕ್ಕೆ ಪೀಠಿಕೆಯಾಗಿ “ಆದಿನಾರಾಯಣ ಅನಂತಶಯನ ಸಚ್ಚಿದಾನಂತ ಸತ್ಯನಾರಾಯಣ” ಎಂದು ಹಾಡಿ ಎದುರಿನಲ್ಲಿದ್ದವರಿಗೆ ಅದನ್ನು ಮತ್ತೆ ಹೇಳಿ ಎಂದು ಸನ್ನೆ ಮಾಡಿದ.

ಎಲ್ಲರೂ ಹಾಡಿದರು. ನಂತರ “ಭವಭಯಹರಣ ವಂದಿತಶರಣ ರಘುಕುಲ ಭೂಷಣ ರಾಜೀವ ಲೋಚನ” ಎಂದ. ಎಲ್ಲರೂ ಅದನ್ನೂ ಹಾಡಿದರು.

ಒಬ್ಬ ಶಿಷ್ಯ ಅಲ್ಲಿ ಕಾಣಿಸಲಿಲ್ಲ. ಅವನು ಯಾವುದೋ ಮಾಯದಲ್ಲಿ ಅಲ್ಲಿಂದ ಕಾಣೆಯಾಗಿದ್ದ.

ಅವನು ಹೋಗಿದ್ದುದು ನಾಯಕ್‌ ಕಡೆಯವರಿಗೆ ಫೋನ್‌ ಮಾಡಲು.

ಅವನು ದೇವಸ್ಥಾನದ ಪಕ್ಕದ ನಾಲ್ಕು ಕಂಬಗಳ ಮಂಟಪದ ಒಂದು ಬದಿಯಲ್ಲಿ ನಿಂತು ಫೋನ್‌ ಮಾಡತೊಡಗಿದ.

ಅವನಿಗೆ ತಿಳಿಯದಿದ್ದ ವಿಷಯವೆಂದರೆ ಅವನ ಕರೆಯನ್ನು ತಕ್ಷಣವೇ ಕೇಳಿಸಿಕೊಳ್ಳುತ್ತಿದ್ದ ಡ್ರೈವರ್‌ ಶ್ಯಾಮ್‌ ಅದನ್ನು ರೆಕಾರ್ಡ್‌ ಕೂಡ ಮಾಡಿಕೊಂಡ.

“ಏನೂ!?” ಎಂದು ಗಟ್ಟಿಯಾಗಿ ಹೇಳಿದ ಶಿಷ್ಯ ಮೆಲ್ಲನೆ ಪಿಸುಗುಟ್ಟುವಂತೆ, “ಸ್ವಾಮಿಯನ್ನು ಕೊಲ್ಲೋಕ್ಕೆ ಬರ್ತಿದ್ದಾರಾ?” ಎಂದ. ಅವನ ಧ್ವನಿ ನಡುಗಿದ್ದು ಅವನ ಹಿಂದೆಯೇ ಇದ್ದ ಶ್ಯಾಮ್‌ಗೆ ಕೇಳಿಸಿತ್ತು.

ಅವನ ಮುಖ ಗಂಭೀರವಾಗಿತ್ತು.

ಏನೇ ಆಗಲೀ, ತಾನು ಸ್ವಾಮಿ ಅಪ್ರಮೇಯನನ್ನು ಕಾಪಾಡಲೇಬೇಕು ಎಂದು ನಿರ್ಧರಿಸಿದ ಡ್ರೈವರ್‌ ಶ್ಯಾಮ್.‌

ಅತ್ತ ಫಿಲಿಪ್‌ ಮತ್ತು ನೀಲಿಮಾ ಪುಣೆಯತ್ತ ವೇಗವಾಗಿ ಬರುತ್ತಿದ್ದರು.

ಇತ್ತ ಶ್ಯಾಮ್‌ ಅಪ್ಪುವನ್ನು ಕಾಪಾಡಲು ಏನು ಮಾಡಬೇಕೆಂದು ಯೋಚಿಸತೊಡಗಿದ.

ಕಳ್ಳ ಶಿಷ್ಯ ಇತ್ತ ದರಿ ಅತ್ತ ಪುಲಿಯನ್ನು ನೋಡಿದಂತಾದ. ಅವನಿಗೆ ವಿಗ್ರಹಗಳು ಬೇಕಿತ್ತು. ಆದರೆ ಸ್ವಾಮಿ ಅಪ್ರಮೇಯ ಸಾಯುವುದು ಬೇಕಿರಲಿಲ್ಲ.

ಈ ಕೊಲ್ಲು, ಕಳ್ಳತನ ಮಾಡು ಆಟದಲ್ಲಿ ಗೆಲ್ಲುವವರಾರು? ಸೋಲುವವರಾರು?

ಮುಂದಿನವಾರಕ್ಕೆ

ಯತಿರಾಜ್‌ ವೀರಾಂಬುಧಿ

Related post